ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೊಸೆಯ ಜಾಗದಲ್ಲಿ ಅನಕ್ಷರಸ್ಥ ಅತ್ತೆ ಪರಿಚಾರಕಿ!

Last Updated 31 ಜುಲೈ 2012, 5:25 IST
ಅಕ್ಷರ ಗಾತ್ರ

ಗಂಗಾವತಿ: ನಗರದ 28ನೇ ವಾರ್ಡ್ ಚೆಲುವಾದಿ ಓಣಿಯಲ್ಲಿರುವ 6ನೇ ಅಂಗವಾಡಿ ಕೇಂದ್ರದಲ್ಲಿ ಕಾರ್ಯ ನಿರ್ವಹಿಸಬೇಕಿದ್ದ ಪರಿಚಾರಕಿ ಆರು ತಿಂಗಳಿಂದ ನಾಪತ್ತೆಯಾಗಿದ್ದಾರೆ. ಸೊಸೆಯ ಸ್ಥಾನದಲ್ಲಿ ಅತ್ತೆ ಕರ್ತವ್ಯಕ್ಕೆ ಹಾಜರಾಗಿ ವೇತನ ಪಡೆಯುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.

`ಈ ಪ್ರಕರಣದ ಬಗ್ಗೆ ನಗರಸಭಾ ಸದಸ್ಯ ಹುಸೇನಪ್ಪ ಹಂಚಿನಾಳ ಅವರ ಗಮನಕ್ಕೆ ತಂದರೂ ಯಾವ ಪ್ರಯೋಜನವಾಗಿಲ್ಲ. ಹೀಗಾಗಿ ಸಮಸ್ಯೆಗಳಿಗೆ ಸ್ಪಂದಿಸದ ಸದಸ್ಯ ಇದ್ದೂ ಇಲ್ಲದಂತಾಗಿದ್ದಾರೆ~ ಎಂದು ವಾರ್ಡಿನ ಯುವಕರಾದ ಶರಣಪ್ಪ, ಬಸವರಾಜ, ಜಮೀರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೆರಿಗೆ ರಜೆ: ಅಂಗನವಾಡಿ ಪರಿಚಾರಕಿ ಪದ್ಮಾವತಿ ಹೆರಿಗೆ ಕಾರಣದಿಂದ ಕರ್ತವ್ಯಕ್ಕೆ ಗೈರು ಹಾಜರಾಗಿದ್ದಾರೆ. ಬದಲಿಗೆ ಅತ್ತೆಯೆ ಕಳೆದ ಆರು ತಿಂಗಳಿಂದ ಸತತ ಅಂಗನಾಡಿಗೆ ಆಗಮಿಸುತ್ತಿದ್ದಾರೆ. ಸೊಸೆಯ ಹಾಜರಿಯನ್ನು ಅತ್ತೆಯೆ ಹಾಕಿ ಸಂಬಳ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ಸೊಸೆಯ ಕರ್ತವ್ಯಕ್ಕೆ ಪರ್ಯಾಯವಾಗಿ ಆಗಮಿಸುತ್ತಿರುವ ಅತ್ತೆಯ ಬಗ್ಗೆ ಮೇಲಧಿಕಾರಿಗಳ ಗಮನ ಸೆಳೆಯ ಬೇಕಿದ್ದ ಅಂಗನವಾಡಿ ಮೇಲ್ವಿಚಾರಕಿ ನೀಲಮ್ಮ ಕೂಡ ನಿರ್ಲಕ್ಷ್ಯ ವಹಿಸುರುವುದು ವಾರ್ಡಿನ ನಿವಾಸಿಗಳಲ್ಲಿ ಹಲವು ಅನುಮಾನಕ್ಕೆ ಕಾರಣವಾಗಿದೆ.

ಅನುಪಸ್ಥಿತಿಯಲ್ಲಿ: ಅಂಗನವಾಡಿ ಮೇಲ್ವಿಚಾರಕಿ ಬಾರದ ಸಂದರ್ಭ ಅಥವಾ ಕಾರ್ಯಾಲಯದಲ್ಲಿ ಸಭೆಗಳಿದ್ದು ಗೈರಾದ ವಿಶೇಷ ಸಂದರ್ಭದಲ್ಲಿ ಅಂಗನವಾಡಿ ಕೇಂದ್ರದ ಉಸ್ತುವಾರಿ ವಹಿಸಿಕೊಂಡು ಪರಿಚಾರಕಿಯೇ ಮಕ್ಕಳಿಗೆ ಪಾಠ ಹೇಳಿ ಕೊಡಬೇಕಾದ ಜವಾಬ್ದಾರಿ ಇದೆ.

ಆದರೆ ಅತ್ತೆ ನಾಗಮ್ಮ ಅನಕ್ಷರಸ್ಥರಾಗಿದ್ದು, ಅಂಗನವಾಡಿ ಕೇಂದ್ರದ ಮೇಲ್ವಿಚಾರಕಿ ಬಾರದ ಸಂದರ್ಭದಲ್ಲಿ ಅಂಗನವಾಡಿಗೆ ರಜೆ ನೀಡುವಂತ ಪರಿಸ್ಥಿತಿ ಉದ್ಭವಿಸಿದೆ. ಇದರಿಂದ ಮಕ್ಕಳಿಗೆ ತೊಂದರೆಯಾಗಿದೆ ಎಂದು ವಾರ್ಡಿನ ಯುವಕರಾದ ಅನಂತರಾಜ, ಪಂಪಾಪತಿ ದೂರಿದ್ದಾರೆ.

ವಾರ್ಡ್ ಬದಲು: ವಾಸ್ತವಿಕವಾಗಿ ಆಯಾ ವಾರ್ಡ್ ವ್ಯಾಪ್ತಿಯಲ್ಲಿ ವ್ಯಕ್ತಿಗಳನ್ನೆ ಅಂಗನವಾಡಿ ಮೇಲ್ವಿಚಾರಕಿ ಹಾಗೂ ಪರಿಚಾರಕಿಯನ್ನಾಗಿ ನೇಮಿಸಿಕೊಳ್ಳಬೇಕು ಎಂಬ ನಿಯಮವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಉಲ್ಲಂಘಿಸಿದ್ದಾರೆ.

28ನೇ ವಾರ್ಡಿನ ಅಂಗನವಾಡಿಗೆ ಇದೇ ವಾರ್ಡಿನ ಚಂದ್ರಕಲಾ ಎಂಬುವವರು ಅರ್ಜಿ ಹಾಕಿದ್ದರು. ಆದರೆ ನೇಮಕವಾಗಿರಲಿಲ್ಲ. ಆದರೆ 26ನೇ ವಾರ್ಡಿನ ಪದ್ಮಾವತಿಯನ್ನು ಪರಿಚಾರಕಿ ಎಂದು ನೇಮಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ಕೇವಲ 28ನೇ ವಾರ್ಡಿನಲ್ಲಿ ಮಾತ್ರವಲ್ಲ, ತಾಲ್ಲೂಕಿನ ಬಹುತೇಕ ಅಂಗನವಾಡಿಗಳ ಮೇಲ್ವಿಚಾರಕಿ, ಪರಿಚಾರಕಿಯರ ನೇಮಕಾತಿಯಲ್ಲಿ ವಾರ್ಡ್ ಬದಲಾಗಿವೆ. ಸಾಮಾಜಿಕ ಅನ್ಯಾಯ ಎದುರಾಗಿದೆ. ಸಿಡಿಪಿಒ ನಾಗನಗೌಡರಿಗೆ ಇದೊಂದು ಸವಾಲಾಗಿದ್ದು ಏನು ಮಾಡುವರೋ ಕಾಯ್ದು ನೋಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT