ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇನಾಮುಕ್ತ ಸಿಯಾಚಿನ್‌ ವಲಯಕ್ಕೆ ಸಲಹೆ

ಭಾರತದೊಂದಿಗೆ ಅರ್ಥಪೂರ್ಣ ಮಾತುಕತೆ: ಪಾಕ್‌ ಸ್ಪಷ್ಟನೆ
Last Updated 5 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌ (ಪಿಟಿಐ): ಕಾಶ್ಮೀರ ವಿವಾದವನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಭಾರತದೊಂದಿಗೆ ‘ಅರ್ಥಪೂರ್ಣ ಹಾಗೂ ಪರಿಣಾಮಕಾರಿ’ ಮಾತುಕತೆ ನಡೆಸುವ ಅಗತ್ಯವಿದೆ ಎಂದು ಪಾಕಿಸ್ತಾನ ಗುರುವಾರ ಹೇಳಿದೆ. ಉಭಯ ರಾಷ್ಟ್ರಗಳ ನಡುವಣ ಅಪನಂಬಿಕೆ ಹೋಗಲಾಡಿಸಲು ಎರಡೂ ರಾಷ್ಟ್ರಗಳು ಶ್ರಮಿಸಬೇಕು ಎಂದೂ ಪಾಕ್‌ ಅಭಿಪ್ರಾಯಪಟ್ಟಿದೆ.

ವಿದೇಶಾಂಗ ಇಲಾಖೆ ವಕ್ತಾರ ಏಜಾಜ್‌ ಚೌಧರಿ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿಯಾಚಿನ್‌ ನೀರ್ಗಲ್ಲು ಪ್ರದೇಶವನ್ನು ಸೇನಾ ಮುಕ್ತ ವಲಯವನ್ನಾಗಿಸಲು ಅಲ್ಲಿಂದ ಯೋಧರ ಪಡೆಯನ್ನು ಹಿಂಪಡೆಯಬೇಕು ಎಂದರು. ಉಭಯ ರಾಷ್ಟ್ರಗಳ ನಡುವಣ ಶಾಂತಿ ಮಾತುಕತೆ ಪ್ರಕ್ರಿಯೆಯಲ್ಲಿ ಕಾಶ್ಮೀರದ ನಾಯಕರನ್ನೂ ಭಾಗಿಯಾ­ಗಿಸಿ­ಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಮುಜಫರಬಾದ್‌ನಲ್ಲಿ ನವಾಜ್‌ ಷರೀಫ್‌ ಅವರು ಕಾಶ್ಮೀರ ಕುರಿತು ಆಡಿದ ಮಾತು ವಿವಾದಕ್ಕೆ ಈಡಾದ ಹಿನ್ನೆಲೆಯಲ್ಲಿ ಚೌಧರಿ ಸುದ್ದಿಗೋಷ್ಠಿ ಕರೆದು ಹೀಗೆ ಹೇಳಿದ್ದಾರೆ. ಷರೀಫ್‌ ಅವರು ಮುಜಫರಬಾದ್‌ ಸಭೆಯಲ್ಲಿ, ‘ಕಾಶ್ಮೀರ ಬಿಕ್ಕಟ್ಟು ಎರಡೂ ರಾಷ್ಟ್ರಗಳ ನಡುವೆ 4ನೇ ಯುದ್ಧಕ್ಕೆ ಕಾರಣವಾಗಬಹುದು’ ಎಂಬ ಹೇಳಿಕೆ ನೀಡಿ­ದರೆಂದು ಪಾಕಿಸ್ತಾನದ ಪ್ರಮುಖ ದಿನಪತ್ರಿಕೆಯೊಂದು ವರದಿ ಮಾಡಿತ್ತು. ಆದರೆ ಪ್ರಧಾನಿ ಕಚೇರಿಯು ಬುಧವಾರ ಸ್ಪಷ್ಟನೆ ನೀಡಿ ‘ಷರೀಫ್‌ ಅವರು ಸಭೆಯಲ್ಲಿ ಯುದ್ಧದ ಪ್ರಸಾಪ ಮಾಡಿಯೇ ಇಲ್ಲ’ ಎಂದು ಹೇಳಿತ್ತು.

ಈ ಮಧ್ಯೆ, ಈ ಕುರಿತು ವರದಿ ಮಾಡಿದ್ದ ಪತ್ರಿಕೆ, ಮುಜಾಫರಾಬಾದ್‌ನಲ್ಲಿ ವಾರ್ತಾ ಇಲಾಖೆ ಹೊರಡಿ­ಸಿದ್ದ ಪತ್ರಿಕಾ ಹೇಳಿಕೆಯಲ್ಲಿ ಇದ್ದ ವಿಷಯವನ್ನೇ ತಾನು ವರದಿ ಮಾಡಿರುವುದಾಗಿ ಸಮರ್ಥಿಸಿಕೊಂಡಿದೆ. ‘ಕಾಶ್ಮೀರವು ಭಾರತದ ಸ್ವಾಧೀನದಿಂದ ಮುಕ್ತವಾಗಬೇಕು’ ಎಂಬ ಷರೀಫ್‌ ಅವರ ಹೇಳಿಕೆ ಬಗ್ಗೆ ಸುದ್ದಿಗಾರರು ಗಮನ ಸೆಳೆದಾಗ, ‘ಪಾಕಿಸ್ತಾನವು ಕಾಶ್ಮೀರ ಜನತೆಗೆ ಮುಂಚಿನಿಂದಲೂ ನೈತಿಕ ಹಾಗೂ ರಾಜತಾಂತ್ರಿಕ ಬೆಂಬಲ ನೀಡುತ್ತಲೇ ಬಂದಿದೆ.

ಇದರಲ್ಲಿ ಹೊಸತೇನೂ ಇಲ್ಲ’ ಎಂದರು. ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಗೋಡೆ ನಿರ್ಮಿಸುವ ಪ್ರಸ್ತಾವದ ಬಗ್ಗೆ ಕೇಳಿದಾಗ, ‘ಈ ರೇಖೆಯ 500 ಮೀಟರ್‌ ಒಳಗಡೆ ಯಾವುದೇ ನಿರ್ಮಾಣ ನಡೆಸಬಾರದು ಎಂಬ ನಿಯಮವನ್ನು ಗೌರವಿಸಬೇಕು’ ಎಂದು ಚೌಧರಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT