ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಮಿಫೈನಲ್‌ಗೆ ನಡಾಲ್‌, ಅಜರೆಂಕಾ

ಅಮೆರಿಕ ಓಪನ್‌ ಟೆನಿಸ್‌: ಡೇವಿಡ್‌ ಫೆರರ್‌ಗೆ ಮುಖಭಂಗ
Last Updated 5 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ನ್ಯೂಯಾರ್ಕ್‌ (ಐಎಎನ್‌ಎಸ್‌/ಎಎಫ್‌ಪಿ): ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಪ್ರದರ್ಶನ ನೀಡು­ತ್ತಿರುವ ಸ್ಪೇನ್‌ನ ರಫೆಲ್‌ ನಡಾಲ್‌ ಮತ್ತು ಬೆಲಾರಸ್‌ನ ವಿಕ್ಟೋರಿಯಾ ಅಜರೆಂಕಾ ಅಮೆರಿಕ ಓಪನ್‌ ಟೆನಿಸ್‌ ಟೂರ್ನಿಯ ಸಿಂಗಲ್ಸ್‌ನಲ್ಲಿ ನಾಲ್ಕರ ಘಟ್ಟ ಪ್ರವೇಶಿಸಿದ್ದಾರೆ. ಆದರೆ, ನಾಲ್ಕನೇ ಶ್ರೇಯಾಂಕದ ಡೇವಿಡ್‌ ಫೆರರ್‌ ಕ್ವಾರ್ಟರ್‌ ಫೈನಲ್‌ ಹೋರಾಟದಲ್ಲಿ ಮುಖಭಂಗ ಅನುಭವಿದರು.

ಅರ್ಥರ್‌ ಆ್ಯಷ್‌ ಕ್ರೀಡಾಂಗಣದ ಕೋರ್ಟ್‌­ನಲ್ಲಿ ನಡೆದ ಪುರುಷರ ವಿಭಾಗದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಎರಡನೇ ಶ್ರೇಯಾಂಕದ ನಡಾಲ್‌ 6–0, 6–2, 6–2ರಲ್ಲಿ ತಮ್ಮದೇ ದೇಶದ ಟಾಮಿ ರೆಬ್ರೆಡೊ ಎದುರು ಗೆಲುವಿನ ನಗೆ ಚೆಲ್ಲಿದರು.

ಸಿಂಗಲ್ಸ್‌ನಲ್ಲಿ 12 ಸಲ ಗ್ರ್ಯಾಂಡ್‌ ಸ್ಲಾಮ್‌ ಟ್ರೋಫಿ ಎತ್ತಿ ಹಿಡಿದಿರುವ ನಡಾಲ್‌ ಮೂರೂ ಸೆಟ್‌ಗಳಲ್ಲಿ ಸುಲಭ ಗೆಲುವು ದಾಖಲಿಸಿದರು. ರೆಬ್ರೆಡೊ ಪೈಪೋಟಿ ಒಡ್ಡಿದರಾದರೂ, ಪಾಯಿಂಟ್‌ಗಳನ್ನು ಕಲೆ ಹಾಕಲು ನಡಾಲ್‌ ಅವಕಾಶ ನೀಡಲಿಲ್ಲ. ಈ ಕೋರ್ಟ್‌ನಲ್ಲಿ ನಡಾಲ್‌ ಪಡೆದ 20ನೇ ಗೆಲುವು ಇದಾಗಿದೆ.

‘ಪ್ರತಿ ಹಂತದಲ್ಲೂ ಉತ್ತಮ ಪ್ರದರ್ಶನ ತೋರುತ್ತಿರುವುದಕ್ಕೆ ಖುಷಿಯಾಗಿದೆ. ಜಯ ಸಾಧಿಸುತ್ತೇನೆ ಎನ್ನುವ ವಿಶ್ವಾಸವಿತ್ತು. ಸೆಮಿ­ಫೈನಲ್‌ ಪಂದ್ಯ ಸಾಕಷ್ಟು ಕುತೂಹಲ ಮೂಡಿಸಿದೆ’ ಎಂದು ನಡಾಲ್‌ ಪಂದ್ಯದ ನಂತರ ಪ್ರತಿಕ್ರಿಯಿಸಿದರು.

ನಿಖರ ಪ್ರದರ್ಶನ ತೋರುತ್ತಿರುವ ಸ್ಪೇನ್‌ನ ಆಟ­ಗಾರ 2010ರಲ್ಲಿ ಈ ಟೂರ್ನಿಯಲ್ಲಿ ಚಾಂಪಿ­ಯನ್‌ ಆಗಿದ್ದರು. ಮೂರು ವರ್ಷಗಳ ಬಳಿಕ ಮತ್ತೊಂದು ಸಲ ಪ್ರಶಸ್ತಿ ಗೆಲ್ಲುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ನಡಾಲ್‌ ಸೆಮಿಫೈನಲ್‌ ಪೈಪೋ­ಟಿಯಲ್ಲಿ ಎಂಟನೇ ಶ್ರೇಯಾಂಕದ ರಿಚರ್ಡ್‌ ಗ್ಯಾಸ್ಕೆಟ್‌ ಸವಾಲನ್ನು ಎದುರಿಸಲಿದ್ದಾರೆ.

ಪುರುಷರ ವಿಭಾಗದ ಇನ್ನೊಂದು ಎಂಟರ ಘಟ್ಟದ ಹೋರಾಟದಲ್ಲಿ ಫ್ರಾನ್ಸ್‌ನ ಗ್ಯಾಸ್ಕೆಟ್‌  6–3, 6–1, 4–6, 2–6, 6–3ರಲ್ಲಿ ಸ್ಪೇನ್‌ನ ಡೇವಿಡ್‌ ಫೆರರ್‌ ಎದುರು ಪ್ರಯಾಸದ ಜಯ ಸಾಧಿಸಿದರು.


ಫ್ರೆಂಚ್‌ ಓಪನ್‌ ಟೂರ್ನಿಯ ಚಾಂಪಿಯನ್‌ ಫೆರರ್‌ ಮೊದಲ ಎರಡೂ ಸೆಟ್‌ಗಳಲ್ಲಿ ನಿರಾಸೆ ಕಂಡರಾದರೂ, ಮೂರು ಮತ್ತು ನಾಲ್ಕನೇ ಸೆಟ್‌ನಲ್ಲಿ ಚೇತರಿಕೆಯ ಪ್ರದರ್ಶನ ತೋರಿದರು. ಆದರೆ, ನಿರ್ಣಾಯಕ ಐದನೇ ಸೆಟ್‌ನ ಆರಂಭದಲ್ಲಿ ಗ್ಯಾಸ್ಕೆಟ್‌ 4–2ರಲ್ಲಿ ಮುನ್ನಡೆ ಸಾಧಿಸಿದರಲ್ಲದೇ, ಪ್ರಬಲ ಸರ್ವ್‌ಗಳ ಮೂಲಕ ತಮ್ಮ ಹಿಡಿತ  ಬಲಗೊಳಿಸುತ್ತಾ ಸಾಗಿದರು. ಅಮೆರಿಕ ಓಪನ್‌ ಟೂರ್ನಿಯಲ್ಲಿ ಫ್ರಾನ್ಸ್  ಆಟಗಾರನೊಬ್ಬ 14 ವರ್ಷದ ಬಳಿಕ  ಸೆಮಿಫೈನಲ್‌ ತಲುಪಿದ ಸಾಧನೆ ಮಾಡಿದರು.

‘ನಾನು ಅತ್ಯುತ್ತಮ ಆಟವಾಡಿದೆ. ಇಲ್ಲಿ  ನೀಡಿದ ಪ್ರದರ್ಶನ ಖುಷಿ ನೀಡಿದೆ. ಡೇವಿಡ್‌ ಕೂಡಾ ಪ್ರಬಲ ಹೋರಾಟಗಾರ. ಈ ಹಿಂದೆ ಸಾಕಷ್ಟು ಸಲ ಐದು ಸೆಟ್‌ಗಳ ಪಂದ್ಯ­ವನ್ನಾಡಿದ್ದೇನೆ. ಆದರೆ, ಈ ಪಂದ್ಯ ಸೊಗಸಾಗಿತ್ತು’ ಎಂದು ಗ್ಯಾಸ್ಕೆಟ್‌  ಸಂತಸ ವ್ಯಕ್ತಪಡಿಸಿದರು.

ಅಜರೆಂಕಾ ಗೆಲುವಿನ ಓಟ: ಎರಡನೇ ಶ್ರೇಯಾಂಕದ ಅಜರೆಂಕಾ 6–2, 6–3ರ ನೇರ ಸೆಟ್‌ಗಳಿಂದ ಸ್ಲೊವಾಕಿಯಾದ ಡೇನಿಯಲ್‌ ಹಂಟುಚೋವಾ  ಅವರನ್ನು ಸೋಲಿಸಿ ಸೆಮಿಫೈನಲ್‌ ಪ್ರವೇಶಿಸಿದರು.

ವಾಂಚಿಗೆ ನಿರಾಸೆ: ಹೋದ ವರ್ಷದ ಅಮೆರಿಕ ಓಪನ್‌ ಟೂರ್ನಿಯ ಕ್ವಾರ್ಟರ್‌ ಫೈನಲ್‌ನಲ್ಲಿ ಮುಗ್ಗರಿಸಿದ್ದ ಇಟಲಿಯ ರಾಬೆರ್ಟಾ ವಾಂಚಿ ಈ ಸಲವೂ ಎಂಟರ ಘಟ್ಟದಲ್ಲಿಯೇ ನಿರಾಸೆ ಕಂಡರು.

ಹತ್ತನೇ ಶ್ರೇಯಾಂಕದ ವಾಂಚಿ 4–6, 1–6ರಲ್ಲಿ ತಮ್ಮದೇ ದೇಶದ ಶ್ರೇಯಾಂಕ ರಹಿತ ಆಟಗಾರ್ತಿ ಫ್ಲಾವಿಯಾ ಪೆನೆಟ್ಟಾ ಎದುರು ಸೋಲು ಕಂಡರು. ಈ ಪಂದ್ಯ 65 ನಿಮಿಷ ನಡೆಯಿತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT