ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇವೆಯ ಹೇಳಿಕೊಡು ಓ ದೇವರೆ...

ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಘಟಕದ ತರಬೇತಿ ಸಮಾರೋಪ
Last Updated 5 ಡಿಸೆಂಬರ್ 2013, 6:56 IST
ಅಕ್ಷರ ಗಾತ್ರ

ಕೋಲಾರ: ನಮ್ಮ ಹೃದಯದೊಳಗೆ ಬಂದು ಸೇವೆಯ ಹೇಳಿಕೊಡು ಓ ದೇವರೇ, ದೇಶಕ್ಕಾಗಿ ಬದುಕುವ, ದೇಶಕ್ಕಾಗಿ ತ್ಯಾಗ ಮಾಡುವ ಪಾಠವ ಹೇಳಿಕೊಡು ದೇವರೆ...

–ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಘಟಕವು ನಗರದ ಹೊರವಲಯದ ಗುಪ್ತಾ ಶಾಲೆಯಲ್ಲಿ ಬುಧವಾರ ಏರ್ಪ­ಡಿಸಿದ್ದ ತೃತೀಯ ಚರಣ್, ಸುವರ್ಣ ಪಂಖ್ ಮತ್ತು ತೃತೀ ಸೋಪಾನದ ತರಬೇತಿಯಲ್ಲಿ ಪಾಲ್ಗೊಂಡ 460ಕ್ಕೂ ಹೆಚ್ಚು ಮಕ್ಕಳು ಪ್ರಮಾಣ ಪತ್ರ ಪಡೆ­ಯುವ ಮುನ್ನ ಈ ಪ್ರಾರ್ಥನಾ ಗೀತೆ­ಯನ್ನು ಹೇಳಿ ಕಾರ್ಯಕ್ರಮಕ್ಕೆ ಮೆರುಗು ತಂದರು.

ಹೃದಯದೊಳಗೊಂದು ಪರಂ­ಜ್ಯೋತಿ ಬೆಳಗಿಸು. ಸೇವೆಯೇ ನಮ್ಮ ಧರ್ಮವಾಗಲೀ, ಸೇವೆಯೇ ನಮ್ಮ ಕರ್ಮವಾಗಲಿ. ಓ ದೇವರೇ. ದೇಶಕ್ಕಾಗಿ ಪ್ರಾಣವನ್ನು ಮುಡಿಪಾಗಿಡುವುದನ್ನು ನಮಗೆ ಕಲಿಸು....

ಈ ಪ್ರಾರ್ಥನಾ ಗೀತೆಯನ್ನು ಹೇಳಿದ ಮಕ್ಕಳಲ್ಲೊಂದು ಗಾಢ ತನ್ಮಯತೆ ಇತ್ತು. ಸೇವೆ ಮತ್ತು ತ್ಯಾಗ ಜೀವನದ ಕುರಿತ ಆರ್ದ್ರ ಭಾವನೆಯೂ ಇತ್ತು.

ಉತ್ತಮ ನಾಗರಿಕರಾಗಿ: ನಂತರ ಪ್ರಮಾ­ಣ­ಪತ್ರಗಳನ್ನು ವಿತರಿಸಿ ಮಾತನಾಡಿದ ಘಟಕದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಡಿ.ಕೆ.ರವಿ,  ಬಹುತೇಕ ಶಾಲೆಗಳಲ್ಲಿ ಪಠ್ಯ ಚಟುವಟಿಕೆಗಷ್ಟೇ ಆದ್ಯತೆ ನೀಡಲಾಗುತ್ತದೆ. ಆದರೆ ದೇಶ­ಸೇವೆಯ ಮನೋಭಾವವನ್ನು, ಉತ್ತಮ ನಾಗರಿಕರ ಲಕ್ಷಣಗಳನ್ನು ಮಕ್ಕಳಲ್ಲಿ ಮೂಡಿಸುವ ಪಠ್ಯೇತರ ಚಟುವಟಿಕೆಗಳ ಬಗ್ಗೆ ಸದಾ ಗಂಭೀರ­ವಾಗಿ ಆಲೋಚಿಸಬೇಕಾಗಿದೆ. ಆಗ ಮಾತ್ರವೇ ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಎಂಬ ನಾಣ್ಣುಡಿಗೆ ಅರ್ಥ ದೊರಕುತ್ತದೆ ಎಂದರು.

ಬೇರೆ ದೇಶಗಳ ಪಠ್ಯಕ್ರಮಗಳಲ್ಲಿ ಮಕ್ಕಳ ವ್ಯಕ್ತಿತ್ವ ವಿಕಾಸಕ್ಕೆ ಪೂರಕವಾದ ಪಾಠಗಳನ್ನೂ ಸೇರಿಸಲಾಗಿರುತ್ತದೆ. ಆದರೆ ನಮ್ಮಲ್ಲಿ ಅಂಥ ವ್ಯವಸ್ಥೆ ಇಲ್ಲ. ಪ್ರತಿಭೆ ಇದ್ದರೂ ನಮ್ಮ ಮಕ್ಕಳು ನಾಯಕತ್ವದ ಗುಣಗಳ ವಿಷಯದಲ್ಲಿ ಕಳಪೆ ಸಾಧನೆ ತೋರುತ್ತಾರೆ ಎಂದು ವಿಷಾದಿಸಿದರು.

ತಮ್ಮೊಳಗಿನ ಪ್ರತಿಭೆ ಮತ್ತು ಪರಿ­ಶ್ರಮ­ವನ್ನು ಅಗತ್ಯ ಸಂದರ್ಭಗಳಲ್ಲಿ ಹೇಗೆ ಪ್ರದರ್ಶಿಸಬೇಕು. ಎದುರಿಗಿರು­ವ­ವ­ರಲ್ಲಿ ಹೇಗೆ ಉತ್ತಮ ಅಭಿಪ್ರಾಯ­ವನ್ನು ಮೂಡಿಸಬೇಕು ಎಂಬುದೂ ಗೊತ್ತಿ­-­­ರುವುದಿಲ್ಲ. ಅಂಥ ಪಾಠವನ್ನು ಶಾಲೆಯಲ್ಲಿ ಹೇಳಿಕೊಡಬೇಕು ಎಂದರು.
ತಾವು ಹಳ್ಳಿಯಲ್ಲಿ ಓದುತ್ತಿದ್ದಾಗ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕ ಸೇರಿ ತರಬೇತಿ ಪಡೆಯುವ ಅವಕಾಶವೇ ದೊರಕಿ­ರಲಿಲ್ಲ. ಈಗ ತರಬೇತಿ ಪಡೆ­ಯು­ತ್ತಿರುವ ಮಕ್ಕಳನ್ನು ನೋಡಿ ಸಂತೋಷ ಪಡುವ ಅವಕಾಶ ಸಿಕ್ಕಿದೆ. ಎಲ್ಲ ಮಕ್ಕಳೂ  ಸ್ಕೌಟ್ಸ್ ಮತ್ತು ಗೈಡ್ಸ್ ಸೇರಿ ಜೀವನದ ಮತ್ತು ಉತ್ತಮ ನಾಗರಿಕರಾಗುವ ಪಾಠ ಕಲಿ­ಯ­ಬೇಕು ಎಂದರು.

ಉಚಿತ ಈಜು, ಸ್ಕೇಟಿಂಗ್: ಇದೇ ಸಂದರ್ಭದಲ್ಲಿ ಮಾತನಾಡಿದ ಶಾಲೆಯ ಮುಖ್ಯಸ್ಥ ಬಿ.ಎಸ್.ಶ್ಯಾಮ­ಸುಂದರ ಗುಪ್ತಾ, ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ ಪಡೆದಿರುವ ಎಲ್ಲ ಮಕ್ಕ­ಳಿಗೂ ಮುಂದಿನ ಬೇಸಿಗೆ ರಜೆಯ ಸಂದ­ರ್ಭದಲ್ಲಿ ಶಾಲೆಯಲ್ಲಿ ಉಚಿತ­ವಾಗಿ ಈಜು ಮತ್ತು ಸ್ಕೇಟಿಂಗ್ ಸೌಲಭ್ಯ­ವನ್ನು ಕಲ್ಪಿಸುವುದಾಗಿ ಭರವಸೆ ನೀಡಿದರು.

ಬೀಳ್ಕೊಡುಗೆ: ಸ್ಕೌಟ್ಸ್ ಮತ್ತು ಗೈಡ್ಸ್ ಬೆಂಗಳೂರಿನ ಕೇಂದ್ರ ಕಚೇರಿಗೆ ವರ್ಗಾ­ವಣೆಗೊಂಡಿರುವ ರಾಜ್ಯ ಸಹ ಸಂಘ­ಟನಾ ಆಯುಕ್ತರಾದ ಕೆ.ವಿ.ಶ್ಯಾಮಲಾ ಅವ­ರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಬೀಳ್ಕೊಡಲಾಯಿತು.

ರಾಷ್ಟ್ರಪುರಸ್ಕಾರದ ಪರೀಕ್ಷೆಗೆ ಆಯ್ಕೆ­ಯಾಗಿರುವ ಬಂಗಾರಪೇಟೆಯ ಜೈನ್ ಗ್ಲೋಬಲ್ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿಯರಾದ ವಿ.ಧರಣಿ, ಎಸ್.­ಐಶ್ವರ್ಯ ಮತ್ತು ಆರ್.ಜಯಂತಿ ಅವ­ರಿಗೆ ರಾಜ್ಯ ಪುರಸ್ಕಾರದ ಪ್ರಮಾಣ­ಪತ್ರಗಳನ್ನು ವಿತರಿಸಲಾಯಿತು.

ಘಟಕದ ಮುಖ್ಯ ಆಯುಕ್ತ ಕೆ.ವಿ.­ಶಂಕ­ರಪ್ಪ, ಸ್ಥಾನಿಕ ಆಯುಕ್ತ ಕೆೃಪ್ರಹ್ಲಾ­ದರಾವ್, ಉಪಾಧ್ಯಕ್ಷ ಡಾ.ಎಂ.ಚಂದ್ರ­ಶೇಖರ, ಕಾರ್ಯದರ್ಶಿ ಎಂ.ವಿ.ಜನಾ­ರ್ದನ, ಗೈಡ್ಸ್ ಆಯುಕ್ತೆ ಕೆ.ಆರ್.­ಜಯಶ್ರೀ, ಗೋಪಾಲರೆಡ್ಡಿ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಬಸವ­ರಾಜ ಚಿಲಕಾಂತಮಠ. ಶಾಲೆಯ ಕಾರ್ಯ­ದರ್ಶಿ ಇಂದಿರಾ ಗುಪ್ತಾ, ಪ್ರಾಂಶು­ಪಾಲ ಮೋಸೆಸ್, ನಿರ್ದೇಶಕ ಮೋಹನಗೌಡ, ಚಾಂದ್ ಪಾಷಾ ಇತರರಿದ್ದರು.


ಸಮವಸ್ತ್ರಕ್ಕೆ ಅನುದಾನ: ಪಂಚಾಯಿತಿಗಳ ನಿರ್ಲಕ್ಷ್ಯ
ಕೋಲಾರ:
ಸ್ಕೌಟ್ಸ್ ಮತ್ತು ಗೈಡ್ಸ್  ಸೇರಿರುವ ಬಡ ಮಕ್ಕಳಿಗೆ ಉಚಿತವಾಗಿ ಸಮವಸ್ತ್ರ ನೀಡಲು ಅನುದಾನ ಬಿಡುಗಡೆ ಮಾಡುವಲ್ಲಿ ಗ್ರಾಮ ಪಂಚಾಯಿತಿಗಳು ನಿರ್ಲಕ್ಷ್ಯ ವಹಿಸಿವೆ ಎಂದು ಸಂಘಟಕರು ಅಸಮಾಧಾನ ವ್ಯಕ್ತಪಡಿಸಿದ ಘಟನೆಯೂ ಕಾರ್ಯಕ್ರಮದಲ್ಲಿ ನಡೆಯಿತು.

ಕಾರ್ಯಕ್ರಮ ನಿರೂಪಿಸಿದ ಬಂಗಾರಪೇಟೆ ಘಟಕದ ನಂಜುಂಡಪ್ಪ ಅವರು, ಗ್ರಾಮ ಪಂಚಾಯಿತಿಗಳು ತಲಾ 2 ಸಾವಿರ ರೂಪಾಯಿ ನೀಡಬೇಕು ಎಂದು ಮುಖ್ಯಕಾರ್ಯನಿರ್ಹಣಾಧಿಕಾರಗಳು ಆದೇಶ ಹೊರಡಿಸಿದ್ದರೂ ಬಹುತೇಕ ಪಂಚಾಯಿತಿಗಳು ಅನುದಾನ ನೀಡಿಲ್ಲ ಎಂದರು.

ಜಿಲ್ಲಾ ಪಂಚಾಯಿತಿ ವತಿಯಿಂದ ₨ 25 ಸಾವಿರ, ಪ್ರತಿ ತಾಲ್ಲೂಕು ಪಂಚಾಯಿತಿಯಿಂದ ₨ 5 ಸಾವಿರ ಮತ್ತು ಪ್ರತಿ ಗ್ರಾಮ ಪಂಚಾಯಿತಿಯಿಂದ ₨ 2 ಸಾವಿರ ನೀಡಬೇಕು ಎಂಬ ಆದೇಶದ ಪ್ರಕಾರ ಜಿ.ಪಂ. ಮತ್ತು ತಾ.ಪಂ.ನಿಂದ ಅನುದಾನ ದೊರಕಿದೆ.

ಆದರೆ ಗ್ರಾಮ ಪಂಚಾಯಿತಿಗಳು ಅನುದಾನ ನೀಡಿಲ್ಲ. ನೀಡಿದ್ದರೆ ಹೆಚ್ಚು ಬಡ ಮಕ್ಕಳಿಗೆ ಉಚಿತವಾಗಿ ಸಮವಸ್ತ್ರಗಳನ್ನು ವಿತರಿಸಲು ಸಾಧ್ಯವಾಗುತ್ತಿತ್ತು ಎಂದರು.

ನಿವೇಶನ: ಘಟಕಕ್ಕೆ ಸ್ವಂತ ಸ್ಥಳ ಎಂಬುದೇ ಇಲ್ಲದಿರುವುದರಿಂದ ಶಿಬಿರಗಳನ್ನು ಆಯೋಜಿಸಲು ತೊಂದರೆಯಾಗಿದೆ. ಈ ಜಿಲ್ಲಾಧಿಕಾರಿಗಳು ನಿವೇಶನ ಸೌಲಭ್ಯವನ್ನು ಕಲ್ಪಿಸಬೇಕು ಎಂದು ತಮ್ಮ ಪ್ರಾಸ್ತಾವಿಕ ಮಾತಿನಲ್ಲಿ ಕಾರ್ಯದರ್ಶಿ ಎಂ.ವಿ.ಜನಾರ್ದನ ಕೋರಿಕೆ ಸಲ್ಲಿಸಿದರು.

ಸ್ಕೌಟಿಂಗ್ ಈಸ್ ಔಟಿಂಗ್ ಎಂಬ ಮಾತಿನಂತೆ ಸ್ಕೌಟ್ಸ್ ಮತ್ತು ಗೈಡ್ಸ್ ತರ­ಬೇತಿಗಳನ್ನು ಒಳಾಂಗಣಗಳಿಗಿಂತಲೂ ಹೊರಾಂಗಣಗಳಲ್ಲಿಯೇ ಆಯೋಜಿ­ಸಬೇಕು. ಅದಕ್ಕೆ ಅನುಕೂಲ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT