ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇವೆ ಕಾಯಂಗೆ ಉಪನ್ಯಾಸಕರ ಪ್ರತಿಭಟನೆ

Last Updated 7 ಜುಲೈ 2013, 20:17 IST
ಅಕ್ಷರ ಗಾತ್ರ

ಬೆಂಗಳೂರು:  ಕಾಯಂ ಪೂರ್ವ ಸೇವಾವಧಿ (ಪ್ರೊಬೆಷನರಿ) ಘೋಷಿಸುವುದು, ಎಸ್.ಎಚ್.ಕುರಿಯವರ್ ಅವರ ವರದಿಯ ಶಿಫಾರಸುಗಳನ್ನು ಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೆಪಿಎಸ್‌ಸಿ ನೇರ ನೇಮಕಾತಿ ಹೊಂದಿದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಒಕ್ಕೂಟದ ಸದಸ್ಯರು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು.

`2009ನೇ ಸಾಲಿನಲ್ಲಿ ಕೆಪಿಎಸ್‌ಸಿ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಉಪನ್ಯಾಸಕರಾಗಿ ಆಯ್ಕೆಯಾದ ಅಭ್ಯರ್ಥಿಗಳು, ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ನೇಮಕಾತಿಯ ಆದೇಶ ಪತ್ರದಲ್ಲಿ ತಿಳಿಸಿರುವಂತೆ ಹಾಗೂ ಸರ್ಕಾರದ ಸೇವಾನಿಯಮಗಳಂತೆ ನೌಕರರು ಎರಡು ವರ್ಷಗಳ ತೃಪ್ತಿಕರ ಸೇವೆಯನ್ನು ಪೂರೈಸಿದ ನಂತರ ಅವರ ಸೇವೆ ಕಾಯಂಗೊಳಿಸಿ ಪ್ರೊಬೆಷನರಿ ಘೋಷಣೆ ಮಾಡುವುದು ಸಂಬಂಧಪಟ್ಟ ಇಲಾಖೆಯ ಕರ್ತವ್ಯ.

ಆದರೆ, ಆಯ್ಕೆಯಾದ ಎಲ್ಲಾ ಉಪನ್ಯಾಸಕರು ನಾಲ್ಕು ವರ್ಷಗಳಿಂದ `ಸಿ' ವಲಯಗಳಲ್ಲಿ (ಗ್ರಾಮೀಣ ಪ್ರದೇಶ) ಕಾರ್ಯನಿರ್ವಹಿಸುತ್ತಿದ್ದಾರೆ. ಆದರೂ ಸರ್ಕಾರ ಅವರ ಸೇವೆಯನ್ನು ಕಾಯಂಗೊಳಿಸುವ ಗೋಜಿಗೆ ಹೋಗಿಲ್ಲ' ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಉಪನ್ಯಾಸಕ ನಾಗರಾಜು, `ಪ್ರಸ್ತುತ ಆಯ್ಕೆಯಾದ ಉಪನ್ಯಾಸಕರಲ್ಲಿ ಬಿ.ಇಡಿ ಪದವಿ ಪೂರೈಸಿದ 839 ಉಪನ್ಯಾಸಕರುಗಳಿಗೆ ಕಾಯಂ ಪೂರ್ವ ಸೇವಾವಧಿಯನ್ನು ಘೋಷಿಸಲಾಗಿದೆ. ಜತೆಗೆ ಈಗಾಗಲೇ ಅವರು ಬಯಸಿದ ಸ್ಥಳಗಳಿಗೆ ವರ್ಗಾವಣೆಯನ್ನೂ ನೀಡಲಾಗಿದೆ.

ಆದರೆ, ಬಿ.ಇಡಿ ಪದವಿಯಿಂದ ವಂಚಿತರಾದ 1,764 ಉಪನ್ಯಾಸಕರಿಗೆ ಕಾಯಂ ಪೂರ್ವ ಸೇವಾವಧಿಯನ್ನು ಘೋಷಣೆ ಮಾಡಲು ಇಲ್ಲಿಯವರಿಗೂ ಕ್ರಮ ಕೈಗೊಂಡಿಲ್ಲ. ಇದರಿಂದಾಗಿ ವಾರ್ಷಿಕ ಬಡ್ತಿಯ ತಡೆ, ವರ್ಗಾವಣೆಗೆ ಅರ್ಜಿ ಸಲ್ಲಿಸಲಾಗದ ಸ್ಥಿತಿ, ಸೇವಾ ಭದ್ರತೆ ಮತ್ತು ಇತರೆ ಸೌಲಭ್ಯಗಳಿಂದ ವಂಚಿತರಾಗಿದ್ದೇವೆ' ಎಂದು ಹೇಳಿದರು.

ಸರ್ಕಾರಿ ಸೇವೆ ಸಿಕ್ಕಿತೆಂಬ ಖುಷಿಯಲ್ಲಿ ಮದುವೆಯಾಗಿ, ನಂತರ ಸ್ಥಳ ನಿಯೋಜನೆಯಿಂದ ಅದೆಷ್ಟೋ ದಂಪತಿ ದೂರದ ಊರುಗಳಲ್ಲೇ ಪ್ರತ್ಯೇಕವಾಗಿ ಬೀಡು ಬಿಟ್ಟಿದ್ದಾರೆ. ಅದೇ ರೀತಿ ವಯಸ್ಸಾದ ಪೋಷಕರಿಂದ, ಎಳೆವಯಸ್ಸಿನ ಮಕ್ಕಳಿಂದ ದೂರ ಉಳಿದಿರುವ ಉಪನ್ಯಾಸಕರು ಪ್ರೊಬೇಷನರಿ ಘೋಷಣೆಗಾಗಿ ಎದರು ನೋಡುತ್ತಿದ್ದಾರೆ ಎಂದರು.

ಸೇವಾನಿರತ ಉಪನ್ಯಾಸಕರು ಬಿ.ಇಡಿ ಪದವಿಯನ್ನು ಹೊಂದಲು ಇರುವ ತಾಂತ್ರಿಕ ತೊಂದರೆಗಳನ್ನು ಹಲವು ಬಾರಿ ಸರ್ಕಾರದ ಗಮನಕ್ಕೆ ತರಲಾಗಿದೆ. ಇದರಿಂದ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಸರ್ಕಾರದ ಅಧೀನ ಕಾರ್ಯದರ್ಶಿ ಎಸ್.ಎಚ್.ಕುರಿಯವರ್ ಅವರ ವರದಿಯಂತೆ ಈವರೆಗೆ ನೇಮಕಾತಿಯಾದ ಉಪನ್ಯಾಸಕರಿಗೆ ಬಿ.ಇಡಿ ತರಬೇತಿ ನೀಡುವುದು.

ಇಲ್ಲವೇ, ವೇತನ ಸಹಿತ ರಜೆ ನೀಡಿ ಎರಡು ವರ್ಷಗಳೊಳಗೆ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಬಿ.ಇಡಿ. ಪದವಿ ಪೂರೈಸಲು ಅವಕಾಶ ಮಾಡಿಕೊಡಬೇಕು. ಇಲ್ಲದಿದ್ದರೆ, ಉಪನ್ಯಾಸಕರು ಯಾವ ಮಾರ್ಗದಲ್ಲಿ ಬಿ.ಇಡಿ ಪದವಿ ಪೂರೈಸಬೇಕು ಎಂಬ ನಿರ್ದೇಶನವನ್ನಾದರೂ ನೀಡಬೇಕು ಎಂದು ಪ್ರತಿಭಟನಾಕಾರರ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT