ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇನಾ ಮುಖ್ಯಸ್ಥ ವಿ.ಕೆ.ಸಿಂಗ್ ಜನ್ಮ ದಿನಾಂಕ ವಿವಾದ: ಆದೇಶ ವಾಪಸು

Last Updated 3 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ತಮ್ಮ ಜನ್ಮ ದಿನಾಂಕ ಕುರಿತಂತೆ ಸೇನಾ ಮುಖ್ಯಸ್ಥ ವಿ.ಕೆ.ಸಿಂಗ್ ಸಲ್ಲಿಸಿದ್ದ ಕಾನೂನುಬದ್ಧ ಮನವಿಯನ್ನು ತಿರಸ್ಕರಿಸಿದ್ದ ಸರ್ಕಾರದ ಡಿ.30ರ ಆದೇಶ ದೋಷಪೂರ್ಣ ಎಂದು ಅಭಿಪ್ರಾಯಪಟ್ಟಿರುವ ಸುಪ್ರೀಂಕೋರ್ಟ್, ಈ ಆದೇಶವನ್ನು ಹಿಂಪಡೆಯಲು ಒಂದು ವಾರದ ಕಾಲಾವಕಾಶ ನೀಡಿದೆ.

ಇದೊಂದು ದೋಷಪೂರ್ಣ ನಿರ್ಧಾರವಾಗಿದ್ದು ಸಹಜ ನ್ಯಾಯ ತತ್ವಕ್ಕೆ ವಿರುದ್ಧವಾಗಿದೆ ಎಂದು ನ್ಯಾಯಮೂರ್ತಿಗಳಾದ ಆರ್.ಎಂ. ಲೋಧಾ ಮತ್ತು ಎಚ್.ಎಲ್. ಗೋಖಲೆ ಅವರ ನ್ಯಾಯಪೀಠ ಹೇಳಿದ್ದು, ಸರ್ಕಾರದ ವಿರುದ್ಧ ಸಮರದ ಮೊದಲ ಹಂತದಲ್ಲಿ ಸಿಂಗ್ ಮೇಲುಗೈ ಸಾಧಿಸಿದಂತಾಗಿದೆ. ಇದೇ ವೇಳೆ ಕೋರ್ಟ್ ಮುಂದಿನ ವಿಚಾರಣೆಯನ್ನು ಫೆ.10ಕ್ಕೆ ನಿಗದಿ ಮಾಡಿದೆ.

ರಕ್ಷಣಾ ಸಚಿವಾಲಯವು ಜುಲೈ 21ರಂದು ಹೊರಡಿಸಿದ ಆದೇಶದ ವಿರುದ್ಧ ಸಿಂಗ್ ಸಲ್ಲಿಸಿರುವ ದೂರನ್ನು  ಮರುಪರಿಶೀಲಿಸಲು ಅವಕಾಶವಿದೆ ಎಂದ ನ್ಯಾಯಾಲಯ, ಈ ಪ್ರಕರಣಕ್ಕೆ ಏಕೆ ಅಂತ್ಯ ಹಾಡಬಾರದು ಎಂದೂ ಕೇಳಿದೆ.

ತಮ್ಮ ಜನ್ಮ ದಿನಾಂಕವನ್ನು ಮೇ 10,1950ರ ಬದಲಾಗಿ ಮೇ 10, 1951 ಎಂದು ಪರಿಗಣಿಸಲು ಕೋರಿ ವಿ.ಕೆ.ಸಿಂಗ್ ಸರ್ಕಾರಕ್ಕೆ ಮನವಿ ಮಾಡಿದ್ದರು. ಆದರೆ ರಕ್ಷಣಾ ಸಚಿವ ಎ.ಕೆ.ಆಂಟನಿ ಈ ಅರ್ಜಿಯನ್ನು ಡಿ.30ರಂದು ವಜಾಗೊಳಿಸಿ ಆದೇಶ ಹೊರಡಿಸಿದ್ದರು.

ಸರ್ಕಾರಕ್ಕೆ ಮನವಿ ಸಲ್ಲಿಸುವ ಮುನ್ನ ಸಿಂಗ್ ತಮ್ಮ ಹುಟ್ಟಿದ ದಿನಾಂಕವನ್ನು ಮೇ 10, 1951 ಎಂದು ಪರಿಗಣಿಸಬೇಕೆಂದು ರಕ್ಷಣಾ ಸಚಿವಾಲಯವನ್ನು  ಕೋರಿದ್ದರು. ಆಗ ರಕ್ಷಣಾ ಸಚಿವಾಲಯವು ಅಟಾರ್ನಿ ಜನರಲ್ ಅಭಿಪ್ರಾಯವನ್ನು ಆಧರಿಸಿ ಸಿಂಗ್ ಜನ್ಮದಿನಾಂಕ ಮೇ 10, 1950 ಎಂದು ಜುಲೈ 21ರಂದು ಆದೇಶ ಹೊರಡಿಸಿತ್ತು.

ಈಗ ಸರ್ಕಾರವು ಸಿಂಗ್ ಅವರ ಅರ್ಜಿ ಡಿ.30ರಂದು ವಜಾ ಮಾಡಿರುವುದಕ್ಕೂ ಅಟಾರ್ನಿ ಜನರಲ್ ಅಭಿಪ್ರಾಯವೇ ಕಾರಣವಾಗಿದೆ. ಹೀಗೆ ಎರಡೆರಡು ಬಾರಿ ಅದೇ ವ್ಯಕ್ತಿಯ ಅಭಿಪ್ರಾಯ ಆಧರಿಸಿ ನಿರ್ಧಾರಕ್ಕೆ ಬರುವುದು ಎಷ್ಟು ಸರಿ ಎಂದು ಪೀಠ ಕೇಳಿತು.

ತಾನು ಡಿ.30ರಂದು ಹೊರಡಿಸಿರುವ ಆದೇಶ ವಾಪಸು ಪಡೆಯಬೇಕೆಂಬ ಯೋಚನೆ ಏನಾದರೂ ಸರ್ಕಾರಕ್ಕೆ ಇದೆಯೇ ಎಂದು ನ್ಯಾಯಮೂರ್ತಿಗಳು  ಕೇಳಿದಾಗ, ಅಟಾರ್ನಿ ಜನರಲ್ ಜಿ.ಇ.ವಹನ್ವತಿ ಈ ಕುರಿತು ಸರ್ಕಾರದ ಸಲಹೆ ಕೇಳುವುದಾಗಿ ತಿಳಿಸಿದರು.

ಸರ್ಕಾರ ಡಿ.30ರ ಆದೇಶವನ್ನು ವಾಪಸು ಪಡೆದರೆ ಸಿಂಗ್ ಅವರಿಗೆ ಪರ್ಯಾಯ ಪರಿಹಾರ ಮಾರ್ಗಗಳು ಇವೆ.  ಸಿಂಗ್ ಅವರಿಗೆ ಈ ನಿಟ್ಟಿನಲ್ಲಿ ಸಶಸ್ತ್ರ ಪಡೆಗಳ ನ್ಯಾಯಮಂಡಲಿಗೆ ಅರ್ಜಿ ಸಲ್ಲಿಸಲು ಕೂಡ ಅವಕಾಶವಿದ್ದರೂ ಈಗ ಅವರ ನಿವೃತ್ತಿಗೆ ನಾಲ್ಕು ತಿಂಗಳು ಮಾತ್ರ ಬಾಕಿ ಇರುವುದರಿಂದ ಅದು ಅಷ್ಟು ಉಚಿತವಲ್ಲ ಎಂದು ಪೀಠ ಅಭಿಪ್ರಾಯಪಟ್ಟಿತು.

`ಸರ್ಕಾರದ ನಿರ್ಧಾರ ಏನು ಎಂಬುದಕ್ಕಿಂತ ಆ ನಿರ್ಧಾರ ಹೊರ ಹೊಮ್ಮಿದ ಪ್ರಕ್ರಿಯೆಯ ಬಗ್ಗೆ ನಾವು ಹೆಚ್ಚು ಚಿಂತಿತರಾಗಿದ್ದೇವೆ~ ಎಂದು ನ್ಯಾಯಮೂರ್ತಿಗಳು ಸ್ಪಷ್ಟಪಡಿಸಿದರು.

ಅಟಾರ್ನಿ ಜನರಲ್ ವಹನ್ವತಿ ಮತ್ತು ಸಾಲಿಸಿಟರ್ ಜನರಲ್ ರೋಹಿಂಗ್ಟನ್ ನಾರಿಮನ್ ಸರ್ಕಾರದ ಕ್ರಮ ಸಮರ್ಥಿಸಿಕೊಂಡು, ಸಿಂಗ್ ಮನವಿ ತಿರಸ್ಕರಿಸಲು ಯಾವುದೇ ಪೂರ್ವಗ್ರಹ ಕಾರಣವಲ್ಲ ಎಂದರು.

ಸಂತಸ: ಸುಪ್ರೀಂಕೋರ್ಟ್ ಆದೇಶದಿಂದ ತಮಗೆ ಸಂತಸವಾಗಿರುವುದಾಗಿ ಸಿಂಗ್ ಪರ ವಕೀಲ ಪುನೀತ್ ಬಾಲಿ ಹೇಳಿದರಾದರೂ, ಈಗಲೇ ಆ ಕುರಿತು ವಿಶ್ಲೇಷಿಸಲು ಹೋಗುವುದಿಲ್ಲ ಎಂದರು. ನ್ಯಾಯಾಲಯಗಳು ಹೀಗೆ ಪ್ರಶ್ನೆ ಎತ್ತುವುದು ಸಹಜ. ಮಾಧ್ಯಮಗಳು ಇದನ್ನು ಕೂದಲು ಸೀಳಿ ನೋಡಲು ಹೋಗಬಾರದು ಎಂದೂ ಸಲಹೆ ನೀಡಿದರು.

ಡಿ.30ರ ಆದೇಶ ಹೊರಡಿಸುವಾಗ, ತಮ್ಮ ಮೆಟ್ರಿಕ್ಯುಲೇಷನ್ ಪ್ರಮಾಣಪತ್ರ, ಸೇವಾ ದಾಖಲೆಗಳು, ಬಡ್ತಿ ಆದೇಶಗಳು ಹಾಗೂ ವಾರ್ಷಿಕ ಗೋಪ್ಯ ವರದಿಗಳನ್ನೆಲ್ಲಾ ಉಪೇಕ್ಷಿಸಲಾಗಿದೆ ಎಂದು ಸಿಂಗ್ ವಿವರಿಸಿದ್ದರು. ತಮಗೆ ಬಂದಿರುವ ಹಲವಾರು ಪ್ರಶಸ್ತಿಗಳು, ಬಡ್ತಿ ಇತ್ಯಾದಿ ಸಂದರ್ಭಗಳಲ್ಲಿ ತಮ್ಮ ಜನ್ಮ ದಿನಾಂಕವನ್ನು ಮೇ 10, 1951 ಎಂದೇ ಪರಿಗಣಿಸಲಾಗಿದೆ ಎಂದಿದ್ದರು.

ಕೇಂದ್ರ ಸರ್ಕಾರ ಸಮರ್ಥನೆ

ಜನರಲ್ ವಿ.ಕೆ. ಸಿಂಗ್ ಮನವಿ ವಜಾಗೊಳಿಸುವ ಮುನ್ನ, ಅಟಾರ್ನಿ ಜನರಲ್ ಅವರ ಸಲಹೆ ಕೋರಿದ ಕ್ರಮವನ್ನು ಕೇಂದ್ರ ಸರ್ಕಾರ ಸಮರ್ಥಿಸಿಕೊಂಡಿದೆ.

ಸಿಂಗ್ ಅವರ ಮನವಿ ಹಿನ್ನೆಲೆಯಲ್ಲಿ ಹೊಸ ಅಂಶಗಳ ಬಗ್ಗೆ ಪರಿಶೀಲಿಸಬೇಕಾದ ಅಗತ್ಯವಿತ್ತಾದ್ದರಿಂದ ಮತ್ತೊಮ್ಮೆ ಅವರ ಸಲಹೆ ಕೋರಲಾಯಿತು ಎಂದು ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅಂಬಿಕಾ ಸೋನಿ ಹೇಳಿದ್ದಾರೆ.

ಸೇನಾ ಪಡೆಗೆ ಸಂಬಂಧಪಟ್ಟ ಈ ವಿಷಯವನ್ನು ಪ್ರತಿಪಕ್ಷಗಳು ರಾಜಕೀಯಕ್ಕೆ ಬಳಸಿಕೊಳ್ಳಬಾರದು ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT