ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇನಾ ಸಂಗೀತದ ಝೇಂಕಾರ

ಅರಮನೆ ಆವರಣದಲ್ಲಿ ರಂಗು
Last Updated 6 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಮೈಸೂರು: ಅಂಬಾ ವಿಲಾಸ ಅರಮನೆಯ ಅಂಗಳದಲ್ಲಿ ಶುಕ್ರವಾರ ಸಂಜೆಗತ್ತಲಲ್ಲಿ  ಬ್ಯಾಗ್‌ಪೈಪರ್ ಮತ್ತು ಬ್ಯಾಂಡ್‌ಗಳ ಝೇಂಕಾರ, ಠೇಂಕಾರಗಳಿಗೆ ಬೆಳಕಿನ ಕಿರಣಗಳೂ ಹೆಜ್ಜೆ ಹಾಕಿದವು!

ಸಂಜೆ 7 ಗಂಟೆಗೆ ರಭಸದ ಮಳೆ ನಿಂತು ಹೋದ ಮೇಲೆ ಆರ್ಮಿ ಬ್ಯಾಂಡ್ (ಸೈನ್ಯ ಸಂಗೀತ) ನಾದನದಿಯಲ್ಲಿ ಮೈಸೂರಿಗರು, ಪ್ರವಾಸಿಗರು ಮುಳುಗಿದರು. ಕೆಂಪು ಮತ್ತು ನೀಲಿ ಬಣ್ಣದ ಚಿಕ್ಕ ಚಿಕ್ಕ ಎಲ್‌ಇಡಿ ಬಲ್ಬ್‌ಗಳನ್ನು ಅಳವಡಿಸಿದ್ದ ಸಮವಸ್ತ್ರಗಳನ್ನು ಹಾಕಿಕೊಂಡ ಯೋಧರು, ಬ್ಯಾಗ್‌ಪೈಪರ್‌ಗಳು ಮತ್ತು ಬ್ಯಾಂಡ್‌ಗಳನ್ನು ಹಿಡಿದುಕೊಂಡು ಕತ್ತಲಾವರಿಸಿದ್ದ ಅಂಗಳದಲ್ಲಿ ಬೆಳಕು ಮತ್ತು ಸಂಗೀತದ ಹೊನಲು ಹರಿಸಿದರು. ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್‌ನ ಯೋಧರು ಈ ವಿಶಿಷ್ಟ ಪ್ರದರ್ಶನ ನೀಡಿದರು. ತಲಾ ಏಳು ಜನರ ಎರಡು ಕವಲುಗಳಲ್ಲಿ  (ಕೆಂಪು ಮತ್ತು ನೀಲಿ) ಬಂದು, ಕೇಸರಿ ಬಾನು, ಚಾಂದನಿ ಮತ್ತು ಕ್ವಿಕ್ ಬ್ಯಾಂಡ್‌ಗಳ ಸಂಗೀತದೂಟ ಉಣಬಡಿಸಿದರು.

ನಾಯಕ್ ಸುಬೇದಾರ್ ಸುಸೇನ್ ಮಾರಿಸನ್ ಮಾರ್ಗದರ್ಶನ ನೀಡಿದರು.

ವಂದೇ..ಮಾತರಂ..: ಅರಮನೆಯ ಬುರುಡೆ ಬಲ್ಬ್‌ಗಳಿಂದ ಹೊರಹೊಮ್ಮಿದ ಬಂಗಾರ ಬಣ್ಣದ ಬೆಳಕಿನಲ್ಲಿಯೂ ಸೈನ್ಯದ ಸಂಗೀತ ಮಾಂತ್ರಿಕರು ತಮ್ಮ ಪ್ರತಿಭೆ ಮೆರೆದರು. ಈ ಶಿಸ್ತಿನ ಸಿಪಾಯಿಗಳು, ಬ್ಯಾಂಡ್, ಪೈಪ್, ಡ್ರಮ್, ಬಾರ್, ಬೀಗಲ್ಸ್‌ಗಳ ಮೂಲಕ ಸಂಗೀತ ಪ್ರದರ್ಶನ ನೀಡಿದರು. ಪ್ಯಾರಾಶೂಟ್ ರೆಜಿಮೆಂಟ್, ಎಎಫ್‌ಸಿ ಮತ್ತು ಮದ್ರಾಸ್ ಎಂಜಿನಿಯರಿಂಗ್ ಗ್ರುಪ್‌ನ (ಎಂಇಜಿ) ಯೋಧರು ಒಟ್ಟು 11 ಟ್ಯೂನ್‌ಗಳನ್ನು ಪ್ರಸ್ತುಪಡಿಸಿದರು.

ಅದರಲ್ಲಿ `ವಂದೇ ಮಾತರಂ..' ಹಾಡಿನ ಸಂಗೀತಕ್ಕೆ ನೂರಾರು ಜನರು ಮನಸೋತರು. `ಕೈಸಾ ಸುಂದರ್ ಔರ್ ಬಹಾದ್ದೂರ್.. ಹಾಡಿಗೆ ಚಪ್ಪಾಳೆ ತಟ್ಟಿ ಗೌರವ ಸೂಚಿಸಿದರು.

`ಸರಫರೋಶಿ ಕಿ ತಮನ್ನಾ ಜಾಗ್ ಉಠಾ..' ಟ್ಯೂನ್‌ಗಳಿಗೆ ದೇಶಭಕ್ತಿಯ ಸಿಂಚನ ಅರಮನೆಯ ಅಂಗಳದಲ್ಲಿ ಪಸರಿಸಿತು.
ಸುಮಾರು ಒಂದು ತಾಸು ನಡೆದ ಕಾರ್ಯಕ್ರಮದಲ್ಲಿ ಸುಬೇದಾರ್ ಬಿ. ರವಿಕುಮಾರ್, ಸುಬೇದಾರ್ ಎಸ್.ಮ ರಮೇಶಕುಮಾರ್ ಮಾರ್ಗದರ್ಶನ ನೀಡಿದರು.

ಮೈಸೂರಿನ ಬನ್ನಿಮಂಟಪ ಕ್ರೀಡಾಂಗಣದಲ್ಲಿ ಶನಿವಾರ ಮತ್ತು ಭಾನುವಾರ ನಡೆಯಲಿರುವ ಭಾರತೀಯ ಸೇನಾ ಚಟುವಟಿಕೆಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ  `ನಿಮ್ಮ ಸೇನೆ ತಿಳಿಯಿರಿ'  ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಅರಮನೆಯಲ್ಲಿ ಅರ್ಮಿ ಬ್ಯಾಂಡ್ ಏರ್ಪಡಿಸಲಾಗಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT