ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಮಿಫೈನಲ್‌ಗೆ ಭಾರತ ತಂಡ

ಚಾಂಪಿಯನ್ಸ್ ಟ್ರೋಫಿ ಹಾಕಿ: ನಿತಿನ್ ತಿಮ್ಮಯ್ಯ ಗೆಲುವಿನ ರೂವಾರಿ
Last Updated 6 ಡಿಸೆಂಬರ್ 2012, 22:00 IST
ಅಕ್ಷರ ಗಾತ್ರ

ಮೆಲ್ಬರ್ನ್ (ಪಿಟಿಐ/ಐಎಎನ್‌ಎಸ್): ಭಾರತ ತಂಡದ ಗೆಲುವಿನ ನಾಗಲೋಟ ಮುಂದುವರಿದಿದೆ. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬೆಲ್ಜಿಯಂ ತಂಡವನ್ನು ಮಣಿಸುವ ಮೂಲಕ ಭಾರತ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಎಂಟು ವರ್ಷಗಳ ಬಳಿಕ ಸೆಮಿಫೈನಲ್ ಪ್ರವೇಶಿಸಿತು.

ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಗೆ ಆರು ವರ್ಷಗಳಿಂದ ಅರ್ಹತೆ ಪಡೆಯದೇ ಪರದಾಡಿದ್ದ ಭಾರತ ಈ ಟೂರ್ನಿಯಲ್ಲಿ ತನ್ನ ಸಾಮರ್ಥ್ಯಕ್ಕೂ ಮೀರಿ ಆಟವಾಡುತ್ತಿದೆ. ಗುರುವಾರ ನಡೆದ ಪಂದ್ಯದಲ್ಲಿ ಭಾರತ 1-0ಗೋಲಿನಿಂದ ಬೆಲ್ಜಿಯಂ ತಂಡವನ್ನು ಸೋಲಿಸಿತು. ಶನಿವಾರ ನಾಲ್ಕರ ಘಟ್ಟದ ಪಂದ್ಯ ನಡೆಯಲಿದ್ದು ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಎಂಟರ ಘಟ್ಟದ ಪಂದ್ಯದಲ್ಲಿ ಆಸ್ಟ್ರೇಲಿಯಾ 2-0ಗೋಲುಗಳಿಂದ ಇಂಗ್ಲೆಂಡ್ ತಂಡವನ್ನು ಸೋಲಿಸಿತು.

1982ರಲ್ಲಿ ಭಾರತ ಈ ಟೂರ್ನಿಯಲ್ಲಿ ಕಂಚಿನ ಪದಕ ಜಯಿಸಿತ್ತು. ಇದನ್ನು ಹೊರತು ಪಡಿಸಿದರೆ 2004ರಲ್ಲಿ ಪಡೆದಿದ್ದ ನಾಲ್ಕನೇ ಸ್ಥಾನ ಭಾರತದ ಅತ್ಯುತ್ತಮ ಸಾಧನೆ ಎನಿಸಿಕೊಂಡಿದೆ. 1996, 2002 ಮತ್ತು 2003ರಲ್ಲಿಯೂ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಆದರೆ, ಈಗ ಮತ್ತೊಮ್ಮೆ ಪದಕ ಗೆಲ್ಲುವ ಅವಕಾಶ ಲಭಿಸಿದೆ. ಲಂಡನ್ ಒಲಿಂಪಿ ಕ್ಸ್‌ನಲ್ಲಿನ ಮುಖಭಂಗದ ನಂತರ ಭಾರತ ಆಡುತ್ತಿರುವ ಮೊದಲ ಅಂತರರಾಷ್ಟ್ರೀಯ ಟೂರ್ನಿ ಇದಾಗಿದೆ. ಒಲಿಂಪಿಕ್ಸ್ ನಲ್ಲಿನ ಕಹಿ ನೆನಪಿನ ಕೊಳೆ ತೊಳೆಯಲು ಭಾರತ ಈಗ ಯತ್ನಿಸುತ್ತದೆ.

ದ್ವಿತೀಯಾರ್ಧದಲ್ಲಿ ಬೆಲ್ಜಿಯಂ ತಂಡಕ್ಕೆ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಗಳಿಸಲು ಆರು ಅವಕಾಶಗಳು ಲಭಿಸಿದ್ದವು. ಅದರೆ ಇದರ ಲಾಭ ಎತ್ತಿಕೊಳ್ಳುವಲ್ಲಿ ವಿಫಲವಾಯಿತು. ನಿತಿನ್ ತಿಮ್ಮಯ್ಯ 13ನೇ ನಿಮಿಷದಲ್ಲಿ ಗೋಲು ಗಳಿಸುವ ಮೂಲಕ ಭಾರತಕ್ಕೆ ಆರಂಭದಲ್ಲಿಯೇ ಮುನ್ನಡೆ ತಂದುಕೊಟ್ಟರು. ಇದು ಭಾರತದ ಗೆಲುವಿಗೂ ಕಾರಣವಾಯಿತು. ಆದರೆ, ತಿರುಗೇಟು ನೀಡುವ ಎದುರಾಳಿಗಳ ಯತ್ನಕ್ಕೆ ಮಾತ್ರ ಯಶ ಸಿಗಲಿಲ್ಲ. ಭಾರತಕ್ಕೂ ಒಂದು ಪೆನಾಲ್ಟಿ ಕಾರ್ನರ್ ಅವಕಾಶ ಲಭಿಸಿತ್ತು. ಅದನ್ನು ಗೋಲಾಗಿ ಪರಿವರ್ತಿಸುವಲ್ಲಿ ಸರ್ದಾರ್ ಸಿಂಗ್ ಪಡೆ ವಿಫಲವಾಯಿತು.

ಬೆಲ್ಜಿಯಂ ತಂಡದ ಗೋಲು ಗಳಿಸುವ ಯತ್ನಗಳಿಗೆ ಅಡ್ಡಿಯಾದ ವಿ.ಆರ್. ರಘುನಾಥ್ ಹಾಗೂ ರೂಪಿಂದರ್ ಪಾಲ್ ಸಿಂಗ್ ಶಿಸ್ತಿನ ಆಟದ ಮೂಲಕ ಗಮನ ಸೆಳೆದರು. ಈ ಹಿಂದಿನ ಟೂರ್ನಿಗಳಲ್ಲಿ ಉಭಯ ತಂಡಗಳು ಎರಡು ಸಲ ಮುಖಾಮುಖಿಯಾಗಿದ್ದವು. ಆದರೆ, ಭಾರತ ಎರಡೂ ಪಂದ್ಯಗಳಲ್ಲಿ ಸೋಲು ಕಂಡಿತ್ತು. ಕಳೆದ ವರ್ಷದ ಚಾಂಪಿಯನ್ಸ್ ಚಾಲೆಂಜ್ ಮತ್ತು ಒಲಿಂಪಿಕ್ಸ್‌ನ ಪ್ರಾಥಮಿಕ ಲೀಗ್ ಪಂದ್ಯಗಳಲ್ಲಿ ಭಾರತದ ವಿರುದ್ಧ ಬೆಲ್ಜಿಯಂ ಜಯ ಸಾಧಿಸಿತ್ತು. ತಂಡದ ಪ್ರದರ್ಶನ ಕುರಿತು ಮುಖ್ಯ ಕೋಚ್ ಮೈಕಲ್ ನಾಬ್ಸ್ ಸಂತಸ ವ್ಯಕ್ತಪಡಿಸಿದ್ದಾರೆ.

ಭಾರತ ತಂಡದ ನಾಯಕ ಸರ್ದಾರ್ ಸಿಂಗ್ ಅವರಿಗೆ ಬೆಲ್ಜಿಯಂ ವಿರುದ್ಧದ ಈ ಪಂದ್ಯ ವಿಶೇಷವಾಗಿತ್ತು. ಏಕೆಂದರೆ, ಸರ್ದಾರ್‌ಗೆ ಇದು 150ನೇ ಪಂದ್ಯ.

ಜರ್ಮನಿಗೆ ಆಘಾತ: ಒಲಿಂಪಿಕ್ ಚಾಂಪಿಯನ್ ಜರ್ಮನಿ ತಂಡವನ್ನು 2-1ಗೋಲುಗಳಿಂದ ಮಣಿಸಿ ಪಾಕಿಸ್ತಾನ ತಂಡ ಸೆಮಿಫೈನಲ್ ಪ್ರವೇಶಿಸಿತು. ಪಾಕ್ ತಂಡದ ಶಕೀಲ್ ಅಬ್ಬಾಸಿ ಗಳಿಸಿದ ಎರಡು ಗೋಲುಗಳು ಈ ಗೆಲುವಿಗೆ ಕಾರಣವಾದವು. ನಾಲ್ಕರ ಘಟ್ಟದ ಹೋರಾಟದಲ್ಲಿ ಪಾಕ್ ತಂಡ ಹಾಲೆಂಡ್ ವಿರುದ್ಧ ಪೈಪೋಟಿ ನಡೆಸಲಿದೆ. ಇನ್ನೊಂದು ಪಂದ್ಯದಲ್ಲಿ ಹಾಲೆಂಡ್ 2-0ಗೋಲುಗಳಿಂದ ನ್ಯೂಜಿಲೆಂಡ್ ವಿರುದ್ಧ ಗೆಲುವು ಸಾಧಿಸಿತು.ಸೆಮಿಫೈನಲ್ ಪ್ರವೇಶಿಸಿದೆ. 2004ರ ಬಳಿಕ ಪಾಕ್ ತಂಡ ಮೊದಲ ಬಾರಿಗೆ ನಾಲ್ಕರ ಘಟ್ಟಕ್ಕೆ ಲಗ್ಗೆ ಇಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT