ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇನೆಯಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಳಕ್ಕೆ ಕ್ರಮ

Last Updated 4 ಅಕ್ಟೋಬರ್ 2012, 7:55 IST
ಅಕ್ಷರ ಗಾತ್ರ

ವಿಜಾಪುರ: `ಸೇನೆಯಲ್ಲಿ ಮಹಿಳಾ ಅಧಿಕಾರಿಗಳ ಸಂಖ್ಯೆ ಹೆಚ್ಚಿಸಬೇಕಿದ್ದು, ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಹಾಗೂ ಸೈನಿಕ ಶಾಲೆಗಳಲ್ಲಿ ಮಹಿಳೆಯರಿಗೂ ಅವಕಾಶ ಕಲ್ಪಿಸಬೇಕು ಎಂಬ ಬೇಡಿಕೆ ಈಡೇರಿಕೆಗೆ ನಾವು ಮುಕ್ತ ಮನಸ್ಸು ಹೊಂದಿದ್ದೇವೆ~ ಎಂದು  ರಕ್ಷಣಾ ಖಾತೆ ರಾಜ್ಯ ಸಚಿವ ಎಂ.ಎಂ. ಪಲ್ಲಂ ರಾಜು ಹೇಳಿದರು.

ಇಲ್ಲಿಯ ಸೈನಿಕ ಶಾಲೆಯಲ್ಲಿ ಬುಧವಾರ ಅಖಿಲ ಭಾರತ ಸೈನಿಕ ಶಾಲೆಗಳ ಪ್ರಾಚಾರ್ಯರ ಸಮ್ಮೇಳನದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

`ಗಡಿಯಲ್ಲಿ ಈಗಿರುವ ಎಲ್ಲ ಸೌಲಭ್ಯಗಳು ಪುರುಷರಿಗೆ ಮಾತ್ರ ಸೀಮಿತವಾಗಿದೆ. ಮಹಿಳಾ ಅಧಿಕಾರಿಗಳ ಸಂಖ್ಯೆ ಹೆಚ್ಚಿಸಿಕೊಳ್ಳುವ ಮುನ್ನ ಗಡಿ ಭಾಗವೂ ಸೇರಿದಂತೆ ಎಲ್ಲ ಸೇನಾ ನೆಲೆಗಳಲ್ಲಿ ಮಹಿಳೆಯರಿಗೆ ಪ್ರತ್ಯೇಕ ಮೂಲಸೌಲಭ್ಯ ಕಲ್ಪಿಸುವ ಕೆಲಸ ಆಗಬೇಕಿದೆ. ಇದು ಹಂತ ಹಂತವಾಗಿ ಆಗುವ ಕೆಲಸ~ ಎಂದರು.

`ಭೂಸೇನೆ, ವಾಯು ಪಡೆ, ನೌಕಾ ಪಡೆಯಲ್ಲಿ ಈಗ 13 ಲಕ್ಷ ಯೋಧರು ಇದ್ದಾರೆ. ಆದರೆ ಅಧಿಕಾರಿಗಳ ಕೊರತೆ ಇದೆ. ಅದನ್ನು ನೀಗಿಸಿಕೊಳ್ಳಲು ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ ಪ್ರವೇಶ ಸಂಖ್ಯೆಯನ್ನು ಮುಂದಿನ ಐದು ವರ್ಷಗಳಲ್ಲಿ 1,800ರಿಂದ 2,400ಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿದೆ.

ಇದರ ಜೊತೆಗೆ 36 ಇತರ ಸೇನಾ ತರಬೇತಿ ಸಂಸ್ಥೆಗಳಿದ್ದು, ಬಿ.ಎಸ್ಸಿ, ಎಂಜಿನಿಯರಿಂಗ್ ಮತ್ತಿತರ ಪದವೀಧರರಿಗೆ ಈ ಸಂಸ್ಥೆಗಳಲ್ಲಿ ಪ್ರವೇಶ ನೀಡಿ ತರಬೇತಿಗೊಳಿಸಲಾಗುತ್ತಿದೆ. ಎನ್‌ಸಿಸಿ ಕೋಟಾ ಹೆಚ್ಚಿಸಲಾಗಿದ್ದು, ಏಳು ಶಾರ್ಟ್ ಸರ್ವಿಸ್ ಬೋರ್ಡ್‌ಗಳೂ ಕಾರ್ಯನಿರ್ವಹಿಸುತ್ತಿವೆ~ ಎಂದು ಹೇಳಿದರು.

`ಸೇನೆಗೆ ಅಧಿಕಾರಿಗಳನ್ನು ತಯಾರು ಮಾಡಲಿಕ್ಕಾಗಿ ಸ್ಥಾಪನೆಯಾಗಿರುವ ದೇಶದ 24 ಸೈನಿಕ ಶಾಲೆಗಳಿಗೆ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಿಂದ ವಿನಾಯಿತಿ ನೀಡುವಂತೆ ಮಾನವ ಸಂಪನ್ಮೂಲ ಸಚಿವಾಲಯವನ್ನು ಕೋರಲಾಗಿದೆ. ಆರ್‌ಟಿಇ ಕಾಯ್ದೆಯಲ್ಲಿ ನಿಗದಿ ಪಡಿಸಿರುವು ದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ನಾವು  ಕಡುಬಡ ಕುಟುಂಬಗಳ ಮಕ್ಕಳಿಗೆ ಪ್ರವೇಶ ನೀಡುತ್ತಿದ್ದೇವೆ. ಆರ್‌ಟಿಇ ವಿಷಯ ಏನೇ ಆದರೂ ಸೈನಿಕ ಶಾಲೆಗಳ ಈಗಿನ ಪ್ರವೇಶ ಪ್ರಕ್ರಿಯೆಯಲ್ಲಿ ಬದ ಲಾವಣೆ ಆಗುವುದಿಲ್ಲ~ ಎಂದು ಸ್ಪಷ್ಟಪಡಿಸಿದರು.

`ಈ ವರೆಗೆ ಶಸ್ತ್ರಾಸ್ತ್ರಗಳ ಖರೀದಿಗೆ ವಿದೇಶಗಳನ್ನೇ ನಾವು ಹೆಚ್ಚಾಗಿ ಅವಲಂಬಿಸಿದ್ದೆವು. ಇದರಿಂದಾಗಿ ನಮಗೆ ಆರ್ಥಿಕವಾಗಿ ಹೆಚ್ಚಿನ ಹೊರೆಯಾಗುತ್ತಿತ್ತು. ದೇಶದಲ್ಲಿರುವ 39 ಶಸ್ತ್ರಾಸ್ತ್ರ ತಯಾರಿಕಾ ಕಾರ್ಖಾನೆಗಳಲ್ಲಿ ತಂತ್ರಜ್ಞಾನವನ್ನು ನಮ್ಮಲ್ಲಿಯೇ ಅಭಿವೃದ್ಧಿ ಪಡಿಸಿಕೊಂಡು ಅಗತ್ಯ ಶಸ್ತ್ರಾಸ್ತ್ರ ತಯಾರಿಸಿಕೊಳ್ಳಲು ಒತ್ತು ನೀಡಿದ್ದೇವೆ~ ಎಂದು ಪಲ್ಲಂ ರಾಜು ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT