ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈನಾ ಹಾದಿಯಲ್ಲಿ ಸಿಂಧು

Last Updated 29 ಜನವರಿ 2012, 19:30 IST
ಅಕ್ಷರ ಗಾತ್ರ

ಸುಮಾರು ಆರು ವರ್ಷಗಳ ಹಿಂದೆ ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ ಕೋರ್ಟ್‌ನಲ್ಲಿ ನಡೆದಿದ್ದ ಬ್ಯಾಡ್ಮಿಂಟನ್ ಟೂರ್ನಿಯೊಂದು ಸೈನಾ ನೆಹ್ವಾಲ್ ಎಂಬ ತಾರೆಯ ಉದಯಕ್ಕೆ ವೇದಿಕೆಯೊದಗಿಸಿತ್ತು.

ಇದೀಗ ಅದೇ ಕೋರ್ಟ್ ಮೂಲಕ ಇನ್ನೊಬ್ಬಳು ತಾರೆ ರಾಷ್ಟ್ರಮಟ್ಟದಲ್ಲಿ ತಮ್ಮ ಸಾನಿಧ್ಯವನ್ನು ತೋರಿಸಿಕೊಟ್ಟಿದ್ದಾರೆ. ಭಾರತದ ಬ್ಯಾಡ್ಮಿಂಟನ್ ರಂಗದಲ್ಲಿ ಮಿಂಚು ಹರಿಸಿರುವ ಹೊಸ ಪ್ರತಿಭೆ ಪಿ.ವಿ. ಸಿಂಧು.

ಆಂಧ್ರ ಪ್ರದೇಶದ 16ರ ಹರೆಯದ ಆಟಗಾರ್ತಿ ಈ ಬಾರಿಯ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಮಿಂಚಿನ ಪ್ರದರ್ಶನ ನೀಡಿದರು. ಮಾತ್ರವಲ್ಲ ಚೊಚ್ಚಲ ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡರು. ಸೈನಾ, ಜ್ವಾಲಾ ಗುಟ್ಟಾ ಮುಂತಾದ ತಾರೆಯರ ಅನುಪಸ್ಥಿತಿಯ ಕಾರಣ ಸೊರಗಿದ ಟೂರ್ನಿಯಲ್ಲಿ ಭರವಸೆಯ ಬೆಳಕಾಗಿ ಮೂಡಿಬಂದದ್ದು ಸಿಂಧು.

ಪಿಎಸ್‌ಪಿಬಿ ತಂಡವನ್ನು ಪ್ರತಿನಿಧಿಸಿದ ಸಿಂಧು ಫೈನಲ್‌ನಲ್ಲಿ ನೇಹಾ ಪಂಡಿತ್ ಅವರನ್ನು ಮಣಿಸಿ ಚಾಂಪಿಯನ್ ಆದರು. ಈ ಮೂಲಕ ಸೈನಾ ಅವರ ಹಾದಿಯಲ್ಲಿ ಮುನ್ನಡೆಯುವ ಸೂಚನೆ ನೀಡಿದ್ದಾರೆ. ಟೂರ್ನಿಯಲ್ಲಿ ಹಲವು ಅಚ್ಚರಿಯ ಫಲಿತಾಂಶ ನೀಡುತ್ತಾ ಫೈನಲ್ ಪ್ರವೇಶಿಸಿದ ಅವರು ಚಾಂಪಿಯನ್ ಆಗಿ ಇನ್ನಷ್ಟು ಅಚ್ಚರಿ ಮೂಡಿಸಿದರು.

`ಚೊಚ್ಚಲ ರಾಷ್ಟ್ರೀಯ ಪ್ರಶಸ್ತಿ ದೊರೆತಿರುವುದು ಸಂತಸದ ವಿಚಾರ. ಕ್ವಾರ್ಟರ್ ಫೈನಲ್ ಪಂದ್ಯ ಮಾತ್ರ ಅಲ್ಪ ಕಠಿಣವಾಗಿತ್ತು. ಉಳಿದಂತೆ ಎಲ್ಲವೂ ಸುಗಮವಾಗಿ ನಡೆದಿದೆ~ ಎಂದು ಪ್ರಶಸ್ತಿ ಗೆದ್ದ ಸಂಭ್ರಮದಲ್ಲಿ ಸಿಂಧು ಪ್ರತಿಕ್ರಿಯಿಸಿದ್ದರು. ನೀಳಕಾಯದ ಸಿಂಧು ಅವರ ಶಕ್ತಿಯುತ ಸ್ಮ್ಯಾಷ್ ಮತ್ತು ನಿಖರ ಡ್ರಾಪ್‌ಗಳಿಗೆ ಉತ್ತರ ಕಂಡುಕೊಳ್ಳುವಲ್ಲಿ ಎದುರಾಳಿಗಳು ವಿಫಲರಾದರು.
 
ಕ್ವಾರ್ಟರ್ ಫೈನಲ್‌ನಲ್ಲಿ ಸಿಂಧು ಅಗ್ರಶ್ರೇಯಾಂಕದ ಆಟಗಾರ್ತಿ ಕೇರಳದ ಪಿ.ಸಿ. ತುಳಸಿಗೆ ಆಘಾತ ನೀಡಿದ್ದರು. ಮೂರು ಸೆಟ್‌ಗಳ ಮ್ಯಾರಥಾನ್ ಹೋರಾಟದ ಬಳಿಕ ಆಂಧ್ರದ ಆಟಗಾರ್ತಿಗೆ ಗೆಲುವು ಒಲಿದಿತ್ತು. ಸೆಮಿಫೈನಲ್‌ನಲ್ಲಿ ಅವರು ಕಳೆದ ಬಾರಿಯ ಚಾಂಪಿಯನ್ ಅದಿತಿ ಮುಟತ್ಕರ್‌ಗೆ ನಿರ್ಗಮನದ ಹಾದಿ ತೋರಿದ್ದರು.

ಎಂಟರ ಹರೆಯದಲ್ಲೇ ಬ್ಯಾಡ್ಮಿಂಟನ್ ಮೇಲೆ ಮೋಹ ಬೆಳೆಸಿದ್ದ ಸಿಂಧು ಆ ಬಳಿಕ ಕಠಿಣ ಪರಿಶ್ರಮ ನಡೆಸಿದ್ದಾರೆ. ಇದೀಗ ಅದರ ಫಲ ಉಣ್ಣುತ್ತಿದ್ದಾರೆ. ಹೈದರಾಬಾದ್‌ನ ಗಚ್ಚಿಬೌಳಿಯಲ್ಲಿರುವ ಗೋಪಿ ಚಂದ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ ಅವರ ಮುಂದಿನ ಗುರಿ  ಸೂಪರ್ ಸೀರಿಸ್ ಟೂರ್ನಿಗೆ ಅರ್ಹತೆ ಪಡೆಯುವುದು.

ಹಾಂಕಾಂಗ್, ಚೀನಾ, ಕೊರಿಯಾ ಮತ್ತು ಮಲೇಷ್ಯಾ ಸೂಪರ್ ಸೀರಿಸ್ ಟೂರ್ನಿಗಳ ಅರ್ಹತಾ ಹಂತದಲ್ಲೇ ಇವರು ಎಡ ವಿದ್ದರು.ಇಂತಹ ಪ್ರತಿಷ್ಠಿತ ಚಾಂಪಿಯನ್‌ಷಿಪ್‌ಗಳ ಪ್ರಧಾನ ಹಂತ ಪ್ರವೇಶಿಸುವ ಕನಸು ಅವರದ್ದು. ಮಾತ್ರವಲ್ಲ ಅಂತಹ ಸಾಮರ್ಥ್ಯವನ್ನು ಸಿಂಧು ಹೊಂದಿದ್ದಾರೆ. ಕೆಬಿಎ ಕೋರ್ಟ್‌ನಲ್ಲಿ ತೋರಿದ ಆಟವೇ ಅದಕ್ಕೆ ಸಾಕ್ಷಿ.

ಪುರುಷರ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಸೌರಭ್ ವರ್ಮಾ ತಮಗೆ ನೀಡಿದ್ದ ಅಗ್ರಶ್ರೇಯಾಂಕವನ್ನು ಸಮರ್ಥಿಸಿಕೊಂಡರು. ಅನೂಪ್ ಶ್ರೀಧರ್, ಅರವಿಂದ್ ಭಟ್ ಮತ್ತು ಚೇತನ್ ಆನಂದ್ ಮುಂತಾದ ಪ್ರಮುಖರಿದ್ದರೂ ಸೌರಭ್ ಕಿರೀಟ ಮುಡಿಗೇರಿಸುವಲ್ಲಿ ಯಶಸ್ವಿ ಯಾದರು. ಸಿಂಧು ಅವರಂತೆ ಸೌರಭ್‌ಗೂ ಇದು ಚೊಚ್ಚಲ ಕಿರೀಟ.

ಎಚ್ಚೆತ್ತುಕೊಂಡ ಬಿಎಐ: ಸೈನಾ, ಜ್ವಾಲಾ ಮತ್ತು ಅಶ್ವಿನಿ ಪೊನ್ನಪ್ಪ ಒಳಗೊಂಡಂತೆ ಕೆಲವು ಪ್ರಮುಖರು ದೂರವುಳಿದ ಕಾರಣ ಈ ಟೂರ್ನಿ ತನ್ನ `ಗ್ಲಾಮರ್~ನ್ನು ಕಳೆದುಕೊಂಡಿತ್ತು. ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿರುವ `ಸ್ಟಾರ್~ಗಳು ರಾಷ್ಟ್ರೀಯ ಟೂರ್ನಿಯನ್ನು ಕಡೆಗಣಿಸುವುದು ಹಿಂದಿನಿಂದಲೂ ಬಂದಿರುವ ಸಂಪ್ರದಾಯ.

ಒಂದಲ್ಲ ಒಂದು ಕಾರಣ ನೀಡಿ ಈ ಸ್ಪರ್ಧಿಗಳು ಹಿಂದೆ ಸರಿಯುತ್ತಿದ್ದಾರೆ. ಯಾವುದೇ ಅಂತರರಾಷ್ಟ್ರೀಯ ಟೂರ್ನಿ ಇಲ್ಲದಿದ್ದರೂ ಕೆಲವರು ರಾಷ್ಟ್ರೀಯ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಇದನ್ನು ಭಾರತ ಬ್ಯಾಡ್ಮಿಂಟನ್ ಸಂಸ್ಥೆ (ಬಿಎಐ) ಗಂಭೀರವಾಗಿ ಪರಿಗಣಿಸಿದೆ.

ಇನ್ನು ಮುಂದೆ ಎಲ್ಲ ಸ್ಪರ್ಧಿಗಳು ವರ್ಷದಲ್ಲಿ ಕನಿಷ್ಠ ಮೂರು ರಾಷ್ಟ್ರೀಯ ಟೂರ್ನಿಗಳಲ್ಲಿ ಪಾಲ್ಗೊಳ್ಳುವುದನ್ನು ಕಡ್ಡಾಯಗೊಳಿಸಲು ಬಿಎಐ ಚಿಂತನೆ ನಡೆಸಿದರು.ಎರಡು ರಾಷ್ಟ್ರೀಯ ರ‌್ಯಾಂಕಿಂಗ್ ಟೂರ್ನಿ ಹಾಗೂ ರಾಷ್ಟ್ರೀಯ ಸೀನಿಯರ್ ಚಾಂಪಿಯನ್‌ಷಿಪ್‌ನಲ್ಲಿ ಎಲ್ಲರೂ ಭಾಗವಹಿಸಬೇಕು. ಲಂಡನ್ ಒಲಿಂಪಿಕ್ ಕೂಟದ ಬಳಿಕ ಈ ನಿಯಮವನ್ಜಾರಿಗೊಳಿಸುವುದು ಬಿಎಐ ಉದ್ದೇಶ. 
 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT