ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಮಿಫೈನಲ್‌ ಮೇಲೆ ಭಾರತ ಕಣ್ಣು

ಸ್ಯಾಫ್‌ಕಪ್‌ ಫುಟ್‌ಬಾಲ್‌: ನೇಪಾಳ ಎದುರು ಇಂದು ಮಹತ್ವದ ಪಂದ್ಯ
Last Updated 4 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಕಠ್ಮಂಡು (ಪಿಟಿಐ): ಹಾಲಿ ಚಾಂಪಿ­ಯನ್‌ ಭಾರತ ಸ್ಯಾಫ್‌ ಕಪ್‌ ಫುಟ್‌­ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಗುರು­ವಾರ ಆತಿಥೇಯ ನೇಪಾಳ ತಂಡದ ಎದುರು ಪೈಪೋಟಿ ನಡೆಸಲಿದ್ದು, ಸೆಮಿಫೈನಲ್‌ ಮೇಲೆ ಕಣ್ಣು ನೆಟ್ಟಿದೆ.

ದಶರಥ ಕ್ರೀಡಾಂಗಣದಲ್ಲಿ ನಡೆಯಲಿ­ರುವ ಪಂದ್ಯದಲ್ಲಿ ಭಾರತ ಡ್ರಾ ಸಾಧಿಸಿದರೂ ಸಾಕು, ನಾಲ್ಕರ ಘಟ್ಟ ತಲುಪಲಿದೆ. ವಿಮ್‌ ಕೊವರ್‌ಮನ್ಸ್‌ ಗರಡಿಯಲ್ಲಿ ಸಜ್ಜುಗೊಂಡಿರುವ ಭಾರತ ತಂಡ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಎದುರು ಗೆಲುವು ಪಡೆದಿತ್ತು. ಬಾಂಗ್ಲಾ­ದೇಶದ ವಿರುದ್ಧ ಡ್ರಾ ಸಾಧಿಸಿತ್ತು.ಕೊನೆಯ ಲೀಗ್‌ ಪಂದ್ಯ  ಇದಾಗಿದ್ದು, ಪಾಯಿಂಟ್‌ ಪಟ್ಟಿಯಲ್ಲಿ ಅಗ್ರಸ್ಥಾನ­ದೊಂದಿಗೆ ಸೆಮಿಫೈನಲ್‌ ಪ್ರವೇಶಿಸುವ ಗುರಿ ಸುನಿಲ್‌ ಚೆಟ್ರಿ ಬಳಗದ್ದಾಗಿದೆ.

ನೇಪಾಳ ಹಾಗೂ ಭಾರತ ತಂಡಗಳು ಎರಡು ಪಂದ್ಯಗಳ­ನ್ನಾಡಿದ್ದು ತಲಾ ನಾಲ್ಕು ಪಾಯಿಂಟ್‌ಗಳನ್ನು ಹೊಂದಿವೆ. ಆದರೆ, ಗೋಲು ಗಳಿಕೆಯಲ್ಲಿ ಆತಿಥೇಯರು ಮುಂದಿರುವ ಕಾರಣ ಅಗ್ರಸ್ಥಾನದಲ್ಲಿದ್ದಾರೆ. ಭಾರತ ಎರಡನೇ ಸ್ಥಾನ ಹೊಂದಿದೆ. ಪಾಕ್‌ ಮತ್ತು ಬಾಂಗ್ಲಾ ತಲಾ ಒಂದು ಪಾಯಿಂಟ್‌­ಗಳನ್ನು ಗಳಿಸಿ ನಂತರದ ಸ್ಥಾನಗಳಲ್ಲಿವೆ.

ಗುರುವಾರ ನಡೆಯಲಿರುವ ಇನ್ನೊಂದು ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ಪೈಪೋಟಿ ನಡೆಸಲಿವೆ. ಈ ಪಂದ್ಯದಲ್ಲಿ ಪಾಕ್‌ ಜಯ ಸಾಧಿಸಿದರೆ, ಭಾರತದ ಹಾದಿ ಕಠಿಣವಾಗಲಿದೆ.

ಚೆಟ್ರಿ ಬಳಗ ಒಂದೂ ಗೋಲು ಗಳಿಸದೇ ಸೋಲು ಕಂಡರೆ, ಬಾಂಗ್ಲಾ ಎರಡು ಗೋಲುಗಳ ಅಂತರದಿಂದ ಪಾಕ್‌ ತಂಡವನ್ನು ಮಣಿಸಿದರೆ ಭಾರತ ಟೂರ್ನಿಯಿಂದ ಹೊರಬೀಳಲಿದೆ. ಆದ್ದರಿಂದ ಚೆಟ್ರಿ ಪಡೆ ಎಚ್ಚರಿಕೆಯ ಆಟವಾಡುವುದು ಅಗತ್ಯವಿದೆ.

ಭಾರತವೇ ನೆಚ್ಚಿನ ತಂಡ: ಹಿಂದಿನ ಪಂದ್ಯಗಳ ಅಂಕಿ ಅಂಶಗಳನ್ನು ನೋಡಿದರೆ ಭಾರತವೇ ಗೆಲುವು ಪಡೆಯುವ ನೆಚ್ಚಿನ ತಂಡ ಎನಿಸಿದೆ.

ಉಭಯ ತಂಡಗಳು ಇದುವರೆಗೂ 11 ಸಲ ಮುಖಾಮುಖಿಯಾಗಿದ್ದು, ಭಾರತ 9 ಸಲ ಗೆಲುವು ಪಡೆದಿದೆ. ಎರಡು ಪಂದ್ಯಗಳು ಡ್ರಾದಲ್ಲಿ ಅಂತ್ಯ ಕಂಡಿವೆ. ಹಿಂದಿನ ಎರಡೂ ಸ್ಯಾಫ್‌ ಚಾಂಪಿಯನ್‌ಷಿಪ್‌ ಪಂದ್ಯಗಳಲ್ಲಿ ಭಾರತವೇ ಗೆಲುವು ಸಾಧಿಸಿದೆ. 2005ರಲ್ಲಿ ಕರಾಚಿಯಲ್ಲಿ ನಡೆದ ಪಂದ್ಯದಲ್ಲಿ 2–1 ಗೋಲುಗಳಿಂದ ಮತ್ತು 2008ರಲ್ಲಿ 4–0 ಗೋಲುಗಳಿಂದ ನೇಪಾಳವನ್ನು ಮಣಿಸಿತ್ತು. ಈ ಅಂಕಿ ಅಂಶ ಚೆಟ್ರಿ ಪಡೆಯ ವಿಶ್ವಾಸ ಹೆಚ್ಚಿಸಿದರೆ, ನೇಪಾಳಕ್ಕೆ ತವರು ನೆಲದ ಅಭಿಮಾನಿಗಳ ಬಲವಿದೆ.

‘ದಶರಥ ಕ್ರೀಡಾಂಗಣದಲ್ಲಿ ಪಂದ್ಯವನ್ನು ನೋಡಲು ಎಲ್ಲಾ ಫುಟ್‌ಬಾಲ್‌ ಪ್ರಿಯರು ಕಾತರದಿಂದ ಕಾಯುತ್ತಿರುತ್ತಾರೆ. ಕಠಿಣ ಹೋರಾಟಕ್ಕೆ ನಾವೂ ಸಜ್ಜಾಗಿದ್ದೇವೆ’ ಎಂದು ಭಾರತ ತಂಡದ ಕೋಚ್‌ ಕೊವರ್‌ಮನ್ಸ್‌ ಹೇಳಿದ್ದಾರೆ.

ಎದುರಾಳಿ ನೇಪಾಳ ಸಹ  ಪ್ರಬಲ ಪೈಪೋಟಿ ಒಡ್ಡಬಲ್ಲ ಶಕ್ತಿ ಹೊಂದಿದೆ. ಆದ್ದರಿಂದ ಈ ಪಂದ್ಯ ಫುಟ್‌ಬಾಲ್‌ ಪ್ರಿಯರ ಕುತೂಹಲಕ್ಕೆ ಕಾರಣವಾಗಿದೆ. ಆದರೆ, ಗೆಲುವು ಯಾರ ಮಡಿಲಿಗೆ ಎನ್ನುವುದು ಮುಖ್ಯವಾಗಿದೆ.

ಸ್ಯಾಫ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತ ಇದುವರೆಗೂ ಆರು ಸಲ ಪ್ರಶಸ್ತಿ ಎತ್ತಿ ಹಿಡಿದಿದೆ. ಇದು ಹೆಚ್ಚು ಸಲ ಪ್ರಶಸ್ತಿ ಗೆದ್ದ ದಾಖಲೆ ಸಹ ಆಗಿದೆ. ಹಿಂದಿನ ಪರಂಪರೆಯನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ಚೆಟ್ರಿ ಬಳಗದ ಮುಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT