ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೊಪ್ಪಮ್ಮಾ ಸೊಪ್ಪು... ಬಾಣಂತಿ ಸೊಪ್ಪು!

Last Updated 26 ಜನವರಿ 2012, 19:30 IST
ಅಕ್ಷರ ಗಾತ್ರ

ಬಸ್ಸಾರಿಗೆ ಬಳಸುವ ಸೊಪ್ಪು, ಮಸ್ಸೊಪ್ಪಿಗೆ ಬಳಸುವ ಸೊಪ್ಪು, ಕೆಮ್ಮಿಗೆ ತುಳಸಿ ಸೊಪ್ಪು... ಇವೆಲ್ಲವೂ ಸರಿಯೇ. ಆದರೆ, ಇದೇನಿದು ಬಾಣಂತಿ ಸೊಪ್ಪು?
ಅದು ತಿನ್ನುವ ಸೊಪ್ಪಲ್ಲ, ಮೈತೊಳೆಯುವ ಸೊಪ್ಪು!

ಮಕ್ಕಳನ್ನು ಹಡೆದ ನಂತರ ಬಾಣಂತಿಯರ ಮೊದಲ ತಲೆಸ್ನಾನಕ್ಕೆ ಸಾಕಷ್ಟು ಎಚ್ಚರಿಕೆ ವಹಿಸಲಾಗುತ್ತದಷ್ಟೇ... ಹಳ್ಳಿಗಳಲ್ಲಾದರೆ ಬೇವು, ಎಳ್ಳಿ, ನಿಂಬೆ, ನೀಲಗಿರಿ ಎಂದು ಗಿಡಕ್ಕೊಂದು ಎಲೆ ತರಿದುತಂದು ನೀರಿಗೆ ಹಾಕಿ ಕುದಿಸಿ, ಘಮಗುಟ್ಟುವ ಆ ಕುದಿನೀರಿನಲ್ಲಿ ಹಸಿ ಬಾಣಂತಿಯರ ತಲೆ ತೊಳೆಯಲಾಗುತ್ತದೆ. ಆದರೆ, ನಗರದಲ್ಲಿ? `ಇಲ್ಲಿ ವಿಳೇದೆಲೆ ಸಿಗುವುದೇ ಕಷ್ಟ, ಬಾಣಂತಿ ಸೊಪ್ಪಿಗೆ ಎಲ್ಲಿ ಹೋಗುವುದು~ ಎಂದಿರಾ? ಇಲ್ಲಿದೆ ನೋಡಿ ವಿಳಾಸ-

ಕೃಷ್ಣರಾಜ ಮಾರುಕಟ್ಟೆಗೆ ಬನ್ನಿ. ಅಲ್ಲಿನ ಯಾವುದೇ ಮೂಲೆಯಲ್ಲಿ ನಿಂತು `ಬಾಣಂತಿ ಸೊಪ್ಪು ಎಲ್ಲಿ ಸಿಗುತ್ತೆ?~ ಎಂದು ಕೇಳಿ, ಎಲ್ಲರೂ ಕೈ ತೋರಿಸುವುದು ರಾಮಕ್ಕನತ್ತ.
ಚಕ್ಕಳ ಮಕ್ಕಳ ಹಾಕಿ ಕುಳಿತುಕೊಂಡು ರಾಮಕ್ಕ ಸೊಪ್ಪು ಮಾರುವುದನ್ನು ನೋಡುವುದೇ ಒಂದು ಸೊಗಸು. `ಹೇಗಿದೆ ವ್ಯಾಪಾರ? ಏನೀ ಸೊಪ್ಪಿನ ವಿಶೇಷ?~ ಎಂದು ಕೇಳಿದರೆ, ಅರವತ್ತು ವರ್ಷದ ರಾಮಕ್ಕ ಎಲೆ ಅಡಿಕೆ ಚೀಲದೊಂದಿಗೆ ಮಾತಿನ ಸುರುಳಿಯನ್ನೂ ಬಿಚ್ಚಿದರು.

“ಬಾಣಂತಿ ಸೊಪ್ಪಿನ ವ್ಯಾಪಾರ ಇಲ್ಲಿ ಶುರು ಮಾಡಿ ಮೂವತ್ತು ವರ್ಷ ಆಯ್ತು. ಅದಕ್ಕೆ ಮೊದಲು, ನನ್ನ ತಾಯಿ ಹಾಗೂ ಅಜ್ಜಿ ಇದೇ ವ್ಯಾಪಾರ ಮಾಡ್ತಿದ್ರು. ಈಗ ನಾನಿಲ್ಲಿ ಕೂತಿದ್ದೀನಿ. ವ್ಯಾಪಾರ ಚಂದಾಗೇ ಐತೆ. ದಿನಕ್ಕೆ ಏನಿಲ್ಲವೆಂದರೂ 30ರಿಂದ 35 ಜನ ಈ ಸೊಪ್ಪು ಕೇಳ್ಕೊಂಡು ಬರ್ತಾರೆ. ಆಸ್ಪತ್ರೆ-ಇಂಗ್ಲಿಷ್ ಮದ್ದು ಎಷ್ಟೇ ಬಂದಿದ್ದರೂ ಬಾಣಂತಿ ವಿಷಯದಲ್ಲಿ ಹಳ್ಳಿ ಔಷಧ ಹುಡುಕೋದು ಸಾಮಾನ್ಯ. ಇವತ್ತಿಗೂ ಬಾಣಂತಿ ಸೊಪ್ಪಿಗೆ ಬೇಡಿಕೆ ಕಡಿಮೆಯಾಗಿಲ್ಲ...~

ರಾಮಕ್ಕ ತನ್ನ ವ್ಯಾಪಾರದ ಕಥೆ ಹೇಳುತ್ತಿರುವಂತೆಯೇ ನಾಲ್ಕಾರು ಮಹಿಳೆಯರು `ಬಾಣಂತಿ ಸೊಪ್ಪು~ ಹುಡುಕುತ್ತಾ ಅಲ್ಲಿಗೆ ಬಂದಿದ್ದರು. ಎಲ್ಲರದೂ ಒಂದೇ ಪ್ರಶ್ನೆ. `ಬಾಣಂತಿ ಸೊಪ್ಪು ಸಿಗುವುದು ಇಲ್ಲೇನಾ?~

`ಇದೇ ಕಣ್ರೀ ಬಾಣಂತಿ ಸೊಪ್ಪು. ಇದನ್ನು ರಾತ್ರಿ ನೀರಿನಲ್ಲಿ ನೆನೆಹಾಕಿ. ಬೆಳಗ್ಗೆ ಮತ್ತಷ್ಟು ನೀರು ಬೆರೆಸಿ ಚೆನ್ನಾಗಿ ಕುದಿಸಿ. ಆ ನೀರಲ್ಲಿ ಸ್ನಾನ ಮಾಡ್ಸಿ...~- ವೈದ್ಯರ ಪ್ರಿಸ್ಕೆಪ್ಷನ್‌ನಂತಿತ್ತು ರಾಮಕ್ಕನ ಮಾತು.

`ಇಲ್ಲಿ ಬರುವ ಬಹುತೇಕರು ಹೊಸಬರೇ. ಒಮ್ಮೆ ಬಂದು ಹೋದೋರು ಸೊಪ್ಪಿನ ವಿಷಯ ಬೇರೆಯವರಿಗೂ ತಿಳಿಸ್ತಾರೆ. ಜಾತಿ ಬೇಧ ಇಲ್ಲದೆ ಎಲ್ಲಾ ಧರ್ಮದವರೂ ಈ ಸೊಪ್ಪು ಹುಡುಕಿ ಬರುತ್ತಾರೆ...~

ಮಾತನ್ನು ತುಂಡರಿಸಿ, `ಅಕ್ಕಾ ರಾಮಕ್ಕಾ, ಈ ಸೊಪ್ಪಿನ ಉಪಯೋಗ ಏನೇನು?~ ಎಂದು ಕೇಳಿದಾಗ-

ಬಾಯಲ್ಲಿ ನುಜ್ಜುಗುಜ್ಜಾಗಿದ್ದ ಕವಳ ಉಗಿದು, ರಾಮಕ್ಕ ಹೇಳಿದರು: `ಬಾಣಂತಿಯರಿಗೆ ಹೆರಿಗೆ ಬಳಿಕ ಮೈಕೈ ನೋವು, ಒಳಜ್ವರ, ತಲೆ ನೋವು, ಸನ್ನಿ ಬರುತ್ತೆ. ಇವಕ್ಕೆಲ್ಲಾ ಬಾಣಂತಿ ಸೊಪ್ಪೇ ಮದ್ದು. ಎಳ್ಳಿ ಸೊಪ್ಪು, ನಿಂಬೆ ಸೊಪ್ಪು, ತಂಗಡಿ ಸೊಪ್ಪು, ಲಕ್ಕಿ ಸೊಪ್ಪು, ನಾಗದಹಳ್ಳಿ, ಚೌಡಂಗಿ, ಬಂದರಿ, ಬೇವಿನ ಸೊಪ್ಪು, ನೀಲಗಿರಿ ಸೊಪ್ಪು- ಹೀಗೆ ಒಂಬತ್ತು ಸೊಪ್ಪು ಇಲ್ಲಿರೋದು. ಪ್ರತಿಯೊಂದರಲ್ಲೂ ಔಷಧಿ ಗುಣ ಅಯ್ತೆ~.

ಅಂದಹಾಗೆ, ಈ ಬಾಣಂತಿ ಸೊಪ್ಪು ಬಿಡದಿ, ರಾಮನಗರ, ಕೆಂಗೇರಿ ಸುಂಕದಪಾಳ್ಯ ಮೊದಲಾದ ಹಳ್ಳಿಗಳಿಂದ ರಾಮಕ್ಕನ ಅಂಗಡಿಗೆ ಬರುತ್ತದೆ. ರಾಮಕ್ಕ ಮಾತ್ರವಲ್ಲ, ಕೆ.ಆರ್.ಮಾರ್ಕೆಟ್‌ನ ಕಾಂಪ್ಲೆಕ್ಸ್ ಒಳಗಡೆ ನಾಲ್ಕು ಕಡೆಗಳಲ್ಲಿ ಈ ಸೊಪ್ಪು ಅಂಗಡಿಗಳಿವೆ. `ಈ ನಾಲ್ಕೂ ಮಂದಿ ನಮ್ಮ ಕುಟುಂಬಸ್ಥರೇ~ ಎನ್ನುವ ಆಕೆಯ ಮೊಗದಲ್ಲೊಂದು ಹೊಳಪು.

ಅಲ್ಲೇ ಇದ್ದ ರಾಮಕ್ಕನ ಸಂಬಂಧಿ ವೆಂಕಟ್ರಮಣ್ಣನವರು ಸೊಪ್ಪಿನ ಮಾತು ಬೆಳೆಸುತ್ತಾ- `ಹಿಂದೆಲ್ಲಾ ಇಲ್ಲೇ ಐದಾರು ಮೈಲು ದೂರದಲ್ಲೇ ಎಲ್ಲಾ ಸೊಪ್ಪುಗಳು ಸಿಗುತ್ತಿದ್ದವು. ಈಗ ನೋಡಿ ಸೊಪ್ಪಿಗಾಗಿ ಬೇರೆಯವರನ್ನು ಅವಲಂಬಿಸಬೇಕಾಗಿದೆ. ತುರ್ತು ಸಂದರ್ಭದಲ್ಲಿ ನಾವೇ ಹೋಗ್ತೀವಿ. ಈಗಂತೂ ಬಾಣಂತಿ ಸೊಪ್ಪಿಗೆ ಡಿಮ್ಯಾಂಡು ಜಾಸ್ತಿ ಆಗೈತೆ.  ಹೊರ ರಾಜ್ಯಗಳಿಂದಲೂ ಬೇಡಿಕೆ ಅಯ್ತೆ. ಕೆಲವರು ಸೊಪ್ಪು ಒಣಗಿಸಿಕೊಂಡು ಅಮೆರಿಕಾಗೆ ತಗೊಂಡು ಹೋಗೋದೂ ಆಯ್ತೆ~ ಎಂದು ಸೊಪ್ಪಿನ ಸೀಮೋಲ್ಲಂಘನದ ಕಥೆ ಹೇಳಿದರು.

ಅಂದಹಾಗೆ, ಸೈಜಿನ ಆಧಾರದ ಮೇಲೆ ಒಂದು ಕಟ್ಟಿಗೆ 50ರಿಂದ 100 ರೂಪಾಯಿ ಬೆಲೆಯಿದೆ. ಸೊಪ್ಪಿನ ಕಟ್ಟು ನೋಡುತ್ತಿದ್ದರೆ, ಒಂದು `ಸುಗಂಧ ಸ್ನಾನ~ದ ಆಹ್ಲಾದಕ್ಕಾಗಿ ಬಾಣಂತಿಯಲ್ಲದಿದ್ದರೂ ಈ ಸೊಪ್ಪಿನ ನೀರಿನಲ್ಲಿ ಮೀಯಬೇಕೆನ್ನಿಸುತ್ತದೆ. ಅನೇಕ ಕಾರಣಗಳಿಂದಾಗಿ ನಗರದ ಬದುಕು ಉಸಿರುಗಟ್ಟಿಸುತ್ತದೆ ಅಲ್ಲವೇ? ಸರಾಗ ಉಸಿರಿಗೆ, ಶೀತ ನಿವಾರಣೆ ಈ `ಸೊಪ್ಪು ಸ್ನಾನ~ ಮದ್ದಾಗಬಲ್ಲದೇನೊ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT