ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈನಿಕನಿಗೊಂದು ಮಂದಿರ

Last Updated 11 ಜೂನ್ 2012, 19:30 IST
ಅಕ್ಷರ ಗಾತ್ರ

ದೇವರಷ್ಟೇ ಅಲ್ಲದೇ ಸಾಧು ಸಂತರು, ಅನುಭಾವಿಗಳು, ಸ್ವಾಮಿಗಳ ಹೆಸರಿನಲ್ಲಿ ಗುಡಿ ಗುಂಡಾರಗಳನ್ನು ಕಟ್ಟುವುದನ್ನು ನಾವು ಕಾಣುತ್ತೇವೆ, ಪುರಾಣ, ಪುಣ್ಯಕಥೆಗಳಲ್ಲಿ ಬರುವ ದೈವೀ ಪುರುಷರಿಗೆ ದೇವಾಲಯ ಇರುವುದನ್ನು ನೋಡಿದ್ದೇವೆ.

ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪ್ರಮುಖರ ಪ್ರತಿಮೆಗಳನ್ನು ನಿರ್ಮಿಸುತ್ತೇವೆ. ಆದರೆ ದೇಶಕ್ಕಾಗಿ ಹೋರಾಡಿ ಪ್ರಾಣತ್ಯಾಗ ಮಾಡಿದ ಸಾಮಾನ್ಯ ಸೈನಿಕನ ನೆನಪಿನಲ್ಲಿ ದೇವಾಲಯ ಕಟ್ಟಿ ಪೂಜಿಸುತ್ತ ಪ್ರತಿ ವರ್ಷ ನಿರ್ದಿಷ್ಟ ದಿನದಂದು ಇಡೀ ಗ್ರಾಮವೇ ಹಬ್ಬ ಆಚರಣೆ ಮಾಡುವುದು ಇದೆಯಾ?

ಇದೆ. ಇದನ್ನು ನೋಡಲು ನೀವು ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕು ಚಿಕ್ಕಜೋಗಿಹಳ್ಳಿ ತಾಂಡಾಕ್ಕೆ ಬರಬೇಕು. ಇಲ್ಲಿನ ಜನ ತಮ್ಮ ಗ್ರಾಮದ ದೇಶಭಕ್ತ ಸೈನಿಕನೊಬ್ಬನ ಪ್ರತಿಮೆ ನಿರ್ಮಿಸಿ ದೇವಾಲಯ ಕಟ್ಟಿ ಇಂದಿಗೂ ಪೂಜೆ ಸಲ್ಲಿಸುತ್ತಿದ್ದಾರೆ. ಇದು ಹಳ್ಳಿಗಾಡಿನ ಈ ಅನಕ್ಷರಸ್ಥ ಜನತೆಯ ದೇಶಪ್ರೇಮಕ್ಕೆ ಸಾಕ್ಷಿ.

ಈ ತಾಂಡಾದ ಭೀಮನಾಯ್ಕ ಎಂಬ ಸೈನಿಕ ಬ್ರಿಟೀಷರ ವಿರುದ್ಧ ಬಂಡೆದ್ದು ಹೋರಾಡುತ್ತಲೇ ಪ್ರಾಣತ್ಯಾಗ ಮಾಡಿದವರು. ಅದಕ್ಕಾಗಿ ಗ್ರಾಮಸ್ಥರು  ಅವರನ್ನು ದೇವರ ಸ್ಥಾನಕ್ಕೇರಿಸಿದ್ದಾರೆ. ದೇವಸ್ಥಾನ ನಿರ್ಮಿಸಿ ನಿತ್ಯ  ಪೂಜಿಸುತ್ತಾರೆ. ಯುಗಾದಿ ಸಂದರ್ಭದ ಆಟಮು ಆಚರಣೆಯಲ್ಲಿ ಹಾಗೂ ಕುರಿಹಟ್ಟಿ  ಮಾರಮ್ಮನ ಹಬ್ಬದಂದು ಗ್ರಾಮದಿಂದ 4 ಕಿಮಿ ದೂರದಲ್ಲಿರುವ  ಭೀಮನಾಯ್ಕರ  ಸಮಾಧಿ ಸ್ಥಳದ್ಲ್ಲಲಿ ಪೂಜೆ ಸಲ್ಲಿಸುತ್ತಾರೆ.

ಅಂದು ಒಂದು ದಿವಸ ಇಡೀ ಗ್ರಾಮವೇ  `ಭೀಮನಾಯ್ಕನ ಹಬ್ಬ~ ಮಾಡುತ್ತದೆ. ಭೀಮನಾಯ್ಕ ಗುಡಿ ಗ್ರಾಮದ ಒಳಗೇ ಇದ್ದರೂ ಸಮಾಧಿ ಸ್ಥಳ ಮಾತ್ರ 4 ಕಿ.ಮೀ. ದೂರದ ಜಮೀನೊಂದರಲ್ಲಿದೆ. ಸಮಾಧಿ ಪಕ್ಕದಲ್ಲೆೀ ಭೀಮಸಮುದ್ರ ಗ್ರಾಮ ಇದೆ. ಅದಕ್ಕಾಗಿಯೇ ಆ ಗ್ರಾಮಕ್ಕೆ  ಭೀಮಸಮುದ್ರ ಎಂಬ ಹೆಸರು ಬಂತು ಎನ್ನುತ್ತಾರೆ ಹಿರಿಯರು.

ಇತಿಹಾಸ: ಮೈಸೂರಿನ ದೊರೆ  ಟಿಪ್ಪುಸುಲ್ತಾನ್ ಮತ್ತು ಬ್ರಿಟಿಷರ ಮಧ್ಯೆ ಯುದ್ಧ ನಡೆದ ಕಾಲ ಅದು. ಆ ಸಂದರ್ಭದಲ್ಲಿ ಟಿಪ್ಪುವಿಗೆ ಮತ್ತಷ್ಟು ಯುದ್ಧ ಸಾಮಗ್ರಿಗಳ ಅಗತ್ಯವಿತ್ತು. ಆಗ ಆತ ತನ್ನ ಸೈನ್ಯದಲ್ಲಿನ ವೀರಸೈನಿಕ ಭೀಮಾನಾಯ್ಕನ ನೇತೃತ್ವದಲ್ಲಿ ಎಂಟು ಯೋಧರ ಪಡೆ ರಚಿಸಿ ಬಾಬಾಬುಡನ್‌ಗಿರಿಯ ಗುಹೆಯಲ್ಲಿ ಅಡಗಿಸಿಟ್ಟಿದ್ದ ಯುದ್ಧ ಸಾಮಗ್ರಿಗಳನ್ನು ರಹಸ್ಯವಾಗಿ ತರಲು ಕಳುಹಿಸಿದ.

ಶತ್ರುಗಳ ಕಣ್ಣುತಪ್ಪಿಸಿ ರಾತ್ರೋರಾತ್ರಿ ಭೀಮನಾಯ್ಕನ ತಂಡ ಕುದುರೆ ಮೇಲೆ ಯುದ್ಧ ಸಾಮಗ್ರಿ ತರುತ್ತಿತ್ತು. ಆಗ ಕೊಡಗಿನ ಕಡೆಯಿಂದ ಸಾಗಿ  ಬರುತ್ತಿದ್ದ ಬ್ರಿಟಿಷ್ ಸೈನ್ಯ ಪಿರಿಯಾಪಟ್ಟಣದ ಸಮೀಪ ಇವರನ್ನೆಲ್ಲ ಸೆರೆ ಹಿಡಿಯಿತು. ಯುದ್ಧ ಸಾಮಗ್ರಿಗಳನ್ನು ಅಡಗಿಸಿಟ್ಟ ಸ್ಥಳ ತಿಳಿಸುವಂತೆ ಚಿತ್ರಹಿಂಸೆ ನೀಡಿತು. ಸ್ವಾಮಿನಿಷ್ಠೆಯಿಂದ ಭೀಮನಾಯ್ಕ ಮತ್ತು ಅವರ ತುಕಡಿ ಈ ಹಿಂಸೆಯನ್ನು ಸಹಿಸಿಕೊಂಡಿತು. ಆದರೆ ರಹಸ್ಯವಾಗಿಟ್ಟ ಸ್ಥಳವನ್ನು ಮಾತ್ರ ಹೇಳಲೇ ಇಲ್ಲ.

ಕುಪಿತರಾದ ಬ್ರಿಟಿಷರು ಭೀಮನಾಯ್ಕ ಸೇರಿದಂತೆ 8 ಸೈನಿಕರನ್ನು ಗಲ್ಲಿಗೇರಿಸಿದರು. ಇವರೆಲ್ಲ ಲಂಬಾಣಿ ಸಮುದಾಯದವರು. ಇವರಲ್ಲಿ ಒಬ್ಬನಾದ ಸೈನಿಕ ತೋತರಾಮ್ ನಾಯ್ಕನ ಪತ್ನಿ ಭೀಮಾಬಾಯಿ ಪತಿಯ ಸಾವಿನ ಸುದ್ದಿ ತಿಳಿದು ಪ್ರಾಣತ್ಯಾಗ ಮಾಡುತ್ತಾಳೆ.

ಅದಕ್ಕಾಗಿ ಇಂದಿಗೂ  ತುಮಕೂರು ಜಿಲ್ಲೆ ಹುಳಿಯಾರು ಸಮೀಪದ ಅಣಿಗೆರೆ ಗ್ರಾಮದ ತೆಂಗಿನ ತೋಪುಗಳ ಮಧ್ಯೆ  ಕಟ್ಟಿದ ದೇವಾಲಯದಲ್ಲಿ ಆಕೆ ದೇವಿ ಭೀಮಬಾಯಿಯಾಗಿ ದೇವಾಂಶ ಸಂಭೂತೆಯಾಗಿ ಅಲ್ಲಿಯ ಬಂಜಾರಾ ಜನಾಂಗದಿಂದ ಪೂಜೆಗೆ ಪಾತ್ರಳಾಗಿದ್ದಾಳೆ.

ಇಂಥ ವೀರ, ಶೂರ ಭೀಮನಾಯ್ಕ ಮತ್ತು ಇತರೆ ಲಂಬಾಣಿ ವೀರ ಯೋಧರ ಬಗ್ಗೆ ಕೂಡ್ಲಿಗಿ ತಾಲೂಕಿನಲ್ಲಿ ಜಾನಪದ ಹಾಡುಗಳು, ಕಥೆಗಳನ್ನು ಕೇಳಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT