ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇಡು ತೀರಿಸಿಕೊಳ್ಳಲು ಭಾರತ ಸಜ್ಜು

Last Updated 18 ಫೆಬ್ರುವರಿ 2011, 18:40 IST
ಅಕ್ಷರ ಗಾತ್ರ

ಢಾಕಾ: ಹತ್ತನೇ ವಿಶ್ವ ಕಪ್ ಕ್ರಿಕೆಟ್ ಟೂರ್ನಿಯ ಅದ್ದೂರಿ ಆರಂಭೋತ್ಸವ ಮುಗಿದು, ಬ್ಯಾಟು-ಚೆಂಡಿನ ಸಮರಕ್ಕೆ ಕ್ಷಣಗಣನೆ ಆರಂಭವಾಗಿದೆ.  ಬಾಂಗ್ಲಾದೇಶ ಕೈಲಿ ನಾಲ್ಕು ವರ್ಷಗಳ ಹಿಂದೆ ತಿಂದಿದ್ದ ಪೆಟ್ಟಿನ ನೋವನ್ನು ನಿವಾರಿಸಲು ಭರ್ಜರಿ ಗೆಲುವೊಂದೇ ಮುಲಾಮು ಎಂದು ಭಾವಿಸಿರುವ ಭಾರತ ಸೇಡು ತೀರಿಸಿಕೊಳ್ಳಲು ಭಾರತ ಕಾಯುತ್ತಿದೆ. ಶನಿವಾರ ಮಧ್ಯಾಹ್ನ ಆರಂಭವಾಗುವ ಟೂರ್ನಿಯ ಮೊದಲ ಪಂದ್ಯ ಭಾರತಕ್ಕೇ ಹೆಚ್ಚು ಮಹತ್ವದ್ದಾಗಿದೆ.

ಶೇರ್-ಎ-ಬಾಂಗ್ಲಾ ಕ್ರೀಡಾಂಗಣದಲ್ಲಿ ಯಾರು ಹುಲಿಯಾಗುತ್ತಾರೆ ಯಾರು ಇಲಿಯಾಗುತ್ತಾರೆ ಎಂಬುದು ರಾತ್ರಿಯೇ ಗೊತ್ತಾಗುವುದಾದರೂ ಭಾರತ ಗೆಲುವಿನ ವಿಶ್ವಾಸದಿಂದಲೇ ಕಣಕ್ಕಿಳಿಯಲಿದೆ. ಯಾವ ಹಂತದಲ್ಲೂ ಭಾರತಕ್ಕೆ ಸರಿಸಾಟಿ ಎನಿಸದ ಬಾಂಗ್ಲಾದೇಶಕ್ಕೆ 2007ರ ವಿಶ್ವ ಕಪ್‌ನಲ್ಲಿ ಬಂದ ಐದು ವಿಕೆಟ್‌ಗಳ ಅನಿರೀಕ್ಷಿತ ಗೆಲುವು ಸ್ಫೂರ್ತಿಯ ವಿಷಯವೇ ಆದರೂ ಉಪಖಂಡದ ದೊಡ್ಡಣ್ಣನಿಗೆ ಸಿಟ್ಟು ಬಂದಿರುವುದೂ ಗೊತ್ತಿದೆ. ಸೋತರೂ ಕಳೆದುಕೊಳ್ಳುವುದೇನೂ ಇಲ್ಲವಾದ್ದರಿಂದ ಭಾರತಕ್ಕೆ ಸ್ವಲ್ಪಾದರೂ ಚುರುಕು ಮುಟ್ಟಿಸುವ ಗುರಿಯಂತೂ ತಂಡಕ್ಕೆ ಇದ್ದಂತಿದೆ. ಇಡೀ ದೇಶದ ಬೆಂಬಲವೇ ಅದರ ಮೊದಲ ಶಕ್ತಿ.

ಮಹೇಂದ್ರ ಸಿಂಗ್ ದೋನಿ ಅವರಿಗೂ ಹಾಗೂ ತಂಡದ ಎಲ್ಲ ಆಟಗಾರರಿಗೂ ತಮ್ಮ ಮೇಲಿರುವ ಜವಾಬ್ದಾರಿಯ ಅರಿವಿರುವಂತಿದೆ. ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಜನರ ನಿರೀಕ್ಷೆಗಳೇನು ಎಂಬುದೂ ಅವರಿಗೆ ಗೊತ್ತಿದೆ. ಗೆಲ್ಲಲೇಬೇಕಾದ ಒತ್ತಡ ತಂಡದ ಮೇಲಿದೆ. ಇಡೀ ಟೂರ್ನಿಯ ಯಶಸ್ಸು ಕೂಡ ಭಾರತ ತಂಡದ ಗೆಲುವನ್ನೇ ಅವಲಂಬಿಸಿದೆ.

ಶುಕ್ರವಾರ ಮಧ್ಯಾಹ್ನ ದೋನಿಪಡೆ ಉತ್ತಮ ಅಭ್ಯಾಸ ನಡೆಸಿತು. ಅಂತಿಮ ಹನ್ನೊಂದು ಮಂದಿಯ ಪಟ್ಟಿ ಆರಿಸುವುದು ದೋನಿಗೆ ಸುಲಭವೇನೂ ಅಲ್ಲ. ಪಿಚ್ ಹೇಗೆ ವರ್ತಿಸುವುದು ಎಂಬ ಬಗ್ಗೆ ಚರ್ಚೆ ನಡೆದ ಮೇಲೆಯೇ ಅವರು ಆಡುವವರನ್ನು ಆರಿಸಲಿ ದ್ದಾರೆ. ಏಳು ಮಂದಿ ಬ್ಯಾಟ್ಸಮನ್ನ ರನ್ನು ಇಟ್ಟುಕೊಂಡು ನಾಲ್ಕು ಮಂದಿ ಬೌಲರುಗಳು ಸಾಕು ಎಂಬ ಲೆಕ್ಕಾ ಚಾರ ಮೂಡಿಬಂದರೆ ಒಬ್ಬನೇ ಸ್ಪಿನ್ನರ್ ಕಣಕ್ಕಿಳಿಯುತ್ತಾನೆ.

ಅಭ್ಯಾಸ ಪಂದ್ಯಗಳಲ್ಲಿ ಲೆಗ್‌ಸ್ಪಿನ್ನರ್ ಪಿಯೂಶ್ ಚಾವ್ಲ ಉತ್ತಮ ಯಶಸ್ಸು ಗಳಿಸಿರುವುದರಿಂದ ಅವರನ್ನು ಆಡಿಸಬಹುದು. ಆದರೆ ಅದಕ್ಕೆ ಇಬ್ಬರೇ ಮಧ್ಯಮ ವೇಗದ ಬೌಲರುಗಳನ್ನು ಆರಿಸಬೇಕಾಗುವುದು.

ಭಾರತದ ಪ್ರಬಲ ಬ್ಯಾಟಿಂಗ್ ಶಕ್ತಿಯ ಅರಿವಿರುವ ಬಾಂಗ್ಲಾದೇಶ ಎದುರಾಳಿಗಳನ್ನು ಕಟ್ಟಿಹಾಕಲು ಮೂವರು ಸ್ಪಿನ್ನರುಗಳೊಂದಿಗೆ ಆಡಲಿದೆ. ಅದೇ ತಂಡದ ಶಕ್ತಿ.
ಎಡಗೈ ಸ್ಪಿನ್ನರ್ ಕೂಡ ಆಗಿರುವ ನಾಯಕ ಶಕೀಬ್ ಅಲ್ ಹಸನ್ ಜೊತೆ ಇನ್ನಿಬ್ಬರು ಎಡಗೈ ಸ್ಪಿನ್ನರುಗಳು ಆಡುವುದು ಖಚಿತ. ದೋನಿ ಇದನ್ನು ಗಮನದಲ್ಲಿಟ್ಟುಕೊಂಡು ಮಧ್ಯಮ ಕ್ರಮಾಂಕದಲ್ಲಿ ಎಡಗೈ ಬ್ಯಾಟ್ಸ್‌ಮನ್ ಆಗಿರುವ ಯುವರಾಜ್ ಸಿಂಗ್ ಮತ್ತು ಸುರೇಶ್ ರೈನಾ ಅವರನ್ನು ಆರಿಸುವ ಸಾಧ್ಯತೆಯೂ ಇದೆ.

ಅಭ್ಯಾಸ ಪಂದ್ಯಗಳಲ್ಲಿ ಆಡದ ಜಹೀರ್ ಖಾನ್ ಜ್ವರದಿಂದ ಚೇತರಿಸಿಕೊಂಡಿದ್ದಾರೆ. ಸಚಿನ್ ತೆಂಡೂಲ್ಕರ್ ಕೂಡ ಆಡಲು ಅರ್ಹರಾಗಿದ್ದಾರೆ. ಆರನೇ ಹಾಗೂ ಕೊನೆಯ ವಿಶ್ವ ಕಪ್ ಆಡುತ್ತಿರುವ ಸಚಿನ್ ತೆಂಡೂಲ್ಕರ್ ಮತ್ತೊಂದು ಶತಕ ಹೊಡೆಯುವ ನಿರೀಕ್ಷೆಯಲ್ಲಿ ಭಾರತೀಯರಿದ್ದಾರೆ. ಟೆಸ್ಟ್‌ಗಳಲ್ಲಿ 50 ಶತಕಗಳನ್ನು ಗಳಿಸಿರುವ ಸಚಿನ್ 444 ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 46 ಶತಕಗಳನ್ನು ಹೊಡೆದಿದ್ದಾರೆ.
ಅಂದರೆ ಟೆಸ್ಟ್ ಮತ್ತು ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳೆರಡೂ ಸೇರಿ ನೂರು ಶತಕಗಳ ಅಮೋಘ ದಾಖಲೆಯನ್ನು ಬರೆಯಲು ಅವರಿಗೆ ಕೇವಲ ನಾಲ್ಕು ಶತಕಗಳು ಬೇಕು.
ಸಚಿನ್, ದೋನಿ, ಸೆಹ್ವಾಗ್, ಜಹೀರ್, ಯುವರಾಜ್, ಹರಭಜನ್, ನೆಹ್ರಾ ಅವರನ್ನು ಬಿಟ್ಟರೆ ಉಳಿದ ಆಟಗಾರರಿಗೆಲ್ಲ ಇದು ಮೊದಲ ವಿಶ್ವ ಕಪ್ ಟೂರ್ನಿ. ಗೌತಮ್ ಗಂಭೀರ್, ಸುರೇಶ್ ರೈನಾ, ವಿರಾಟ್ ಕೊಹ್ಲಿ, ಶ್ರೀಶಾಂತ್, ಮುನಾಫ್ ಪಟೇಲ್, ಆರ್. ಅಶ್ವಿನ್, ಯೂಸುಫ್ ಪಠಾಣ್ ಮತ್ತು ಪಿಯೂಶ್ ಚಾವ್ಲ ಅವರ ಭವಿಷ್ಯ ರೂಪಿಸುವ ಟೂರ್ನಿ ಇದಾಗಬಹುದು.
ಬಾಂಗ್ಲಾದೇಶ ತಂಡ ಕೆಲವು ತಿಂಗಳುಗಳ ಹಿಂದೆ ನ್ಯೂಜಿಲೆಂಡ್ ಮತ್ತು ಜಿಂಬಾಬ್ವೆ ವಿರುದ್ಧ ಆಡಿದ ಒಂದು ದಿನದ ಪಂದ್ಯಗಳ ಸರಣಿಗಳನ್ನು ಗೆದ್ದುಕೊಂಡಿದ್ದು ಅದರ ವಿಶ್ವಾಸವನ್ನು ಹೆಚ್ಚಿಸಿದೆಯಾದರೂ, ಭಾರತ ಗಾಯಗೊಂಡ ಹುಲಿಯಂತೆ ಆಕ್ರಮಣ ಮಾಡುವ ನಿರೀಕ್ಷೆಯಲ್ಲಿದೆ. ಆದರೆ ಕ್ರಿಕೆಟ್‌ನಲ್ಲಿ ಕೊನೆಯ ಎಸೆತದ ವರೆಗೂ ಏನೂ ಹೇಳಲಾಗುವುದಿಲ್ಲ ಎಂಬ ಮಾತಿನಂತೆ ಓವರುಗಳು ಉರುಳಿದಂತೆಯೇ ಪಂದ್ಯದ ಗತಿ ಗೊತ್ತಾಗುವುದು.
ಭಾರತ ವಿರುದ್ಧ ಇದುವರೆಗೆ ಆಡಿರುವ 22 ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಬಾಂಗ್ಲಾದೇಶ ಎರಡು ಸಲ ಮಾತ್ರ ಜಯ ಗಳಿಸಿದೆ.
ಅದರಲ್ಲಿ 2007 ರ ವಿಶ್ವ ಕಪ್ ಗೆಲುವು ಕೂಡ ಒಂದು. ಹಾಗೆಯೇ 1999 ರ ವಿಶ್ವ ಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಬಂದ ಅನಿರೀಕ್ಷಿತ ಗೆಲುವು ಕೂಡ ಅದರ ದೊಡ್ಡ ಸಾಧನೆಗಳಲ್ಲೊಂದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT