ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಪ್ಟಿಕ್ ಟ್ಯಾಂಕ್‌ಗೆ ಬಿದ್ದು ಬಾಲಕ ಸಾವು

Last Updated 30 ಜುಲೈ 2012, 6:25 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಆಟವಾಡುತ್ತಿದ್ದ ಬಾಲಕ ಮಲಿನ ನೀರು ಸಂಗ್ರಹ ಗುಂಡಿಗೆ (ಸೆಪ್ಟಿಕ್ ಟ್ಯಾಂಕ್) ಬಿದ್ದು ಮೃತಪಟ್ಟ ಘಟನೆ ಭೈರಿದೇವರಕೊಪ್ಪ ಸಮೀಪ ಮಲ್ಲಿಕಾರ್ಜುನ ನಗರದ ಮಲ್ಲನಗೌಡ ಚಾಳ ಬಳಿ ಭಾನುವಾರ ಸಂಜೆ ನಡೆದಿದೆ.
ಮೂಲತಃ ಗದಗ ಜಿಲ್ಲೆ ರೋಣ ತಾಲ್ಲೂಕಿನ ನೆಲ್ಲೂರು ನಿವಾಸಿ ಲಂಬಾಣಿ ಸಮುದಾಯಕ್ಕೆ ಸೇರಿದ ಸಕ್ರಪ್ಪ ರಾಥೋಡ ಅವರ ಮಗ ಕುಮಾರ ರಾಥೋಡ (8 ವರ್ಷ) ಮೃತ ಬಾಲಕ.

ಮನೆಯವರ ಜೊತೆ ಇದ್ದ ಬಾಲಕ, ಸಂಜೆ ನಾಲ್ಕು ಗಂಟೆ ಸುಮಾರಿಗೆ ರಸ್ತೆ ಬದಿಯಲ್ಲಿದ್ದ ಗೂಡಂಗಡಿಗೆ ತೆರಳಿದ್ದ. ಈ ವೇಳೆ ಆಟವಾಡುತ್ತ ಅಲ್ಲೇ ಸಮೀಪದ ಸಂಗೊಳ್ಳಿ ರಾಯಣ್ಣ ನಗರದ ಮಲಿನ ನೀರು ಒಂದೆಡೆ ಸೇರುವ ಸಂಗ್ರಹಣಾ ಗುಂಡಿಗೆ ಬಿದ್ದು ಕೊನೆಯುಸಿರೆಳೆದಿದ್ದಾನೆ.

ಸಕ್ರಪ್ಪನ ಮೂರು ಗಂಡು, ಇಬ್ಬರು ಹೆಣ್ಣು ಮಕ್ಕಳಲ್ಲಿ ಕುಮಾರ ರಾಥೋಡ ಕಿರಿಯವನು. ಮುಂಬೈ ಮೂಲದ ಈಗಲ್ ಕಂಪೆನಿ ಗುತ್ತಿಗೆ ವಹಿಸಿದ್ದ ಒಳಚರಂಡಿ ಕಾಮಗಾರಿ ಮಾಡಲು ದಿನಗೂಲಿ ಕಾರ್ಮಿಕನಾಗಿ ಗದಗದಿಂದ  ಬಂದು ಸಕ್ರಪ್ಪ ಕುಟುಂಬ ಮಲ್ಲನಗೌಡ ಚಾಳ ಬಳಿ ಶೆಡ್‌ನಲ್ಲಿ ನೆಲೆಸಿತ್ತು.

ಕುಟುಂಬದ ಜೊತೆ ಕೆಲಸ ಮಾಡುವ ಸ್ಥಳಕ್ಕೆ ದಿನಾ ಹೋಗುತ್ತಿದ್ದ ಬಾಲಕ ಭಾನುವಾರ ಮನೆಯಲ್ಲೆ ಇದ್ದ. ಮುಚ್ಚಳ ಇಲ್ಲದ ಮ್ಯಾನ್‌ಹೋಲ್‌ನಲ್ಲಿ ಟ್ಯಾಂಕ್ ಒಳಗೆ ಬಿದ್ದದ್ದನ್ನು ಕಂಡ ಬಾಲಕಿಯೊಬ್ಬಳು ಇತರರಿಗೆ ವಿಷಯ ತಿಳಿಸಿದ್ದಳು.
ಘಟನೆ ತಿಳಿದ ತಕ್ಷಣ ಸ್ಥಳೀಯ ಟ್ರ್ಯಾಕ್ಟರ್ ಚಾಲಕನೊಬ್ಬ ಹಗ್ಗದ ಸಹಾಯದಿಂದ ಟ್ಯಾಂಕ್ ಒಳಗೆ ಇಳಿದು ಬಾಲಕನನ್ನು ಹೊರಕ್ಕೆ ತಂದಿದ್ದ. ತಕ್ಷಣವೇ ಸ್ಥಳೀಯ ವೈದ್ಯರ ಬಳಿಗೆ ಬಾಲಕನನ್ನು ಕೊಂಡೊಯ್ದರೂ, ಅದಾಗಲೇ ಬಾಲಕ ಸಾವಿಗೀಡಾಗಿದ್ದ.

ಬಾಲಕ ಬಿದ್ದು ಮೃತಪಟ್ಟ ಸೆಪ್ಟಿಕ್ ಟ್ಯಾಂಕ್ ಪಾಲಿಕೆಗೆ ಸೇರಿದೆ. ಅದರಲ್ಲಿರುವ ಹಲವು ಮ್ಯಾನ್‌ಹೋಲ್‌ಗಳಿಗೆ ಮುಚ್ಚಳ ಇಲ್ಲದಿರುವುದು ಘಟನೆಗೆ ಕಾರಣ. ಕೆಲವು ಮ್ಯಾನ್‌ಹೋಲ್‌ಗಳ ಮುಚ್ಚಳಕ್ಕೆ ತುಕ್ಕು ಹಿಡಿದಿದೆ.  ನವನಗರ ಠಾಣೆ ಇನ್ಸ್‌ಪೆಕ್ಟರ್ ಎ.ಬಿ. ಹರಪನಹಳ್ಳಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸಕ್ರಪ್ಪ ಕುಟುಂಬಕ್ಕೆ ಮತ್ತೆ ಸೂತಕ!

ಸಕ್ರಪ್ಪನ ಕುಟುಂಬ ಸತತ ಎರಡನೇ ಭಾನುವಾರವೂ ದುಃಖದ ಮಡುವಿನಲ್ಲಿ ಬಿದ್ದಿದೆ. ಕಳೆದ ಭಾನುವಾರ ಸಂಜೆ ಹುಬ್ಬಳ್ಳಿ ಚಾಣುಕ್ಯಪುರಿಯಲ್ಲಿ ಒಳಚರಂಡಿ ಸ್ವಚ್ಛತೆ ಕೆಲಸ ಮಾಡುತ್ತಿದ್ದ ಸಕ್ರಪ್ಪನ ಸಹೋದರಿಯ ಪುತ್ರರಿಬ್ಬರು ಉಸಿರುಗಟ್ಟಿ ಮೃತಪಟ್ಟಿದ್ದರು. ಆ ಸೂತಕ ಛಾಯೆ ಮರೆಯಾಗುವ ಮುನ್ನವೇ ಮತ್ತೆ ಸಾವು ಬಂದಿದೆ. ಎರಡೂ ದುರಂತಗಳು ಸತತ ಎರಡು ಭಾನುವಾರ ಸಂಜೆ ನಾಲ್ಕು ಗಂಟೆ ಸುಮಾರಿಗೆ ನಡೆದಿದೆ!

ಸಕ್ರಪ್ಪನ ಕುಟುಂಬ ಮತು ಸಹೋದರಿಯ ಕುಟುಂಬ ಈಗಲ್ ಕಂಪೆನಿಗೆ ದಿನಗೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದರು. ಒಳಚರಂಡಿಯಲ್ಲಿ ಉಸಿರುಗಟ್ಟಿ ಸತ್ತ ಸಹೋದರರ ತಾಯಿಗೆ ಈಗಲ್ ಕಂಪೆನಿ ರೂ 5 ಲಕ್ಷ ನೀಡಿದೆ. ಕುಟುಂಬದ ಸದಸ್ಯನೊಬ್ಬನಿಗೆ ಕೆಲಸ ಕೊಡುವ ಭರವಸೆ ನೀಡಿ ಪ್ರಕರಣವನ್ನು ರಾಜಿಯಲ್ಲಿ ಮುಗಿಸಲಾಗಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT