ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇವಾ ತೆರಿಗೆ: ಏ.ಸಿ ಹೋಟೆಲ್ ದುಬಾರಿ

Last Updated 1 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಇನ್ನು ಮುಂದೆ ಹವಾನಿಯಂತ್ರಿತ ರೆಸ್ಟೊರೆಂಟ್‌ನಲ್ಲಿ ಆಹಾರ ಸೇವಿಸಿದರೆ ಹೆಚ್ಚಿನ ಹಣ ಪಾವತಿಸಬೇಕಾಗುತ್ತದೆ. ಅಷ್ಟೇ ಅಲ್ಲ, ಷಾಪಿಂಗ್ ಮಾಲ್ ನಿಲುಗಡೆ ಪ್ರದೇಶದಲ್ಲಿ ವಾಹನ ನಿಲ್ಲಿಸಿದರೂ ಹೆಚ್ಚಿನ ಶುಲ್ಕ ತೆರಬೇಕಾಗುತ್ತದೆ.

ಏಪ್ರಿಲ್ 1ರಿಂದ ಹವಾನಿಯಂತ್ರಿತ ಉಪಾಹಾರ ಗೃಹಗಳು ಮತ್ತು ವಾಹನ ನಿಲುಗಡೆ ಪ್ರದೇಶದ ಸೇವಾ ತೆರಿಗೆಯನ್ನು ಕೇಂದ್ರ ಸರ್ಕಾರ ಶೇ 12ಕ್ಕೆ ಏರಿಸಿದೆ.
ಇಂಥ ಹವಾನಿಯಂತ್ರಿತ ರೆಸ್ಟೊರೆಂಟ್‌ಗಳಿಂದ ಆಹಾರವನ್ನು ಮನೆ ಬಾಗಿಲಿಗೆ ತಲುಪಿಸುವ ಸೇವೆಗೆ ತೆರಿಗೆಯಿಂದ ವಿನಾಯ್ತಿ ನೀಡಲಾಗಿದೆಯೇ ಇಲ್ಲವೇ ಎಂಬ ಗೊಂದಲ ಇನ್ನಷ್ಟೇ ನಿವಾರಣೆ ಆಗಬೇಕಿದೆ.

`ರೆಸ್ಟೊರೆಂಟ್‌ನಲ್ಲಿ ಹವಾನಿಯಂತ್ರಿತ ವ್ಯವಸ್ಥೆ ಇದ್ದರೆ ಅಲ್ಲಿನ ಗ್ರಾಹಕರ ಬಿಲ್ ಮೊತ್ತದ ಮೇಲೆ ತೆರಿಗೆ ವಿಧಿಸಬಹುದು. ಆದರೆ, ರೆಸ್ಟೊರೆಂಟ್‌ನಿಂದ ಆಹಾರ ತರಿಸಿಕೊಂಡು ಮನೆಯಲ್ಲೇ ಕುಳಿತು ಸೇವಿಸುವವರಿಗೆ ಹವಾನಿಯಂತ್ರಿತ ಸೌಲಭ್ಯವಾಗಲೀ, ಅದ್ಧೂರಿ ಮೂಲ ಸೌಕರ್ಯವಾಗಲೀ ಲಭಿಸುವುದಿಲ್ಲ. ಹಾಗಾಗಿ ಇದು ಸೇವಾ ತೆರಿಗೆ ವ್ಯಾಪ್ತಿಗೆ ಬರುವುದಿಲ್ಲ' ಎನ್ನುತ್ತಾರೆ `ಕೆಪಿಎಂಜಿ ಇಂಡಿಯಾ' ಸಂಸ್ಥೆ ಪಾಲುದಾರ ಪ್ರತೀಕ್ ಜೈನ್.

ಸಾರ್ವಜನಿಕ ವಾಹನ ನಿಲುಗಡೆ ಸ್ಥಳವನ್ನು ಸೇವಾ ತೆರಿಗೆ ವಿನಾಯ್ತಿ ಪಟ್ಟಿಯಿಂದ ಕೈಬಿಡಲಾಗಿದೆ. ಹಾಗಾಗಿ ಇನ್ನು ಮುಂದೆ ಇದರ ಸೇವೆಯ ಶುಲ್ಕದೊಟ್ಟಿಗೆ ಹೆಚ್ಚಿನ ತೆರಿಗೆಯನ್ನೂ ಪಾವತಿಸಬೇಕಾಗುತ್ತದೆ.

2013-14ನೇ ಸಾಲಿನಲ್ಲಿ ಪರೋಕ್ಷ ತೆರಿಗೆ ಮೂಲಕ ರೂ. 4,700 ಕೋಟಿ ಸಂಗ್ರಹಿಸುವ ಗುರಿ ಸರ್ಕಾರದ್ದಾಗಿದೆ. ಈ ಹಿನ್ನೆಲೆಯಲ್ಲಿ ಹಲವು ಸೇವೆಗಳನ್ನು ಸೇವಾ ತೆರಿಗೆ ವ್ಯಾಪ್ತಿಗೆ ತರಲಾಗಿದೆ.ಈವರೆಗೆ ಮದ್ಯ ಪೂರೈಸುವ ರೆಸ್ಟೊರೆಂಟ್‌ಗಳು ಮಾತ್ರ ಸೇವಾ ತೆರಿಗೆ ವ್ಯಾಪ್ತಿಗೆ ಒಳಪಟ್ಟಿದ್ದವು.

ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ  ಈ ಸಾಲಿನ ಬಜೆಟ್‌ನಲ್ಲಿ ಹವಾನಿಯಂತ್ರಿತ ರೆಸ್ಟೊರೆಂಟ್‌ಗಳೆಲ್ಲವನ್ನೂ ಸೇವಾ ತೆರಿಗೆ ವ್ಯಾಪ್ತಿಗೆ ತರಲಾಗಿದೆ ಎಂದು ಪ್ರಕಟಿಸಿರುವುದರಿಂದ ಎ.ಸಿ ಹೋಟೆಲ್‌ಗಳ ಗ್ರಾಹಕರು, ವಾಹನಗಳ ಮಾಲೀಕರು ಹೆಚ್ಚುವರಿ ತೆರಿಗೆ ತೆರಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT