ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈಕಲ್ ಸವಾರಿಗೆ ಪ್ರೋತ್ಸಾಹ: ನಿಲುಗಡೆಗೆ ಅವಕಾಶ

Last Updated 13 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: `ನಮ್ಮ ಮೆಟ್ರೊ~ದ ನಿಲ್ದಾಣಗಳಲ್ಲಿ ಸೈಕಲ್ ನಿಲುಗಡೆಗೆ ಅವಕಾಶ ಕೊಡುವ ಮೂಲಕ `ಬೆಂಗಳೂರು ಮೆಟ್ರೊ ರೈಲು ನಿಗಮ~ವು (ಬಿಎಂಆರ್‌ಸಿಎಲ್) ಸೈಕಲ್ ಸವಾರರಿಗೆ ಪ್ರೋತ್ಸಾಹ ನೀಡಲು ಮುಂದಾಗಿದೆ.

ನಗರದಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯವನ್ನು ತಡೆಗಟ್ಟಲು ನಾಗರಿಕರು ಮೋಟರ್ ರಹಿತ ಸಾರಿಗೆ ಸಾಧನಗಳನ್ನು (ಎನ್‌ಎಂಟಿ) ಹೆಚ್ಚೆಚ್ಚು ಬಳಸುವುದಕ್ಕೆ ಉತ್ತೇಜನ ನೀಡಲು ನಿಗಮವು ಉದ್ದೇಶಿಸಿದೆ.

ಈ ಬಗ್ಗೆ `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ನಿಗಮದ ವಕ್ತಾರ ಬಿ.ಎಲ್.ವೈ.ಚವಾಣ್, `ಸದ್ಯ ಬೈಯಪ್ಪನಹಳ್ಳಿಯಿಂದ ಮಹಾತ್ಮ ಗಾಂಧಿ ರಸ್ತೆವರೆಗಿನ ರೀಚ್- 1ರ ವ್ಯಾಪ್ತಿಯ ಆರು ನಿಲ್ದಾಣಗಳ ಪೈಕಿ ಐದರಲ್ಲಿ ಸೈಕಲ್ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಆದರೆ ಎಂ.ಜಿ.ರಸ್ತೆಯ ಮೆಟ್ರೊ ನಿಲ್ದಾಣದಲ್ಲಿ ಮುಂದಿನ ದಿನಗಳಲ್ಲಿ ಸೈಕಲ್ ನಿಲುಗಡೆಗೆ ಅವಕಾಶ ಕಲ್ಪಿಸಲಾಗುವುದು~ ಎಂದರು.

`ಸೈಕಲ್ ಸವಾರರ ಆಸಕ್ತಿ ಮತ್ತು ಬೇಡಿಕೆಯ ಮೇಲೆ ಸ್ಥಳಾವಕಾಶ ಒದಗಿಸಲಾಗುವುದು~ ಎಂದರು.
ಜಾಹೀರಾತು ಕಂಪೆನಿಯಲ್ಲಿ ಉದ್ಯೋಗಿಯಾಗಿರುವ ಸೈಕಲ್ ಸವಾರ ಸುನಿಲ್ ರಾವ್, `ಸ್ವಯಂಸೇವಾ ಸಂಸ್ಥೆಗಳ ಸಹಕಾರದೊಂದಿಗೆ ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಯ ಸುಧಾರಣೆಗಾಗಿ ಕಾರ್ಯನಿರ್ವಹಿಸುತ್ತಿರುವ ಸೈಕಲ್ ಸವಾರರಿಂದ ಇದಕ್ಕೆ ಅಧಿಕ ಬೇಡಿಕೆ ಬರಲಿದೆ. ಇದಕ್ಕೂ ಮುನ್ನ ಯಾವುದೇ ಸಾರಿಗೆ ಸಂಸ್ಥೆಗಳು ಸೈಕಲ್‌ಗಳಿಗಾಗಿಯೇ ಪ್ರತ್ಯೇಕ ಜಾಗ ಮೀಸಲಿಟ್ಟಿದ್ದು ನನಗೆ ತಿಳಿದಿಲ್ಲ. ಬೇಡಿಕೆಯ ಕೊರತೆಯಿದೆ ಎಂಬ ನೆಪದಿಂದ ನಾವು ಈ ಅವಕಾಶವನ್ನು ಕಳೆದುಕೊಳ್ಳಬಾರದು~ ಎಂದರು.

ಆಟೊ ಸಹಭಾಗಿತ್ವ: ಮೆಟ್ರೊ ಪ್ರಯಾಣಿಕರ ಅನುಕೂಲಕ್ಕಾಗಿ ನಿಲ್ದಾಣಗಳಲ್ಲಿ ಆಟೊಗಳ ನಿಲುಗಡೆಗೆ ಅವಕಾಶ ಮಾಡಿಕೊಡುವ ಸಂಬಂಧ ಆಟೊ ಚಾಲಕರು ಮತ್ತು ಮಾಲೀಕರ ಸಂಘಟನೆಗಳೊಂದಿಗೆ ಬಿಎಂಆರ್‌ಸಿಎಲ್ ಮಾತುಕತೆ ನಡೆಸಿದೆ. ಆದರೆ ಯಾವುದೇ ಪ್ರಗತಿ ಆಗಿಲ್ಲ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಚವಾಣ್, `ಕೆಲ ದಿನಗಳ ಹಿಂದೆ ಕೆಲ ಆಟೊ ಸಂಘಟನೆಗಳೊಂದಿಗೆ ಮಾತುಕತೆ ನಡೆಸಿದ್ದೆವು. ಆದರೆ ಯಾವುದೇ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ಮೆಟ್ರೊ ಸಂಚಾರ ಪ್ರಾರಂಭವಾದ ಮೇಲೆ ಈ ಬಗ್ಗೆ ಯೋಚಿಸಬಹುದು~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT