ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇನಾ ದಾಳಿಗೆ ಹಿಂಜರಿಯುವುದಿಲ್ಲ: ಒಬಾಮ

Last Updated 14 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ವಾಷಿಂಗ್ಟನ್‌ (ಪಿಟಿಐ): ‘ಸಿರಿಯಾದಲ್ಲಿನ ಬಿಕ್ಕಟ್ಟು ಪರಿಹರಿಸಲು ಜಿನಿವಾದಲ್ಲಿ ನಡೆಯುತ್ತಿರುವ ಸಂಧಾನ ಮಾತುಕತೆ ನಿರೀಕ್ಷಿತ ಫಲಿತಾಂಶ ನೀಡದಿದ್ದರೆ, ಆ ದೇಶದ ಮೇಲೆ ಸೇನಾ ಕಾರ್ಯಾಚರಣೆ ವಿಷಯವನ್ನು ನಾವು ಇನ್ನೂ ಕೈಬಿಟ್ಟಿಲ್ಲ’ ಎಂದು ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮ ಹೇಳಿದ್ದಾರೆ.

‘ವಿದೇಶಾಂಗ ಕಾರ್ಯಾದರ್ಶಿ ಜಾನ್‌ ಕೆರಿ ಮತ್ತು ರಷ್ಯಾ ವಿದೇಶಾಂಗ ಸಚಿವ ಸರ್ಗೆ ಲಾವೋರ್‌ ನಡುವೆ ಸಹಮತ ವ್ಯಕ್ತವಾಗಿದೆ
ಎನ್ನುವ ಅಂಶ ನಮ್ಮ ಗಮನಕ್ಕೆ ಬಂದಿದೆ.ಆದರೆ ಸಿರಿಯಾದಲ್ಲಿ ನಡೆದಿರುವುದು ಅತ್ಯಂತ ಘೋರ ಅಪರಾಧ. ನಮ್ಮ ಕಾರ್ಯತಂತ್ರ ಇಷ್ಟಕ್ಕೆ ನಿಲ್ಲುವುದಿಲ್ಲ’ ಎಂದು ಒಬಾಮ ಹೇಳಿದ್ದಾರೆ.

‘ಮಾತುಕತೆ ಯಶಸ್ವಿಯಾಗಿರಬಹುದು. ಆದರೆ ರಾಸಾಯನಿಕ ಅಸ್ತ್ರಗಳ ನಾಶ ವಿಷಯದಲ್ಲಿ ನಾವು ರಷ್ಯಾ ಅಥವಾ ಸಿರಿಯಾದ ವಾಗ್ದಾನದಲ್ಲಿ ನಂಬಿಕೆ ಇಡುವಂತಿಲ್ಲ’ ಎಂದರು. ‘ಇಂತಹ ಒಂದು ಒಪ್ಪಂದ ಏರ್ಪಡಲು ಸಿರಿಯಾ ಮೇಲೆ ಅಮೆರಿಕ ಮಿಲಿಟರಿ ಕಾರ್ಯಾಚರಣೆ ಮಾಡುವ ಬೆದರಿಕೆ ಹಾಕಿದ್ದರಿಂದಲೇ ಸಾಧ್ಯ ವಾಗಿದೆ. ರಾಜತಾಂತ್ರಿಕ ಮಾರ್ಗಗಳು ವಿಫಲವಾದರೆ ಅಮೆರಿಕ ಮತ್ತು ಅಂತರರಾಷ್ಟ್ರೀಯ ಸಮುದಾಯ ಸೇನಾ  ಕಾರ್ಯಾಚರಣೆಗೆ ಮುಂದಾಗ ಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ರಾಸಾಯನಿಕ ಅಸ್ತ್ರ ಬಳಕೆ ಹೇಯ ಕೃತ್ಯ: ತನ್ನ ನಾಗರಿಕರ ವಿರುದ್ಧವೇ ಸಿರಿಯಾ ಅಧ್ಯಕ್ಷ ಬಷರ್‌ ಅಲ್‌ ಅಸ್ಸಾದ್‌ ರಾಸಾಯನಿಕ ಅಸ್ತ್ರ ಬಳಸಿರುವುದು ಹೇಯ ಕೃತ್ಯ ಎಂದು ಒಬಾಮ ಬಣ್ಣಿಸಿದ್ದಾರೆ. ಇಂತಹ ಕೃತ್ಯಗಳನ್ನು ವಿರುದ್ಧ ಅಂತರರಾಷ್ಟ್ರೀಯ ಸಮುದಾಯ ಖಂಡಿಸಬೇಕಲ್ಲದೆ, ತೀಕ್ಷ್ಣವಾಗಿ ಪ್ರತಿಕ್ರಿಯಿಸಬೇಕಾಗಿದೆ ಎಂದು ಕುವೈತ್‌ನ ರಾಜ ಅಮೀರ್‌ ಅಲ್‌ ಸಭಾ ಅವರೊಂದಿಗೆ ಶುಕ್ರವಾರ ನಡೆಸಿದ ದ್ವಿಪಕ್ಷೀಯ ಮಾತುಕತೆ ವೇಳೆ ಒಬಾಮ ಈ ರೀತಿ ಅಭಿಪ್ರಾಯಪಟ್ಟಿದ್ದಾರೆ.

ಪದೇ ಪದೇ ಸಿರಿಯಾ ಆಡಳಿತ ರಾಸಾಯನಿಕ ಅಸ್ತ್ರಗಳನ್ನು ಬಳಸುವುದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಅಂತಹ ಅಸ್ತ್ರಗಳನ್ನು ಸಿರಿಯಾದಿಂದ ಸಂಪೂಣರ್ವಾಗಿ ನಾಶ ಮಾಡ ಬೇಕು ಎನ್ನುವ ಬಗ್ಗೆ ಚಿಂತನೆ ನಡೆಸಿರುವುದಾಗಿ ಅವರು ತಿಳಿಸಿದರು.
ವಿದೇಶಾಂಗ ಕಾರ್ಯದರ್ಶಿ ಜಾನ್‌ ಕೆರಿ ಮತ್ತು ರಷ್ಯಾದ ವಿದೇಶಾಂಗ ಸಚಿವ ಸರ್ಗೆ ಲಾವೋರ್‌ ಅವರು ಈ ನಿಟ್ಟಿನಲ್ಲಿ ಜಿನಿವಾದಲ್ಲಿ ನಡೆಸುತ್ತಿರುವ ಮಾತುಕತೆ ಫಲಪ್ರದವಾಗುವುದು ಎಂಬ ಆಶಾ ಭಾವನೆ ಹೊಂದಿರುವುದಾಗಿ ಹೇಳಿದರು.

ವಿಶ್ವಸಂಸ್ಥೆ ವರದಿ(ಎಪಿ): ಸಿರಿಯಾದಲ್ಲಿ ರಾಸಾಯನಿಕ ಅಸ್ತ್ರಗಳನ್ನು ಬಳಸಲಾಗಿದೆಯೇ ಎನ್ನುವ ಕುರಿತು ವಿಶ್ವಸಂಸ್ಥೆ ವೀಕ್ಷಕರು ನಡೆಸಿರುವ ತಪಾಸಣಾ ವರದಿಯಲ್ಲಿ ಇಂತಹ ಅಸ್ತ್ರಗಳನ್ನು ಬಳಸಲಾಗಿದೆ ಎನ್ನುವ ಅಂಶ ಇದೆ ಎಂದು ವಿಶ್ವಸಂಸ್ಥೆ ಮಹಾಪ್ರಧಾನ ಕಾರ್ಯದರ್ಶಿ ಬಾನ್‌ ಕಿ ಮೂನ್‌ ಬಹಿರಂಗಪಡಿಸಿದ್ದಾರೆ. ಆದರೆ ಸಿರಿಯಾ ಆಡಳಿತವೇ ತನ್ನ ನಾಗರಿಕರ ವಿರುದ್ಧ ಈ ಅಸ್ತ್ರಗ ಳನ್ನು ಬಳಸಿ ದೆಯೇ ಅಥವಾ ಬಂಡುಕೋರರು ಬಳಸಿದ್ದಾರೆಯೇ ಎನ್ನುವ ಬಗ್ಗೆ ಅವರು ಮಾಹಿತಿ ನೀಡಲಿಲ್ಲ.

‘ರಷ್ಯಾ ತಕರಾರು’
ವಾಷಿಂಗ್ಟನ್‌ (ಎಎಫ್‌ಪಿ): ಸಿರಿಯಾ ವಿರುದ್ಧ ಮಿಲಿಟರಿ ಕಾರ್ಯಾಚರಣೆ ನಡೆಸಲು ವಿಶ್ವಸಂಸ್ಥೆ ಭದ್ರತಾ ಮಂಡಳಿ ಅನುಮತಿ ಬೇಕಿದ್ದು, ಆದರೆ ರಷ್ಯಾ ಅದಕ್ಕೆ ಅವಕಾಶ ನೀಡುವ ಸಾಧ್ಯತೆ ಕಡಿಮೆ ಎಂದು  ಶ್ವೇತಭವನದ ಅಧಿಕಾರಿಗಳು ತಿಳಿಸಿದ್ದಾರೆ.

ವಿಶ್ವಸಂಸ್ಥೆಯ ವೀಕ್ಷಕರು ನಡೆಸಿರುವ ತನಿಖೆಯಿಂದ ಸಿರಿಯಾ ಅಧ್ಯಕ್ಷ ಬಷಾರ್‌ ಅಲ್‌ ಅಸ್ಸಾದ್‌ ತನ್ನ ನಾಗರಿಕರ ವಿರುದ್ಧವೇ ರಾಸಾಯನಿಕ ಅಸ್ತ್ರಗಳನ್ನು ಬಳಸಿರುವುದು ದೃಢಪಟ್ಟಿದೆ ಎಂದು ಹೇಳಿದ್ದಾರೆ. ಇದು ಸಿರಿಯಾದ  ಬಂಡುಕೋರರು ರಾಸಾಯನಿಕ ಅಸ್ತ್ರಗಳನ್ನು ಬಳಸಿದ್ದಾರೆ ಎಂಬ ರಷ್ಯಾದ ವಾದವನ್ನು ದುಬರ್ಲಗೊಳಿಸಿದೆ ಎಂದು ತಿಳಿಸಿದ್ದಾರೆ.

ಭಾರತದ ಸಹಮತವಿಲ್ಲ: ಸಿರಿಯಾ ವಿರುದ್ಧದ ಮಿಲಿಟರಿ ಕಾರ್ಯಾರ್ಚರಣೆಗೆ ಅಸಮ್ಮತಿ ಸೂಚಿಸಿರುವ ಭಾರತ, ವಿಶ್ವಸಂಸ್ಥೆ ಭದ್ರತಾ ಮಂಡಳಿ ಅನುಮತಿ ಇಲ್ಲದೆ ತೃತೀಯ ಜಗತ್ತಿನ ರಾಷ್ಟ್ರಗಳ ಮೇಲೆ ಮಿಲಿಟರಿ ಕಾರ್ಯಾಚರಣೆ ನಡೆಸಬಾರದು ಎಂದು ಹೇಳಿರುವುದಾಗಿ ಅಮೆರಿಕ ಒಪ್ಪಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT