ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈಯದ್ ಇಮ್ತಿಯಾಜ್ ಕೊಲೆ ಪ್ರಕರಣ: ಆರು ಜನ ಆರೋಪಿಗಳ ಬಂಧನ

Last Updated 11 ಅಕ್ಟೋಬರ್ 2011, 19:40 IST
ಅಕ್ಷರ ಗಾತ್ರ

ಬೆಂಗಳೂರು: ಸಿದ್ದಾಪುರ ಸಮೀಪದ ವೆಂಕಟರೆಡ್ಡಿನಗರದಲ್ಲಿ ಅ. 5ರಂದು ನಡೆದಿದ್ದ ಸೈಯದ್ ಇಮ್ತಿಯಾಜ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಜಯನಗರ ಒಂದನೇ ಬ್ಲಾಕ್‌ನ ದಯಾನಂದನಗರದ ರಿಯಾಜ್ ಖಾನ್ (24), ಇರ್ಫಾನ್ (24), ಕೀಜರ್ (21), ಸಲೀಂ (21), ತೌಸಿಫ್ (22) ಮತ್ತು ಫಾರೂಕ್ (22) ಬಂಧಿತರು.

ಕೊಲೆಯಾದ ಇಮ್ತಿಯಾಜ್ ಮತ್ತು ಪ್ರಕರಣದ ಪ್ರಮುಖ ಆರೋಪಿ ರಿಯಾಜ್ ಖಾನ್ ಒಟ್ಟಿಗೆ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದರು. ಯುವಕನೊಬ್ಬನನ್ನು ಅಪಹರಿಸಿ ಸುಲಿಗೆ ಮಾಡಿದ್ದ ಇಪ್ಪತ್ತೈದು ಸಾವಿರ ರೂಪಾಯಿ ಹಣವನ್ನು ಹಂಚಿಕೊಳ್ಳುವ ವಿಷಯವಾಗಿ ಅವರ ನಡುವೆ ಭಿನ್ನಾಭಿಪ್ರಾಯ ಮೂಡಿ ದ್ವೇಷ ಬೆಳೆದಿತ್ತು ಎಂದು ಜಯನಗರ ಉಪ ವಿಭಾಗದ ಎಸಿಪಿ ಜಿ.ಬಿ.ಮಂಜುನಾಥ್ ತಿಳಿಸಿದ್ದಾರೆ.

ಇರ್ಫಾನ್ ಮತ್ತು ಶಹಬಾಜ್ ಎಂಬುವರು ಒಂದೇ ಹುಡುಗಿಯನ್ನು ಪ್ರೀತಿಸುತ್ತಿದ್ದರು. ಶಹಬಾಜ್‌ನನ್ನು ಇಮ್ತಿಯಾಜ್ ಬೆಂಬಲಿಸುತ್ತಿದ್ದರೆ ಇರ್ಫಾನ್ ಬೆಂಬಲಕ್ಕೆ ರಿಯಾಜ್ ನಿಂತಿದ್ದ. ಈ ಕಾರಣದಿಂದ ರಿಯಾಜ್ ಇತರೆ ಆರೋಪಿಗಳ ಜತೆ ಸೇರಿ ಇಮ್ತಿಯಾಜ್‌ನನ್ನು ಕೊಲೆ ಮಾಡಿದ್ದಾನೆ ಎಂದು ಅವರು ಹೇಳಿದ್ದಾರೆ. ದಕ್ಷಿಣ ವಿಭಾಗದ ಡಿಸಿಪಿ ಸೋನಿಯಾ ನಾರಂಗ್ ಅವರ ಮಾರ್ಗದರ್ಶನದಲ್ಲಿ ಸಿದ್ದಾಪುರ ಇನ್‌ಸ್ಪೆಕ್ಟರ್ ಬಿ.ಎಸ್.ಅಂಗಡಿ ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಸೆಕ್ಯುರಿಟಿ ಗಾರ್ಡ್ ಕೊಲೆ: ಬಂಧನ
ಕುಮಾರಸ್ವಾಮಿಲೇಔಟ್ ಲಾರಿ ನಿಲ್ದಾಣದ ಸೆಕ್ಯುರಿಟಿ ಗಾರ್ಡ್ ಕೃಷ್ಣಾಚಾರಿ ಕೊಲೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ನಾಲ್ಕು ಆರೋಪಿಗಳನ್ನು ಬಂಧಿಸಿದ್ದಾರೆ.

ಬನಶಂಕರಿ ಎರಡನೇ ಹಂತದ ಯಾರಬ್‌ನಗರದ ಜಾವೀದ್ ಉರುಫ್ ನೈಂಟಿ (19), ಸೂರ್ಯಪ್ರಕಾಶ್ (20), ಮಹಮ್ಮದ್ ಗೌಸ್ (21) ಮತ್ತು ಫಯಾಜ್ ಖಾನ್ (19) ಬಂಧಿತರು. ಆರೋಪಿಗಳು ಲಾರಿ ನಿಲ್ದಾಣದಲ್ಲಿ ಕ್ರಿಕೆಟ್ ಆಡುತ್ತಿದ್ದ ವೇಳೆ ಕ್ಲೀನರ್ ಗೋಪಿ ಎಂಬಾತನ ಜತೆ ಜಗಳವಾಡಿದ್ದರು. ಗೋಪಿ ನಾಲ್ಕೂ ಮಂದಿಗೂ ಹೊಡೆದು ಕಳುಹಿಸಿದ್ದ. ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ನಿರ್ಧರಿಸಿದ ಆರೋಪಿಗಳು ಸಿಟಿ ಮಾರುಕಟ್ಟೆಯಲ್ಲಿ ನಾಲ್ಕು ಮಚ್ಚು ಖರೀದಿಸಿದ್ದರು.

ಏಪ್ರಿಲ್ 19ರಂದು ರಾತ್ರಿ ಲಾರಿ ನಿಲ್ದಾಣಕ್ಕೆ ಬಂದ ಅವರು ಗೋಪಿ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದಾರೆ. ಆದರೆ ಲಾರಿಯೊಳಗೆ ಕುಳಿತುಕೊಂಡ ಗೋಪಿ ಬಾಗಿಲು ಮುಚ್ಚಿಕೊಂಡಿದ್ದರಿಂದ ಆತನ ಮೇಲೆ ಹಲ್ಲೆ ನಡೆಸಲು ಸಾಧ್ಯವಾಗಿಲ್ಲ. ಅಲ್ಲಿಯೇ ಇದ್ದ ಕೃಷ್ಣಾಚಾರಿ ಅವರನ್ನು ಮಾತನಾಡಿಸಿದ ಆರೋಪಿಗಳು ಗೋಪಿಯನ್ನು ಕೆಳಗಿಳಿಸುವಂತೆ ಕೇಳಿದ್ದಾರೆ. ಆದರೆ ಅವರು ಇದಕ್ಕೆ ಒಪ್ಪಿಲ್ಲ.

ಆ ನಂತರ ಕೃಷ್ಣಾಚಾರಿ ಅವರಿಗೆ ಮದ್ಯಪಾನ ಮಾಡಿಸಿದ್ದಾರೆ. ಅಮಲಿನಲ್ಲಿದ್ದ ಅವರು ನಾಲ್ಕೂ ಮಂದಿಗೆ ಬೈಯ್ದು ಮನೆಗೆ ಹೋಗುವಂತೆ ಬೆದರಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಆರೋಪಿಗಳು ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು ಎಂದು ಇನ್‌ಸ್ಪೆಕ್ಟರ್ ಬಾಬು ನರೋನಾ ತಿಳಿಸಿದ್ದಾರೆ.

ಮಚ್ಚು ಹಿಡಿದು ಛಾಯಾಚಿತ್ರ ತೆಗೆಸಿಕೊಂಡಿದ್ದರು: ಬಿಬಿಎಂಪಿ ಸದಸ್ಯ ರೌಡಿ ದಿವಾನ್ ಆಲಿ ಕೊಲೆಯಾದ ನಂತರ ಈ ಆರೋಪಿಗಳು ಅಪರಾಧ ಜಗತ್ತಿನಲ್ಲಿ ಗುರುತಿಸಿಕೊಳ್ಳಲು ನಿರ್ಧರಿಸಿದ್ದರು. ಸ್ಟುಡಿಯೊಗೆ ಹೋಗಿದ್ದ ಅವರು ಮಚ್ಚು ಹಿಡಿದು ಛಾಯಾಚಿತ್ರ ತೆಗೆಸಿಕೊಂಡಿದ್ದರು. ಆ ಛಾಯಾಚಿತ್ರ ತೋರಿಸಿ ಜನರನ್ನು ಬೆದರಿಸುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಮಾಡಿದ್ದನ್ನು ಒಪ್ಪಿಕೊಂಡರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT