ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಟ್‌ಟಾಪ್ ಬಾಕ್ಸ್ ಅಳವಡಿಕೆ ಅನಿವಾರ್ಯ

ಕೇಬಲ್ ಆಪರೇಟರ್‌ಗಳ ಅರ್ಜಿ ವಜಾಗೊಳಿಸಿದ ಹೈಕೋರ್ಟ್
Last Updated 16 ಏಪ್ರಿಲ್ 2013, 20:59 IST
ಅಕ್ಷರ ಗಾತ್ರ

ಬೆಂಗಳೂರು: ಸೆಟ್‌ಟಾಪ್ ಬಾಕ್ಸ್ ಅಳವಡಿಕೆಗೆ ಹೆಚ್ಚಿನ ಕಾಲಾವಕಾಶ ನೀಡಬೇಕು ಎಂದು ಕೋರಿ ರಾಜ್ಯ ಕೇಬಲ್ ಆಪರೇಟರ್‌ಗಳ ಸಂಘ ಮತ್ತು ಇತರರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಮಂಗಳವಾರ ವಜಾ ಮಾಡಿದೆ. ಕೇಬಲ್ ಆಪರೇಟರ್‌ಗಳ ವಾದದಲ್ಲಿ ಹುರುಳಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಕೇಬಲ್ ಆಪರೇಟರ್‌ಗಳ ಸಂಘ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್ ನಡೆಸಿದರು. ಮಾರ್ಚ್ 31ರ ನಂತರ ಎಲ್ಲ ಖಾಸಗಿ ಉಪಗ್ರಹ ವಾಹಿನಿಗಳು `ಡಿಜಿಟಲ್' ಮಾದರಿಯಲ್ಲೇ ಸಿಗ್ನಲ್ ಪ್ರಸಾರ ಮಾಡಬೇಕು. ಅನಲಾಗ್ ಮಾದರಿ ಸಿಗ್ನಲ್‌ಗಳ ಪ್ರಸಾರ ಸ್ಥಗಿತಗೊಳಿಸಬೇಕು. ಕೇಬಲ್ ಸಂಪರ್ಕ ಪಡೆದುಕೊಂಡವರು ಮಾ. 31ರೊಳಗೆ ಸೆಟ್‌ಟಾಪ್ ಬಾಕ್ಸ್ ಅಳವಡಿಸಿಕೊಳ್ಳಬೇಕು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಸೂಚನೆ ನೀಡಿತ್ತು.

ಇದನ್ನು ಪ್ರಶ್ನಿಸಿ ಕೇಬಲ್ ಆಪರೇಟರ್‌ಗಳ ಸಂಘ ಹೈಕೋರ್ಟ್ ಮೊರೆ ಹೋಗಿತ್ತು. ಅನಲಾಗ್ ಸಿಗ್ನಲ್ ಪ್ರಸಾರ ತಡೆಹಿಡಿಯದಂತೆ ವಿಚಾರಣೆ ಸಂದರ್ಭದಲ್ಲಿ ಹೈಕೊರ್ಟ್, ಹಲವು ಬಾರಿ ಕೇಂದ್ರ ಸರ್ಕಾರ ಮತ್ತು ಟೆಲಿಕಾಂ ನಿಯಂತ್ರಣ ಪ್ರಾಧಿಕಾರಕ್ಕೆ (ಟ್ರಾಯ್) ಮಧ್ಯಂತರ ತಡೆಯಾಜ್ಞೆ ನೀಡಿತ್ತು.
ಇದೇ ಮಾದರಿಯ ಕೋರಿಕೆಯನ್ನು ಮುಂದಿಟ್ಟುಕೊಂಡು ಮೈಸೂರು ಜಿಲ್ಲಾ ಕೇಬಲ್ ಆಪರೇಟರ್‌ಗಳ ಸಂಘ ಕೂಡ ಅರ್ಜಿ ಸಲ್ಲಿಸಿತ್ತು. ತಮ್ಮ ಸೇವೆಗಳನ್ನು ಅನಲಾಗ್ ಮಾದರಿಯಿಂದ ಡಿಜಿಟಲ್ ಮಾದರಿಗೆ ಪರಿವರ್ತಿಸಿಕೊಳ್ಳಲು ಆರು ತಿಂಗಳ ಹೆಚ್ಚುವರಿ ಕಾಲಾವಕಾಶವನ್ನು ಸಂಘ ಕೋರಿತ್ತು.

2011ರ ನವೆಂಬರ್ 11ರಂದು ಅಧಿಸೂಚನೆ ಹೊರಡಿಸಿರುವ ಮಾಹಿತಿ ಮತ್ತು ಪ್ರಸಾರ ಸಚಿವಾಲಯ, `ಎರಡನೆಯ ಹಂತ'ದ ನಗರಗಳ ಕೇಬಲ್ ಆಪರೇಟರ್‌ಗಳು ತಮ್ಮ ಸೇವೆಯನ್ನು `ಡಿಜಿಟಲ್' ಮಾದರಿಗೆ 2013ರ ಮಾರ್ಚ್ 31ರೊಳಗೆ ಪರಿವರ್ತಿಸಬೇಕು ಎಂಬ ಸೂಚನೆ ನೀಡಿದೆ. ಆದರೆ ಹತ್ತು ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ಮೈಸೂರು ನಗರ `ಮೂರನೆಯ ಹಂತ'ದ ನಗರಗಳ ವ್ಯಾಪ್ತಿಗೆ ಬರುತ್ತದೆ.
ಹಾಗಾಗಿ `ಡಿಜಿಟಲ್' ಮಾದರಿಗೆ ಪರಿವರ್ತನೆ ಹೊಂದಲು ಹೆಚ್ಚಿನ ಕಾಲಾವಕಾಶ ನೀಡಬೇಕು ಎಂದು ಸಂಘ ಕೋರಿಕೊಂಡಿತ್ತು. ಈ ಅರ್ಜಿ ಸಹ ವಜಾ ಆಗಿದೆ.

ಮೇಲ್ಮನವಿಗೆ ಚಿಂತನೆ
`ಆದೇಶದಲ್ಲಿರುವ ಅಂಶಗಳನ್ನು ತಿಳಿದುಕೊಂಡು ನಂತರ ಹೈಕೋರ್ಟ್‌ನ ತ್ರಿಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಲಾಗುವುದು. ಇತರೆ ರಾಜ್ಯಗಳ ಎರಡನೇ ಹಂತದ ನಗರಗಳ ಕೇಬಲ್ ಆಪರೇಟರ್‌ಗಳೂ ಸೆಟ್ ಟಾಪ್ ಬಾಕ್ಸ್ ಅಳವಡಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಅವರೊಂದಿಗೆ ಸೇರಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಚಿಂತನೆಯೂ ಇದೆ'
-ವಿ.ಎಸ್.ಪ್ಯಾಟ್ರಿಕ್ ರಾಜು,
ಅಧ್ಯಕ್ಷರು,
ಕರ್ನಾಟಕ ರಾಜ್ಯ ಕೇಬಲ್ ಟಿವಿ ಆಪರೇಟರ್‌ಗಳ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT