ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆನ್ ಜಾಮೀನು ಅರ್ಜಿ ತಿರಸ್ಕಾರ

Last Updated 10 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಬಿಲಾಸ್ಪುರ (ಪಿಟಿಐ): ನಕ್ಸಲರೊಂದಿಗೆ ಸಂಪರ್ಕ ಹೊಂದಿರುವ ಆರೋಪದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಮಾನವಹಕ್ಕು ಹೋರಾಟಗಾರ ವಿನಾಯಕ ಸೆನ್ ಅವರಿಗೆ ಜಾಮೀನು ನೀಡಲು ಚತ್ತೀಸ್‌ಗಡ ಹೈಕೋರ್ಟ್ ನಿರಾಕರಿಸಿದೆ. ವಿನಾಯಕ ಸೆನ್ ಮತ್ತು ಕೋಲ್ಕತ್ತದ ಉದ್ಯಮಿ ಪೀಯುಷ್ ಗುಹಾ ಅವರ ಜಾಮೀನು ಅರ್ಜಿಯನ್ನು ಗುರುವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಟಿ.ಪಿ.ಶರ್ಮಾ ಮತ್ತು ಆರ್.ಎಲ್.ಜಾನ್ವಾರ್ ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠ ಇಬ್ಬರ ಜಾಮೀನು ಅರ್ಜಿಗಳನ್ನೂ ತಿರಸ್ಕರಿಸಿತು.

ಸೆನ್ ಜಾಮೀನು ಅರ್ಜಿಯ ವಿರುದ್ಧ ವಾದಿಸಿದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಕಿಶೋರ್ ಭಾದುರಿ ಸೆನ್ ಅವರು ವೈದ್ಯರಾಗಿದ್ದರೂ ಅವರು ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಒಂದೂ ವೈದ್ಯಕೀಯ ಶಿಬಿರ ನಡೆಸಿಲ್ಲ. ಬದಲಿಗೆ ನಕ್ಸಲ್ ಚಟುವಟಿಕೆಗಳಲ್ಲಿಯೇ ಹೆಚ್ಚು ಆಸಕ್ತಿ ತೋರಿದ್ದರು ಎಂದರು. ಜೈಲಿನಲ್ಲಿದ್ದ ನಕ್ಸಲ್ ಮುಖಂಡ ನಾರಾಯಣ್ ಸನ್ಯಾಲ್‌ನನ್ನು ನಕ್ಸಲ್ ಚಟುವಟಿಕೆಗಳ ಬಗ್ಗೆ ಚರ್ಚಿಸಲೆಂದೇ ಸೆನ್ ನಿರಂತರವಾಗಿ ಭೇಟಿ ಮಾಡುತ್ತಿದ್ದರು. ಅಲ್ಲದೆ ಇತ್ತೀಚೆಗಷ್ಟೇ ಬಂಧನಕ್ಕೊಳಗಾಗಿರುವ ನಕ್ಸಲ್ ಕಾರ್ಯಕರ್ತನೊಬ್ಬ ತನಗೆ ಸೆನ್ ಪರಿಚಯವಿದೆ ಎಂಬುದನ್ನು ಒಪ್ಪಿಕೊಂಡಿದ್ದನು ಎಂದು ಭಾದುರಿ ತಿಳಿಸಿದರು.

ಇದಕ್ಕೂ ಮುನ್ನ ಸೆನ್ ಪರ ವಾದಿಸಿದ್ದ ಹಿರಿಯ ವಕೀಲ ರಾಮ್ ಜೇಠ್ಮಲಾನಿ, ‘ಸೆನ್ ವಿರುದ್ಧ ದಾಖಲಾಗಿರುವ ಆರೋಪಗಳು ರಾಜಕೀಯ ದುರುದ್ದೇಶದಿಂದ ಕೂಡಿದೆ. ಇಡೀ ಪ್ರಕರಣ ರಾಜಕೀಯ ಪಿತೂರಿಯಲ್ಲದೆ ಮತ್ತೇನು ಅಲ್ಲ’ ಎಂದು ವಾದಿಸಿದರು.ಹೈಕೋರ್ಟ್‌ನ ತೀರ್ಪಿನ ವಿರುದ್ಧ ವಕೀಲರೊಂದಿಗೆ ಶೀಘ್ರವೇ ಸಮಾಲೋಚನೆ ನಡೆಸಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವುದಾಗಿ ಸೆನ್ ಅವರ ಪತ್ನಿ ಎಲೀನಾ ಸೆನ್ ತಿಳಿಸಿದ್ದಾರೆ. ಬುಧವಾರ ಸೆನ್ ಹಾಗೂ ಗುಹಾ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಪೀಠ ಅದರ ತೀರ್ಪನ್ನು ಕಾಯ್ದಿರಿಸಿತ್ತು. ತಮಗೆ ವಿಧಿಸಿರುವ ಜೀವಾವಧಿ ಶಿಕ್ಷೆಯನ್ನು ಸಹ ಪ್ರಶ್ನಿಸಿ ಸೆನ್ ಅರ್ಜಿ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT