ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇವೆ ಮುಂದುವರಿಸಲು ಆಗ್ರಹಿಸಿ ಶಿಕ್ಷಕರ ಧರಣಿ

Last Updated 9 ಅಕ್ಟೋಬರ್ 2012, 9:55 IST
ಅಕ್ಷರ ಗಾತ್ರ

ಧಾರವಾಡ: ಸರ್ಕಾರಿ ಉನ್ನತೀಕರಿಸಿದ ಪ್ರೌಢಶಾಲೆಗಳ ಹಾಗೂ ಆದರ್ಶ ವಿದ್ಯಾಲಯಗಳ ಗುತ್ತಿಗೆ ಶಿಕ್ಷಕ/ ಶಿಕ್ಷಕೇತರರ ಸೇವೆಯನ್ನು ಮುಂದುವರೆಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ಆದರ್ಶ ವಿದ್ಯಾಲಯಗಳ ಗುತ್ತಿಗೆ ಶಿಕ್ಷಕರ/ ಶಿಕ್ಷಕೇತರರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಗುತ್ತಿಗೆ ಶಿಕ್ಷಕರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಕರ್ನಾಟಕ ಸರ್ಕಾರದ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ (ಆರ್‌ಎಂಎಸ್)ದ ಅಡಿಯಲ್ಲಿ ರಾಜ್ಯದಾದ್ಯಂತ ಆದರ್ಶ ವಿದ್ಯಾಲಯ ಮತ್ತು ಉನ್ನತೀಕರಿಸಿದ ಪ್ರೌಢಶಾಲೆಗಳಲ್ಲಿ ಸುಮಾರು ಮೂರು ಸಾವಿರ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ಸಿಬ್ಬಂದಿ ಹೊರಗುತ್ತಿಗೆ ಆಧಾರದ ಮೇಲೆ ಕಳೆದ 2011ರ ಆಗಸ್ಟ್‌ನಿಂದ ಯಾವುದೇ ಸೇವಾ ಭದ್ರತೆ ಇಲ್ಲದೇ ಕೆಲಸ ಮಾಡುತ್ತಿದ್ದಾರೆ. ಬರುವ ಡಿಸೆಂಬರ್‌ನಿಂದ ಈ ಶಿಕ್ಷಕರನ್ನು ಹುದ್ದೆಯಿಂದ ಕೈಬಿಡುವ ಬಗ್ಗೆ ಚಿಂತನೆ ನಡೆದಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ನಮ್ಮನ್ನು ಸೇವೆಯಿಂದ ವಜಾಗೊಳಿಸಿದರೆ ನಮ್ಮ ಅವಲಂಬಿಸಿದ ಕುಟುಂಬವನ್ನು ಅತಂತ್ರ ಸ್ಥಿತಿಗೆ ದೂಡಿದಂತಾಗುತ್ತದೆ ಎಂದು ಸಂಘಟನೆ ಅಧ್ಯಕ್ಷ ಶಾಂತಗೌಡ ಬಿರಾದಾರ ಆತಂಕ ವ್ಯಕ್ತಪಡಿಸಿದರು.

ಡಿಸೆಂಬರ್‌ನಲ್ಲಿ ಸೇವೆಯಿಂದ ಕೈಬಿಟ್ಟರೆ ತರಗತಿಗಳು ಸಮರ್ಪಕವಾಗಿ ನಡೆದುಕೊಂಡು ಹೋಗಲು ತೊಂದರೆಯಾಗುತ್ತದೆ. ಆದ್ದರಿಂದ ಈಗ ಇರುವ ಶಿಕ್ಷಕರ ಸೇವೆಯನ್ನೇ ಮುಂದುವರೆಸಬೇಕು. ಈ ಹುದ್ದೆಗಳಿಗೆ ಬೇರೆಯವರನ್ನು ಭರ್ತಿ ಮಾಡಬಾರದು. ಈಗಾಗಲೇ ಶಿಕ್ಷಕರಿಂದ ಪಾವತಿ ಮಾಡಿಸಿಕೊಂಡ ರೂ 12 ಸಾವಿರ ಠೇವಣಿ ಹಣವನ್ನು ಆಸ್ಟ್ರಿಕ್ಸ್ ಕಂಪೆನಿಯವರು ವಾಪಸ್ ನೀಡಬೇಕು. ಕಾಯಂ ಶಿಕ್ಷಕರಿಗೆ ನೀಡುವ ಗುತ್ತಿಗೆ ಸೌಲಭ್ಯವನ್ನು ಗುತ್ತಿಗೆ ಶಿಕ್ಷಕರಿಗೂ ವಿಸ್ತರಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

ಸಂಘದ ಪ್ರಧಾನ ಕಾರ್ಯದರ್ಶಿ ಆನಂದ ಗಿರಿಯಪ್ಪನವರ, ಮುರವಿಕುಮಾರ್ ಬೆಳಹಾರ, ಭೀಮಣ್ಣ, ಸಮೀರುದ್ದಿನ್ ಲಕ್ಷ್ಮೇಶ್ವರ, ಸಾವಿತ್ರಿ ಕಾಳೆ ರಾಜೇಶ್ವರಿ ಹಿರೇಮಠ, ರಶ್ಮಿ ಆರ್., ಅಫ್ರೋಜ್ ಭಾಗವಹಿಸಿದ್ದರು.

ಬೆಂಬಲ: ಪ್ರತಿಭಟನಾ ಸ್ಥಳಕ್ಕೆ ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ಗುರಿಕಾರ, ಪ್ರೌಢಶಾಲಾ ಶಿಕ್ಷಕರ ಸಂಘದ ಆನಂದ ಕುಲಕರ್ಣಿ, ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆಯ (ಎಐಡಿಎಸ್‌ಓ) ಜಿಲ್ಲಾ ಅಧ್ಯಕ್ಷ ಗಂಗಾಧರ ಬಡಿಗೇರ, ಅಖಿಲ ಭಾರತ ಪ್ರಜಾಸತ್ತಾತ್ಮಕ ಯುವಜನ ಸಂಘಟನೆಯ (ಎಐಡಿವೈಓ) ಜಿಲ್ಲಾ ಅಧ್ಯಕ್ಷ ಲಕ್ಷ್ಮಣ ಜಡಗನ್ನವರ, ಕರ್ನಾಟಕ ರಕ್ಷಣಾ ವೇದಿಕೆ, ಜಿಲ್ಲಾ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಎಸ್‌ಸಿ, ಎಸ್‌ಟಿ ಶಿಕ್ಷಕರ ಸಂಘದ ಮುಖಂಡರು ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT