ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈನಿಕರ ಶಿರಚ್ಛೇದ ಸ್ನೇಹಕ್ಕೆ ಕುತ್ತು

ಪಾಕ್‌ಗೆ ಭಾರತದ ಎಚ್ಚರಿಕೆ
Last Updated 9 ಜನವರಿ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ):  ಗಡಿಯಲ್ಲಿ ಕದನವಿರಾಮ ಉಲ್ಲಂಘಿಸಿ ಇಬ್ಬರು ಭಾರತೀಯ ಯೋಧರನ್ನು ಭೀಕರವಾಗಿ ಸಾಯಿಸಿರುವ ಪಾಕಿಸ್ತಾನ ಸೇನೆಯ ಕೃತ್ಯವನ್ನು ತೀವ್ರವಾಗಿ ಖಂಡಿಸಿರುವ ಭಾರತ, ಈ ಘಟನೆ ಉಭಯ ದೇಶಗಳ ನಡುವಿನ ಸ್ನೇಹಕ್ಕೆ ಕುತ್ತು   ತರಲಿದೆ ಎಂಬ ಎಚ್ಚರಿಕೆಯ ಸಂದೇಶವನ್ನು ಆ ದೇಶಕ್ಕೆ ರವಾನಿಸಿದೆ.

ಮಂಗಳವಾರದ ಘಟನೆಯ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿರುವ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ರಂಜನ್ ಮಥಾಯ್, ಪಾಕಿಸ್ತಾನದ ಹೈಕಮೀಷನರ್ ಸಲ್ಮಾನ್ ಬಷೀರ್ ಅವರನ್ನು ಕರೆಯಿಸಿಕೊಂಡು `ನಮ್ಮ ಸೈನಿಕರನ್ನು ಕೊಂದದ್ದಲ್ಲದೆ ಅವರ ದೇಹಗಳನ್ನು ಅಮಾನವೀಯವಾಗಿ ಊನಗೊಳಿಸಲಾಗಿದೆ' ಎಂದು ತರಾಟೆಗೆ ತೆಗೆದುಕೊಂಡರು. ಪಾಕ್‌ನ ಈ ಪ್ರಚೋದಿತ ದಾಳಿಯನ್ನು ಯಾವುದೇ ಕಾರಣಕ್ಕೂ ಒಪ್ಪಲಾಗದು' ಎಂದರು.

`ಅಂತಾರಾಷ್ಟ್ರೀಯ ನಿಯಮಗಳನ್ನು ಉಲ್ಲಂಘಿಸಿ ನಡೆಸಲಾದ ಈ ಹತ್ಯೆಯ ಕುರಿತು ಪಾಕಿಸ್ತಾನ ತಕ್ಷಣ ತನಿಖೆ ಕೈಗೊಳ್ಳಬೇಕು ಹಾಗೂ ಭವಿಷ್ಯದಲ್ಲಿ ಮತ್ತೆಂದೂ ಇಂತಹ ಘಟನೆಗಳು ಮರುಕಳುಹಿಸದಂತೆ ವಾಗ್ದಾನ ನೀಡಬೇಕು' ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಈ ಕುರಿತು ಹೇಳಿಕೆ ನೀಡಿರುವ ವಿದೇಶಾಂಗ ವ್ಯವಹಾರಗಳ ಸಚಿವ ಸಲ್ಮಾನ್ ಖುರ್ಷಿದ್, `ಈಗಾಗಲೇ ಈ ಸಂಬಂಧ ಪಾಕ್ ಪ್ರತಿನಿಧಿಯೊಂದಿಗೆ ಮಾತನಾಡಿದ್ದು ಕಟು ಶಬ್ದಗಳ ಮೂಲಕ ಖಂಡನೆ ವ್ಯಕ್ತಪಡಿಸಲಾಗಿದೆ. ಈ ಘಟನೆಯನ್ನು ಯಾವ ಕಾರಣಕ್ಕೂ ಸಮರ್ಥನೆ ಮಾಡಿಕೊಳ್ಳಲು ಆಗದು, ಕಳೆದ ತಿಂಗಳು ಭಾರತ ಪಾಕ್ ನಡುವೆ ನಡೆದ ಮಾತುಕತೆಯ ಆಶಯಕ್ಕೆ ಭಂಗ ತರುವ ಘಟನೆ ಇದಾಗಿದೆ ಎಂದಿದ್ದಾರೆ.

ಭಾರತೀಯ ಸೇನಾ ಕಾರ್ಯಾಚರಣೆಯ ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ವಿನೋದ್ ಭಾಟಿಯಾ ಈಗಾಗಲೇ ಪಾಕ್‌ನ ಸೇನಾ ಮಹಾನಿರ್ದೇಶಕ, ಮೇಜರ್ ಜನರಲ್ ಅಷ್ಫಾಕ್  ನದೀಂ ಅವರೊಂದಿಗೆ ಮಾತನಾಡಿ ಘಟನೆಯನ್ನು ಖಂಡಿಸಿದ್ದಾರೆ. ಆದರೆ ಗಡಿ ನಿಯಂತ್ರಣ ರೇಖೆಯನ್ನು ಉಲ್ಲಂಘಿಸಲಾಗಿದೆ ಎಂಬ ಭಾರತದ ಹೇಳಿಕೆಯನ್ನು ಪಾಕ್ ಸೇನೆ ನಿರಾಕರಿಸಿದೆಯಲ್ಲದೆ ತಾನು  ಭಾರತೀಯ ಸೈನಿಕರನ್ನು ಸಾಯಿಸಿಲ್ಲ ಎಂದಿದೆ.  ಘಟನೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ರಕ್ಷಣಾ ಸಚಿವ ಎ.ಕೆ. ಆಂಟನಿ `ಪಾಕ್ ಸೇನೆಯ ಈ ಕೃತ್ಯ ಪ್ರಚೋದನಕಾರಿಯಾಗಿದ್ದು ಮೃತ ಸೈನಿಕರ ವಿಷಯದಲ್ಲಿ ಅವರು ನಡೆದುಕೊಂಡ ರೀತಿ ತೀರ ಅಮಾನವೀಯ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ' ಎಂದಿದ್ದಾರೆ.

ಮತ್ತೆ ಕದನ ವಿರಾಮ ಉಲ್ಲಂಘನೆ
ಇಬ್ಬರು ಸೈನಿಕರನ್ನು ಅಮಾನುಷವಾಗಿ ಹತ್ಯೆ ಮಾಡಿದ ನಂತರವೂ ಮಂಗಳವಾರ ರಾತ್ರಿ ಪೂಂಚ್ ಜಿಲ್ಲೆಯ ಕೃಷ್ಣಗಾಟಿ ವಲಯ ಹಾಗೂ ನಂಗಿತಿಕಿರಿ ಎಂಬಲ್ಲಿ ಪಾಕ್ ಸೈನಿಕರು ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಫಿರಂಗಿ ದಾಳಿ ನಡೆಸಿದ್ದಾರೆ ಎಂದು ಜಮ್ಮುವಿನಲ್ಲಿ ರಕ್ಷಣಾ ಇಲಾಖೆ ವಕ್ತಾರರು ಹೇಳಿಕೆ ನೀಡಿದ್ದಾರೆ.

ಗಡಿಯಲ್ಲಿ ಕಟ್ಟೆಚ್ಚರ
ಶ್ರೀನಗರ:  ಪಾಕ್ ಸೇನೆ ಭಾರತೀಯ ಸೈನಿಕರನ್ನು ಹತ್ಯೆ ಮಾಡಿದ ಘಟನೆ ನಂತರ ಭಾರತೀಯ ಸೇನೆ ಜಮ್ಮು ಮತ್ತು ಕಾಶ್ಮೀರದಲ್ಲಿ ಗಡಿ ನಿಯಂತ್ರಣ ರೇಖೆ ಮತ್ತು ಅಂತರರಾಷ್ಟ್ರೀಯ ಗಡಿ ಉದ್ದಕ್ಕೂ ಕಟ್ಟೆಚ್ಚರ ವಹಿಸಿದೆ.

ಪಾಕ್ ಸೈನಿಕರು ಗಡಿ ಅತಿಕ್ರಮಿಸಿ ಒಳನುಸುಳದಂತೆ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT