ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇಂಟ್‌ ಜೋಸೆಫ್‌ ಚರ್ಚ್‌ ಉದ್ಘಾಟನೆ

Last Updated 12 ಡಿಸೆಂಬರ್ 2013, 6:28 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಇನ್ನೂರ ಇಪ್ಪತ್ತೆರಡು ಮಂದಿ ಧರ್ಮಗುರುಗಳ ಸಮೂಹ, 200 ಮಂದಿ ಸಿಸ್ಟರ್‌ಗಳ ಸಮಕ್ಷಮದಲ್ಲಿ ಸುಮಾರು ಎರಡು ತಾಸು ನಡೆದ ಭಕ್ತಿಪೂರ್ಣ ಪ್ರಾರ್ಥನೆ. ಒಳಗೆ ಹಾಗೂ ಹೊರಗೆ ಕಿಕ್ಕಿರಿದು ತುಂಬಿದ್ದ ಭಕ್ತರು. ವಿದ್ಯುತ್‌ ದೀಪಗಳಿಂದ ಸಿಂಗರಿಸಿದ್ದ ಭವ್ಯ ಕಟ್ಟಡ...
ನಗರದ ಕೇಶ್ವಾಪುರದಲ್ಲಿ ಪುನರ್ನಿರ್ಮಿಸಲಾದ ಸೇಂಟ್‌ ಜೋಸೆಫ್ ಚರ್ಚ್‌ನ ಉದ್ಘಾಟನಾ ಸಮಾರಂಭ ಈ ಎಲ್ಲ ಕಾರಣಗಳಿಂದ ನೆನಪಿನಲ್ಲಿ ಉಳಿಯುವಂತಾಯಿತು.

ಸುಂದರ ಕಲಾಕೃತಿಯಂತೆ ನಿರ್ಮಾಣಗೊಂಡಿರುವ ಹೊಸ ಕಟ್ಟಡ ಹಾಗೂ ಮುಂದಿನ ಶಾಲಾ ಕಟ್ಟಡ, ಇಡೀ ಆವರಣವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಭಕ್ತರಲ್ಲಿ ಸಂಭ್ರಮ ಮನೆ ಮಾಡಿತ್ತು. ಇಂಥ ವಾತಾವರಣದಲ್ಲಿ ಸಂಜೆ ಆರಂಭ­ಗೊಂಡ ಪ್ರಾರ್ಥನೆ ರಾತ್ರಿ ವರೆಗೆ ಮುಂದುವರಿಯಿತು.

ಇಂಗ್ಲಿಷ್‌ ಭಾಷೆಯಲ್ಲಿ ನಡೆದ ಪ್ರಾರ್ಥನೆಗೆ ಕೊಂಕಣಿ, ತಮಿಳು ಭಾಷೆಯ ಸ್ತೋತ್ರ ಗೀತೆಗಳು ಕಳೆ ತುಂಬಿದವು. ವಿವಿಧ ಭಾಷೆಯಲ್ಲಿ ಭಕ್ತರಿಗೆ ಮಾಹಿತಿಯನ್ನು ಕೂಡ ನೀಡಲಾಗುತ್ತಿತ್ತು.ಬೆಳಗಾವಿ ಧರ್ಮಪ್ರಾಂತ ಮಾತ್ರವಲ್ಲದೆ ಬೆಂಗಳೂರು, ದೂರದ ಗೋವಾ, ಆಂಧ್ರಪ್ರದೇಶ, ತಮಿಳುನಾಡು ಮುಂತಾದ ಕಡೆಗಳಿಂದಲೂ ಭಕ್ತರು ಬಂದಿದ್ದರು.

ಹೀಗಾಗಿ ಇಡೀ ಪ್ರದೇಶದಲ್ಲಿ ಕಾಲಿಡುವುದಕ್ಕೂ ಜಾಗವಿರಲಿಲ್ಲ. ಆದರೆ ಒಂದು ಕ್ಷಣವೂ ಗೊಂದಲ, ಗದ್ದಲ, ತಳ್ಳಾಟ–ನೂಕಾಟ ನಡೆಯಲಿಲ್ಲ. ಸಾವಿರಾರು ಮಂದಿಗೆ ಕೇವಲ ಹತ್ತೇ ನಿಮಿಷದಲ್ಲಿ ಪವಿತ್ರ ಪ್ರಸಾದ ಹಂಚಿದ ವಿಧಾನವಂತೂ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಬೆಂಗಳೂರು ಧರ್ಮಪ್ರಾಂತದ ಬೆನಿಟ್ಟೋ ಅವರು ಪ್ರಾರ್ಥನೆಗೂ ಮುನ್ನ ಕಟ್ಟಡವನ್ನು ಉದ್ಘಾಟಿಸಿದರು. ಹೊನ್ನಾವರದಿಂದ ಬಂದ ಬ್ಯಾಂಡ್‌ ಸೆಟ್‌ನವರ ಸಂಗೀತದ ಹಿನ್ನೆಲೆಯಲ್ಲಿ ನಡೆದ ಸಮಾರಂಭದಲ್ಲಿ ಬೆಂಗಳೂರಿನ ಆರ್ಚ್‌ ಬಿಷಪ್‌ ಬರ್ನಾರ್ಡ್‌ ಮೊರಾಸ್‌ ಆಶೀರ್ವಾದ ನೀಡಿದರು.

ಬೆಳಗಾವಿ ಧರ್ಮಪ್ರಾಂತದ ಬಿಷಪ್‌ ಪೀಟರ್‌ ಮಚಾದೋ, ಕಾರವಾರದ ಫಾದರ್‌ ಡೆರಿಕ್‌ ಫರ್ನಾಂಡಿಸ್‌, ಸೇಂಟ್‌ ಜೋಸೆಫ್ಸ್ ಚರ್ಚ್‌ನ ಧರ್ಮಗುರು ಜೋಸೆಫ್‌ ರಾಡ್ರಿಗಸ್‌ ಮುಂತಾದವರು ಭಾಗವಹಿಸಿದ್ದರು. ಆರು ಸಾವಿರ ಮಂದಿ ಮಕ್ಕಳು ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿದ್ದರು. ಪ್ರಾರ್ಥನೆಯ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT