ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇವಾ ಸಂಸ್ಥೆಗಳಿಗೆ ಸಬ್ಸಿಡಿ ಸಿಲಿಂಡರ್

Last Updated 2 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ನವದೆಹಲಿ: ಧಾರ್ಮಿಕ ಸಂಸ್ಥೆಗಳು, ಶಾಲೆಗಳು, ಆಸ್ಪತ್ರೆಗಳಿಗೆ ಸಬ್ಸಿಡಿ ದರದಲ್ಲಿ ಹೆಚ್ಚುವರಿ ಸಿಲಿಂಡರ್ ನೀಡುವ ಸಂಬಂಧ  ಕೇಂದ್ರ ಸರ್ಕಾರ ಇನ್ನೊಂದು ವಾರದಲ್ಲಿ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ ಎಂದು ಇಂಧನ ಸಚಿವಾಲಯದ ಮೂಲಗಳು ತಿಳಿಸಿವೆ.

ಕಳೆದ ತಿಂಗಳು, ಪ್ರತಿ ಗ್ರಾಹಕರಿಗೆ ವರ್ಷಕ್ಕೆ ಸಬ್ಸಿಡಿ ದರದಲ್ಲಿ ಆರು ಸಿಲಿಂಡರ್ ನೀಡುವ ಕೇಂದ್ರದ ತೀರ್ಮಾನದಿಂದ ಕಂಗಾಲಾಗಿದ್ದ ಅನೇಕ ಸ್ವಯಂ ಸೇವಾ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳಿಗೆ ಈ ನಿರ್ಧಾರ ನೆಮ್ಮದಿ ನೀಡಲಿದೆ.

`ಗೃಹಯೇತರ ಹಾಗೂ ವಾಣಿಜ್ಯೇತರ ಸಂಸ್ಥೆಗಳಿಗೆ ಹೆಚ್ಚುವರಿ ಸಿಲಿಂಡರ್  ನೀಡುವ ಕುರಿತು ಸರ್ಕಾರದ ನಿರ್ಧಾರ ಸ್ಪಷ್ಟವಾಗಿದ್ದು, ಒಂದು ವಾರದೊಳಗೆ ಸಿಲಿಂಡರ್  ಪೂರೈಸಲಾಗುತ್ತದೆ~ ಎಂದು ಇಂಧನ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಬ್ಸಿಡಿ ದರದಲ್ಲಿ ಪೂರೈಸುವ ಸಿಲಿಂಡರ್ ಸಂಖ್ಯೆ ಕಡಿತಗೊಂಡ ನಂತರ, ಸ್ವಯಂ ಸೇವಾ ಸಂಸ್ಥೆಗಳು ಒಂದಕ್ಕೆ ಎರಡರಷ್ಟು ಹಣ ತೆತ್ತು ಸಿಲಿಂಡರ್‌ಗಳನ್ನು ಖರೀದಿಸುತ್ತಿದ್ದರು. ಇದರಿಂದ ಸಂಸ್ಥೆಗಳ ಇಡೀ ಹಣಕಾಸು  ಯೋಜನೆಯೇ ಏರುಪೇರಾಗಿತ್ತು.

`ಸರ್ಕಾರ ಈ ಹಿಂದೆ ಕೈಗೊಂಡ ನಿರ್ಧಾರ ಅಸ್ಪಷ್ಟವಾಗಿದೆ~ ಎಂದು ಅನೇಕ ಅನಿಲ ವಿತರಕರು ದೂರಿದ್ದರು. ರಾಷ್ಟ್ರೀಯ ಎಲ್‌ಪಿಜಿ ವಿತರಕರ ಒಕ್ಕೂಟವು, `ಸರ್ಕಾರದ ನಿರ್ಧಾರ ಕುರಿತು ಯಾವುದೇ ಪತ್ರ ನಮ್ಮ ಕೈಸೇರಿಲ್ಲ.

ಮಾರುಕಟ್ಟೆಯಲ್ಲಿ ಸಬ್ಸಿಡಿಯೇತರ ಸಿಲಿಂಡರ್‌ಗಳ ದರದ ಬಗ್ಗೆಯೂ ನಮಗೆ ಮಾಹಿತಿ ಇಲ್ಲ~  ಎಂದು ದೂರಿನಲ್ಲಿ ವಿವರಿಸಿತ್ತು. ಸರ್ಕಾರದ ಈ ನಿರ್ಧಾರದಿಂದ, ಗುರುದ್ವಾರಗಳಲ್ಲಿ ಉಚಿತ ಊಟ ನೀಡುತ್ತಿರುವ ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿಯವರು ಇಂಧನ ಸಚಿವ ಜೈಪಾಲ್ ರೆಡ್ಡಿಯವರಿಗೆ ಪತ್ರ ಬರೆದು, `ಸಬ್ಸಿಡಿ ದರದ ಸಿಲಿಂಡರ್ ಸಂಖ್ಯೆ ಕಡಿತಗೊಳಿಸಿರುವವರ ಪಟ್ಟಿಯಿಂದ ನಮ್ಮನ್ನು ಹೊರಗಿಡಬೇಕು. ಎಲ್‌ಪಿಜಿ ಬೆಲೆ ಏರಿಕೆಯಿಂದಲೂ ಹೊರತುಪಡಿಸಬೇಕು~ ಎಂದು ಮನವಿ ಮಾಡಿದ್ದರು.

ಹಿನ್ನೆಲೆ: ಸೆಪ್ಟೆಂಬರ್ 13ರಂದು ಕೇಂದ್ರ ಸರ್ಕಾರ ಸಬ್ಸಿಡಿ ದರದಲ್ಲಿ ವರ್ಷಕ್ಕೆ ಪೂರೈಸುವ ಎಲ್‌ಪಿಜಿ ಸಿಲಿಂಡರ್ ಸಂಖ್ಯೆಯನ್ನು ಆರಕ್ಕೆ ಕಡಿತಗೊಳಿಸತ್ತು. ಈ ನಿರ್ಧಾರದ ನಂತರ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಾದ ಅಸ್ಸಾಂ, ದೆಹಲಿ ಮತ್ತು ಹರಿಯಾಣ ರಾಜ್ಯಗಳಲ್ಲಿ ಹೆಚ್ಚುವರಿ ಮೂರು ಸಿಲಿಂಡರ್‌ಗಳನ್ನು ಸಬ್ಸಿಡಿ ದರದಲ್ಲಿ ಪೂರೈಸುವುದಾಗಿ ಘೋಷಿಸಿದ್ದವು.  ಈ ಕ್ರಮವನ್ನು ಇತರ ಪಕ್ಷಗಳು ವಿರೋಧಿಸಿದ್ದವು. ಯುಪಿಎ ಮಿತ್ರಪಕ್ಷವಾಗಿದ್ದ ತೃಣಮೂಲ ಕಾಂಗ್ರೆಸ್, ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂಪಡೆದಿತ್ತು.

ಪ್ರತಿಭಟನೆಗಳ ಒತ್ತಡಕ್ಕೆ ಮಣಿದ ಸರ್ಕಾರ, ನಾಲ್ಕು ವಿವಿಧ ಹಂತಗಳಲ್ಲಿ ಎಲ್‌ಪಿಜಿ ದರವನ್ನು ನಿಗದಿಪಡಿಸಿತು. ಒಂದನೆಯದು ಸಬ್ಸಿಡಿ ದರದಲ್ಲಿ ಸಿಲಿಂಡರ್ ಪೂರೈಕೆ, ಇನ್ನೊಂದು ಆರು ಸಬ್ಸಿಡಿ ಸಿಲಿಂಡರ್‌ಗಳ ಕೋಟಾ ಮುಗಿದ ಮೇಲೆ ಗ್ರಾಹಕರು ಹೆಚ್ಚುವರಿ ಹಣ ನೀಡಿ ಖರೀದಿಸುವುದು. ಚಾರಿಟೇಬಲ್ ಮತ್ತು ಇತರೆ ಸಂಸ್ಥೆಗಳು ಖರೀದಿಸುವ ಸಿಲಿಂಡರ್‌ಗೆ ಪ್ರತ್ಯೇಕ ಬೆಲೆ ನಿಗದಿಪಡಿಸುವುದು. ನಾಲ್ಕನೆಯದು ಹೋಟೆಲ್ ಸೇರಿದಂತೆ ವಾಣಿಜ್ಯ ಉದ್ದೇಶಕ್ಕಾಗಿ ಬಳಕೆಯ ಎಲ್‌ಪಿಜಿಗಳಿಗೆ ಪ್ರತ್ಯೇಕ ದರಗಳನ್ನು ನಿಗದಿಪಡಿಸುವುದಾಗಿ ಸರ್ಕಾರ ಹೇಳಿತ್ತು. ಈ ನಿರ್ಧಾರದಲ್ಲಿ ಸ್ಪಷ್ಟತೆ ಇಲ್ಲ ಎಂದು ಅನಿಲ ವಿತರಕರ ಒಕ್ಕೂಟ ದೂರು ಸಲ್ಲಿಸಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT