ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇತುವೆಯಿಂದ ಬಿದ್ದು ಇಬ್ಬರ ಸಾವು

Last Updated 17 ಜೂನ್ 2011, 19:30 IST
ಅಕ್ಷರ ಗಾತ್ರ

ರಾಮನಗರ: ಅವ್ವೇರಹಳ್ಳಿಯ ರೇವಣಸಿದ್ದೇಶ್ವರ ಬೆಟ್ಟದಲ್ಲಿ ಮದುವೆಗೆ ಹೋಗಿದ್ದ ಬೆಂಗಳೂರಿನ ಸುನೀಲ್ (22) ಮತ್ತು ಎಸ್. ಸುನೀಲ್(19) ಎಂಬುವರು ಮೊಟ್ಟೆ ದೊಡ್ಡಿ ಬಳಿಯ ಸೇತುವೆಯಿಂದ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ.

ಸೇತುವೆ ಬಳಿ ಆಕಸ್ಮಿಕವಾಗಿ ಅಪಘಾತ ಸಂಭವಿಸಿದ್ದರಿಂದ ಈ ಇಬ್ಬರು ಯುವಕರು ಸ್ಕೂಟರ್ ಸಮೇತ ಪ್ರಪಾತಕ್ಕೆ ಬಿದ್ದು ಕೊನೆಯುಸಿರು ಎಳೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜೂನ್ 12 ಮತ್ತು 13ರಂದು ರೇವಣಸಿದ್ದೇಶ್ವರ ಬೆಟ್ಟದಲ್ಲಿ ಈ ಇಬ್ಬರು ಮದುವೆಗೆ ಹೋಗಿದ್ದರು. ಸೋಮವಾರ ಮಧ್ಯರಾತ್ರಿ ಸುಮಾರು 1.30 ಸಮಯದಲ್ಲಿ ರಾಮನಗರ ಮಾರ್ಗವಾಗಿ ಬರುವಾಗ ಈ ದುರ್ಘಟನೆ ನಡೆದಿದೆ. ಆದರೆ ಅದು ಬೆಳಕಿಗೆ ಬಂದಿರುವುದು ಶುಕ್ರವಾರ.

ಭಾನುವಾರ ಮಧ್ಯರಾತ್ರಿ ಸಂಬಂಧಿಕರು ಮತ್ತು ಸ್ನೇಹಿತರು ಕಾರಿನಲ್ಲಿ ಹಾಗೂ ಈ ಇಬ್ಬರು ಯುವಕರು ಸ್ಕೂಟರ್‌ನಲ್ಲಿ ರಾಮನಗರ ಮಾರ್ಗವಾಗಿ ಬರುತ್ತಿದ್ದರು. ಕಾರನ್ನು ಹಿಂಬಾಲಿಸಿಕೊಂಡು ಸ್ಕೂಟರ್‌ನಲ್ಲಿ ಯುವಕರು ಬರುತ್ತಿದ್ದರು. ಆದರೆ ಕಾರು ರಾಮನಗರದ ಆರ್ಚ್ ಬಳಿ ಬಂದರೂ, ಸ್ಕೂಟರ್ ಮಾತ್ರ ಬರಲಿಲ್ಲ. ಪುನಃ ವಾಪಸು ಹೋಗಿ ನೋಡಿದರೂ ಈ ಯುವಕರು ಪತ್ತೆಯಾಗಲಿಲ್ಲ.

ಇದರಿಂದ ಗಾಬರಿಗೊಂಡ ಸುನೀಲ್‌ನ ತಂದೆ ಕುಮಾರ್ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಯುವಕರು ಕಾಣೆಯಾಗಿದ್ದಾರೆ ಎಂದು ದೂರು ದಾಖಲಿಸಿದರು.

ಈ ಭಾಗದಲ್ಲಿ ಸಂಚರಿಸುತ್ತಿದ್ದವರಿಗೆ ಶುಕ್ರವಾರ ಬೆಳಿಗ್ಗೆಯಿಂದ ಶವದ ವಾಸನೆ ರಾಚಿದೆ. ಈ ಸಂಬಂಧ ಕೆಲವರು ಸೇತುವೆಯ ಕೆಳಗೆ ಹೋಗಿ ನೋಡಿದ್ದಾರೆ. ಅ್ಲ್ಲಲಿ ಮೋಟಾರ್ ಸ್ಕೂಟರ್ ಮತ್ತು ಇಬ್ಬರು ಯುವಕರ ಶವ ಇರುವುದು ಪತ್ತೆಯಾಗಿದೆ. ಕೂಡಲೇ ಸಾರ್ವಜನಿಕರು ಈ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾರೆ.

ಕಂಠಕವಾದ ಎರಡು ಸೇತುವೆ: ಮೊಟ್ಟೆ ದೊಡ್ಡಿ ಬಳಿ ಇದ್ದ ಹಳೆ ಸೇತುವೆ ಚಿಕ್ಕದಾಗಿದ್ದ ಕಾರಣ ಅದಕ್ಕಿಂತ ದೊಡ್ಡದಾದ ಸೇತುವೆಯನ್ನು ನಿರ್ಮಿಸಲಾಗಿದೆ. ಹೊಸ ಸೇತುವೆ ನಿರ್ಮಾಣವಾದರೂ ಹಳೆ ಸೇತುವೆಯನ್ನು ಹಾಗೆ ಉಳಿಸಿಕೊಳ್ಳಲಾಗಿದೆ. ಇದರಿಂದ ಸೇತುವೆ ಮೇಲೆ ಎರಡೂ ಬದಿಯಲ್ಲಿ ವಾಹನಗಳ ಏಕ ಪಥ ಸಂಚಾರಕ್ಕೆ ಅನುಕೂಲವಾಗಿತ್ತು. ಆದರೆ ಎರಡೂ ಸೇತುವೆಗಳ ನಡುವೆ ಇದ್ದ ಕಂದಕದಿಂದಾಗಿ ಈ ದುರ್ಘಟನೆ ನಡೆದಿದ್ದು, ಇಬ್ಬರ ಸಾವಿಗೆ ಕಾರಣವಾಗಿದೆ.

ಎರಡು ಸೇತುವೆಗಳ ನಡುವೆ ಸುಮಾರು ಏಳು ಅಡಿ ಅಂತರದ ಕಂದಕ ಇದೆ. ಇಲ್ಲಿ ಗಿಡ ಗಂಟೆಗಳು ಬೆಳೆದಿದ್ದು, ಕಂದಕ ಇರುವ ಕುರಿತು ತಿಳಿಯುವುದಿಲ್ಲವಾಗಿದೆ. ಇದೇ ರಸ್ತೆಯ್ಲ್ಲಲಿ ನಿತ್ಯ ಸಂಚರಿಸುವವರಿಂದ ಈ ಕಂದಕದ ಬಗ್ಗೆ ತಿಳಿದಿದೆ. ಆದರೆ ಹೊರ ಭಾಗದಿಂದ ಬರುವವರಿಗೆ ಇಲ್ಲಿ ಕಂದಕ ಇರುವುದು ಗೊತ್ತಿಲ್ಲ. ಅಲ್ಲದೆ ರಾತ್ರಿ ಸಂಚರಿಸುವವರಿಗೆ ಬೆಳಕಿನ ಕೊರತೆಯಿಂದ ಎರಡು ಸೇತುವೆ ಇರುವುದು ಸ್ಪಷ್ಟವಾಗಿ ಗೋಚರಿಸುವುದಿಲ್ಲ. ಹೀಗಾಗಿ ಈ ದುರಂತ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಈ ಮೋಟಾರ್ ಸವಾರರು ವೇಗವಾಗಿ ಬಂದು, ಸೇತುವೆ ಬಳಿಯ ವಿಭಜಕಕ್ಕೆ ಗುದ್ದಿ, ನಿಯಂತ್ರಣ ಕಳೆದುಕೊಂಡು 20 ಅಡಿ ಆಳದ ಪ್ರಪಾತಕ್ಕೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಶಾಸಕ ಕೆ.ರಾಜು ಅವರು ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ಗೆ ಕರೆ ಮಾಡಿ, ಕೂಡಲೇ ಎರಡು ಸೇತುವೆಗಳ ನಡುವಿನ ಕಂದಕ ಮುಚ್ಚಲು ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT