ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈಕಲ್ ಜೋಡಣಾ ಕೇಂದ್ರ ಈ ಹೈಸ್ಕೂಲ್‌...!

Last Updated 6 ಜನವರಿ 2014, 6:41 IST
ಅಕ್ಷರ ಗಾತ್ರ

ಹಾವೇರಿ: ನಗರದ ಮುನ್ಸಿಪಲ್‌ ಹೈಸ್ಕೂಲ್‌ ಆವರಣ ಅಕ್ಷರಶಃ ಸೈಕಲ್ ಬಿಡಿ ಭಾಗಗಳ ಜೋಡಣಾ ಕೇಂದ್ರವಾಗಿ ಮಾರ್ಪಟ್ಟಿದೆ. ಆವರಣದ ಯಾವುದೇ ಭಾಗಕ್ಕೆ ಹೋದರೂ ಅಲ್ಲೊಂದು ಸೈಕಲ್‌ಗೆ ಬೇಕಾದ ರಿಮ್‌, ಟೈಯರ್‌, ಟ್ಯೂಬ್‌, ಬಂಪರ್‌ ಸೇರಿದಂತೆ ಅನೇಕ ಬಿಡಿ ಭಾಗಗಳ ಗುಡ್ಡೆಯೇ ಬಿದ್ದಿದೆ. ಎಂಟತ್ತು ಯುವಕರ ತಂಡ ಬೆಳಿಗ್ಗೆಯಿಂದ ಸಂಜೆವರೆಗೆ ಬಿಡಿ ಭಾಗಗಳನ್ನು ಸೇರಿಸುತ್ತಾ ದಿನವೊಂದಕ್ಕೆ ಬಣ್ಣ ಬಣ್ಣದ ನೂರಾರು ಸೈಕಲ್‌ಗಳನ್ನು ಸಿದ್ಧಪಡಿಸುತ್ತಿದ್ದಾರೆ.

ಹಾಗಂತ ಶಾಲಾ ಆವರಣದಲ್ಲಿ ಯಾವುದೋ ಸೈಕಲ್‌ ಕಂಪೆನಿ ತನ್ನ ಸೈಕಲ್‌ಗಳ ತಯಾರಿಸುತ್ತಿಲ್ಲ. ರಾಜ್ಯ ಸರ್ಕಾರವು ಪ್ರೌಢಶಾಲಾ ಮಕ್ಕಳಿಗೆ ನೀಡುವ ಉಚಿತ ಸೈಕಲ್‌ಗಳನ್ನು ಸಿದ್ಧಪಡಿಸುತ್ತಿರುವ ದೃಶ್ಯ.

ಕಳೆದ ಒಂದು ವಾರದಿಂದ ಲೋಡ್‌ಗಟ್ಟಲೇ ಬಂದು ಬಿದ್ದ ಸೈಕಲ್‌ ಬಿಡಿ ಭಾಗಗಳನ್ನು ಯುವ ಮೇಸ್ತ್ರಿಗಳು 1500 ಕ್ಕೂ ಹೆಚ್ಚು ಸೈಕಲ್‌ಗಳನ್ನು ನಿರ್ಮಿಸಿದ್ದಾರೆ. ಇನ್ನೂ ನಿರ್ಮಿಸುತ್ತಲೇ ಇದ್ದಾರೆ. ಇಡೀ ತಾಲ್ಲೂಕಿಗೆ ಪೂರೈಸಬೇಕಾದ ಸೈಕಲ್‌ಗಳ ತಯಾರಿಕೆ ಇಲ್ಲಿಯೇ ಆಗುತ್ತಿರುವುದರಿಂದ ಇನ್ನೂ 8–10 ದಿನಗಳ ಕಾಲ ಭರದಿಂದ ಕೆಲಸ ನಡೆಯಲಿದೆ.

ವಿದ್ಯಾರ್ಥಿಗಳಿಗೆ ತೊಂದರೆ: ಶಾಲಾ ಆವರಣದಲ್ಲಿಯೇ ಸೈಕಲ್‌ ಬಿಡಿ ಭಾಗಗಳನ್ನು ಹಾಕಿ, ಅಲ್ಲಿಯೇ ಅವುಗಳ ಜೋಡಣೆ ಮಾಡಲಾಗುತ್ತಿದೆ. ಅದರಿಂದ ಉಂಟಾಗುವ ಶಬ್ದದಿಂದ ಪಾಠ ಕೇಳಲು ಹಾಗೂ ಆವರಣದಲ್ಲಿ ಬಿಡಿ ಭಾಗಗಳ ಗುಡ್ಡೆ ಹಾಕಿದ್ದರಿಂದ ಜಾಗವಿಲ್ಲದಾಗಿದೆ. ವಿದ್ಯಾರ್ಥಿಗಳು ಆವರಣದಲ್ಲಿ ಓಡಾಡಲು ಕಷ್ಟಪಡಬೇಕಾಗಿದೆ.

ವಿತರಣೆ ವಿಳಂಬ: ಪ್ರತಿ ವರ್ಷ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವರ್ಷ ಆರಂಭವಾದ ಒಂದು ತಿಂಗಳಲ್ಲಿ ಜುಲೈ ಇಲ್ಲವೇ ಆಗಸ್ಟ್‌ನಲ್ಲಿ ಸರ್ಕಾರ ಸೈಕಲ್‌ ವಿತರಣೆ ಮಾಡಲಾಗುತ್ತಿತ್ತು. ಆದರೆ, ಶಾಲೆಗಳು ಆರಂಭವಾಗಿ ಆರು ತಿಂಗಳು ಗತಿಸಿವೆ. ಸರ್ಕಾರ ಈಗ ಇಲಾಖೆಗೆ ಸೈಕಲ್‌ ನೀಡಿದೆ. ಇದುವೇ ಸೈಕಲ್‌ ವಿತರಣೆ ವಿಳಂಬಕ್ಕೆ ಕಾರಣವಾಗಿದೆ.

ಈಗಷ್ಟೆ ಆರಂಭವಾದ ಸೈಕಲ್‌ಗಳ ಜೋಡಣೆ ಕಾರ್ಯ ಮುಗಿದ ನಂತರ ಸಿದ್ಧಗೊಂಡ ಸೈಕಲ್‌ಗಳನ್ನು ಬೇಡಿಕೆಗನುಗುಣವಾಗಿ ಆಯಾ ಶಾಲೆಗಳಿಗೆ ತಲುಪಿಸಬೇಕಿದೆ. ಆದಾದ ಮೇಲೆ ಶಿಕ್ಷಕರು ಸ್ಥಳೀಯ ಜನಪ್ರತಿನಿಧಿಗಳನ್ನು ಕರೆದು ವಿದ್ಯಾರ್ಥಿಗಳಿಗೆ ವಿತರಿಸಬೇಕಿದೆ.

ಪ್ರಯೋಜನಕ್ಕೆ ಬಾರದು: ಸರ್ಕಾರವು ವಿದ್ಯಾರ್ಥಿಗಳಿಗೆ ಅನುಕೂಲಕ್ಕಾಗಿ ಸೈಕಲ್‌ ನೀಡುವ ಯೋಜನೆ ಜಾರಿಗೆ ತಂದಿದ್ದು, ಶಾಲಾ ಆರಂಭದ ದಿನಗಳಲ್ಲಿ ನೀಡಿದರೆ ಸರ್ಕಾರದ ಉದ್ದೇಶ ಈಡೇರಲು ಸಾಧ್ಯ. ಶಾಲಾದಿನಗಳು ಮುಗಿದ ನಂತರ ನೀಡಿದರೇ ಪ್ರಯೋಜನವೇನು ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತದೆ.

ಅದು ಅಲ್ಲದೇ ಈಗಲೇ ವಿತರಣೆ ಮಾಡುವುದು ವಿಳಂಬವಾಗಿದೆ. ಅದರಲ್ಲಿ ಜನಪ್ರತಿ ನಿಧಿಗಳನ್ನು ಕರೆದು ಸೈಕಲ್‌ ವಿತರಿಸಬೇಕೆಂಬ ಕಡ್ಡಾಯ ಮೌಖಿಕ ನಿಯಮವೊಂದು ಜಾರಿಯಲ್ಲಿದೆ. ಶಾಸಕರ ಸಮಯ ನೋಡಿಕೊಂಡು ವಿತರಣೆ ಮಾಡಿದರೆ, ಕನಿಷ್ಠ ವಿದ್ಯಾರ್ಥಿಗಳಿಗೆ ಸೈಕಲ್‌ ಸಿಗುವುದು ಇನ್ನೂ ವಿಳಂಬವಾಗಬಹುದು.

ಇನ್ನೂ ಜನಪ್ರತಿನಿಧಿಗಳನ್ನು ಕರೆಯದೇ ವಿತರಿಸಿದರೆ, ಅವರ ಕೆಂಗಣ್ಣ ಶಾಲಾ ಶಿಕ್ಷಕರ ಮೇಲೆ ಬೀಳುತ್ತದೆ. ಅನಗತ್ಯ ಕಿರುಕುಳ ನೀಡುತ್ತಾರೆ. ಅದರ ಬದಲು ವಿದ್ಯಾರ್ಥಿಗಳಿಗೆ ಅನಾನುಕೂಲವಾದರೂ ಚಿಂತೆಯಿಲ್ಲ. ಜನಪ್ರತಿನಿಧಿಗಳು ಬರುವವರೆಗೆ ನಾವು ಸೈಕಲ್‌ ವಿತರಣೆ ಮಾಡುವುದಿಲ್ಲ ಎಂದು ನೋವಿನಿಂದಲೇ ನುಡಿಯುತ್ತಾರೆ ಹೆಸರು ಹೇಳಲಿಚ್ಚದ ಶಿಕ್ಷಕರು. ಜನಪ್ರತಿನಿಧಿಗಳಾದರೂ ಮಕ್ಕಳಿಗೆ ಮೊದಲು ಅನುಕೂಲ ಮಾಡಿಕೊಡಿ ಎನ್ನುವ ಔದಾರ್ಯವನ್ನು ತೋರುವುದಿರುವುದೇ ಈ ಎಲ್ಲ ಸಮಸ್ಯೆಗಳಿಗೆ ಕಾರಣವಾಗಿದೆ. ಈಗಾಗಲೇ ಆರು ತಿಂಗಳ ವಿಳಂಬವಾಗಿರುವ ಸೈಕಲ್‌ ವಿತರಣೆಗೆ ಜಿಲ್ಲೆಯ ಜನಪ್ರತಿನಿಧಿಗಳು ನಾವಿಲ್ಲದೇ ನೀಡಬಹುದು ಎನ್ನುವ ದೊಡ್ಡಗುಣ ತೋರುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

ವಾರದಲ್ಲಿ ವಿತರಣೆ: ವಿದ್ಯಾರ್ಥಿಗಳಿಗೆ ಉಚಿತ ಸೈಕಲ್‌ ವಿತರಣೆಯಲ್ಲಿ ವಿಳಂಬವಾಗಿರುವುದು ನಿಜ. ಆದರೆ, ಸೈಕಲ್‌ ಬಿಡಿ ಭಾಗಗಳು ಬಂದ ತಕ್ಷಣವೇ ನಗರದ ಮುನ್ಸಿಪಲ್‌ ಹೈಸ್ಕೂಲ್‌ ಆವರಣದಲ್ಲಿ ಜೋಡಣಾ ಕಾರ್ಯ ಆರಂಭಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ.ಅಂಬಿಗೇರ ತಿಳಿಸುತ್ತಾರೆ.

ತಾಲ್ಲೂಕಿನಲ್ಲಿ 3,484 ಸೈಕಲ್‌ಗಳ ಬೇಡಿಕೆಯಿದ್ದು, ಅಷ್ಟೂ ಸೈಕಲ್‌ಗಳು ಬಂದಿವೆ. ಅವುಗಳಲ್ಲಿ ಈಗಾಗಲೇ ಶೇ 50 ರಷ್ಟು ಸೈಕಲ್‌ಗಳು ಸಿದ್ಧಗೊಂಡಿವೆ. ಒಂದು ವಾರದಲ್ಲಿ ಉಳಿದ ಸೈಕಲ್‌ಗಳ ಜೋಡಣಾ ಕಾರ್ಯ ಪೂರ್ಣಗೊಳ್ಳಲಿವೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ.
ಸಿದ್ಧಗೊಂಡಿರುವ ಸೈಕಲ್‌ಗಳನ್ನು ತಾಲ್ಲೂಕಿನ ಒಂದು ಭಾಗದ ಶಾಲೆಗಳಿಗೆ ತಲುಪಿಸಲಾಗಿದೆ. ಆದಷ್ಟು ಬೇಗ ಜನಪ್ರತಿನಿಧಿಗಳನ್ನು ಕರೆದು ವಿತರಣೆ ಮಾಡುವಂತೆ ಆಯಾ ಶಾಲಾ ಮುಖ್ಯಗುರುಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಅಂಬಿಗೇರ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT