ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆ.8ರಿಂದ ನೀರು ಪೂರೈಕೆಗೆ ಸಮರೋಪಾದಿ ಸಿದ್ಧತೆ

Last Updated 7 ಸೆಪ್ಟೆಂಬರ್ 2011, 9:15 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಪ್ರತೀ ಮೂರು ದಿನಕ್ಕೊಮ್ಮೆ ಕುಡಿಯುವ ನೀರು ಪಡೆಯುವ ಅವಳಿ ನಗರದ ಜನತೆಯ ಬಹುದಿನದ ಕನಸು ನನಸಾಗುವ ಸಮಯ ಕೊನೆಗೂ ಕೂಡಿ ಬಂದಿದೆ.

ಆಗಸ್ಟ್ 30ರಂದು ನಡೆದ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಸೆ.8ರಿಂದ ಈ ಸೌಲಭ್ಯ ಕಲ್ಪಿಸಲಾಗುವುದು ಎಂದು ಮೇಯರ್ ಪೂರ್ಣಾ ಪಾಟೀಲ್  ನೀಡಿದ್ದ ಮಾತು ಉಳಿಸಲು ಮುಂದಾಗಿರುವ ಜಲಮಂಡಳಿ, ನೀರು ಪೂರೈಕೆಗೆ ಅಂತಿಮ ಸಿದ್ಧತೆಗಳನ್ನು ಸಮರೋಪಾದಿಯಲ್ಲಿ ಕೈಗೊಂಡಿದೆ.

ಧಾರವಾಡ ತಾಲ್ಲೂಕು ಅಮ್ಮಿನಬಾವಿಯಲ್ಲಿರುವ ಜಲಮಂಡಳಿಯ ನೂತನ ಶುದ್ಧೀಕರಣ ಘಟಕದಿಂದ 8ರಂದು ಹುಬ್ಬಳ್ಳಿ ನಗರಕ್ಕೆ ನೀರು ಪೂರೈಸುವ ಮೂಲಕ ಯೋಜನೆಗೆ ಅಧಿಕೃತ ಚಾಲನೆ ನೀಡಲಾಗುತ್ತಿದ್ದು, ವಾರದ ಅಂತರದಲ್ಲಿ ಧಾರವಾಡ ನಗರಕ್ಕೂ ಈ ಸೌಲಭ್ಯ ವಿಸ್ತರಣೆಯಾಗಲಿದೆ. ಪ್ರಜಾವಾಣಿ ಮಂಗಳವಾರ ಅಮ್ಮಿನಬಾವಿಗೆ ಭೇಟಿ ನೀಡಿದಾಗ ಶುದ್ಧೀಕರಣ ಘಟಕದಿಂದ ಪಂಪ್‌ಹೌಸ್‌ಗೆ ಸಂಪರ್ಕ ಕಲ್ಪಿಸಲು ಪೈಪ್ ಜೋಡಿಸುವ ಅಂತಿಮ ಹಂತದ ಕಾಮಗಾರಿಯಲ್ಲಿ ಸಿಬ್ಬಂದಿ ತೊಡಗಿದ್ದರು.  

ಮಲಪ್ರಭಾ ಮೂರನೇ ಹಂತ:  `ಅವಳಿನಗರಕ್ಕೆ ನಿತ್ಯ 153.77 ದಶಲಕ್ಷ ಲೀಟರ್ ನೀರು ಬೇಕು. ಆದರೆ, ಸದ್ಯ ಲಭ್ಯವಾಗುತ್ತಿರುವುದು 95 ದಶಲಕ್ಷ ಲೀಟರ್ ನೀರು ಮಾತ್ರ. ಮಲಪ್ರಭಾ ಮೂರನೇ ಹಂತದ ಯೋಜನೆ ಜಾರಿಯಿಂದ ಈಗ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುತ್ತಿದೆ. ಅಮ್ಮಿನಬಾವಿಯಲ್ಲಿ ಹಾಲಿ ಇರುವ 74 ದಶಲಕ್ಷ ಲೀಟರ್ ನೀರು ಶುದ್ಧೀಕರಿಸುವ ಘಟಕದೊಂದಿಗೆ ಇದೀಗ ಹೆಚ್ಚುವರಿಯಾಗಿ 152 ಕೋಟಿ ವೆಚ್ಚದಲ್ಲಿ 68 ದಶಲಕ್ಷ ಲೀಟರ್ ಸಾಮರ್ಥ್ಯದ ಮತ್ತೊಂದು ಘಟಕ ನಿರ್ಮಾಣಗೊಂಡಿದೆ. 

 ಬೆಳಗಾವಿ ಜಿಲ್ಲೆ ಸವದತ್ತಿಯ ಮಲಪ್ರಭಾ ನದಿಯ ಜಾಕ್‌ವೆಲ್‌ನಿಂದ ಸುಮಾರು 29.3 ಕಿ.ಮೀ ದೂರದ ಪೈಪ್‌ಲೈನ್ ಹಾಕಿ ನೂತನ ಘಟಕಕ್ಕೆ ನೀರು ಪೂರೈಸಲಾಗುತ್ತಿದೆ. ಇಲ್ಲಿ ಸಂಗ್ರಹಗೊಳ್ಳುವ ನೀರನ್ನು ಮೂರು ಹಂತದಲ್ಲಿ ಶುದ್ಧೀಕರಿಸಿ ನಂತರ ಅವಳಿ ನಗರಕ್ಕೆ ಸರಬರಾಜು ಮಾಡಲಾಗುತ್ತದೆ.

ಅಮ್ಮಿನಬಾವಿಯಿಂದ ಹುಬ್ಬಳ್ಳಿಯ ನೃಪತುಂಗ ಬೆಟ್ಟದವರೆಗೆ ಈಗಾಗಲೇ ಪೈಪ್‌ಲೈನ್ ವ್ಯವಸ್ಥೆ ಮಾಡಲಾಗಿದ್ದು, ಬೆಟ್ಟದಲ್ಲಿ ನಿರ್ಮಿಸಿದ 68.3 ಲಕ್ಷ ಲೀಟರ್ ಸಾಮರ್ಥ್ಯದ ಟ್ಯಾಂಕ್ ಕೂಡ ನೀರಿನ ಸಂಗ್ರಹಕ್ಕೆ ಸನ್ನದ್ಧವಾಗಿದೆ.

ಅತ್ಯಾಧುನಿಕ ಶುದ್ಧೀಕರಣ ವ್ಯವಸ್ಥೆ: ನದಿಯಿಂದ ತರುವ ನೀರನ್ನು ಏರಿಯೇಟರ್ ವ್ಯವಸ್ಥೆಯ ಮೂಲಕ ಮೊದಲ ಹಂತದಲ್ಲಿ ಶುದ್ಧೀಕರಿಸಿ ನಂತರ  ಆಲಂ ಪುಡಿ ಬೆರೆಸಿ ಫ್ಲ್ಯಾಷ್ ಮಿಕ್ಸ್ಚರ್‌ಗೆ ನೀರು ಹರಿಸಲಾಗುತ್ತದೆ. ಅಲ್ಲಿಂದ ಕ್ಲ್ಯಾರಿಪ್ಲೋಲೇಟರ್ ವ್ಯವಸ್ಥೆಯಲ್ಲಿ ಎರಡನೇ ಹಂತದ ಶುದ್ಧೀಕರಣ ನಡೆಸಿ ಬೈಪಾಸ್ ಚಾನೆಲ್ ಮೂಲಕ ಫಿಲ್ಟರ್ ಹೌಸ್‌ಗೆ ಹಾಯಿಸಲಾಗುತ್ತದೆ.

ಫಿಲ್ಟರ್ ಯೂನಿಟ್: ಅಂತಿಮವಾಗಿ ತಲಾ 34 ದಶಲಕ್ಷ ಲೀಟರ್‌ನಂತೆ ಎರಡು ಬೈಪಾಸ್ ಚಾನೆಲ್ ಮೂಲಕ ಫಿಲ್ಟರ್‌ಹೌಸ್‌ಗೆ ಬರುವ ನೀರನ್ನು ಅಲ್ಲಿ ದಪ್ಪಕಲ್ಲು, ಮರಳುಕಲ್ಲು, ದಪ್ಪ ಮರಳು, ಮಧ್ಯಮ, ಸೂಕ್ಷ್ಮ ಮರಳು ಹೀಗೆ ಐದು ಪದರಗಳಲ್ಲಿ ಹಾಯಿಸಿ ನೀರು ಶುದ್ಧೀಕರಿಸಲಾಗುತ್ತದೆ.

ಮೂರನೇ ಹಂತದಲ್ಲಿ ಶುದ್ಧೀಕರಣಗೊಂಡ ನೀರನ್ನು 0.8 ಮೀಟರ್ ವ್ಯಾಸದ ಪೈಪ್ ಮೂಲಕ ಪಂಪ್‌ಹೌಸ್‌ಗೆ ಹಾಯಿಸಿ ನಂತರ ಅವಳಿ ನಗರಗಳಿಗೆ ಪೂರೈಸಲಾಗುತ್ತದೆ. ನೂತನ ಘಟಕದಲ್ಲಿ ಒಮ್ಮೆಗೆ 68 ದಶಲಕ್ಷ ಲೀಟರ್ ನೀರು ಶುದ್ಧೀಕರಿಸಬಹುದಾಗಿದ್ದು, ಈ ಸಂದರ್ಭದಲ್ಲಿ ಪ್ರತ್ಯೇಕಗೊಳ್ಳುವ ಕಲುಷಿತ ನೀರನ್ನು ಮತ್ತೆ ಶುದ್ಧೀಕರಿಸಿ ಬಳಕೆ ಯೋಗ್ಯ ಮಾಡುವ ತಾಂತ್ರಿಕತೆಯನ್ನು ನೂತನ ಘಟಕದಲ್ಲಿ ಅಳವಡಿಸಲಾಗಿದೆ.

ಪಂಪ್‌ಹೌಸ್‌ನಿಂದ ಈ ಹಿಂದೆ ಧಾರವಾಡಕ್ಕೆ ಬಂದು ನಂತರ ಹುಬ್ಬಳ್ಳಿಯತ್ತ ಮುಖ ಮಾಡುತ್ತಿದ್ದ ನೀರು ಸರಬರಾಜು ಪೈಪ್‌ಗೆ ಈ ಬಾರಿ ನೇರ ಹುಬ್ಬಳ್ಳಿಯ ಹಾದಿ ತೋರಿಸಲಾಗಿದ್ದು, ಇದರಿಂದ ನೀರು ಪೂರೈಕೆಗೆ ತಗುಲುತ್ತಿದ್ದ ಖರ್ಚು ಹಾಗೂ ಸಮಯದ ಉಳಿತಾಯವಾದಂತಾಗಿದೆ.

ಕೋಲ್ಕತ್ತಾ ಮೂಲದ ಎಸ್‌ಪಿಎಂಎಲ್ ನಿರ್ಮಾಣ ಸಂಸ್ಥೆ ನೂತನ ಘಟಕ ನಿರ್ಮಿಸಿದ್ದು, ಮುಂದಿನ ಒಂದು ವರ್ಷದ ನಿರ್ವಹಣೆಯ ಹೊಣೆ ಹೊತ್ತಿದೆ. 2009ರ ಮಾರ್ಚ್‌ನಲ್ಲಿ ಘಟಕದ ನಿರ್ಮಾಣ ಕಾರ್ಯ ಆರಂಭಿಸಲಾಗಿದ್ದು, ಪೈಪ್‌ಲೈನ್ ಅಳವಡಿಕೆಗೆ ಭೂಸ್ವಾಧೀನ ಸಮಸ್ಯೆ ಹಾಗೂ ಕಾರ್ಮಿಕರ ಕೊರತೆಯಿಂದ ಕೊಂಚ ತಡವಾಗಿ ಕಾಮಗಾರಿ ಪೂರ್ಣಗೊಳ್ಳುತ್ತಿದೆ ಎನ್ನುತ್ತಾರೆ ಕಂಪೆನಿಯ ಎಂಜಿನಿಯರ್ ಅರುಣ್.

`ನಿರ್ಮಾಣ ಕಂಪೆನಿಯ ತಂತ್ರಜ್ಞರೊಂದಿಗೆ ಸೇರಿ ನಾವು ಹಗಲು-ರಾತ್ರಿ ಕಾರ್ಯೋನ್ಮುಖರಾಗಿದ್ದೇವೆ. ಪ್ಲಾಂಟ್‌ನಿಂದ ಪಂಪ್‌ಹೌಸ್‌ಗೆ ಸಂಪರ್ಕ ಕಲ್ಪಿಸುವ ಪೈಪ್‌ಲೈನ್ ಕಾಮಗಾರಿ ಬುಧವಾರ ಪೂರ್ಣಗೊಳ್ಳಲಿದೆ ಎನ್ನುವ ಹೆಸರು ಹೇಳಲಿಚ್ಚಿಸದ ಜಲಮಂಡಳಿ ಅಧಿಕಾರಿಯೊಬ್ಬರು,  ಶತಾಯಗತಾಯ ಮೇಯರ್ ಹೇಳಿದ ದಿನದಿಂದಲೇ ನೀರು ಪೂರೈಕೆ ಆರಂಭಿಸಿ ನಮ್ಮ ಮೇಲಿನ ಟೀಕೆಗಳಿಗೆ ಉತ್ತರ ನೀಡುವುದಾಗಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT