ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೊರಬ: ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ :ಆಯ್ಕೆ ಅವ್ಯವಹಾರ: ಸಿಡಿಪಿಒ ಅಮಾನತಿಗೆ ಆಗ್ರಹ

Last Updated 3 ಮೇ 2012, 7:45 IST
ಅಕ್ಷರ ಗಾತ್ರ

ಸೊರಬ: ಸರ್ಕಾರದ ನಿಯಮವನ್ನು ಶಿಶು ಅಭಿವೃದ್ಧಿ ಮತ್ತು ಮಹಿಳಾ ಕಲ್ಯಾಣ ಅಧಿಕಾರಿ ಗಾಳಿಗೆ ತೂರಿದ್ದಲ್ಲದೇ ಸರ್ವಾಧಿಕಾರ ಧೋರಣೆ ಅನುಸರಿಸುತ್ತಿದ್ದು, ಅವರನ್ನು ಕೂಡಲೇ ಅಮಾನತುಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘಷ ಸಮಿತಿ ತಾಲ್ಲೂಕು ಶಾಖೆಯ ವತಿಯಿಂದ ಬುಧವಾರ ಪಟ್ಟಣದ ಸಿಡಿಪಿಒ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು.

ಆನವಟ್ಟಿ ಹೋಬಳಿ ಸಮನವಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತುಡ್ನೂರು ಬೆಂಡೆಕಟ್ಟೆಗೆ ಮಿನಿ ಅಂಗನವಾಡಿ ಕಾರ್ಯಕರ್ತೆಯರ ಆಯ್ಕೆ ಪ್ರಕ್ರಿಯೆಯಲ್ಲಿ ಅರ್ಜಿ ಕರೆಯುವಾಗ ಮೊದಲು ಪರಿಶಿಷ್ಟ ಜಾತಿಗೆ ಮೀಸಲು ಎಂದು ಅರ್ಜಿ ಕರೆದಿದ್ದು, ಅದಕ್ಕೆ ಮೇಲಧಿಕಾರಿಯ ಅನುಮತಿ ಪಡೆದು ಅರ್ಜಿ ಕೊಟ್ಟಿರುತ್ತಾರೆ. 

ಆದರೆ, 10 ದಿನಗಳ ನಂತರ ಇದೇ ಸಿಡಿಪಿಒ ಏಕಾಏಕಿ ಯಾರ ಅನುಮತಿ ಪಡೆಯದೆ ಮೇಲಧಿಕಾರಿಯ ಗಮನಕ್ಕೂ ತರದೇ ಪರಿಶಿಷ್ಟ ಪಂಗಡ ಎಂದು ಘೋಷಣೆ ಮಾಡಿ ದಲಿತ-ದಲಿತರಲ್ಲೇ ಗೊಂದಲ ಸೃಷ್ಟಿ ಮಾಡಿ ಆಯ್ಕೆ ಪ್ರಕ್ರಿಯೆ ನಡೆಯುವುದನ್ನು ತಡೆ ಹಿಡಿಯಲು ಕಾರಣಕರ್ತರಾಗಿದ್ದಾರೆ ಎಂದು ಪ್ರತಿಭಟನಾನಿರತರು ದೂರಿದರು.

ತಲಗಡ್ಡೆ ಗ್ರಾಮ ಪಂಚಾಯ್ತಿಗೆ ಮೊದಲು ಇತರೆಯವರಿಗೆ ಎಂದು ಅರ್ಜಿ ಕರೆದು ನಂತರ ಪರಿಶಿಷ್ಟ ಜಾತಿಗೆ ಎಂದು ಗೊಂದಲ ಮಾಡಿ ಕೊನೆಯಲ್ಲಿ ಪರಿಶಿಷ್ಟ ಪಂಗಡ ಎಂದು ಪ್ರಕಟಿಸಿದ್ದಾರೆ. ಹುರುಳಿಕೊಪ್ಪ ತಾಂಡಾದಲ್ಲಿ ಅಂಗನವಾಡಿ ಸಹಾಯಕಿಯ ಅರ್ಜಿ ಕರೆದಿದ್ದು, ಅಲ್ಲಿ ಯಾರೂ ಅರ್ಜಿ ಸಲ್ಲಿಸಿಲ್ಲ. 

ಆದರೆ, ಅದೇ ಊರಿಗೆ ಸೇರಿದ ಹುರುಳಿಕೊಪ್ಪ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆಯೊಬ್ಬರು ಮೂರು ಬಾರಿ ಅರ್ಜಿ ಸಲ್ಲಿಸಿದ್ದರೂ ಅರ್ಜಿಯನ್ನು ತಿರಸ್ಕರಿಸಿದ್ದಾರೆ. ಈ ಕುರಿತು ಅವರನ್ನು ಪ್ರಶ್ನಿಸಿದಾಗ ಸರ್ವಾಧಿಕಾರಿ ಧೋರಣೆಯಿಂದ ವರ್ತಿಸಿದ್ದಾರೆ ಎನ್ನಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಜಡೆ ಹೋಬಳಿ ತುಮರಿಕೊಪ್ಪ ಗ್ರಾಮದ ಎಸ್‌ಸಿ ಮಹಿಳೆಯನ್ನು ಆಯ್ಕೆ ಮಾಡಿ ಇದೂವರೆಗೂ ಅವರಿಗೆ ಕೆಲಸಕ್ಕೆ ಆದೇಶ ಕೊಟ್ಟಿಲ್ಲ. ಯಲಿವಾಳ ಗ್ರಾಮದ ಅಂಗನವಾಡಿ ಸಹಾಯಕಿ ಹುದ್ದೆಯಲ್ಲಿ ಇತರೆ ವರ್ಗಕ್ಕೆ ಅರ್ಜಿ ಕರೆದಿದ್ದು, ಅದಕ್ಕೆ ಇತರೆಯವರ ಮೀಸಲಾತಿಗೆ ಪರಿಶಿಷ್ಟ ಜಾತಿಯವರು ಅರ್ಜಿ ಹಾಕಿದ್ದರು.

  ಇತರೆ ವರ್ಗದ ರೇಖಾ ಕೋಂ ಮಂಜಪ್ಪ ಎಂಬುವರು ಪಡಿತರ ಚೀಟಿಯನ್ನು ನಕಲು ಮಾಡಿ ಕೊಟ್ಟಿದ್ದು, ಪರಿಶಿಷ್ಟ ಜಾತಿಯ ಮಹಿಳೆಗೆ ಗೊತ್ತಾಗಿ ತಕ್ಷಣವೇ ಅವರ ಪಡಿತರ ಚೀಟಿ ಸರಿಯಲ್ಲ ಎಂದು ತಕರಾರು ಅರ್ಜಿ ಸಲ್ಲಿಸಿದ್ದರೂ ಸಹ ಆ ಮಹಿಳೆ ಎಸ್‌ಸಿ ಎಂಬ ಕಾರಣಕ್ಕೆ ಈವರೆಗೂ ಅವರ ತಕರಾರಿಗೆ ಯಾವುದೇ ಉತ್ತರ ನೀಡಿಲ್ಲ  ಎಂದು ಆರೋಪಿಸಿರು.

ಉಳವಿ ಹೋಬಳಿ ಚಿಟ್ಟೂರು ಗ್ರಾಮದ ಅಂಗನವಾಡಿ ಸಹಾಯಕಿ ಹುದ್ದೆಯನ್ನು ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ, ಸಮಾಜ ಕಲ್ಯಾಣಾಧಿಕಾರಿ, ತಾ.ಪಂ. ಅಧ್ಯಕ್ಷರು, ಪಿಡಿಒ ಶಿವಮೊಗ್ಗ, ಇಡಿಪಿಒ ಆಯ್ಕೆ ಸಭೆಯಲ್ಲಿ ಶರಾವತಿ ಅವರ ಹೆಸರನ್ನು ಆಯ್ಕೆ ಮಾಡಿ ನೋಟಿಸ್ ಬೋರ್ಡ್‌ಗೆ ಹಚ್ಚಿನ 10 ದಿನದ ನಂತರ 2ನೇ ಅರ್ಜಿದಾರರು ಮತ್ತು ಶರಾವತಿ ಗಂಡನ 2ನೇ ಹೆಂಡತಿಯ ತಕರಾರು ಅರ್ಜಿ ಮೇರೆಗೆ ಶರಾವತಿಯನ್ನು ವಜಾ ಮಾಡಿ, ಮೇಲಧಿಕಾರಿಯ ಗಮನಕ್ಕೆ ತಾರದೇ, ಪುನಃ ಆಯ್ಕೆ ಪ್ರಕ್ರಿಯೆ ಮಾಡದೇ 2ನೇ ಅರ್ಜಿದಾರರಾದ ಸೌಭಾಗ್ಯಾ ಎಂಬುವರಿಗೆ ಆದೇಶ ಕೊಟ್ಟು ಕೆಲಸಕ್ಕೆ ಕಳುಹಿಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಆದ್ದರಿಂದ ಸಿಡಿಪಿಒ ಜೋಯಪ್ಪ ಅವರನ್ನು ಸ್ಥಳದಲ್ಲಿಯೇ ಅಮಾನತುಗೊಳಿಸಬೇಕು. ಇಲ್ಲದಿದ್ದಲ್ಲಿ ಪ್ರತಿಭಟನೆಯನ್ನು ಕೈಬಿಡುವುದಿಲ್ಲ ಎಂದು ಪ್ರತಿಭಟನಾಕಾರರು  ಆಗ್ರಹಿಸಿದರು.ಮಧ್ಯಾಹ್ನ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ನಿರ್ದೇಶಕರು ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರಿಂದ ಅಹವಾಲು ಸ್ವೀಕರಿಸಿ, ಎಲ್ಲಾ ಆರೋಪಗಳನ್ನು ಕೂಲಂಕಷವಾಗಿ ಪರೀಕ್ಷಿಸಿ ಈ ದಿನವೇ ಈ ಆರೋಪಗಳ ಪಟ್ಟಿಯನ್ನು ಮೇಲಧಿಕಾರಿಗಳಿಗೆ ಕಳುಹಿಸುವುದಾಗಿ, 15 ದಿನಗಳ ಒಳಗಾಗಿ ಜೋಯಪ್ಪ ಮೇಲೆ ಕ್ರಮ ಕೈಗೊಂಡ ಕುರಿತು  ದಸಂಸ ಮುಖಂಡರಿಗೆ ತಿಳಿಸಲಾಗುವುದು ಎಂದು ಭರವಸೆ ನೀಡಿದಾಗ, ಪ್ರತಿಭಟನಾ ನಿರತರು ಪ್ರತಿಭಟನೆ ವಾಪಸ್ ಪಡೆಯಲು ಒಪ್ಪಿದರು. 

ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಗುರುರಾಜ್, ತಾಲ್ಲೂಕು ಸಂಚಾಲಕ ಎ.ಡಿ. ನಾಗಪ್ಪ ಮಾವಲಿ, ಬಾಲಚಂದ್ರ, ರೇಣುಕಾ ಬಾಲಚಂದ್ರ, ಮಹೇಶ ಗಂಗೊಳ್ಳಿ, ಪ್ರಕಾಶ್ ಮಲ್ಲಾಪುರ ಮತ್ತು ಸಮಿತಿ ಇತರ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT