ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಸೆಂಟ್ರಲ್' ಒಂದು ಆಲ್ಬಮ್ಮು!

Last Updated 5 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಹಳೆ ಮತ್ತು ಹೊಸ ತಲೆಗಳ ಸಿನಿಮಾ ಭರಾಟೆ ನಡುವೆ ಸಾಫ್ಟ್‌ವೇರ್ ವೃತ್ತಿಯಲ್ಲಿ ತೊಡಗಿರುವ ಹುಡುಗರ ತಂಡವೊಂದು ವಿಶಿಷ್ಟ ಹಾಡಿನ ಆಲ್ಬಂ ತಯಾರಿಸಿದೆ. ಮನರಂಜನಾ ಮಾಧ್ಯಮದಲ್ಲಿ ಮುಳುಗಿರುವ ಎಲ್ಲರ ಮಧ್ಯೆ ಇಣುಕುವ ತಮ್ಮ ಹೊಸ ಪ್ರಯತ್ನಕ್ಕೆ ಅವರು ಇಟ್ಟಿರುವ ಹೆಸರು `ಸೆಂಟ್ರಲ್ ನಮ್ದಂದು'.

ಮೂಲತಃ ಶಿವಮೊಗ್ಗದವರಾದ ಎಸ್.ಪಿ. ಚೇತನ್‌ರ ಬಾಲ್ಯದ ಕನಸು ಇದು. ಬಡತನದ ಬದುಕಿನ ನಡುವೆ ಕಟ್ಟಿಕೊಂಡಿದ್ದ ಕನಸು ನನಸಾಗಿದ್ದು ಸಾಫ್ಟ್‌ವೇರ್ ಲೋಕದಲ್ಲಿ ಉದ್ಯೋಗ ದೊರೆತ ಬಳಿಕ. ಇದು ಅವರ ಮೊದಲ ಹಾಡಿನ ಆಲ್ಬಂ ಆದರೂ ಹೊಸ ಅನುಭವವೇನಲ್ಲ. ಗೆಳೆಯರ ಜೊತೆಗೂಡಿ ನಾಲ್ಕು ಕಿರುಚಿತ್ರಗಳನ್ನು ತಯಾರಿಸಿ ಪ್ರಶಸ್ತಿಯನ್ನೂ ಗಳಿಸಿದವರು. ಇದೆಲ್ಲವೂ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾದರೂ ಇಲ್ಲಿನ ಜನರಿಗೇ ತಲುಪಿಲ್ಲ ಎಂಬ ಬೇಸರ ಅವರನ್ನು ಕಾಡುತ್ತಿತ್ತು. ಸಮಾನ ಮನಸ್ಕ ಪ್ರತಿಭೆಗಳು ವಾರಾಂತ್ಯದ ರಜಾ ದಿನಗಳಲ್ಲಿ ಸೇರಿಕೊಂಡು ಮಟ್ಟುಗಳನ್ನು ಹಾಕಿದರು, ಹಾಡು ಹೊಸೆದರು. ಇನ್ನಷ್ಟು ಮಂದಿ ಕೈಜೋಡಿಸಲಿ ಎಂದು ಆಡಿಷನ್ ನಡೆಸಿ ಹೊಸ ಹಾಡುಗಾರರನ್ನು ಹುಡುಕಿದರು. ಅದರ ಫಲವೇ `ಸೆಂಟ್ರಲ್ ನಮ್ದಂದು' ಆಲ್ಬಮ್.

ನಿರ್ದೇಶನ, ಸಾಹಿತ್ಯದ ಜೊತೆಗೆ ಹಾಡುಗಳ ನಡುವೆ ಸಂಭಾಷಣೆಯ ತುಣುಕುಗಳನ್ನೂ ಚೇತನ್ ತುಂಬಿದ್ದಾರೆ. ಅಂದಹಾಗೆ, ಅವರಿಗೆ ಈ ಆಲ್ಬಂ ಸಿನಿಮಾ ರಂಗ ಪ್ರವೇಶಿಸುವ ಮೆಟ್ಟಿಲು. ಕೆಲವು ಕಥೆ, ಚಿತ್ರಕಥೆಗಳನ್ನೂ ಸಿದ್ಧಪಡಿಸಿಕೊಂಡಿರುವ ಚೇತನ್, ಚಿತ್ರರಂಗಕ್ಕೆ ಅಡಿಯಿಡಲು ಈ ಆಲ್ಬಂ ನೆರವಾಗಲಿದೆ ಎಂಬ ಭರವಸೆ ಹೊಂದಿದ್ದಾರೆ.

ಸುಮಾರು 30 ಜನರ ಈ ತಂಡಕ್ಕೆ ಬೆನ್ನುತಟ್ಟಿ ಪ್ರೋತ್ಸಾಹಿಸಿದವರು ಲಹರಿ ಆಡಿಯೊ ಸಂಸ್ಥೆಯ ವೇಲು. ಈ ತಂಡದವರಲ್ಲಿನ ಉತ್ಸಾಹ ಮತ್ತು ಪ್ರತಿಭೆ ಕಂಡಿರುವ ಅವರಿಗೆ ಮುಂದೆ ಚಿತ್ರರಂಗದಲ್ಲಿ ಉತ್ತಮ ಸಾಧನೆ ಮಾಡುತ್ತಾರೆ ಎಂಬ ವಿಶ್ವಾಸ ಮೂಡಿಸಿದೆಯಂತೆ. ಆ ನಂಬಿಕೆಯೊಂದಿಗೇ ಅವರು `ಸೆಂಟ್ರಲ್...' ಆಲ್ಬಂ ಹೊರತಂದಿದ್ದಾರೆ.

ನೋಬಿನ್ ಪಾಲ್ ಮತ್ತು ಮಾರ್ಟಿನ್ ಚಾರ್ಲ್ಸ್ ಆಲ್ಬಮ್‌ನಲ್ಲಿನ ಐದು ಹಾಡುಗಳಿಗೆ ಸ್ವರ ಸಂಯೋಜನೆ ಮಾಡಿದ್ದಾರೆ. ವಿನಯ್ ಎನ್.ಡಿ.ಎಸ್. ಇದಕ್ಕೆ ಬಂಡವಾಳ ಹೂಡಿದ್ದಾರೆ. ಸಂಜಯ್, ಕಿರಣ್, ಪುರುಷೋತ್ತಮ್ ಮುಂತಾದವರು ಗೆಳೆಯರ ಸಾಹಸಕ್ಕೆ ಹೆಗಲು ನೀಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT