ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇಡಿನ ಸರಣಿಯಲ್ಲಿ ಭರ್ಜರಿ ಬೇಟೆ

Last Updated 26 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಕೋಲ್ಕತ್ತ: ವಿಶ್ವಕಪ್ ಗೆಲುವಿಗೆ ಕಾರಣವಾದ ಸಿಕ್ಸರ್ ಬಾರಿಸಿದಾಗಲೂ ದೋನಿ ಇಷ್ಟೊಂದು ಹರ್ಷಚಿತ್ತರಾಗಿರಲಿಲ್ಲವೇನೊ? ಆದರೆ ಈಡನ್ ಗಾರ್ಡನ್ಸ್ ಅಂಗಳದಲ್ಲಿ ಗೆಲ್ಲುತ್ತಿದ್ದಂತೆ ಅವರ ಗತ್ತೇ ಬೇರೆ. ಪ್ರೇಕ್ಷಕರತ್ತ ಟ್ರೋಫಿ  ತೋರಿಸುತ್ತಾ ವ್ಯಕ್ತಪಡಿಸಿದ ಆ ಖುಷಿಯಲ್ಲಿ ನಾನಾ ಅರ್ಥಗಳು!

ಅದಕ್ಕೆ ಕಾರಣ ಭಾರತ ತಂಡದ ಭರ್ಜರಿ ಬೇಟೆ. ಸೇಡಿನ ಸರಣಿಯ ಈ ಬೇಟೆಯ ಹೆಸರು 5-0. ನಿಜ, ಈ ಗೆಲುವು ವಿಶ್ವಕಪ್ ಸಂಭ್ರಮದ ಸನಿಹ ಬರಲಾರದು. ಇಂಗ್ಲೆಂಡ್ ಪ್ರವಾಸದಲ್ಲಿ ಎದುರಾದ ಹೀನಾಯ ಸೋಲು ಕೂಡ ಈ ಜಯದಿಂದ ಮರೆಯಾಗಲಾರದು. ಆದರೆ ಆ ಪ್ರವಾಸದಲ್ಲಿನ ಆಘಾತದಿಂದ ನೊಂದಿದ್ದ ಮನಸ್ಸುಗಳಿಗೆ `ಕ್ಲೀನ್ ಸ್ವೀಪ್~ ಸಾಧನೆ ಸಾಂತ್ವನ ನೀಡಿತು.

`ಮತ್ತೆ ಹೇಳುತ್ತಿದ್ದೇನೆ ಇದು ಸೇಡು ತೀರಿಸಿಕೊಳ್ಳಲು ಆಡಿದ ಸರಣಿ ಅಲ್ಲ. ಆದರೆ ತಮ್ಮ ಸಾಮರ್ಥ್ಯ ಏನೆಂಬುದನ್ನು ತೋರಿಸಬೇಕಿತ್ತು ಅಷ್ಟೆ~ ಎಂದು ದೋನಿ ಪ್ರತಿಕ್ರಿಯಿಸಿದರು. `ಸರಣಿ ಶ್ರೇಷ್ಠ~ ಎನಿಸಿದ ಕಾರಣ ಬಹುಮಾನವಾಗಿ ಸಿಕ್ಕ ಬೈಕ್‌ನಲ್ಲಿ ಅಂಗಳದಲ್ಲೊಂದು ಸುತ್ತು ತಿರುಗಿ ಪ್ರೇಕ್ಷಕರತ್ತ ಕೈಬೀಸಿದ ಅವರ ಹಣೆಯ ನೆರಿಗೆಗಳಲ್ಲಿ ಸಮಾಧಾನದ ಪ್ರತಿಬಿಂಬ ಇಣುಕಿ ನೋಡುತಿತ್ತು!

ಆದರೆ ಕೊನೆಯ ಪಂದ್ಯದ್ಲ್ಲಲಾದರೂ ಗೆಲುವು ಸವಿಯಬೇಕು ಎಂಬ ಇಂಗ್ಲೆಂಡ್ ತಂಡದ ಕನಸನ್ನು ಸ್ಪಿನ್ನರ್‌ಗಳಾದ ಜಡೇಜಾ ಹಾಗೂ ಅಶ್ವಿನ್ ನುಚ್ಚುನೂರು ಮಾಡಿದರು. ಹಾಗಾಗಿ ಭಾರತ ಈಡನ್ ಅಂಗಳದಲ್ಲೂ ಮಂಗಳವಾರ ರಾತ್ರಿ ಗೆಲುವಿನ ಹಣತೆ ಹಚ್ಚಲು ಸಾಧ್ಯವಾಯಿತು. ಜೊತೆಗೆ 5-0 ಜಯದ ಬೋನಸ್! ಭಾರತದ ನೆಲದಲ್ಲಿ ಇಂಗ್ಲೆಂಡ್ ಸತತ ಎರಡನೇ ಬಾರಿ ಈ ರೀತಿಯ ಆಘಾತಕ್ಕೊಳಗಾಯಿತು.

ಏಕದಿನ ಕ್ರಿಕೆಟ್ ಸರಣಿಯ ಐದನೇ ಪಂದ್ಯದ ಈ ಗೆಲುವು ಭಾರತಕ್ಕೆ ಸಿಕ್ಕಿದ ದೀಪಾವಳಿ ಉಡುಗೊರೆ. ಏಕೆಂದರೆ ಸಾಂದರ್ಭಿಕ ಬೌಲರ್‌ಗಳಾದ ರೈನಾ ಹಾಗೂ ತಿವಾರಿ ಅವರ ಎಸೆತಗಳನ್ನು ಸರಿಯಾಗಿ ಆಡಲು ಇಂಗ್ಲೆಂಡ್ ಆಟಗಾರರಿಗೆ ಸಾಧ್ಯವಾಗದ್ದಕ್ಕೆ ಏನು ಹೇಳಬೇಕು?

20.1 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 129 ರನ್ ಗಳಿಸಿದ್ದ ಇಂಗ್ಲೆಂಡ್ 37ನೇ ಓವರ್‌ನಲ್ಲಿ 176ಕ್ಕೆ ಆಲ್‌ಔಟ್. 47 ರನ್‌ಗಳ ಅಂತರದಲ್ಲಿ 10 ವಿಕೆಟ್ ಪತನ! ಬೌಲಿಂಗ್ ಪವರ್‌ಪ್ಲೇ ವೇಳೆ ಈ ತಂಡ ಎಡವಟ್ಟು ಮಾಡಿಕೊಂಡಿದ್ದೆ ಅದಕ್ಕೆ ಕಾರಣ.

ಕುಕ್ ಹಾಗೂ ಕೀಸ್ವೆಟರ್ ಜೊತೆಯಾಟ ನೋಡಿ ಇನ್ನೇನು ಈ ಪಂದ್ಯದಲ್ಲಿ ಗೆಲುವು ನಮ್ಮದೇ ಎಂಬ ಖುಷಿಯ್ಲ್ಲಲಿ ಪ್ರವಾಸಿ ಪಡೆ ತೇಲಾಡುತಿತ್ತು. ಆಗ ವೇಗಿ ಆ್ಯರನ್ ನಾಯಕ ಕುಕ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿ ಮಹತ್ವದ ತಿರುವು ನೀಡಿದರು.

ತಕ್ಷಣ ಬೌಲಿಂಗ್ ಪವರ್‌ಪ್ಲೇ ಮೊರೆ ಹೋದ ನಾಯಕ ದೋನಿ ಸ್ಪಿನ್ನರ್‌ಗಳನ್ನು ಬಳಸಿಕೊಂಡ ರೀತಿ ಅಮೋಘ. ಇಬ್ಬನಿಯ ಸಮಸ್ಯೆ ಇದ್ದರೂ ಆತಿಥೇಯ ಸ್ಪಿನ್ನರ್‌ಗಳು 21.1-25.6 ಓವರ್‌ಗಳ ನಡುವೆ ಕೇವಲ 10 ರನ್ ನೀಡಿ ನಾಲ್ಕು ವಿಕೆಟ್ ಕಬಳಿಸಿದರು. ಅಲ್ಲಿಂದ ಆಂಗ್ಲರ ಹಣೆಬರಹ ಬೆತ್ತಲಾಗುತ್ತಾ ಹೋಯಿತು.

ತಮ್ಮ ನಡುವೆ ಏಳು ವಿಕೆಟ್ ಹಂಚಿಕೊಂಡ ಅಶ್ವಿನ್ ಹಾಗೂ ಜಡೇಜಾ ಮತ್ತೆ ಇಂಗ್ಲೆಂಡ್ ಮಧ್ಯಮ ಕ್ರಮಾಂಕಕ್ಕೆ ಬಲವಾದ ಪೆಟ್ಟು ನೀಡಿದರು. ಇಷ್ಟು ದಿನ ಬೆಂಚ್ ಕಾಯಿಸಿ ಕೊನೆಯ ಪಂದ್ಯದಲ್ಲಿ ಸ್ಥಾನ ಪಡೆದ ಇಯಾನ್ ಬೆಲ್ ಶಬ್ದ ಮಾಡಲಿಲ್ಲ. ಗಾಯಗೊಂಡ ಕಾರಣ ಪೀಟರ್ಸನ್ ಕಣಕ್ಕಿಳಿದಿರಲಿಲ್ಲ.

ದೋನಿ ಅಜೇಯ ದಾಖಲೆ: ಪ್ರವಾಸಿ ತಂಡ ಬೌಲಿಂಗ್ ಪವರ್‌ಪ್ಲೇ (15.1 ರಿಂದ 19.6 ಓವರ್) ತೆಗೆದುಕೊಂಡಾಗ ಭಾರತ ಕೂಡ 10 ಎಸೆತಗಳ ಅಂತರದಲ್ಲಿ 3 ವಿಕೆಟ್ ಕಳೆದುಕೊಂಡು ತೊಂದರೆಗೆ ಸಿಲುಕಿತ್ತು. ಆದರೆ ದೋನಿ ಆಟದಿಂದಾಗಿ 271 ರನ್ ಗಳಿಸಲು ಸಾಧ್ಯವಾಯಿತು.

ಸರಣಿಯಲ್ಲಿ ಸತತ ನಾಲ್ಕನೇ ಬಾರಿ ಟಾಸ್ ಗೆದ್ದ ಕುಕ್ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ಗೆ ಮುಂದಾಗಲಿಲ್ಲ. ಆದರೆ ಸತತ ಸೋಲಿನಿಂದ ಬಳಲಿದ್ದ ಪ್ರವಾಸಿ ತಂಡದ ಫೀಲ್ಡಿಂಗ್ ಈ ಪಂದ್ಯದಲ್ಲೂ ಕೈಕೊಟ್ಟಿತು.

ಇದರಿಂದ ನಷ್ಟವಾಗಿದ್ದು ತುಂಬಾ ಚೆನ್ನಾಗಿ ಬೌಲಿಂಗ್ ಮಾಡುತ್ತಿದ್ದ ವೇಗಿ ಫಿನ್‌ಗೆ. ವಿಕೆಟ್ ಕೀಪರ್ ಕೀಸ್ವೆಟರ್ ಹಾಗೂ ಸ್ವಾನ್ ಕ್ಯಾಚ್ ಕೈಚೆಲ್ಲಿದರೆ, ಇನ್ನುಳಿದವರು ರನ್‌ಗಳನ್ನು ಉಡುಗೊರೆಯಾಗಿ ನೀಡಿದರು.

ಒಂದು ಹಂತದಲ್ಲಿ ವಿಕೆಟ್ ನಷ್ಟವಿಲ್ಲದೇ 80 ರನ್ ಗಳಿಸಿದ್ದ ಭಾರತ ಫಿನ್ ಅವರ ಎರಡನೇ ಸ್ಪೆಲ್‌ನ ಮಾರಕ ದಾಳಿಗೆ ಸಿಲುಕಿ ಆಘಾತ ಅನುಭವಿಸಿತು. ಅದೇ ಸ್ಕೋರ್‌ನಲ್ಲಿ ಮೂರು ವಿಕೆಟ್ ಪತನಗೊಂಡವು. ಆದರೆ 123 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ದೋನಿ (ಔಟಾಗದೆ 75; 69 ಎಸೆತ, 3 ಬೌ, 4 ಸಿ.) ಆಸರೆಯಾದರು.

ಈ ಹಿಂದಿನ ಐದು ಪಂದ್ಯಗಳಲ್ಲಿ ಔಟಾಗದೆ ಉಳಿದ್ದ್ದಿದ ನಾಯಕ ದೋನಿ ಇಲ್ಲೂ ಅಜೇಯ ಓಟ ಮುಂದುವರಿಸಿದರು. ಅವರು ಕಳೆದ ಆರು ಪಂದ್ಯಗಳಲ್ಲಿ ಔಟಾಗದೆ 330 ರನ್ ಕಲೆಹಾಕಿದ್ದಾರೆ ಎಂಬುದು ವಿಶೇಷ. ಭಾರತದ ಮಟ್ಟಿಗೆ ಇದೊಂದು ದಾಖಲೆ ಕೂಡ.

ಈಡನ್‌ನಲ್ಲೂ ನೀರಸ ಪ್ರತಿಕ್ರಿಯೆ: 65 ಸಾವಿರ ಆಸನ ಸಾಮರ್ಥ್ಯದ ಈಡನ್ ಗಾರ್ಡನ್ಸ್‌ನಲ್ಲಿ ಈ ಪಂದ್ಯಕ್ಕೆ ಮಾರಾಟವಾದ ಟಿಕೆಟ್‌ಗಳು ಕೇವಲ ಆರು ಸಾವಿರ! ಕ್ರೀಡಾ ನಗರಿಯ ಅಭಿಮಾನಿಗಳು ಕೂಡ ಹಿಂದೇಟು ಹಾಕಿದ್ದರಲ್ಲಿ ಅರ್ಥವಿದೆ. ದುಬಾರಿ ಟಿಕೆಟ್ ಬೆಲೆ, ಬಿಡುವಿಲ್ಲದ ಕ್ರಿಕೆಟ್ ಹಾಗೂ ವಿಪರೀತ ಭದ್ರತೆ ಪ್ರೇಕ್ಷಕರನ್ನು ದೂರ ಇಡುತ್ತಿವೆ.

ಬಿಸಿಸಿಐ ಮಾನ್ಯತಾ ಪತ್ರವಿದ್ದರೂ ಪತ್ರಕರ್ತರು ಕ್ರೀಡಾಂಗಣದೊಳಗೆ ಪ್ರವೇಶಿಸಲು ಕಷ್ಟಪಡಬೇಕು. ಇನ್ನು ಸಾಮಾನ್ಯ ವ್ಯಕ್ತಿ ಕ್ರೀಡಾಂಗಣ ಪ್ರವೇಶಿಸಲು ಹರಸಾಹಸ ಪಡಬೇಕಾಗುತ್ತದೆ.

ಸ್ಕೋರು ವಿವರ
ಭಾರತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 271

ಅಜಿಂಕ್ಯ ರಹಾನೆ ಸಿ ಕ್ರೇಗ್ ಕೀಸ್ವೆಟರ್ ಬಿ ಟಿಮ್ ಬ್ರೆಸ್ನನ್  42
ಗೌತಮ್ ಗಂಭೀರ್ ಬಿ ಸ್ಟೀವನ್ ಫಿನ್  38
ವಿರಾಟ್ ಕೊಹ್ಲಿ ಬಿ ಸ್ಟೀವನ್ ಫಿನ್  00
ಮನೋಜ್ ತಿವಾರಿ ಸಿ ಕ್ರೇಗ್ ಕೀಸ್ವೆಟರ್ ಬಿ ಸ್ಟುವರ್ಟ್ ಮೀಕರ್  24
ಸುರೇಶ್ ರೈನಾ ರನ್‌ಔಟ್ (ಬೋಪಾರಾ)  38
ಎಂ.ಎಸ್.ದೋನಿ ಔಟಾಗದೆ  75
ರವೀಂದ್ರ ಜಡೇಜಾ ಸಿ ಇಯಾನ್ ಬೆಲ್ ಬಿ ಸಮಿತ್ ಪಟೇಲ್  21
ಆರ್.ಅಶ್ವಿನ್ ಸಿ ಜೊನಾಥನ್ ಬೈಸ್ಟೋ ಬಿ ಸಮಿತ್ ಪಟೇಲ್  07
ಪ್ರವೀಣ್ ಕುಮಾರ್ ಸಿ ಜೊನಾಥನ್ ಬೈಸ್ಟೋ ಬಿ ಸಮಿತ್ ಪಟೇಲ್  16
ಆರ್.ವಿನಯ್ ಕುಮಾರ್ ಔಟಾಗದೆ  00
ಇತರೆ: (ಬೈ-2, ವೈಡ್-8) 10
ವಿಕೆಟ್ ಪತನ: 1-80 (ಗಂಭೀರ್; 17.1); 2-80 (ಕೊಹ್ಲಿ; 17.6); 3-80 (ರಹಾನೆ; 18.4); 4-123 (ತಿವಾರಿ; 27.2); 5-162 (ರೈನಾ; 36.5); 6-206 (ಜಡೇಜಾ; 43.4); 7-215 (ಅಶ್ವಿನ್; 45.4); 8-259    (ಪ್ರವೀಣ್; 49.2).
ಬೌಲಿಂಗ್: ಟಿಮ್ ಬ್ರೆಸ್ನನ್ 9-0-36-1, ಸ್ಟೀವನ್ ಫಿನ್ 10-2-47-2 (ವೈಡ್-1), ಸ್ಟುವರ್ಟ್ ಮೀಕರ್ 10-0-65-1 (ವೈಡ್-3), ಸಮಿತ್ ಪಟೇಲ್ 9-0-57-3, ಗ್ರೇಮ್ ಸ್ವಾನ್ 8-0-45-0, ರವಿ ಬೋಪಾರಾ 4-1-19-0

ಇಂಗ್ಲೆಂಡ್ 37 ಓವರ್‌ಗಳಲ್ಲಿ 176
ಕ್ರೇಗ್ ಕೀಸ್ವೆಟರ್ ಎಲ್‌ಬಿಡಬ್ಲ್ಯು ಬಿ ರವೀಂದ್ರ ಜಡೇಜಾ  63
ಅಲಸ್ಟರ್ ಕುಕ್ ಬಿ ವರುಣ್ ಆ್ಯರನ್  60
ಜೊನಾಥನ್ ಟ್ರಾಟ್ ಸಿ ವಿರಾಟ್ ಕೊಹ್ಲಿ ಬಿ ರವೀಂದ್ರ ಜಡೇಜಾ  05
ಇಯಾನ್ ಬೆಲ್ ಸಿ ಎಂ.ಎಸ್.ದೋನಿ ಬಿ ಆರ್.ಅಶ್ವಿನ್  02
ರವಿ ಬೋಪಾರಾ ಬಿ ಸುರೇಶ್ ರೈನಾ  04
ಜೊನಾಥನ್ ಬೈಸ್ಟೋ ಸಿ ಅಜಿಂಕ್ಯ ರಹಾನೆ ಬಿ ರವೀಂದ್ರ ಜಡೇಜಾ  02
ಸಮಿತ್ ಪಟೇಲ್ ಸಿ ಎಂ.ಎಸ್.ದೋನಿ ಬಿ ರವೀಂದ್ರ ಜಡೇಜಾ  18
ಟಿಮ್ ಬ್ರೆಸ್ನನ್ ಸಿ ಸುರೇಶ್ ರೈನಾ ಬಿ ಮನೋಜ್ ತಿವಾರಿ  00
ಗ್ರೇಮ್ ಸ್ವಾನ್ ಔಟಾಗದೆ  10
ಸ್ಟುವರ್ಟ್ ಮೀಕರ್ ಎಲ್‌ಬಿಡಬ್ಲ್ಯು ಬಿ ಆರ್.ಅಶ್ವಿನ್  01
ಸ್ಟೀವನ್ ಫಿನ್ ಸಿ ಎಂ.ಎಸ್.ದೋನಿ ಬಿ ಆರ್.ಅಶ್ವಿನ್  02
ಇತರೆ: (ಬೈ-4, ವೈಡ್-5)  09
ವಿಕೆಟ್ ಪತನ: 1-129 (ಕುಕ್ ; 20.2); 2-134 (ಕೀಸ್ವೆಟರ್; 21.4); 3-137 (ಬೆಲ್; 22.6); 4-137 (ಟ್ರಾಟ್; 23.3); 5-141 (ಬೈಸ್ಟೋ; 25.5); 6-155 (ಬೋಪಾರಾ; 30.4); 7-156 (ಬ್ರೆಸ್ನನ್; 31.5); 8-167 (ಸಮಿತ್; 35.1); 9-174 (ಮೀಕರ್; 36.2); 10-176 (ಫಿನ್; 36.6).
ಬೌಲಿಂಗ್: ಪ್ರವೀಣ್ ಕುಮಾರ್ 5-0-34-0 (ವೈಡ್-1), ಆರ್.ವಿನಯ್ ಕುಮಾರ್ 3-0-21-0, ಆರ್.ಅಶ್ವಿನ್ 9-0-28-3, ಮನೋಜ್ ತಿವಾರಿ 5-0-28-1(ವೈಡ್-2), ರವೀಂದ್ರ ಜಡೇಜಾ 8-0-33-4, ವರುಣ್ ಆ್ಯರನ್ 3-0-19-1 (ವೈಡ್-1), ಸುರೇಶ್ ರೈನಾ 4-0-9-1 (ವೈಡ್-1).

ಫಲಿತಾಂಶ: ಭಾರತಕ್ಕೆ 95 ರನ್ ಜಯ ಹಾಗೂ ಸರಣಿಯಲ್ಲಿ 5-0 ಗೆಲುವು.
ಪಂದ್ಯ ಶ್ರೇಷ್ಠ: ರವೀಂದ್ರ ಜಡೇಜಾ.
ಸರಣಿ ಶ್ರೇಷ್ಠ: ಎಂ.ಎಸ್.ದೋನಿ.
ಟ್ವೆಂಟಿ-20 ಪಂದ್ಯ: ಅಕ್ಟೋಬರ್ 29 (ಕೋಲ್ಕತ್ತ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT