ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈನ್ಸ್ ರಿಪೋರ್ಟರ್ ಎಚ್ಚರಿಕೆ: ವಿರೂಪಗೊಳ್ಳುತ್ತಿರುವ ಕಡಲ ತೀರ!

Last Updated 15 ಜನವರಿ 2012, 10:05 IST
ಅಕ್ಷರ ಗಾತ್ರ

ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯ ಪ್ರಕೃತಿ ಸೌಂದರ್ಯಕ್ಕೆ ಮುಕುಟಪ್ರಾಯವಾಗಿರುವ  ಕಡಲ ಕಿನಾರೆಗಳು ಇತ್ತೀಚಿನ ದಶಕದಲ್ಲಿ ತೀವ್ರಗೊಂಡಿರುವ ಮಾನವನ ಚಟುವಟಿಕೆಗಳಿಂದಾಗಿ ವಿರೂಪಗೊಳ್ಳುತ್ತಿದ್ದು, ಅಪಾಯದ ಅಂಚಿನಲ್ಲಿವೆ ಎಂದು ಪ್ರತಿಷ್ಠಿತ `ಸೈನ್ಸ್ ರಿಪೋರ್ಟರ್~ ಪತ್ರಿಕೆ ತನ್ನ ಇತ್ತೀಚಿನ ಸಂಚಿಕೆಯಲ್ಲಿ ವರದಿ ಮಾಡಿರುತ್ತದೆ.

ದೇಶದ 7,500 ಕಿ.ಮೀ. ವ್ಯಾಪ್ತಿಯ ಕಡಲ ಕಿನಾರೆಯನ್ನು ಸಮೀಕ್ಷಿಸಿರುವ ವರದಿಯಲ್ಲಿ ಜಿಲ್ಲೆಯ ಕಾರವಾರ, ಬೇಲೇಕೇರಿ, ತದಡಿ, ಹಾರವಾಡ, ಗೋಕರ್ಣ ಮುಂತಾದ ತೀರ ಪ್ರದೇಶಗಳ ಕುರಿತ ವಿವರಗಳು ಗಮನ ಸೆಳೆಯುತ್ತಿವೆ. 

ಪ್ರಾಚೀನ ಕಾಲದಿಂದಲೂ ಸಮುದ್ರವನ್ನೇ ಆಶ್ರಯಿಸಿ ಬದುಕು ಕಟ್ಟಿಕೊಂಡಿದ್ದ ಮೀನುಗಾರರು ಪ್ರಕೃತಿಯನ್ನು ಶೋಷಿಸದೇ ಬದುಕಿದರು. ಔದ್ಯಮಿಕ ಚಟುವಟಿಕೆಗಳು ಹೆಚ್ಚಿದಂತೆಲ್ಲ ಕಡಲ ತೀರದ ಮೇಲಿನ ಇವರ ಸ್ವಾಭಾವಿಕ ಹಕ್ಕುಗಳು ನಾಶವಾದವು. 

ಸ್ವಾಭಾವಿಕ ಸರ್ವಕಾಲಿಕ  ಬಂದರು ಆಗುವ ಎಲ್ಲ ಅರ್ಹತೆಗಳಿರುವ ಬೇಲೇಕೇರಿ  ಯಾವುದೇ ದಿಕ್ಕಿನಿಂದ ಬೀಸಬಹುದಾದ ಬಿರುಗಾಳಿ ಮತ್ತು ಅಲೆಗಳಿಂದ ರಕ್ಷಣೆ ಪಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ. ಆದರೆ ಬೇಕಾಬಿಟ್ಟಿಯಾಗಿ ಅದಿರು ಸಾಗಾಣಿಕಾ ಕಂಪೆನಿಗಳು ರಿಕ್ಲೇಮೇಶನ್ ಮೂಲಕ  ಇಲ್ಲಿನ ಸಾವಿರಾರು ಎಕರೆಗಳಷ್ಟು ಸಮುದ್ರ ಪ್ರದೇಶವನ್ನು ಒತ್ತುವರಿ ಮಾಡಿಕೊಂಡಿದ್ದರಿಂದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಡಲ್ಕೊರೆತ ಉಲ್ಬಣಗೊಂಡಿತು.

ಬಾವಿಕೇರಿಯ ಗಣೇಶಬಾಗ, ಹಾರವಾಡ ಗ್ರಾಮಗಳ ಸರಹದ್ದಿನಲ್ಲಿ ಮೀನುಗಾರರು ಮತ್ತು ರೈತರು ಪ್ರತಿವರ್ಷ ಸಮಸ್ಯೆಗಳನ್ನು ಎದುರಿಸುವಂತಾಯಿತು. ಕಾರವಾರದ ಅರಗಾ, ಮುದಗಾ ಸಮೀಪದ ಸಮುದ್ರ ಪ್ರದೇಶದಲ್ಲಿ ಸೀಬರ್ಡ್ ನೌಕಾ ನೆಲೆಯವರು ನಡೆಸಿದ ರಿಕ್ಲೆಮೇಶನ ಚಟುವಟಿಕೆಯಿಂದ ಮಳೆಗಾಲದಲ್ಲಿ ಬೆಟ್ಟದಿಂದ ಹರಿದು ಬರುತ್ತಿದ್ದ ನೀರು ಸಮುದ್ರ ಸೇರಲು ಅಡ್ಡಿಯುಂಟಾಗಿದ್ದು, ಪ್ರತಿವರ್ಷ ಮಳೆನೀರು ಹೆದ್ದಾರಿಯನ್ನು  ಆವರಿಸುವಂತಹ ಸನ್ನಿವೇಶ ಉಂಟಾಗಿದೆ. 

ಜೊತೆಗೆ ಕಂಪೌಂಡ್ ಮಾದರಿಯ (ದಿಬ್ಬ ಮತ್ತು ತಗ್ಗು ಪ್ರದೇಶ) ತೀರ ಪ್ರದೇಶ ಹೊಂದಿರುವ ಕಾರವಾರದಲ್ಲಿ    1989 ರಿಂದ 2000 ಅಂದರೆ 11 ವರ್ಷಗಳಲ್ಲಿ ಉಂಟಾದ ಕಡಲ್ಕೊರೆತದ ಪ್ರಮಾಣಕ್ಕಿಂತ  2000 ದಿಂದ 2003 ರ ಅವಧಿಯಲ್ಲಿ ಒಂದೂವರೆ ಪಟ್ಟು ಹೆಚ್ಚಾಗಿದೆ. 

ವಸತಿ ಪ್ರದೇಶದ ವಿಸ್ತರಣೆ, ಕೈಗಾರಿಕೆಗಳ ಬೆಳವಣಿಗೆ, ಅದಿರು ಚಟುವಟಿಕೆ, ಕೊಂಕಣ ರೇಲ್ವೆ, ನೌಕಾ ನೆಲೆ ನಿರ್ಮಾಣ, ಕಾಳಿ ನದಿಗುಂಟ ಕಟ್ಟಲಾದ ಅಣೆಕಟ್ಟುಗಳು ಮುಂತಾದ ಮಾನವ ಹಸ್ತಕ್ಷೇಪಗಳೊಂದಿಗೆ ಬದಲಾಗುತ್ತಿರುವ ಹವಾಮಾನ, ಸಮುದ್ರದಲ್ಲಿನ ವಿದ್ಯಮಾನಗಳು ಇದಕ್ಕೆ ಕಾರಣವಾಗಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಜಿಲ್ಲೆಯ ಜೀವನದಿಯಾದ ಗಂಗಾವಳಿ ಮತ್ತು ಅರಬ್ಬಿ ಸಮುದ್ರದ ಮುಖಜ ಪ್ರದೇಶವಿರುವ ಗೋಕರ್ಣ ತೀರವು  ಮಾತ್ರ ಪ್ರವಾಸೋದ್ಯಮಕ್ಕೆ ಸೂಕ್ತವಾಗಿದೆ. ಕಾರಣ ಇಲ್ಲಿ ಮರಳಿನ ಚಲನೆಯು ಋತುಮಾನಕ್ಕೆ ತಕ್ಕಂತೆ ಪರಿವರ್ತನಶೀಲವಾಗಿರುತ್ತದೆ ಎಂದು ಪತ್ರಿಕೆ ಅಭಿಪ್ರಾಯಪಟ್ಟಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT