ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆರಗ ಮರೆ...

Last Updated 20 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಹುಡುಗಿಯರ ಬೆನ್ನುಹತ್ತುವ ಕಣ್ಣೋಟ. ಅವಳನ್ನೇ ಹಿಂಬಾಲಿಸುವ ಕುತೂಹಲ, ಆಸಕ್ತಿ ಬೆರೆತ ನೋಟಗಳ ಟ್ರಾಫಿಕ್‌ ಜಾಮ್‌ ಅಲ್ಲಿ. ಹುಡುಗಿ ಎದುರಾದರೆ ನೋಡಲು ಹಿಂಜರಿಯುವ ಮನ ಅವಳು ದಾಟಿಹೋಗುತ್ತಿದ್ದಂತೆ ತಿರುಗಿ ನೋಡಬೇಕೆನಿಸುವ ತಪ್ಪಿಸಿಕೊಳ್ಳಲಾಗದ ಆಕರ್ಷಣೆ. ಪರವಾಗಿಲ್ಲ. ಹಿಂದಿನಿಂದಲಾದರೂ ನೋಡುವ ಧೈರ್ಯ ಮಾಡಿಯೇ ಬಿಡುವ ಎಲ್ಲರ ಕಣ್ತಪ್ಪಿಸಿ. ಆಹ್‌ ಏನು ಸೊಗಸು. ಸೀರೆಗೊಪ್ಪುವ ರವಿಕೆಗಿಂತ ರವಿಕೆಯೇ ಸೀರೆಯನ್ನು ಇನ್ನಷ್ಟು ಚೆಂದಗಾಣಿಸುವ ಪರಿ ಏನು...ಅವಳ ಅಭಿರುಚಿ ತುಂಬ ಚೆನ್ನ. ಇನ್ನು ಅವಳು? ಊಹ್ಮೂಂ ನೋಡಲಾದೀತೆ ನೋಡಿದರೂ ಆ ನೋಟ ಎದುರಿಸಲಾದೀತೆ? ಮದುವೆ ಮನೆಯ ಸೊಬಗು ಹೆಚ್ಚಿಸುವ ರೇಷ್ಮೆ ಸೀರೆ, ಅಲಂಕಾರ ಸುಮ್ಮನೆ ನೋಡುವವರ ಕಣ್ಣು ತುಂಬುವುದು ಸಹಜ.

ಮನೆಯಲ್ಲಿ ಹೆಣ್ಣುಮಕ್ಕಳಿಲ್ಲದಿದ್ದರೆ ಅದು ಆಪ್ತವೆನಿಸುವುದಿಲ್ಲ. ಇನ್ನು ಮದುವೆ ಮನೆಯಲ್ಲಿ ಸೀರೆಗಳ ಸರಬರ ಸದ್ದು, ಬಳೆಗಳ ನಾದ ಕಣ್ತುಂಬಿಕೊಳ್ಳಲು ಅತ್ತಿತ್ತ ಸುಳಿದಾಡುವ  ಅಲಂಕೃತ ಜೀವಂತ ಬೊಂಬೆಗಳಂತೆ ಕಂಗೊಳಿಸುವ ಹುಡುಗಿಯರಿಲ್ಲದಿದ್ದರೆ ಏನು ಚೆಂದ? ಹುಡುಗರ ಡ್ರೆಸ್ಸಿ­ನಲ್ಲಂತೂ ಹೆಚ್ಚು ವೈವಿಧ್ಯಗಳು ಇಲ್ಲ. ಅವರು ಹೆಣ್ಮಕ್ಕಳಷ್ಟು ಪ್ರಯೋಗಶೀಲರೂ ಅಲ್ಲ. ಸಾಮಾಜಿಕ­ವಾಗಿ ಹೆಚ್ಚು ಸ್ವೀಕೃತವಾಗುವ ಸೇಫ್‌ ಡ್ರೆಸ್ಸನ್ನೇ ಧರಿಸಲು ಬಯಸುವವರ ವರ್ಗ ದೊಡ್ಡದು.

ಸಿನಿಮಾ, ಟಿವಿ ಧಾರಾವಾಹಿಗಳು ಪ್ರಸಕ್ತ ಫ್ಯಾಷನ್ನಿನ ಪ್ರಮುಖ ಶೋಕೇಸ್‌ಗಳು. ‘ಫಂಕ್ಷನ್‌ ವೇರ್‌’ ಎಂದರೆ ಅದು ಬರೀ ಬ್ರಾಂಡೆಡ್‌ ಕುರ್ತಿ ಅಥವಾ ಕಾಸ್ಟ್‌ಲಿ ಚೂಡಿದಾರ್‌ ಅಲ್ಲ. ಎಲ್ಲಕ್ಕಿಂತ ವೈಭವಯುತವಾಗಿ ಕಾಣಲು ಸಾಧ್ಯವಾಗುವುದು ಸೀರೆಯಲ್ಲಿ. ಅದರ ಜತೆಗೆ ಧರಿಸುವ ಆಕ್ಸೆಸರಿಗಳಲ್ಲಿ. ಮದುವೆಯಂಥ ಸಮಾರಂಭಗಳಲ್ಲಿ, ನೆಂಟರಿಸ್ಟರು ಸಮಾಜದ ಇತರ ಗಣ್ಯರು, ಬಂಧುಗಳು ಇರುತ್ತಾರೆ.

ಮೇಲಾಗಿ ಈ ಇಂಟರ್‌ನೆಟ್‌ ಯುಗದಲ್ಲೂ  ಅದೊಂಥರ ಮ್ಯಾಟ್ರಿಮೊನಿಯಲ್‌ ಸಮಾವೇಶದಂತೆ ಕೆಲಸ ಮಾಡುವುದು ಸುಳ್ಳಲ್ಲ. ವಿವಾಹಕ್ಕೆ ಅರ್ಹತೆ ಪಡೆದಿರುವ ಹುಡುಗಿಯರ ತಂದೆ ತಾಯಿಯರೂ ತಮ್ಮ ಮಗಳು ಸೀರೆ ಉಡಲಿ ಎಂದೇ ಒತ್ತಡ ಹೇರುತ್ತಾರೆ. 

ಮಾಡರ್ನ್‌ ಹುಡುಗಿಯೂ ಒಪ್ಪುತ್ತಾಳೆ. ಆದರೆ ಅವಳುಡುವ ಸೀರೆ ಅಮ್ಮಂದಿರ ಸ್ಟೈಲ್‌ನದಲ್ಲ. ರೇಷ್ಮೆಯದಾದರೂ ಲೈಟ್‌ ವೇಟ್‌ನದು. ಭಾರೀ ಜರಿ ಕಂಡರೂ ಅದು ಕಂಡೂ ಕಾಣದಂತೆ ಸೀರೆಯ ಒಡಲಿನೊಡನೆ ಮಿಳಿತವಾದ ಕಂಪ್ಯೂಟರ್‌ ಬಾರ್ಡರ್‌. ಅದರಲ್ಲಿ ಪಕ್ಕಾ ಸಾಂಪ್ರದಾ­ಯಿಕ ಬುಟ್ಟಾಗಳಿಲ್ಲ. ಪ್ಯಾಚ್‌ವರ್ಕ್‌, ಎಂಬ್ರಾಯಿಡರಿ, ಜರ್ದೋಸಿ, ಆ್ಯಂಟಿಕ್‌ ಗೋಲ್ಡ್‌, ಪರ್ಲ್‌, ಸೀಕ್ವಿನ್‌, ಅಮೂಲ್ಯ ಹರಳು, ಮಣಿಗಳ ವರ್ಕ್‌ ಇರುವ ಸೀರೆ. ಅದಕ್ಕೆ ಹೊಂದುವಂತೆ ಬರೀ ಮ್ಯಾಚಿಂಗ್‌ ಬ್ಲೌಸ್‌ ಹಾಕಿದರೆ ಏನು ಚೆನ್ನ?

ಸೀರೆ ಜತೆ ಡಿಸೈನರ್‌ ಬ್ಲೌಸ್‌ ಈಗಿನ ಟ್ರೆಂಡ್‌. ಟ್ರೆಂಡ್‌ ಜತೆ ಜತೆಯೇ ಸಾಗುವ ಪಣ ತೊಟ್ಟಂತಿರುವ ಹುಡುಗಿಯರ ಮೆಚ್ಚಿನ ಆಯ್ಕೆ. ವರ್ಷದಲ್ಲೊಮ್ಮೆಯೊ ಇನ್ನೊಮ್ಮೆಯೊ ಅಷ್ಟೇ ಈ ಹುಡುಗಿಯರ ಬರಸೆಳೆಯುವ ಭಾಗ್ಯ ಸೀರೆಗಳದು. ಇಂಥ ಸಂದರ್ಭದಲ್ಲೇ ಮನೆತನದ ಘನತೆ, ಅಂತಸ್ತಿಗೆ ತಕ್ಕಂತೆಯೇ ತೊಡಿಸಿ ಮೆರೆ­ಸುವ ಆಸೆ ಮನೆಯವರದು. ತಾವೂ ವಿಶಿಷ್ಟ, ತಮ್ಮ ಆಯ್ಕೆಯೂ, ಅಭಿರು­ಚಿಯೂ ಅನನ್ಯ ಎಂದು ತೋರಲು ಸಹಾಯ ಮಾಡುತ್ತವೆ ಇಂಥ ಡಿಸೈನರ್‌ ಬ್ಲೌಸ್‌ಗಳು. ಅದಕ್ಕೇ ಸೀರೆ ಉಡಲು ಕಷ್ಟವಾದರೂ ಇಷ್ಟಪಟ್ಟು ಧರಿಸುತ್ತಾರೆ ಅವರೂ.

ನೋಡಿದ ಕೂಡಲೇ ವ್ಯತ್ಯಾಸ ತಿಳಿದುಬಿಡುತ್ತದೆ. ಸರಳವಾಗಿ ಟೇಲರ್‌ ಬಳಿ ಹೊಲಿಸಿದ ಬ್ಲೌಸ್‌ಗೂ ಡಿಸೈನರ್‌ ಬ್ಲೌಸ್‌ಗೂ ಅಂತರ ಬಹಳ. ವ್ಯತ್ಯಾಸ ಎದ್ದುಕಾಣುವುದು ಹೊಲಿಗೆಯ ರೇಖೆಗಳುದ್ದಕ್ಕೂ. ಜತೆಗೆ ಸೀರೆಗೊಪ್ಪುವಂತೆ ಬಳಸಿದ ವಿನ್ಯಾಸದಲ್ಲಿ. ವಿನ್ಯಾಸಕ್ಕೆ ಬಳಸುವ ಆಕ್ಸೆಸರಿಗಳಲ್ಲಿ.

  ಸೆರಗ ಮರೆಯಲ್ಲಿ ಮುಚ್ಚಿಟ್ಟ ಮನದ ಕನಸು, ಕನವರಿಕೆಗಳು ಕಟ್ಟಿಟ್ಟ ಕವನವದು. ಹಿಡಿದಿಟ್ಟ ಅಂದಗಾಣುವ ಆಕರ್ಷಿಸುವ ಬಯಕೆಗಳು ಮುಚ್ಚುಮರೆಯಿಲ್ಲದೇ  ಕಂಡುಬಿಡುವುದು ಅವಳ ಬೆನ್ನ ತುಂಬ ಹರಡಿದ ಕೇಶರಾಶಿಯ ಮರೆಯಲ್ಲಿ. ಕೂದಲು ತುಸುವೇ ಆಚೀಚೆ ಸರಿದಾಗ ನೋಡಿಬಿಡಬೇಕು ಆ ರೇಷ್ಮೆಯ ಮೃದು ಮೈಯ ಮೇಲೆ ಹೊಳೆಹೊಳೆವ ವಜ್ರದಂಥ ಹರಳುಗಳ ಪ್ಯಾಚ್‌, ಮಿಂಚುವ ಆಭರಣದಂತಿರುವ ಜರ್ದೋಸಿ ಕಸೂತಿ, ಕಟ್‌ವರ್ಕ್‌ನ ಜರಿಯಂಥ ಲೇಸ್‌, ಅಗಲವಾದ ಕೊರಳವಿನ್ಯಾಸದ ಬ್ಲೌಸ್‌ ಬೆನ್ನಿಗೆ ಭುಜದ ಬಳಿಯಿಂದ ಇಳಿದುಬಿದ್ದ ಉದ್ದನೆಯ ಡೋರಿಗೆ ಜೋತುಬಿದ್ದ ಹ್ಯಾಂಗಿಂಗ್‌ಗಳ ವೈಭವ. ಅವಳ ನಡುಸೋಕುವ ಭಾಗ್ಯ ಪಡೆದ ಹ್ಯಾಂಗಿಂಗ್‌ಗಳು ಅಕ್ಷರಶಃ ಮನೆಯ ಸೀಲಿಂಗ್‌ನ ಜೂಮರ್‌ ನೆನಪಿಸಲು ಸಾಕು. ನಳಿದೋಳಿಗೂ ಪುಟ್ಟ ಜುಮಕಿಯಂತಹ ಹ್ಯಾಂಗಿಂಗ್‌ಗಳು.

ಸೀರೆ ಬಾರ್ಡರ್‌, ಒಡಲಿನ ತುಸು ಪಾಲು ಬೇಡಿ ಪಡೆದು ಬೀಗಿದ ಒಡಪು ಈ ಉಡುಪು. ವೈಯಾರಕ್ಕೇನೂ ಕಡಿಮೆಯಿಲ್ಲ. ಅಲ್ಟ್ರಾ ಮಾಡರ್ನ್‌ ಹುಡುಗಿಯಾದರೂ ಸರಿಯೇ, ಆಫ್‌ಶೋಲ್ಡರ್‌ನ ವಿನ್ಯಾಸಗಳಿವೆ. ಸ್ಲೀವ್‌ಲೆಸ್‌, ಥಿನ್‌ ಸ್ಟ್ರ್ಯಾಪ್‌, ನೂಡಲ್‌ಸ್ಟ್ರ್ಯಾಪ್‌ ಬ್ಲೌಸ್‌ಗಳೂ ಇವೆ. ತೋಳುಗಳಲ್ಲೂ ಬರೀ ಬಾಜೂಬಂದ್‌ನ ವಿನ್ಯಾಸವಷ್ಟೇ ಕಾಣುವಂತೆ ಜರಿಬಾರ್ಡರ್‌ ಬಳಸಿ  ಹೊಲಿಸಬಹುದು. ಬ್ಲೌಸ್‌ನ ಅಂಚು ಇನ್ನರ್‌ಲೈನ್‌, ಔಟರ್‌ಲೈನ್‌ ಕೂಡ ಒಂದೇ ಸರಳರೇಖೆಯಾಗಿರಬೇಕಿಲ್ಲ. ಅದು ಸಮುದ್ರದ ಅಲೆಯಂತೆ, ಕೊಡದ ತಳದಂತೆ, ಜಿಗ್‌ಜ್ಯಾಗ್‌ ಆಗಿ ಹಲವು ವೈವಿಧ್ಯದಲ್ಲಿ ರೂಪುಗೊಳ್ಳಲು ಸಾಧ್ಯ.

ಥೇಟ್‌ ಘಾಗ್ರಾದ ಉದ್ದನೆ ಟಾಪ್‌ನ ಅಂಚಿನಂತೆ ಇದಕ್ಕೂ ಲೇಸ್‌, ಮಣಿಗಳಿಂದ ಅಲಂಕರಿಸಬಹುದು. ಬ್ಲೌಸ್‌ನ ಬೆನ್ನೆಲ್ಲ ಒಂದೇ ಯಾಕೆ, ಅದು ಹಲವು ಪೀಸ್‌ಗಳ ಕೊಲಾಜ್‌ ಆಗಬಾರದೇಕೆ? ಅಷ್ಟಕ್ಕೂ ಪೀಸ್‌ ಹೆಚ್ಚಿದಷ್ಟೂ ಅದು ಸಂಕೀರ್ಣ ವಿನ್ಯಾಸ. ಅದರರ್ಥ ಬಹಳ ಬೆಲೆ ತೆತ್ತು ಪಡೆದ ಅಮೂಲ್ಯ ಕಲಾಕೃತಿ! ಗುಂಪಿನಲ್ಲಿ ಘನತೆ ಹೆಚ್ಚಿಸುವ ಚಿತ್ತಾರ.

ಎಡರು ಮಡಿಕೆಗಳ ಓವರ್‌ಲ್ಯಾಪ್‌, ಅನೀವನ್‌ ಕಟ್‌, ಸಿಮ್ಮೆಟ್ರಿಕ್‌ ವಿನ್ಯಾಸ ಒಟ್ಟಿನಲ್ಲಿ ವಿಶಿಷ್ಟ. ವರ್ಣಗಳ ಬೇರೆ ಬೇರೆ ಬಟ್ಟೆ ಬಳಸಿದ ಸೂಕ್ತ ಸಂಯೋಜನೆ; ಬೆನ್ನೆಲ್ಲ ಬೆತ್ತಲೆ ಬರಿಯ ನಾಲ್ಕಿಂಚಿನ ಪಟ್ಟಿಯ ಗುಜರಾತಿ, ರಾಜಸ್ತಾನಿ ವಿನ್ಯಾಸದ ಚೋಲಿ. ನೆಟ್‌ ಸೀರೆಯ ಸೆರಗಿನಾಚೆಗೂ ಕಾಣುವ ಬ್ಲೌಸ್‌ಗೆ ಬೆನ್ನಷ್ಟೇ ಮುಖ್ಯವಲ್ಲ. ಮುಖವೂ ಗಣನೀಯ ಒಪ್ಪು. ಪಾರದರ್ಶಕ ಸೀರೆಯ ಬ್ಲೌಸ್‌ನ ಹಿಂಭಾಗದಲ್ಲಿ ಕಾಣುವುದು ಬರೀ ಸುಂದರ ಕೊರಳಿನ ವಿನ್ಯಾಸ, ಬರಿಮೈಯ ಮೇಲೆ ಹರಡಿದ ಹರಳುಗಳ ವಿನ್ಯಾಸದಂತೆ, ವಿನ್ಯಾಸದಗುಂಟ ಕಾಣುವ ಹೊಲಿಗೆ ಬಿಟ್ಟರೆ ಮತ್ತೇನಿಲ್ಲ.

ಇಷ್ಟು ದಿಟ್ಟವಾಗಿ ಪಾರದರ್ಶಕ ಬಟ್ಟೆ ಧರಿಸಲು ಆಗದಿದ್ದರೇನಂತೆ ಡಬಲ್‌ ನೆಕ್‌ನ ವಿನ್ಯಾಸಗಳಿಲ್ಲವೆ? ಸ್ಲೀವ್‌ಲೆಸ್‌, ನೂಡಲ್‌ ಸ್ಟ್ರ್ಯಾಪ್‌ ಧರಿಸದ ಖುಷಿಯೂ ಸರಿಯೇ. ಆದರೆ ಅದು ಸುಪ್ತವಾಗಿ ಅಡಗಿರುವಂತೆ ಎನಿಸುತ್ತದೆ. ತೆಳು ಸೀರೆಯ ಬಟ್ಟೆಯ ಬ್ಲೌಸ್‌ನ ಹೊರವಿನ್ಯಾಸಕ್ಕೆ ತೋಳಿದೆ, ಅಷ್ಟೇನೂ ಆಳವಲ್ಲದ ಡೀಸೆಂಟ್‌ ಎನಿಸುವ ಕೊರಳಿದೆ. ಆದರೆ ಅದರೊಳಗಡೆ ಇನ್ನೊಂದು ಕೊರಳಿನ ವಿನ್ಯಾಸ ಮನಸೋ ಇಚ್ಛೆ ಆಳವಾಗಿ, ಸಾಧ್ಯವಿರುವಷ್ಟೂ ತೆಳು ಪಟ್ಟಿಯ ಭುಜ, ಬೇಕಾದ ಡಿಸೈನಿನ ಕೊರಳು. ಅಯ್ಯೋ ಅಂದಹಾಗೆ ಅದೇ ಮುಖ್ಯವಾಗಿ ಕಾಣಬೇಕಿರುವುದು. ಸರಿ ಒಳಗಿನ ಆ ಆಕರ್ಷಕ ಕೊರಳಿನ ವಿನ್ಯಾಸ­ದು­ದ್ದಕ್ಕೂ ಹೊಳೆಹೊಳೆವ ಬಿಳಿಹರಳುಗಳ ಸಾಲು... ಕುಡಿಗಣ್ಣ ನೋಟವೂ ಬೆನ್ನ ಹಿಂದೆ ಸಾಲು ಸಾಲು.

ರೇಷ್ಮೆ, ವೆಲ್ವೆಟ್‌, ಲೇಸ್‌, ಜರಿ, ಕಸೂತಿ, ನಿಜವಾದ ವಜ್ರ, ಅಮೂಲ್ಯ ಹರಳು, ಮುತ್ತು ಮಣಿಗಳೆಲ್ಲ ಕಾದಿವೆ ಅವಳಿಗೆ ಆಪ್ತವಾಗಲು. ಸಣ್ಣ ಸಣ್ಣ ಇಂತಹ ವಿವರಗಳೆಲ್ಲ ಬಿಡಿಯಾಗಿ ಸೆಳೆಯುವುದು ಕಡಿಮೆ ಆಸಕ್ತರ ಹೊರತಾಗಿ. ಸೆಳೆಯುವುದಾದರೆ ಅದು ಒಟ್ಟಂದ. ಒಟ್ಟಾರೆಯಾದ ವಿನ್ಯಾಸ. ಸರಳ ಮಾತು ಆಪ್ತವೆನಿಸುತ್ತದೆ, ಸಹಜವಾಗಿ ಹತ್ತಿರ ಸೆಳೆಯುತ್ತದೆ. ಸರಿಯೇ.

ಆದರೆ ಸೂಕ್ತವಾಗಿ ಬಳಸುವ ಹದವಾಗದ ವಿಶೇಷಣ, ಅರ್ಥಗರ್ಭಿತ, ಒಗಟು, ಗಾದೆಮಾತು, ಶಿಷ್ಟಪದಗಳಿರುವ ಮಾತೂ ಬರಿಯ ಅಲಂಕಾರಕ್ಕೆ ಆಡಿದ ಮಾತಿನಂತಲ್ಲ, ಅದು ನಾಟಕೀಯ ಎನಿಸುವುದಿಲ್ಲ. ಕಾವ್ಯಮಯವಾಗುತ್ತದೆ. ಹಾಗೆಯೇ ಡಿಸೈನರ್‌ ಬ್ಲೌಸ್‌. ಒಟ್ಟಾರೆ ಆಕೆಯ ವ್ಯಕ್ತಿತ್ವದೊಂದಿಗೆ ನಾಜೂಕಾಗೇ ಬೆರೆತ ಸುಂದರ ಬಿಂಬ.  ನೋಟದಲ್ಲಿ ಐಷಾರಾಮಿ, ವೈಭವೋಪೇತ, ಕೆಲವೊಮ್ಮೆ ಸೆನ್ಶುವಸ್‌ ಕೂಡ. ಆದರೂ ಕೇವಲ ದೈಹಿಕ ಆಕರ್ಷಣೆಯ ಗಿಮಿಕ್‌ ಆಗದೆ, ಲಾಸ್ಯ, ಹೆಣ್ತನ, ನವಿರು ಭಾವಗಳ ವ್ಯಕ್ತರೂಪ. ಇಷ್ಟದ ಹುಡುಗಿಯಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT