ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಹ್ವಾಗ್, ಜಯವರ್ಧನೆ ಅಬ್ಬರದ ಆಟ

ಡೆಲ್ಲಿ ಡೇರ್‌ಡೆವಿಲ್ಸ್‌ಗೆ ಮೊದಲ ಜಯದ ಸಂಭ್ರಮ; ಮುಂಬೈ ಇಂಡಿಯನ್ಸ್‌ಗೆ ನಿರಾಸೆ
Last Updated 21 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಡೆಲ್ಲಿ ಡೇರ್‌ಡೆವಿಲ್ಸ್ ತಂಡ ಐಪಿಎಲ್ ಟ್ವೆಂಟಿ-20 ಟೂರ್ನಿಯಲ್ಲಿ ಸತತ ಆರು ಸೋಲುಗಳ ನಿರಾಸೆಯಿಂದ ಕೊನೆಗೂ ಹೊರಬಂದಿದೆ. ವೀರೇಂದ್ರ ಸೆಹ್ವಾಗ್ ಮತ್ತು ನಾಯಕ ಮಾಹೇಲ ಜಯವರ್ಧನೆ ತೋರಿದ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ ಡೇರ್‌ಡೆವಿಲ್ಸ್ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು.

ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಿಕಿ ಪಾಂಟಿಂಗ್ ನೇತೃತ್ವದ  ಇಂಡಿಯನ್ಸ್ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 161 ರನ್ ಪೇರಿಸಿತು. ರೋಹಿತ್ ಶರ್ಮ (73, 43 ಎಸೆತ, 5 ಬೌಂ, 5 ಸಿಕ್ಸರ್) ಮತ್ತು ಸಚಿನ್ ತೆಂಡೂಲ್ಕರ್ (54, 47 ಎಸೆತ, 3 ಬೌಂ, 2 ಸಿಕ್ಸರ್) ಗಳಿಸಿದ ಅರ್ಧಶತಕ ತಂಡದ ಉತ್ತಮ ಮೊತ್ತಕ್ಕೆ ಕಾರಣ.

ಈ ಹಿಂದಿನ ಪಂದ್ಯಗಳಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಡೇರ್‌ಡೆವಿಲ್ಸ್ ಈ ಮೊತ್ತ ಬೆನ್ನಟ್ಟುವುದು ಕಷ್ಟ ಎಂದೇ ಭಾವಿಸಲಾಗಿತ್ತು. ಆದರೆ ಸೆಹ್ವಾಗ್ (ಅಜೇಯ 95, 57 ಎಸೆತ, 13 ಬೌಂ, 2 ಸಿಕ್ಸರ್) ಮತ್ತು ಜಯವರ್ಧನೆ (59, 43 ಎಸೆತ, 8 ಬೌಂ, 1 ಸಿಕ್ಸರ್) ಎಲ್ಲರ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿದರು. ಡೇರ್‌ಡೆವಿಲ್ಸ್ ಒಂದು ವಿಕೆಟ್ ಕಳೆದುಕೊಂಡು 165 ರನ್ ಗಳಿಸಿ ಗೆಲುವಿನ ನಗು ಬೀರಿದಾಗ ಇನ್ನೂ ಮೂರು ಓವರ್‌ಗಳು ಬಾಕಿಯುಳಿದಿದ್ದವು!

ವಿಂಡೀಸ್‌ನ ಕ್ರಿಕೆಟ್ ದಂತಕತೆ ಸರ್ ವಿವಿಯನ್ ರಿಚರ್ಡ್ಸ್ ಶನಿವಾರವಷ್ಟೇ ಸಲಹೆಗಾರನಾಗಿ ಡೆವಿಲ್ಸ್ ತಂಡ ಸೇರಿಕೊಂಡಿದ್ದರು. ಅವರು ಆತ್ಮವಿಶ್ವಾಸದ ಮಾತುಗಳಿಂದ ತಂಡದ ಆಟಗಾರರಿಗೆ ಉತ್ತೇಜನ ನೀಡಿದ್ದರು. ರಿಚರ್ಡ್ಸ್ ಮಾತುಗಳಲ್ಲಿ ಅಡಗಿದ್ದ ಶಕ್ತಿ ಏನೆಂಬುದು ಸೆಹ್ವಾಗ್ ಮತ್ತು ಮಾಹೇಲ ಬ್ಯಾಟಿಂಗ್‌ನಲ್ಲಿ ಪ್ರತಿಫಲಿಸಿದವು.

ಈ ಗೆಲುವಿನ ಮೂಲಕ ಡೆಲ್ಲಿಯ ತಂಡ ಪಾಯಿಂಟ್ ಖಾತೆ ತೆರೆಯಿತು. ಸೆಹ್ವಾಗ್ ಅವರು ಡೇವಿಡ್ ವಾರ್ನರ್ ಬದಲು ಮಾಹೇಲ ಜೊತೆ ಇನಿಂಗ್ಸ್ ಆರಂಭಿಸಿದರು. ಇಬ್ಬರೂ ಮೊದಲ ಮೂರು ಓವರ್‌ಗಳಲ್ಲಿ ಎಚ್ಚರಿಕೆಯ ಆಟವಾಡಿದರು. ನಾಲ್ಕನೇ ಓವರ್ ಬಳಿಕ ರನ್ ಹರಿದುಬರತೊಡಗಿತು. ನಾಲ್ಕು ಮತ್ತು ಐದನೇ ಓವರ್‌ನಲ್ಲಿ ತಲಾ 17 ರನ್‌ಗಳು ಬಂದವು. ಆಗಲೇ ಡೇರ್‌ಡೆವಿಲ್ಸ್ ಉದ್ದೇಶ ಏನೆಂಬುದು ಸ್ಪಷ್ಟವಾಯಿತು.

ಪಾಂಟಿಂಗ್ ತನ್ನ ಪ್ರಮುಖ `ಅಸ್ತ್ರ' ಲಸಿತ್ ಮಾಲಿಂಗ ಅವರನ್ನು ಆರನೇ ಓವರ್‌ನಲ್ಲಿ ಮತ್ತೆ ಕರೆತಂದರು. ಆದರೆ ಸೆಹ್ವಾಗ್ ಅವರನ್ನೂ ಬಿಡಲಿಲ್ಲ. ಆ ಓವರ್‌ನಲ್ಲಿ ಎರಡು ಬೌಂಡರಿ ಗಳಿಸಿ `ಇಂದು ನಮ್ಮನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ' ಎಂಬ ಸೂಚನೆ ಕೊಟ್ಟರು. ಇಬ್ಬರು ಆರಂಭಿಕ ಆಟಗಾರರೂ ಸ್ಪರ್ಧೆಗೆ ಬಿದ್ದವರಂತೆ ಬೌಂಡರಿ, ಸಿಕ್ಸರ್ ಸಿಡಿಸತೊಡಗಿದರು.

10 ಓವರ್‌ಗಳು ಕೊನೆಗೊಂಡಾಗ 102 ರನ್‌ಗಳು ಜಮೆಯಾಗಿದ್ದವು. ಆಗಲೇ ಪಂದ್ಯದ ಫಲಿತಾಂಶ ಸ್ಪಷ್ಟವಾಗಿತ್ತು. ಸೆಹ್ವಾಗ್ ತಮ್ಮ ಬಾಹುಗಳಲ್ಲಿ ಅಡಗಿದ್ದ ಶಕ್ತಿಯಿಂದ ಚೆಂಡನ್ನು ಬಡಿದಟ್ಟುತ್ತಿದ್ದರೆ, ಮಾಹೇಲ ಯುಕ್ತಿಯಿಂದ ಬ್ಯಾಟ್ ಮಾಡಿದರು. ಸ್ವೀಪ್, ಮತ್ತು `ಪೆಡಲ್ ಸ್ವೀಪ್'ಗಳ ಮೂಲಕ ರನ್ ಕಲೆಹಾಕಿದರು.

ಗೆಲುವಿಗೆ 11 ರನ್‌ಗಳು ಬೇಕಿದ್ದಾಗ ಮಾಹೇಲ ಔಟಾದರು. ಮೊದಲ ವಿಕೆಟ್‌ಗೆ ಇವರು 94 ಎಸೆತಗಳಲ್ಲಿ 151 ರನ್ ಸೇರಿಸಿದರು. ಆ ಬಳಿಕ ಸೆಹ್ವಾಗ್ ಅವರು ವಾರ್ನರ್ ಜೊತೆಗೂಡಿ ತಂಡವನ್ನು ಮೊದಲ ಗೆಲುವಿನತ್ತ ಮುನ್ನಡೆಸಿದರು.
ಗಾಯದ ಕಾರಣ ವೊದಲ ಮೂರು ಪಂದ್ಯಗಳಲ್ಲಿ ಆಡದೇ ಇದ್ದ ಸೆಹ್ವಾಗ್, ಬಳಿಕದ ಮೂರೂ ಪಂದ್ಯಗಳಲ್ಲಿ ವಿಫಲರಾಗಿದ್ದರು. ಕೊನೆಗೂ ಅವರು ಲಯ ಕಂಡುಕೊಂಡು ತಂಡಕ್ಕೆ ಹೊಸ ಚೈತನ್ಯ ತುಂಬುವಲ್ಲಿ ಯಶಸ್ವಿಯಾದರು.

`ಮನಸ್ಸಿನೊಳಗೆ ಹೆದರಿಕೆಯಿದ್ದರೂ ಅದನ್ನು ಹೊರಗೆ ತೋರಿಸಬೇಡ. ಆತ್ಮವಿಶ್ವಾಸದಿಂದ ಆಡು ಎಂದು ರಿಚರ್ಡ್ಸ್ ಕಿವಿಮಾತು ಹೇಳಿದ್ದರು. ಅದು ಫಲ ನೀಡಿತು' ಎಂದು ಪಂದ್ಯದ ಬಳಿಕ `ವೀರೂ' ಪ್ರತಿಕ್ರಿಯಿಸಿದರು.

ರೋಹಿತ್, ಸಚಿನ್ ಮಿಂಚು: ಮುಂಬೈ ಇಂಡಿಯನ್ಸ್ ನಿಧಾನ ಆರಂಭದ ಹೊರತಾಗಿಯೂ ಸವಾಲಿನ ಮೊತ್ತ ಪೇರಿಸಿತು. ರೋಹಿತ್ ಮತ್ತು ಸಚಿನ್ ತೋರಿದ ಭರ್ಜರಿ ಬ್ಯಾಟಿಂಗ್ ಇದಕ್ಕೆ ಕಾರಣ.

ಸಚಿನ್ ಜೊತೆ ಇನಿಂಗ್ಸ್ ಆರಂಭಿಸಿದ್ದು ಡ್ವೇನ್ ಸ್ಮಿತ್. ಆದರೆ ಈ ಪ್ರಯೋಗಕ್ಕೆ ಫಲ ಲಭಿಸಲಿಲ್ಲ. ಸ್ಮಿತ್ (8) ಬೇಗನೇ ಔಟಾದರು. ಬಳಿಕ ಬಂದ ದಿನೇಶ್ ಕಾರ್ತಿಕ್ ದುರದೃಷ್ಟಕರ ರೀತಿಯಲ್ಲಿ ರನೌಟ್ ಆದದ್ದು ಇಂಡಿಯನ್ಸ್‌ಗೆ ಹಿನ್ನಡೆ ಉಂಟುಮಾಡಿತು. ಸಚಿನ್ ಅವರ ಸ್ಟ್ರೇಟ್ ಡ್ರೈವ್‌ನಲ್ಲಿ ಚೆಂಡು ಬೌಲರ್ ಉಮೇಶ್ ಯಾದವ್ ಕೈಗೆ ತಾಗಿ ಸ್ಟಂಪ್‌ಗೆ ಬಡಿಯಿತು. ಈ ವೇಳೆ ಕಾರ್ತಿಕ್ ಕ್ರೀಸ್‌ನಿಂದ ತುಂಬಾ ಹೊರಗಿದ್ದರು.

ಮೂರನೇ ವಿಕೆಟ್‌ಗೆ ಜೊತೆಯಾದ ಸಚಿನ್ ಹಾಗೂ ರೋಹಿತ್ ತಂಡಕ್ಕೆ ಆಸರೆಯಾದರು. ಇವರ ನಡುವಿನ 96 ರನ್‌ಗಳ ಜೊತೆಯಾಟದಿಂದಾಗಿ ತಂಡದ ಮೊತ್ತ 150ರ ಗಡಿ ದಾಟಿತು.

ಸ್ಕೋರ್ ವಿವರ :
ಮುಂಬೈ ಇಂಡಿಯನ್ಸ್: 20 ಓವರ್‌ಗಳಲ್ಲಿ 4 ವಿಕೆಟ್‌ಗೆ 161
ಡ್ವೇನ್ ಸ್ಮಿತ್ ಸಿ ಯಾದವ್ ಬಿ ವಾನ್ ಡೆರ್ ಮೆರ್ವ್  08
ಸಚಿನ್ ತೆಂಡೂಲ್ಕರ್ ಸಿ ವಾರ್ನರ್ ಬಿ ಉಮೇಶ್ ಯಾದವ್  54
ದಿನೇಶ್ ಕಾರ್ತಿಕ್ ರನೌಟ್  02
ರೋಹಿತ್ ಶರ್ಮ ಸಿ ರಸೆಲ್ ಬಿ ಉಮೇಶ್ ಯಾದವ್  73
ಕೀರನ್ ಪೊಲಾರ್ಡ್ ಔಟಾಗದೆ  19
ಅಂಬಟಿ ರಾಯುಡು ಔಟಾಗದೆ  02
ಇತರೆ: (ಲೆಗ್‌ಬೈ-1, ವೈಡ್-2)  03

ವಿಕೆಟ್ ಪತನ: 1-11 (ಸ್ಮಿತ್; 3.2), 2-22 (ಕಾರ್ತಿಕ್; 5.1), 3-118 (ಸಚಿನ್; 16.2), 4-149 (ರೋಹಿತ್; 18.6)
ಬೌಲಿಂಗ್: ಇರ್ಫಾನ್ ಪಠಾಣ್ 4-0-24-0, ಶಹಬಾಜ್ ನದೀಮ್ 4-0-20-0, ರೆಲೋಫ್ ವಾನ್ ಡೆರ್ ಮೆರ್ವ್ 4-0-35-1, ಉಮೇಶ್ ಯಾದವ್ 4-0-31-2, ಅಜಿತ್ ಅಗರ್‌ಕರ್ 3-0-37-0, ಆ್ಯಂಡ್ರೆ ರಸೆಲ್ 1-0-13-0

ಡೆಲ್ಲಿ ಡೇರ್‌ಡೆವಿಲ್ಸ್: 17 ಓವರ್‌ಗಳಲ್ಲಿ 1 ವಿಕೆಟ್‌ಗೆ 165
ಮಾಹೇಲ ಜಯವರ್ಧನೆ ಎಲ್‌ಬಿಡಬ್ಲ್ಯು ಬಿ ಲಸಿತ್ ಮಾಲಿಂಗ  59
ವೀರೇಂದ್ರ ಸೆಹ್ವಾಗ್ ಔಟಾಗದೆ  95
ಡೇವಿಡ್ ವಾರ್ನರ್ ಔಟಾಗದೆ  07
ಇತರೆ: (ವೈಡ್-1, ನೋಬಾಲ್-3)  04
ವಿಕೆಟ್ ಪತನ: 1-151 (ಜಯವರ್ಧನೆ; 15.5)

ಬೌಲಿಂಗ್: ಲಸಿತ್ ಮಾಲಿಂಗ 4-0-26-1, ಜಸ್‌ಪ್ರೀತ್ ಬುಮ್ರಾ 3-0-38-0, ಮುನಾಫ್ ಪಟೇಲ್ 4-0-36-0, ಹರಭಜನ್ ಸಿಂಗ್ 3-0-30-0, ಡ್ವೇನ್ ಸ್ಮಿತ್ 2-0-24-0, ಕೀರನ್ ಪೊಲಾರ್ಡ್ 1-0-11-0
ಫಲಿತಾಂಶ: ಡೆಲ್ಲಿ ಡೇರ್‌ಡೆವಿಲ್ಸ್‌ಗೆ 9 ವಿಕೆಟ್ ಜಯ,                
ಪಂದ್ಯಶ್ರೇಷ್ಠ: ವೀರೇಂದ್ರ ಸೆಹ್ವಾಗ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT