ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇವೆ ತಂದ ಖುಷಿ

Last Updated 8 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಆಂಧ್ರ ಪ್ರದೇಶದ ನೆಲ್ಲೂರಿನಲ್ಲಿ ಜನಿಸಿ, ಲೂಧಿಯಾನ ಮತ್ತು ಲಂಡನ್‌ನಲ್ಲಿ ಉನ್ನತ ಶಿಕ್ಷಣ ಪಡೆದ ಅವರಿಗೆ ಈಗ ರಾಜ್ಯದ ಗಡಿ ಜಿಲ್ಲೆ ಬೀದರ್ ಕಾಯಕ ನೆಲೆ. ಎಲ್ಲಿಯ ಆಂಧ್ರ? ಎಲ್ಲಿಯ ಲಂಡನ್? ಎಲ್ಲಿಯ ಬೀದರ್? ಎಂದು ಚಿಂತಿಸುತ್ತಲೇ ಆ ಹೆಣ್ಣು ಮಗಳ ಬದುಕು ಅವಲೋಕಿಸಿದರೆ `ಈ ಅನಿಶ್ಚಿತ ಬದುಕಿನಲ್ಲಿ ಜೀವನ ಚಕ್ರ ಎಲ್ಲಿಯೋ ಆರಂಭವಾಗಿ, ಮತ್ತೆಲ್ಲಿಗೋ ಬಂದು ನಿಲ್ಲುತ್ತದೆ' ಎಂಬ ಮಾತು ನೆನಪಾಗುತ್ತದೆ.

ಅವರು ಸಿಬಿಲ್ ಮೇಶರಮ್ಕರ್. ವೃತ್ತಿಯಿಂದ ನೇತ್ರ ವೈದ್ಯೆ. ಬೀದರ್ ನಗರದ ಓಲ್ಡ್ ಸಿಟಿಯಲ್ಲಿರುವ ವೆಲೆಮೆಗ್ನಾ ಗುಡ್ ನ್ಯೂಸ್ ಸೊಸೈಟಿ ಆಸ್ಪತ್ರೆಯನ್ನು ಮುನ್ನಡೆಸುವ ಜೊತೆಗೆ ಕುಷ್ಠರೋಗಿಗಳ ಆರೈಕೆ ಮಾಡುತ್ತಾ, ಬಹುತೇಕ ಕುಷ್ಠರೋಗಿಗಳ ಮಕ್ಕಳು, ಅನಾಥರು, ಕಡುಬಡ ಕುಟುಂಬದ ಮಕ್ಕಳು ಸೇರಿದಂತೆ ಸುಮಾರು 25 ಮಕ್ಕಳಿಗೆ ಪ್ರತ್ಯೇಕ ಆಶ್ರಯ ನೀಡಿ ಬದುಕು ಕಟ್ಟಿಕೊಡಲು ಯತ್ನಿಸುತ್ತಿದ್ದಾರೆ.

ವಯಸ್ಸು 47ರ ಆಸುಪಾಸು. ಕಳೆದ 10-11 ವರ್ಷಗಳ ಸೇವೆಯ ಬಳಿಕ ಇಂದು ಸಿಬಿಲ್ ಅವರಲ್ಲಿ ಕೆಲವರು ಅಕ್ಕನನ್ನೋ, ತಂಗಿಯನ್ನೋ  ಕಂಡುಕೊಂಡರೆ, ಅವರ ವಯಸ್ಸಿಗೂ ಹಿರಿಯರಾದ ಅನೇಕರು ಅವರಲ್ಲಿ ಅಮ್ಮನ ವಾತ್ಸಲ್ಯವನ್ನು ಕಂಡಿದ್ದಾರೆ. ತಂದೆ ಸ್ಯಾಲಿನ್, ತಾಯಿ ಸುಶೀಲಾ ದಂಪತಿಯ ನಾಲ್ವರು ಮಕ್ಕಳಲ್ಲಿ ಸಿಬಿಲ್ ಹಿರಿಯವರು. ಆಂಧ್ರದ ನೆಲ್ಲೂರಿನಲ್ಲಿ ಜನನ. ಬಳಿಕ ಕುಟುಂಬ ಬೀದರ್‌ಗೆ ಆಗಮಿಸಿತ್ತು. ವೈದ್ಯರಾಗಿದ್ದ ತಂದೆ ಸ್ಯಾಲಿನ್ ವೃತ್ತಿಯ ಜೊತೆಗೆ ಕುಷ್ಠರೋಗಿಗಳ ಆರೈಕೆಗೂ ಒತ್ತು ನೀಡಿದ್ದರು. ಹೀಗೆ ತಂದೆಯ ಸೇವಾ ಕೈಂಕರ್ಯವನ್ನು ನೋಡುತ್ತಲೇ ಬೆಳೆದವರು ಸಿಬಿಲ್.

ಪ್ರಾಥಮಿಕ ಶಿಕ್ಷಣ ಬೀದರ್‌ನಲ್ಲೇ ಆದರೂ ಬೆಂಗಳೂರಿನಲ್ಲಿ ಪಿಯುಸಿ ಮುಗಿಸಿದ ಸಿಬಿಲ್, ಬಳಿಕ ಎಂಬಿಬಿಎಸ್ ಶಿಕ್ಷಣಕ್ಕೆ ಲೂಧಿಯಾನಕ್ಕೆ ತೆರಳಿದ್ದರು.  ಪದವಿಯ ನಂತರ ತಂದೆ-ತಾಯಿ ಜೊತೆಗೆ ಇದ್ದು, ಬೀದರ್‌ನ ಕುಗ್ರಾಮ ಬರಿದಾಬಾದ್‌ನಲ್ಲಿ ಸುಮಾರು ಒಂದು ವರ್ಷ ವೈದ್ಯೆಯಾಗಿಯೂ ಸೇವೆ ಸಲ್ಲಿಸಿದ್ದರು. ಅದೇ ಅವಧಿಯಲ್ಲಿ ಮದುವೆ ಆಗಿ ಪತಿಯೊಂದಿಗೆ ಹುಬ್ಬಳ್ಳಿಗೆ ತೆರಳಿದ್ದರು.

ದಾಂಪತ್ಯದ ಸಾಕ್ಷಿಯಾಗಿ ಮಗ ಹುಟ್ಟಿದ್ದ. ಆತನ ಆರೈಕೆಯಲ್ಲಿ ಎರಡು ವರ್ಷದ ವಿರಾಮ. ಮತ್ತೆ ಸೇವೆ ಮುಂದುವರಿಸುವ ಸಲುವಾಗಿ ನಿರ್ದಿಷ್ಟ ಕ್ಷೇತ್ರದಲ್ಲಿ ಪರಿಣತಿ ಪಡೆಯಲು ಲಂಡನ್‌ಗೆ ತೆರಳಿದ ಅವರು, ನೇತ್ರ ವಿಭಾಗದಲ್ಲಿ ಸ್ನಾತಕೋತ್ತರ ಕೋರ್ಸ್ ಪೂರೈಸಿದರು. ಈ ಅವಧಿಯಲ್ಲಿ ವೈಯಕ್ತಿಕ ಬದುಕಿನಲ್ಲಿ ಬೇಸರ ಕಾಣಿಸಿಕೊಂಡಿತ್ತು.

ಏನು ಮಾಡುವುದು ಎಂದು ಚಿಂತಿಸುವಾಗಲೇ ಬಳಿಕ ಮತ್ತೆ ಕೈಬೀಸಿ ಕರೆದದ್ದೇ ಬೀದರ್. ಅದಕ್ಕೆ ನೆಪವಾಗಿದ್ದು ಮಾತ್ರ ಬದುಕಿನುದ್ದಕ್ಕೂ ಕಾಡುವ ಬೆಳವಣಿಗೆ. ಅದು, ತಂದೆ-ತಾಯಿ ಇಬ್ಬರಿಗೂ ಕ್ಯಾನ್ಸರ್ ಇದೆ, ಮತ್ತದು 4ನೇ ಹಂತದಲ್ಲಿದೆ ಎಂಬುದು.

ತಪಾಸಣೆ ನಡೆಸಿದ ವೈದ್ಯರು ತಂದೆ 4 ತಿಂಗಳಲ್ಲಿ, ತಾಯಿ ಹೆಚ್ಚೆಂದರೆ ಒಂದು ವರ್ಷದ ಅವಧಿಯಲ್ಲಿ ಅಸು ನೀಗಬಹುದು ಎಂದು ಹೇಳಿದ್ದರು. ಅದು 2002ರ ಅವಧಿ. ಒಂದೆಡೆ ವೈಯಕ್ತಿಕ ಜೀವನದ ತಳಮಳ, ಇನ್ನೊಂದೆಡೆ ಬದುಕಿನಲ್ಲಿ ಎದುರಾಗುತ್ತಿರುವ ಸಮಸ್ಯೆಗಳ ಗಾಳ. ನಾಲ್ವರು ಮಕ್ಕಳಲ್ಲಿ ಇವರೇ ಹಿರಿಯವರು. ಉಳಿದ ಮೂವರೂ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದಾರೆ.

ವ್ಯಕ್ತಿಗತ ನೋವು ಮರೆತು ತಂದೆ-ತಾಯಿಯ ಆರೈಕೆ ಮಾಡುವ ಉದ್ದೇಶದಿಂದ ಸಿಬಿಲ್ ಬೀದರ್‌ಗೆ ಬಂದರು. ಆರೈಕೆ ಫಲ ನೀಡಲಿಲ್ಲ. ವರ್ಷದ ಅಂತರದಲ್ಲಿ ಇಬ್ಬರೂ ಮೃತಪಟ್ಟರು. ಮುಂದೇನು ಎಂಬ ಪ್ರಶ್ನೆ. ಒಡಹುಟ್ಟಿದವರು ಒಟ್ಟಾಗಿ ಚರ್ಚಿಸಿ, ಆಸ್ತಿ ಎಲ್ಲವನ್ನೂ ಮಾರಾಟ ಮಾಡಿ ಬೀದರ್‌ನಿಂದಲೇ ನಿರ್ಗಮಿಸೋಣ ಎಂಬ ಸಲಹೆ ಇಟ್ಟರು.

ಆದರೆ, ಆಸ್ಪತ್ರೆಯನ್ನೇ ಅವಲಂಬಿಸಿದ್ದ ಸಿಬ್ಬಂದಿ, ಕುಷ್ಠರೋಗಿಗಳ ಸ್ಥಿತಿಯನ್ನು ಗಮನಿಸಿದ ಸಿಬಿಲ್, ತಾವು ಬೀದರ್‌ನಲ್ಲೇ ನೆಲೆ ನಿಂತು ಆಸ್ಪತ್ರೆ ಮತ್ತು ಅಪ್ಪನ ಸೇವೆಯನ್ನು ಮುನ್ನಡೆಸುವ ನಿರ್ಧಾರ ಮಾಡಿದರು. ಮುಂದೆ ಈ ಸವಾಲಿನ ಜೊತೆಗೆ, ಸಂಸ್ಥೆಯನ್ನು ಮಹಿಳೆಯೊಬ್ಬರು ಮುನ್ನಡೆಸುವಾಗ ಸಹಜವಾಗಿ ಎದುರಾಗುವ ಸವಾಲುಗಳು ಕೂಡಾ ಸೇರಿಕೊಂಡವು.

ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಸಂಸ್ಥೆ ಅವರ ಮಾತಿಗೆ ಹೆಚ್ಚಾಗಿ ಸ್ಪಂದಿಸುತ್ತಿರಲಿಲ್ಲ; ಜೊತೆಗೆ ಸರ್ಕಾರಿ ಕಚೇರಿಗಳಿಗೆ ಎಡತಾಕುವುದು, ಅಲ್ಲಿ ಕೆಲಸ ಆಗುವ ತನಕ ಕಾಯುವುದು, ಕಡತಗಳ ಫಾಲೋಅಪ್‌ನಂತಹ ಸವಾಲುಗಳೂ ಎದುರಿಗಿದ್ದವು.

ಸ್ಥಳೀಯವಾಗಿ ಕೆಲವರು ಸಕಾರಾತ್ಮಕವಾಗಿ ಸ್ಪಂದಿಸಿದ ಕಾರಣ ಈ ಎಲ್ಲ ಸವಾಲುಗಳನ್ನೂ ಎದುರಿಸಿ, ಸಾಮಾನ್ಯ ಆಸ್ಪತ್ರೆಯನ್ನು ಕೇವಲ ನೇತ್ರ ತಪಾಸಣೆ ಆಸ್ಪತ್ರೆಯಾಗಿ ಪರಿವರ್ತಿಸಿದರು. ಈ ಆಸ್ಪತ್ರೆಯಲ್ಲಿ ಈಗ ನಿತ್ಯ ಸರಾಸರಿ 100 ಜನರಿಗೆ ನೇತ್ರ ತಪಾಸಣೆ, ಶಸ್ತ್ರಚಿಕಿತ್ಸೆ ನಡೆಯುತ್ತದೆ.

ಶೇ 50ಕ್ಕೂ ಹೆಚ್ಚು ಜನರಿಗೆ ಉಚಿತವಾಗಿ, ಕಡಿಮೆ ಶುಲ್ಕದಲ್ಲಿ ಸೇವೆ ಸಿಗುತ್ತಿದೆ ಎಂಬುದು ಗಮನಾರ್ಹ. ಜೊತೆಗೆ, ನಗರದ ಹೊರವಲಯದಲ್ಲಿರುವ ಕುಷ್ಠರೋಗಿಗಳ ವಸತಿ ಸ್ಥಳಕ್ಕೆ ಹೋಗಿ ಆಗಾಗ್ಗೆ ಆರೈಕೆ ಮಾಡುವ ಸಿಬಿಲ್, ಕುಷ್ಠರೋಗಿಗಳ ಮಕ್ಕಳು ಸೇರಿದಂತೆ 25 ಮಕ್ಕಳಿಗೆ ಆಸ್ಪತ್ರೆಯಲ್ಲೇ ಆರೈಕೆ ನೀಡಿ, ಶಿಕ್ಷಣ ಕೊಡಿಸುತ್ತಿದ್ದಾರೆ.

ಮಕ್ಕಳ ಆರೈಕೆ, ಶುಚಿತ್ವ ನೋಡಿಕೊಳ್ಳಲು ಕಡುಬಡ ಕುಟುಂಬದ ಯುವತಿಯನ್ನು ನಿಯೋಜಿಸಿದ್ದಾರೆ. ಈ ಯುವತಿ ಎಂ.ಬಿ.ಎ ಅಭ್ಯಸಿಸುತ್ತಿದ್ದಾರೆ. `ಬೆಳಿಗ್ಗೆ ನಿತ್ಯ ಸ್ನಾನ ಮಾಡುತ್ತೇವೆ. ಎರಡು ಸಾರಿ ಬ್ರಷ್ ಮಾಡುತ್ತೇವೆ. ಪ್ರಾರ್ಥನೆ, ಪೂಜೆ ಮಾಡುತ್ತೇವೆ. ಶಾಲೆಗೆ ಹೋಗುತ್ತೇವೆ. ಸಂಜೆ ಟ್ಯೂಷನ್ ಕೂಡಾ ಇರುತ್ತದೆ' ಎಂಬ 5ನೇ ತರಗತಿಯಲ್ಲಿರುವ ಪವನ್‌ನ ಮಾತು ವಾಸ್ತವದ ಚಿತ್ರ ನೀಡುತ್ತದೆ.

`ಈ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವ ಮೂಲಕ ನಾಗರಿಕರಾಗಿ, ಭವಿಷ್ಯದಲ್ಲಿ ಆಸ್ಪತ್ರೆಗೂ ಆಸರೆಯಾಗಿ ಇರುವಂತೆ ಬೆಳೆಸುವುದು ಗುರಿ. ಇಷ್ಟು ಮಕ್ಕಳ ಆರೈಕೆಗೆ ಆರ್ಥಿಕ ಹೊಣೆಗಾರಿಕೆ ಇದೆ ಎಂಬುದು ನಿಜ. ಅದಕ್ಕಾಗಿ ನನ್ನ ಸ್ನೇಹಿತ ವರ್ಗ, ಪರಿಚಿತರು ಒಬ್ಬೊಬ್ಬ ಮಕ್ಕಳ ವೆಚ್ಚದ ಹೊಣೆ ಹೊರುವಂತೆ ನೋಡಿಕೊಂಡಿದ್ದೇನೆ. ಅವರೆಲ್ಲ ವಾರ್ಷಿಕ 15-20 ಸಾವಿರ ರೂಪಾಯಿ ಕೊಡುತ್ತಾರೆ. ಪ್ರತಿ ಕ್ರಿಸ್‌ಮಸ್‌ಗೆ ಕೊಡುಗೆ ಕಳುಹಿಸುತ್ತಾರೆ. ಹೀಗಾಗಿ ಈ ವೆಚ್ಚವನ್ನು ನಿಯೋಜಿಸುವುದು ಸುಲಭವಾಗಿದೆ' ಎನ್ನುತ್ತಾರೆ ಸಿಬಿಲ್. ತಮ್ಮ ನಂತರವೂ ಆಸ್ಪತ್ರೆ, ಸೇವೆ ಮುಂದುವರಿಯಬೇಕು ಎಂಬ ಉದ್ದೇಶದಿಂದ ಅದನ್ನು ಟ್ರಸ್ಟ್ ಆಗಿ ಪರಿವರ್ತಿಸಿ, ಸ್ವತಃ ತಾವೂ ಒಬ್ಬ ಉದ್ಯೋಗಿಯಾಗಿ ಅವರು ಗುರುತಿಸಿಕೊಂಡಿದ್ದಾರೆ.

ದಾಂಪತ್ಯದ ಪ್ರತೀಕವಾಗಿ ಇರುವ ಮಗ `ವಿನೀತ'ನ ಜೊತೆಗೆ, ಅನಾಥ ಹೆಣ್ಣು ಶಿಶು `ಖುಷಿಯನ್ನು ದತ್ತು ಪಡೆದಿದ್ದಾರೆ. ಆಸ್ಪತ್ರೆ, ಕುಷ್ಠರೋಗಿಗಳ ಆರೈಕೆ, ಅವರ ಮಕ್ಕಳಿಗೆ ಬದುಕು ಕಟ್ಟಿಕೊಡುವ ಅವರ ಕಾಯಕದಲ್ಲಿ ಸಮಾಜ ಅವರಲ್ಲಿ ವಿನೀತ ಭಾವನೆಯನ್ನು ಗುರುತಿಸಿದರೆ, ಈ ಎಲ್ಲ ಸೇವೆಯಲ್ಲಿ ಸ್ವತಃ ಸಿಬಿಲ್ ಖುಷಿಯನ್ನು ಕಂಡುಕೊಂಡಿದ್ದಾರೆ. ದಿನ, ವರ್ಷ ಕಳೆದಂತೆ ಆಸ್ಪತ್ರೆ, ಸೇವೆಯ ನಡುವೆ ಅವರ ಬದುಕಿನ ಚಕ್ರ ತಿರುಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT