ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈನಿಕ ಶಾಲೆಗಳ ಕ್ರೀಡಾಕೂಟದ ಕಲರವ...

Last Updated 7 ಜುಲೈ 2013, 19:59 IST
ಅಕ್ಷರ ಗಾತ್ರ

ಭಾರತೀಯ ಸೇನೆಗೆ ಬೇಕಿರುವ ಪುರುಷ ಅಧಿಕಾರಿಗಳನ್ನು ತಯಾರು ಮಾಡಲು ವಿಜಾಪುರ ಮತ್ತು ಕೊಡಗಿನ ಕುಶಾಲನಗರ ಸೇರಿದಂತೆ ದೇಶದಲ್ಲಿ 24 ಸೈನಿಕ ಶಾಲೆಗಳಿವೆ. ಪ್ರವೇಶಕ್ಕೆ ದೈಹಿಕ ಸಾಮರ್ಥ್ಯವೂ ಪ್ರಮುಖ ಮಾನದಂಡವಾಗಿರುವುದರಿಂದ ಈ ಶಾಲೆಗಳ ಪಠ್ಯಕ್ರಮದಲ್ಲಿ ಕ್ರೀಡೆ ಅವಿಭಾಜ್ಯ ಅಂಗ.

ವಿಜಾಪುರ ಸೈನಿಕ ಶಾಲೆಯ ಸುವರ್ಣ ಮಹೋತ್ಸವ ಅಂಗವಾಗಿ ದಕ್ಷಿಣ ವಲಯದ ಸೈನಿಕ ಶಾಲೆಗಳ ಕ್ರೀಡಾಕೂಟ ಸಂಘಟಿಸಲಾಗಿತ್ತು. ವಿಜಾಪುರ, ಕುಶಾಲನಗರ (ಕೊಡಗು), ತಮಿಳುನಾಡಿನ ಅಮರಾವತಿ ನಗರ, ಆಂಧ್ರ ಪ್ರದೇಶದ ಕೊರಕುಂಡಾ, ಕೇರಳದ ಕಳಕೂಟಂ ಸೈನಿಕ ಶಾಲೆಗಳ 300 ಕ್ರೀಡಾಪಟುಗಳು ಪಾಲ್ಗೊಂಡಿದ್ದರು.

`ಸ್ನೇಹಪರತೆ, ದೈಹಿಕ ಸಾಮರ್ಥ್ಯ ಮತ್ತು ಮನೋಬಲ ವೃದ್ಧಿಗೆ ಕ್ರೀಡೆ ಅಗತ್ಯ. ಸದಾ ಲವಲವಿಕೆಯಿಂದ ಇರಲು ಆಟೋಟ ಮಿಲಿಟರಿ ಸೇವೆಯ ಒಂದು ಭಾಗ. ಹೀಗಾಗಿ ಸೈನಿಕ ಶಾಲೆಗಳಲ್ಲಿಯೂ ಕ್ರೀಡೆಗೆ ಒತ್ತು ನೀಡಲಾಗುತ್ತಿದ್ದು, ಪಠ್ಯಕ್ರಮದಲ್ಲಿಯೂ ಅದನ್ನು ಅಳವಡಿಸಲಾಗಿದೆ' ಎಂಬುದು ವಿಜಾಪುರ ಸೈನಿಕ ಶಾಲೆಯ ಪ್ರಾಚಾರ್ಯ ಕರ್ನಲ್ ಆರ್. ಬಾಲಾಜಿ ಅವರ ವಿವರಣೆ.

`ವಿಜಾಪುರ ಸೈನಿಕ ಶಾಲೆ ಹಾಕಿ ತಂಡ ಹೆಸರುವಾಸಿ. ಅಖಿಲ ಭಾರತ ಸೈನಿಕ ಶಾಲೆಗಳ ಹಾಕಿ ಟೂರ್ನಿಯಲ್ಲಿ ಸತತ ಏಳು ಬಾರಿ ಪ್ರಶಸ್ತಿ   ತನ್ನದಾಗಿಸಿಕೊಂಡು ಪಾರಮ್ಯ ಮೆರೆದಿದೆ. ಸೈನಿಕ ಶಾಲೆಗಳಲ್ಲಿ ಹಾಕಿ, ಫುಟ್‌ಬಾಲ್, ಬ್ಯಾಸ್ಕೆಟ್‌ಬಾಲ್, ಬಾಕ್ಸಿಂಗ್, ಕರಾಟೆ, ಸ್ಕೇಟಿಂಗ್, ಒಳಾಂಗಣ ಕ್ರೀಡೆಗಳಾದ ಚೆಸ್, ಟೇಬಲ್ ಟೆನಿಸ್... ಹೀಗೆ ಎಲ್ಲ ಕ್ರೀಡೆಗಳಿಗೂ ಉತ್ತೇಜನ ನೀಡಲಾಗುತ್ತದೆ' ಎನ್ನುತ್ತಾರೆ ಅವರು.

`ಸೈನಿಕ ಶಾಲೆಯ ಪ್ರತಿಯೊಬ್ಬ ವಿದ್ಯಾರ್ಥಿ ಒಂದಿಲ್ಲೊಂದು ಆಟದಲ್ಲಿ ಪರಿಣಿತಿ ಪಡೆದಿರುತ್ತಾನೆ. ಸೇನೆಯ ಸೇವೆಗೆ ಸೇರುವುದೇ ಸೈನಿಕ ಶಾಲೆಯ ಮುಖ್ಯ ಧ್ಯೇಯ. ಸೈನಿಕ ಶಾಲೆಯಲ್ಲಿ ಶಿಕ್ಷಣ ಪೂರೈಸಿದ ನಂತರ ಬಹುಪಾಲು ವಿದ್ಯಾರ್ಥಿಗಳು ಸೇನೆಗೆ ಸೇರಿಬಿಡುತ್ತಾರೆ. ಇನ್ನು ಕೆಲವರು ವೈದ್ಯಕೀಯ-ಎಂಜಿನಿಯರಿಂಗ್‌ಗೆ ಹೋಗುತ್ತಾರೆ. ಹೀಗಾಗಿ ಅವರಲ್ಲಿಯ ಕ್ರೀಡಾಪಟುಗೆ ಉತ್ತೇಜನ ದೊರೆಯುವುದಿಲ್ಲ' ಎಂದು ವಿಜಾಪುರ ಸೈನಿಕ ಶಾಲೆಯ ಹಳೆಯ ವಿದ್ಯಾರ್ಥಿ, ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ, ಹಿರಿಯ ಅಥ್ಲೀಟ್ ಶಂಕರ ವೇಲು ಹೇಳುತ್ತಾರೆ.

`ನನಗೆ ಕ್ರೀಡೆಯಲ್ಲಿ ಆಸಕ್ತಿ ಇದ್ದುದರಿಂದ ಭಾರತ ಕ್ರೀಡಾ ಪ್ರಾಧಿಕಾರ ಸೇರಿಕೊಂಡೆ. ಕ್ರೀಡಾ ಪ್ರತಿಭೆಗಳಿದ್ದರೂ ಅವರಿಗೆ ಮಾರ್ಗದರ್ಶನ ಇರಲಿಲ್ಲ. ಅಂತಹವರಿಗೆ ತರಬೇತಿ ನೀಡುವ ಕೆಲಸ ಮಾಡುತ್ತಿದ್ದೇನೆ. ಸೈನಿಕ ಶಾಲೆಯಲ್ಲಿ ಕಲಿತ ಸದ್ಯ ಬೆಂಗಳೂರಿನ ಸಾಗರ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ರಾಮ್‌ಕುಮಾರ್ ಹಾಗೂ ಕಲ್ಯಾಣಿ, ಪ್ರಭಾಕರ ಮತ್ತಿತರರು ಕ್ರೀಡಾ ಕ್ಷೇತ್ರದಲ್ಲಿ ಹೆಸರು ಮಾಡಿದವರು' ಎಂದು ಅವರು ಸ್ಮರಿಸಿದರು.

ಅದೇ ಚಿಂತೆ: `ರೋಟಿ, ಕಪಡಾ ಔರ್ ಮಕಾನ್ ಇದು ಬಹುಪಾಲು ಭಾರತೀಯರ ಚಿಂತೆ.  ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಎಂದರೆ ಸಮಯ ವ್ಯರ್ಥ ಎಂಬುದು ಪಾಲಕರ ಭಾವನೆ. ನೌಕರಿಗೆ ಸೇರುವುದೇ ಮುಖ್ಯ ಗುರಿಯಾಗುವುದರಿಂದ ಸೈನಿಕ ಶಾಲೆ ಶಿಕ್ಷಣದ ನಂತರ ಅವರು ಕ್ರೀಡೆಗೆ ಮಹತ್ವ ನೀಡುವುದಿಲ್ಲ' ಎಂಬುದು ಕರ್ನಲ್ ಬಾಲಾಜಿ ಅವರ ಬೇಸರ.

`ನಮ್ಮಲ್ಲಿ ಶೂಟಿಂಗ್ ರೇಂಜ್ ಇದೆ. ಸನಿಹದಿಂದ ಶೂಟ್ ಮಾಡುವ ತರಬೇತಿಗೆ ಒಳಾಂಗಣ ಶೂಟಿಂಗ್ ರೇಂಜ್ ಬೇಕಿದೆ. ನಮ್ಮ ಶಾಲೆಯನ್ನು ಕ್ರೀಡೆಯ ಉತ್ತರ ಕರ್ನಾಟಕದ ನೋಡಲ್ ಕೇಂದ್ರವನ್ನಾಗಿ ಸೌಲಭ್ಯ ಕಲ್ಪಿಸಿದರೆ ಶೂಟಿಂಗ್ ಮತ್ತಿತರ ಕ್ರೀಡೆಗಳಲ್ಲಿ ನಮ್ಮವರನ್ನು ಒಲಿಂಪಿಕ್ ಕ್ರೀಡಾಕೂಟಕ್ಕೂ ಕಳಿಸಬಹುದು' ಎನ್ನುತ್ತಾರೆ ಸೈನಿಕ ಶಾಲೆಯ ಶಿಕ್ಷಕರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT