ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇತುವೆ ಯಾವಾಗ ಕಟ್ಟಿಸ್ತೀರಾ..?

ನಡುಗಡ್ಡೆಯಂತಾದ ನಾಪೋಕ್ಲು ವ್ಯಾಪ್ತಿಯ ಗ್ರಾಮಗಳು
Last Updated 17 ಜುಲೈ 2013, 6:44 IST
ಅಕ್ಷರ ಗಾತ್ರ

ನಾಪೋಕ್ಲು: ಈ ಗ್ರಾಮಗಳ ಮಂದಿಗೆ ಮಳೆಗಾಲ ಬಂತೆಂದರೆ ನಡುಕ ಆರಂಭವಾಗುತ್ತದೆ. ಮಳೆ ಯಿಂದಾಗಿ ತಣ್ಣನೆಯ ವಾತಾವರಣಕ್ಕೆ ಉಂಟಾಗುವ ಆಹ್ಲಾದಕರ ನಡುಕವಲ್ಲ ಅದು. ಜೀವ ಕೈಯಲ್ಲಿ ಹಿಡಿದುಕೊಳ್ಳುವಂಥ ಭಯದ ನಡುಕ!

ಭಾಗಮಂಡಲ, ತಲಕಾವೇರಿ ವ್ಯಾಪ್ತಿಯ ಗ್ರಾಮಗಳಲ್ಲಿ ರಭಸದ ಮಳೆಯಾದರೆ, ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಂಡ್ರಹೊಳೆಗೆ ನಿರ್ಮಿಸಲಾದ ಸೇತುವೆ ಮುಳುಗುತ್ತದೆ. ಇದರಿಂದ ನಾಪೋಕ್ಲು- ಭಾಗಮಂಡಲ ನಡುವಿನ ಸಂಪರ್ಕ ಕಡಿದುಹೋಗುತ್ತದೆ.

ಇತ್ತ ನಾಪೋಕ್ಲು ಪಟ್ಟಣಕ್ಕೆ ತೆರಳುವಂತಿಲ್ಲ; ಅತ್ತ ಭಾಗಮಂಡಲಕ್ಕೂ ಹೋಗುವಂತಿಲ್ಲ. ಸಣ್ಣಪುಲಿಕೋಟು, ದೊಡ್ಡ ಪುಲಿಕೋಟು, ಅಯ್ಯಂಗೇರಿ, ಕೋರಂಗಾಲ ಮತ್ತು ಪೇರೂರು ಗ್ರಾಮಗಳ ಮಂದಿಗೆ ದ್ವೀಪದಲ್ಲಿ ವಾಸ ಮಾಡಿದಂತಾಗುತ್ತದೆ.

ಈ ವರ್ಷದ ಮಳೆಗಾಲದಲ್ಲಿ ಹಲವು ಬಾರಿ ತಂಡ್ರಹೊಳೆಯ ಸೇತುವೆ ಮುಳುಗಡೆಯಾಗಿ ಗ್ರಾಮಸ್ಥರು ಸಂಕಷ್ಟ ಅನುಭವಿಸಿದ್ದಾರೆ.

ಗ್ರಾಮಸ್ಥರೇ ಕಟ್ಟಿದ ಸೇತುವೆ
1986ರಲ್ಲಿ ಪಂದೇಟ್‌ಕಡವು ಕಿರು ಸೇತುವೆ ನಿರ್ಮಾಣಗೊಂಡಿದೆ. ಈ ಕಿರು ಸೇತುವೆ ಕೊಚ್ಚಿಹೋಗಿದ್ದರಿಂದ ಮಳೆಗಾಲದ ಆರಂಭದಲ್ಲಿ ಗ್ರಾಮಸ್ಥರು ಬಿದಿರಿನ ತಾತ್ಕಾಲಿಕ ಸೇತುವೆ ನಿರ್ಮಿಸಿದ್ದಾರೆ. 80 ಅಡಿ ಉದ್ದದ ಬಿದಿರಿನ ಸೇತುವೆ ಜೊತೆಗೆ 22 ಅಡಿ ಉದ್ದದ ಕಿರುಪಾಲವನ್ನು ಗ್ರಾಮಸ್ಥರು ನಿರ್ಮಿಸಿದ್ದಾರೆ.

ಈ ತಾತ್ಕಾಲಿಕ ಸೇತುವೆ ನಿರ್ಮಾಣದಿಂದಾಗಿ ಮಚ್ಚುರ, ಮಣವಟ್ಟೀರ, ತೆಕ್ಕಡ, ಕೋಡಿಯಂಡ, ಸೇರಿದಂತೆ ಪಂದೇಟ್ ಕಾಲೊನಿಯ ಮಂದಿಗೆ ಪ್ರಯೋಜನವಾಗಿದೆ. ಕೇವಲ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವುದು ಮಾತ್ರವಲ್ಲ; ಇಲ್ಲಿನ ರೈತರು ತೋಟಗಳಿಗೆ ಹಾಗೂ ಗದ್ದೆಗಳಿಗೆ ತೆರಳಲು ಈ ಬಿದಿರಿನ ಸೇತುವೆಯೇ ಆಧಾರ.

`ಸೇತುವೆ ಯಾವಾಗ ಕಟ್ಟಸ್ತೀರಾ ಸ್ವಾಮಿ..' ಎನ್ನುವ ಗ್ರಾಮಸ್ಥರ ಕೂಗು ಜನಪ್ರತಿನಿಧಿಗಳಿಗೆ ಇನ್ನೂ ಕೇಳಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT