ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಂಟ್ರಿಂಗ್ ಕುಸಿದು ಮೂವರ ಸಾವು

Last Updated 5 ಆಗಸ್ಟ್ 2013, 19:55 IST
ಅಕ್ಷರ ಗಾತ್ರ

ಬೆಂಗಳೂರು: ಕೆಂಗೇರಿ ಉಪನಗರ ಬಳಿಯ ಬಂಡೆ ಮಠ ಬಡಾವಣೆಯಲ್ಲಿ ಸೋಮವಾರ ಬೆಳಿಗ್ಗೆ ನಿರ್ಮಾಣ ಹಂತದ ಕಲ್ಯಾಣ ಮಂಟಪದ ಸೆಂಟ್ರಿಂಗ್ ಕುಸಿದು ಮೂವರು ಕೂಲಿ ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಹತ್ತು ಮಂದಿ ಗಾಯಗೊಂಡಿದ್ದಾರೆ. ಸೆಂಟ್ರಿಂಗ್‌ನ ಅವಶೇಷಗಳಡಿ ಇನ್ನೂ ಕೆಲ ಕಾರ್ಮಿಕರು ಸಿಲುಕಿ ಸಾವನ್ನಪ್ಪಿರುವ ಶಂಕೆ ಇದ್ದು, ಅವಶೇಷಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಮುಂದುವರಿದಿದೆ.

ಸುಂಕದಕಟ್ಟೆಯ ವೆಂಕಟೇಶ್ (40), ಗುಲ್ಬರ್ಗ ಜಿಲ್ಲೆಯ ಶಿವಣ್ಣ (24) ಮತ್ತು ಬಿಹಾರ ಮೂಲದ ಸುಮಿತ್ ಮಂಡಲ್ (24) ಮೃತಪಟ್ಟವರು. ಘಟನೆಯಲ್ಲಿ ಗಾಯಗೊಂಡಿರುವ ಕೆಂಗೇರಿಯ ಸೈಯದ್ ಪಾಷಾ, ಕೊಪ್ಪಳದ ಮಾದಪ್ಪ, ಶಿವಕುಮಾರ್, ದಿನೇಶ್, ತುಮಕೂರಿನ ಕಾಂತರಾಜು, ಬಿಹಾರ ಮೂಲದ ಪಿಂಕು, ಗುರುದೇವ್, ಲಾಲ್‌ಚಂದ್, ತಮಿಳುನಾಡು ಮೂಲದ ಸುರೇಶ್‌ಕುಮಾರ್ ಹಾಗೂ ಆಂಧ್ರಪ್ರದೇಶ ಮೂಲದ ಏಳುಕೊಂಡಲ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಂಡೆ ಮಠದ ಆಡಳಿತ ಮಂಡಳಿಯು ಕೊಮ್ಮಘಟ್ಟ ರಸ್ತೆಯ ಬಳಿ ಮೂರು ಅಂತಸ್ತಿನ ಕಲ್ಯಾಣ ಮಂಟಪ ನಿರ್ಮಿಸುತ್ತಿದೆ. ಬೆಳಿಗ್ಗೆ 9.30ರ ಸುಮಾರಿಗೆ 40ಕ್ಕೂ ಹೆಚ್ಚು ಕಾರ್ಮಿಕರು ಆ ಕಟ್ಟಡದ ಒಂದನೇ ಅಂತಸ್ತಿನಲ್ಲಿ ಕೆಲಸ ಮಾಡುತ್ತಿದ್ದರು. ಆಗ ಕಟ್ಟಡದ ಎರಡನೇ ಅಂತಸ್ತಿನ ಮೇಲ್ಛಾವಣಿಯ ಸೆಂಟ್ರಿಂಗ್ ಸಂಪೂರ್ಣ ಕುಸಿದಿದೆ. ಇದರಿಂದ ಗಾಬರಿಯಾದ ಕೆಲ ಕಾರ್ಮಿಕರು ಕಟ್ಟಡದಿಂದ ಹೊರಗೆ ಓಡಿ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಆದರೆ, ಮತ್ತೆ ಕೆಲ ಕಾರ್ಮಿಕರಿಗೆ ಕಟ್ಟಡದಿಂದ ಹೊರಗೆ ಓಡಿ ಬರಲು ಸಾಧ್ಯವಾಗದೆ ಸೆಂಟ್ರಿಂಗ್‌ನ ಅವಶೇಷಗಳಡಿ ಸಿಲುಕಿದರು.

ಈ ವಿಷಯ ತಿಳಿದು 10.30ರ ಸುಮಾರಿಗೆ ಘಟನಾ ಸ್ಥಳಕ್ಕೆ ಬಂದ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಸಿಬ್ಬಂದಿ, ವಿಪತ್ತು ನಿರ್ವಹಣೆ ತಂಡದ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳೀಯರ ನೆರವಿನಿಂದ ಕೂಡಲೇ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು.

ಗ್ಯಾಸ್ ಕಟರ್ ಮತ್ತಿತರ ಯಂತ್ರೋಪಕರಣಗಳ ಸಹಾಯದಿಂದ ಅವಶೇಷಗಳನ್ನು ತೆರವುಗೊಳಿಸುತ್ತಾ ಕಾರ್ಮಿಕರು ಸಿಲುಕಿಕೊಂಡಿದ್ದ ಸ್ಥಳವನ್ನು ತಲುಪಿದರು. ಆದರೆ, ಆ ವೇಳೆಗಾಗಲೇ ವೆಂಕಟೇಶ್, ಶಿವಣ್ಣ ಮತ್ತು ಸುಮಿತ್ ಮಂಡಲ್ ಮೃತಪಟ್ಟಿದ್ದರು.

ಮೇಲ್ಛಾವಣಿ ಕುಸಿದು ಒಂದನೇ ಅಂತಸ್ತಿಗೆ ಬಿದ್ದಿರುವುದರಿಂದ ಸೆಂಟ್ರಿಂಗ್‌ನ ಅವಶೇಷಗಳ ಭಾರಕ್ಕೆ ನೆಲ ಅಂತಸ್ತಿನ ಪಿಲ್ಲರ್‌ಗಳು (ಕಂಬ) ಬಾಗಿವೆ. ಇದರಿಂದಾಗಿ ಕಟ್ಟಡ ಸಂಪೂರ್ಣ ಕುಸಿಯುವ ಸ್ಥಿತಿಯಲ್ಲಿದೆ.

`ಕಾರ್ಮಿಕ ದಿನೇಶ್‌ನ ತೋಳಿನ ಭಾಗಕ್ಕೆ ಕಬ್ಬಿಣದ ಸರಳು ಹೊಕ್ಕಿದ್ದರಿಂದ ಆತನನ್ನು ಅವಶೇಷಗಳ ಅಡಿಯಿಂದ ಬೇಗನೆ ರಕ್ಷಿಸಿ ಹೊರಗೆ ಕರೆದುಕೊಂಡು ಬರಲು ಸಾಧ್ಯವಾಗಲಿಲ್ಲ.  ಗ್ಯಾಸ್ ಕಟರ್‌ನಿಂದ ಸರಳು ಕತ್ತರಿಸಿ, ದಿನೇಶ್‌ನನ್ನು ರಕ್ಷಿಸಲಾಯಿತು' ಎಂದು ಕಾರ್ಮಿಕ ಮಂಜುನಾಥ್ ಹೇಳಿದರು.

ಘಟನಾ ಸ್ಥಳಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ನಗರ ಪೊಲೀಸ್ ಕಮಿಷನರ್ ರಾಘವೇಂದ್ರ ಔರಾದಕರ್, `ಘಟನೆಯಲ್ಲಿ ಮೂವರು ಮೃತಪಟ್ಟಿದ್ದು, ಹತ್ತು ಕೂಲಿ ಕಾರ್ಮಿಕರು ಗಾಯಗೊಂಡಿದ್ದಾರೆ. ಗಾಯಾಳು ದಿನೇಶ್ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ. ಇತರೆ ಗಾಯಾಳುಗಳು ಚೇತರಿಸಿಕೊಳ್ಳುತ್ತಿದ್ದಾರೆ' ಎಂದರು.

ಕಳಪೆ ಕಾಮಗಾರಿ: `ಕಳಪೆ ಕಾಮಗಾರಿಯಿಂದ ಕಟ್ಟಡದ ಸೆಂಟ್ರಿಂಗ್ ಕುಸಿದಿದೆ ಎಂದು ಪ್ರಾಥಮಿಕವಾಗಿ ಗೊತ್ತಾಗಿದೆ. ಕಟ್ಟಡದ ಗುತ್ತಿಗೆದಾರರು ಮತ್ತು ಎಂಜಿನಿಯರ್‌ಗಳ ನಿರ್ಲಕ್ಷ್ಯವೇ ಈ ಅವಘಡಕ್ಕೆ ಕಾರಣ. ಮಠದ ಆಡಳಿತ ಮಂಡಳಿ ಸದಸ್ಯರು ಕಲ್ಯಾಣ ಮಂಟಪ ನಿರ್ಮಾಣಕ್ಕೆ ಬಿಬಿಎಂಪಿಯಿಂದ ಅನುಮತಿ ಪಡೆದಿದ್ದರೆ ಎಂಬ ಬಗ್ಗೆ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ' ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಮೂವರ ಬಂಧನ: `ಘಟನೆ ಸಂಬಂಧ ಕಟ್ಟಡದ ಸೆಂಟ್ರಿಂಗ್ ಗುತ್ತಿಗೆದಾರ ಮೂರ್ತಿ, ಗುತ್ತಿಗೆದಾರ ಕೃಷ್ಣಮೂರ್ತಿ, ಎಂಜಿನಿಯರ್ ಜಗನ್ನಾಥರಾವ್ ಹಾಗೂ ಬಂಡೆ ಮಠದ ಸಚ್ಚಿದಾನಂದ ಸ್ವಾಮೀಜಿ ಅವರ ವಿರುದ್ಧ ಕೊಲೆಯ ಉದ್ದೇಶವಿಲ್ಲದೆ ಸಂಭವಿಸಿದ ಸಾವು ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮೂರ್ತಿ, ಕೃಷ್ಣಮೂರ್ತಿ ಮತ್ತು ಜಗನ್ನಾಥರಾವ್ ಅವರನ್ನು ಬಂಧಿಸಲಾಗಿದೆ' ಎಂದು ಕೆಂಗೇರಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಪರಿಹಾರಕ್ಕೆ ಕ್ರಮ
`ಮೃತರ ಕುಟುಂಬ ಸದಸ್ಯರಿಗೆ, ಗಾಯಾಳುಗಳಿಗೆ ಮಠದ ಆಡಳಿತ ಮಂಡಳಿಯಿಂದ ಪರಿಹಾರ ಕೊಡಿಸಲು ಕ್ರಮ ಕೈಗೊಳ್ಳಲಾಗುತ್ತದೆ. ನಗರದಲ್ಲಿ ನಿರ್ಮಾಣ ಹಂತದ ಕಟ್ಟಡಗಳು ಕುಸಿದು ಕೂಲಿ ಕಾರ್ಮಿಕರು ಸಾವನ್ನಪ್ಪುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆದ್ದರಿಂದ ಕಟ್ಟಡ ನಿರ್ಮಾಣದ ವೇಳೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಬಿಲ್ಡರ್‌ಗಳಿಗೆ ಹಾಗೂ ಕಟ್ಟಡದ ಮಾಲೀಕರಿಗೆ ಆದೇಶ ಹೊರಡಿಸಲಾಗುತ್ತದೆ' ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ಹೇಳಿದರು.

ಅಕ್ರಮ ನಿರ್ಮಾಣ: ಪಾಲಿಕೆ ಸ್ಪಷ್ಟನೆ
`ಬಂಡೆ ಮಠದ ಆಡಳಿತ ಮಂಡಳಿ ಸದಸ್ಯರು ಪಾಲಿಕೆಗೆ ಅಭಿವೃದ್ಧಿ ಶುಲ್ಕ ಪಾವತಿಸಿರಲಿಲ್ಲ. ನಿವೇಶನದ ಖಾತೆ ಸಹ ಮಾಡಿಸಿಕೊಂಡಿರಲಿಲ್ಲ. ಅಲ್ಲದೇ, ಪಾಲಿಕೆಯಿಂದ ಅನುಮತಿ ಪಡೆಯದೆ ಆ ಜಾಗದಲ್ಲಿ ಅಕ್ರಮವಾಗಿ ಕಲ್ಯಾಣ ಮಂಟಪ ನಿರ್ಮಿಸುತ್ತಿದ್ದರು. ಈ ಸಂಬಂಧ ಪಾಲಿಕೆಯ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ (ಎಇಇ) ಅವರು, ಕಲ್ಯಾಣ ಮಂಟಪ ನಿರ್ಮಾಣದ ಕೆಲಸವನ್ನು ಸ್ಥಗಿತಗೊಳಿಸುವಂತೆ ಮಠದ ಆಡಳಿತ ಮಂಡಳಿಗೆ ನೋಟಿಸ್ ಕೊಟ್ಟಿದ್ದರು' ಎಂದು ಬಿಬಿಎಂಪಿ ರಾಜರಾಜೇಶ್ವರಿನಗರ ವಲಯದ ಮುಖ್ಯ ಎಂಜಿನಿಯರ್ ಎಂ.ಜಿ.ಶ್ರೀನಿವಾಸ್ `ಪ್ರಜಾವಾಣಿ'ಗೆ ತಿಳಿಸಿದರು.

`ಖಾತಾರಹಿತ ನಿವೇಶನದಲ್ಲಿ ಕಲ್ಯಾಣ ಮಂಟಪ'
ಬೆಂಗಳೂರು:
`ಕೆಂಗೇರಿ ಉಪನಗರದ ಬಳಿಯ ಬಂಡೆಮಠ ಬಡಾವಣೆಯಲ್ಲಿ ಕುಸಿದು ಬಿದ್ದ ಕಲ್ಯಾಣ ಮಂಟಪವನ್ನು ಕಂದಾಯ ಭೂಮಿಯಲ್ಲಿ ನಿರ್ಮಿಸಲಾಗುತ್ತಿತ್ತು' ಎಂದು ಬಿಬಿಎಂಪಿ ಆಯುಕ್ತ ಎಂ.ಲಕ್ಷ್ಮಿನಾರಾಯಣ ತಿಳಿಸಿದ್ದಾರೆ.

ಘಟನೆ ಕುರಿತಂತೆ ಮಾಹಿತಿ ಸಿಕ್ಕೊಡನೆ ಮೇಯರ್ ಡಿ.ವೆಂಕಟೇಶಮೂರ್ತಿ ಅವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ ಅವರು, `ಪ್ರಜಾವಾಣಿ' ಜತೆ ಮಾತನಾಡಿದರು. `ಖಾತಾರಹಿತ ನಿವೇಶನದಲ್ಲಿ ಕಲ್ಯಾಣ ಮಂಟಪದ ಕಟ್ಟಡವನ್ನು ನಿರ್ಮಿಸಲಾಗುತ್ತಿತ್ತು. ಆ ಜಾಗ ಕೃಷಿ ಭೂಮಿಯಾಗಿದೆ. ಅದನ್ನು ವಸತಿ ಇಲ್ಲವೆ ವಾಣಿಜ್ಯ ಬಳಕೆಯ ಉದ್ದೇಶಕ್ಕೆ ಈವರೆಗೆ ಬದಲಾವಣೆ ಮಾಡಲಾಗಿಲ್ಲ' ಎಂದು ಅವರು ಮಾಹಿತಿ ನೀಡಿದರು.

`ಆ ಜಾಗದಲ್ಲಿ ಅಕ್ರಮವಾಗಿ ಕಲ್ಯಾಣ ಮಂಟಪ ನಿರ್ಮಾಣವಾಗುತ್ತಿದ್ದರೂ ರಾಜರಾಜೇಶ್ವರಿನಗರ ವಲಯದ ಮುಖ್ಯ ಎಂಜಿನಿಯರ್ ಸೇರಿದಂತೆ ಎಲ್ಲ ಹಂತದ ಎಂಜಿನಿಯರ್‌ಗಳು, ಆ ಅಕ್ರಮವನ್ನು ತಡೆಯಲು ಕ್ರಮ ಕೈಗೊಂಡಿರಲಿಲ್ಲ. ಈ ಕಾರಣಕ್ಕಾಗಿ ಆ ಅಧಿಕಾರಿಗಳಿಗೆ ಷೋಕಾಸ್ ನೋಟಿಸ್ ನೀಡಲಾಗಿದೆ' ಎಂದು ಅವರು ಹೇಳಿದ್ದಾರೆ.

ನಗರದಲ್ಲಿ ಸಂಭವಿಸಿದ ಕಟ್ಟಡ ಕುಸಿತ ಪ್ರಕರಣಗಳು
ನಗರದಲ್ಲಿ ಕಳೆದ ಐದಾರು ವರ್ಷಗಳಲ್ಲಿ ಇಂತಹ ಹಲವು ಪ್ರಕರಣಗಳು ನಡೆದಿದ್ದು, ಹತ್ತಾರು ಮಂದಿ ಸಾವನ್ನಪ್ಪಿದ್ದಾರೆ. ಈ ಘಟನೆಗಳಲ್ಲಿ ಸಾವನ್ನಪ್ಪಿದವರಲ್ಲಿ ಬಹುಪಾಲು ಹೊರ ರಾಜ್ಯದ ಕಾರ್ಮಿಕರೇ ಆಗಿದ್ದಾರೆ.

ಭಾರತಿನಗರ ಬಳಿಯ ನೆಹರೂಪುರದಲ್ಲಿ 2007ರ ಡಿ.11ರಂದು ಕಟ್ಟಡ ಕುಸಿದು ಐದು ಮಂದಿ ಸಾವನ್ನಪ್ಪಿ, 18 ಜನ ಗಾಯಗೊಂಡಿದ್ದರು. ಇದೇ ವರ್ಷದ ಜುಲೈ 26ರಂದು ಕೋರಮಂಗಲದಲ್ಲಿ ಎರಡು ಅಂತಸ್ತಿನ ಕಟ್ಟಡ ಕುಸಿದು ಲಕ್ಷ್ಮಿ ಎಂಬ ಎರಡು ವರ್ಷದ ಹೆಣ್ಣು ಮಗು ಮೃತಪಟ್ಟಿತ್ತು.

ಹೂಡಿ ಬಳಿ 2008ರ ಅ.23ರಂದು ಪ್ರೆಸ್ಟೀಜ್ ಶಾಂತಿನಿಕೇತನ ಸಂಸ್ಥೆಯ ನಿರ್ಮಾಣ ಹಂತದ 14 ಅಂತಸ್ತಿನ ಅಪಾರ್ಟ್‌ಮೆಂಟ್ ಕಟ್ಟಡ ಕುಸಿದು ಬಿದ್ದು ಮುನ್ನಾ ಕಟುವಾ ಎಂಬ ಯುವಕ ಸಾವನ್ನಪ್ಪಿದ್ದ. ಅಲ್ಲದೇ ನಾಲ್ಕು ಮಂದಿ ಕಾರ್ಮಿಕರು ಗಾಯಗೊಂಡಿದ್ದರು. ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿ 2010ರ ಆ.17ರಂದು ಇಂತದ್ದೇ ದುರ್ಘಟನೆ ನಡೆದಿತ್ತು. ಆ ಅವಘಡದಲ್ಲಿ ಹನ್ನೊಂದು ಕಾರ್ಮಿಕರು ಗಾಯಗೊಂಡಿದ್ದರು.

ಬನ್ನೇರುಘಟ್ಟ ರಸ್ತೆಯ ಸಿ.ಕೆ.ಪಾಳ್ಯದಲ್ಲಿ 2011ರ ಫೆ.2ರಂದು ಕಾರ್ಖಾನೆಯೊಂದರ ಗೋಡೆ ಕುಸಿದು ಒಂಬತ್ತು ಕಾರ್ಮಿಕರು ಸಾವನ್ನಪ್ಪಿದ್ದರು. ಅಲ್ಲದೇ 20 ಕಾರ್ಮಿಕರು ತೀವ್ರವಾಗಿ ಗಾಯಗೊಂಡಿದ್ದರು. ಇದೇ ವರ್ಷದ ಮಾ.11ರಂದು ಕೊಡಿಗೇಹಳ್ಳಿಯಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು ಆರು ಕಾರ್ಮಿಕರು ಗಾಯಗೊಂಡಿದ್ದರು.

ಸುಮನಹಳ್ಳಿಯ ಲಕ್ಷ್ಮಿವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ 2011ರ ಸೆ.21ರಂದು ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು, ಕಲ್ಯಾಣ ಮಂಟಪದ ಪಕ್ಕದ ಎರಡು ಅಂತಸ್ತಿನ ಕಟ್ಟಡ ಕುಸಿದು ಬಿದ್ದಿತ್ತು. ಘಟನೆಯಲ್ಲಿ ಯುವತಿಯೊಬ್ಬರು ಸಾವನ್ನಪ್ಪಿ, ಹತ್ತು ಮಂದಿ ಗಾಯಗೊಂಡಿದ್ದರು.

ಮಹದೇವಪುರ ಬಳಿಯ ಗರುಡಾಚಾರ್ ಪಾಳ್ಯದ ಎಂ.ಕೆ.ಲೇಔಟ್‌ನಲ್ಲಿ 2012ರ ಜುಲೈ 4ರಂದು ನಿರ್ಮಾಣ ಹಂತದ ಕಟ್ಟಡ ಕುಸಿದು ಗುತ್ತಿಗೆದಾರ ಮೋಹನ್ ನಾಯರ್ (55), ಕೂಲಿ ಕಾರ್ಮಿಕ ಸಾಬಣ್ಣ (24) ಎಂಬುವರು ಮೃತಪಟ್ಟಿದ್ದರು.
ವೈಟ್‌ಫೀಲ್ಡ್ ಬಳಿಯ ಅಂಬೇಡ್ಕರ್‌ನಗರದಲ್ಲಿ 2012ರ ಜುಲೈ 5ರಂದು ಕಟ್ಟಡವೊಂದರ ಗೋಡೆ ಕುಸಿದು ಆಂಧ್ರಪ್ರದೇಶ ಮೂಲದ ವೆಂಕಟೇಶ್ (45) ಮತ್ತು ನಾರಾಯಣಮ್ಮ (35) ದಂಪತಿ ಸಾವನ್ನಪ್ಪಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT