ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋತ ಬಿಜೆಪಿ; ಗೆದ್ದ ಕಾಂಗ್ರೆಸ್!

Last Updated 30 ಜೂನ್ 2012, 7:05 IST
ಅಕ್ಷರ ಗಾತ್ರ

ವಿಜಾಪುರ: ಇಲ್ಲಿಯ ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಚುನಾವಣೆಯಲ್ಲಿ ಹಲವು ಅಚ್ಚರಿ ನಡೆದವು. `ಅಧಿಕೃತ ಅಭ್ಯರ್ಥಿಯ ಸೋಲಿನೊಂದಿಗೆ ಬಿಜೆಪಿ ಮುಖಭಂಗ ಅನುಭವಿಸಿದರೆ, ತನ್ನ ಒಗ್ಗಟ್ಟನ್ನು ಕಾಯ್ದುಕೊಂಡು ಬಂಡಾಯ ಅಭ್ಯರ್ಥಿಗೆ ಬೆಂಬಲ ನೀಡಿ ಅವರನ್ನು ಗೆಲ್ಲಿಸುವ ಮೂಲಕ ಕಾಂಗ್ರೆಸ್ `ಜಯ~ದ ನಗೆ ಬೀರಿತು~ ಎಂಬ ವ್ಯಾಖ್ಯಾನ ರಾಜಕೀಯ ವಲಯದಿಂದ ಕೇಳಿ ಬರುತ್ತಿದೆ.

ಒಟ್ಟು 38 ಸದಸ್ಯ ಬಲದ ವಿಜಾಪುರ ಜಿಲ್ಲಾ ಪಂಚಾಯಿತಿಯಲ್ಲಿ ಕಾಂಗ್ರೆಸ್ 19 ಸದಸ್ಯರನ್ನು ಹೊಂದಿದೆ. ಬಿಜೆಪಿಯ 16ಜನ ಸದಸ್ಯರಿದ್ದರು. ಅವರಲ್ಲಿ ಕಮಲಾಬಾಯಿ ಮಾಯವಂಶಿ ನಿಧನರಾಗಿದ್ದರಿಂದ ಬಿಜೆಪಿ ಬಲ 15ಕ್ಕೆ ಕುಸಿದಿದೆ. ಜೆಡಿಎಸ್‌ನ ಇಬ್ಬರು ಹಾಗೂ ಒಬ್ಬ ಪಕ್ಷೇತರ ಸದಸ್ಯರಿದ್ದಾರೆ.

ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನ ಕಮಲಾಬಾಯಿ ಮಾಯವಂಶಿ ಅವರ ನಿಧನದಿಂದ ತೆರವಾಗಿತ್ತು.ತೆರವಾಗಿರುವ ಅಧ್ಯಕ್ಷ ಸ್ಥಾನಕ್ಕೆ (ಉಳಿದಿರುವ ಅವಧಿ ಕೇವಲ ನಾಲ್ಕೂವರೆ ತಿಂಗಳು) ಜೂನ್ 14ರಂದು ಚುನಾವಣೆ ನಿಗದಿ ಮಾಡಲಾಗಿತ್ತು. ಅಂದು ಅನುಸೂಯಾ ಜಾಧವ, ಸಾವಿತ್ರಿ ಅಂಗಡಿ ನಾಮಪತ್ರ ಸಲ್ಲಿಸಿದ್ದರು. ಕೋರಂ ಅಭಾವದಿಂದ ಸಭೆಯನ್ನು ಮುಂದೂಡಲಾಗಿತ್ತು.

`ಮುಂದೂಡಿದ ಚುನಾವಣಾ ಸಭೆ ಶುಕ್ರವಾರ ನಡೆಯಿತು. ಜಿ.ಪಂ.ನ ಎಲ್ಲ ಸದಸ್ಯರು ಉಪಸ್ಥಿತರಿದ್ದರು. ಹಿಂದೆ ಸಲ್ಲಿಸಿದ್ದ ನಾಮಪತ್ರಗಳನ್ನೇ ಪರಿಶೀಲಿಸಲಾಯಿತು. ಅಧ್ಯಕ್ಷ ಸ್ಥಾನಕ್ಕೆ ಶಿವಣಗಿ ಕ್ಷೇತ್ರದ ಸದಸ್ಯೆ ಅನುಸೂಯಾ ಕೃಷ್ಣ ಜಾಧವ, ಚಾಂದಕವಠೆ ಕ್ಷೇತ್ರದ ಸಾವಿತ್ರಿ ಲಕ್ಷ್ಮಣ ಅಂಗಡಿ ಸಲ್ಲಿಸಿದ್ದ ನಾಮಪತ್ರಗಳು ಕ್ರಮಬದ್ಧವಾಗಿದ್ದವು.

ಚುನಾವಣೆಯಲ್ಲಿ ಅನುಸೂಯಾಗೆ 10, ಸಾವಿತ್ರಿಗೆ 27 ಮತ ಲಭ್ಯವಾದವು. ಅಧಿಕ ಮತ ಪಡೆದ ಸಾವಿತ್ರಿ ಅಂಗಡಿ ಅವರ ಆಯ್ಕೆ ಘೋಷಿಸಲಾಯಿತು~ ಎಂದು ಚುನಾವಣಾಧಿಕಾರಿಯಾಗಿದ್ದ ಬೆಳಗಾವಿಯ ಪ್ರಾದೇಶಿಕ ಆಯುಕ್ತ ಗಂಗಾರಾಮ ಬಡೇರಿಯಾ ಹೇಳಿದರು.

`ನಾನು ಬಿಜೆಪಿಯ ಬಂಡಾಯ ಅಭ್ಯರ್ಥಿ ಅಲ್ಲ. ಬಿಜೆಪಿ ಅಭ್ಯರ್ಥಿಯಾಗಿಯೇ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದೇನೆ. ಇಂಥವರ ಪರವಾಗಿಯೇ ಮತ ಚಲಾಯಿಸಬೇಕು ಎಂದು ಪಕ್ಷದವರು ನಮಗೆ ವಿಪ್ ನೀಡಿರಲಿಲ್ಲ~ ಎಂದು ನೂತನ ಅಧ್ಯಕ್ಷೆ ಸಾವಿತ್ರಿ ಅಂಗಡಿ ಹೇಳಿದರು.

`ಬಿಜೆಪಿಯ 15 ಜನ ಸದಸ್ಯರಲ್ಲಿ ಏಳು ಜನ ವಿಪ್ ಉಲ್ಲಂಘಿಸಿ ಪಕ್ಷದ ಅಧಿಕೃತ ಅಭ್ಯರ್ಥಿಯ ವಿರುದ್ಧ ಮತ ಚಲಾಯಿಸಿದ್ದಾರೆ. ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು~ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ಕವಟಗಿ ತಿಳಿಸಿದರು.

`ಇದು ಮುಂದೂಡಿದ ಸಭೆ. ಹಿಂದಿನ ಸಭೆಯ ಸಂದರ್ಭದಲ್ಲಿಯೇ ಅನುಸೂಯಾ ಜಾಧವ ಅವರನ್ನು ಪಕ್ಷದ ಅಧಿಕೃತ ಅಭ್ಯರ್ಥಿ ಎಂದು ಘೋಷಿಸಿ ಅವರಿಗೇ ಮತ ನೀಡುವಂತೆ ಎಲ್ಲ ಸದಸ್ಯರಿಗೆ ವಿಪ್ಜಾರಿಮಾಡಲಾಗಿತ್ತು. ಮುಂದೂಡಿದ ಸಭೆಯಾಗಿದ್ದರಿಂದ ಮತ್ತೆ ವಿಪ್ ಜಾರಿ ಮಾಡುವ ಅಗತ್ಯ ಇರಲಿಲ್ಲ. ಹಿಂದಿನ ವಿಪ್ ಈ ಸಭೆಗೂ ಅನ್ವಯವಾಗುತ್ತದೆ. ವಿಪ್ ಉಲ್ಲಂಘಿಸಿದ ಸದಸ್ಯರ ವಿರುದ್ಧ ಕ್ರಮಕೈಗೊಳ್ಳುವುದು ಖಚಿತ~ ಎಂದು ಅವರು ಹೇಳಿದರು.

ಬದ್ಧತೆ: `ಚಡಚಣ ಕ್ಷೇತ್ರದಿಂದ ಪಕ್ಷೇತರ ಸದಸ್ಯರಾಗಿ ಆಯ್ಕೆಯಾಗಿರುವ ಶ್ರೀಶೈಲಗೌಡ ಬಿರಾದಾರ ಹಿಂದೆ ಬಿಜೆಪಿ ಬೆಂಬಲದೊಂದಿಗೆ ಉಪಾಧ್ಯಕ್ಷರಾಗಿದ್ದರು. ಆ ಉಪಕಾರ ಸ್ಮರಣೆಗೆ ಎಂಬಂತೆ ಅವರು ಬಿಜೆಪಿಯ ಅಧಿಕೃತ ಅಭ್ಯರ್ಥಿಗೇ ಮತ ನೀಡಿದರು. ಅವರು ತೋರಿದ ಬದ್ಧತೆಯನ್ನು ನಮ್ಮ ಪಕ್ಷದ ಉಳಿದ ಸದಸ್ಯರು ತೋರಲಿಲ್ಲ~ ಎಂದು ಪಕ್ಷನಿಷ್ಠ ಬಿಜೆಪಿ ಸದಸ್ಯರು ಹೇಳುತ್ತಿದ್ದರು.

ಇಬ್ಬರು ಸದಸ್ಯರನ್ನು ಹೊಂದಿರುವ ಜೆಡಿಎಸ್ ಈ ಚುನಾವಣೆಯಲ್ಲಿಯೂ ಇಬ್ಭಾಗವಾಯಿತು. ಮಿಣಜಗಿ ಕ್ಷೇತ್ರದ ದೇವಮ್ಮ ನಿಂಗಪ್ಪಗೌಡ ಬಪ್ಪರಗಿ ಬಿಜೆಪಿಯ ಅಧಿಕೃತ ಅಭ್ಯರ್ಥಿಗೆ ಮತ ಹಾಕಿದರು. 15 ಜನ ಬಿಜೆಪಿ ಸದಸ್ಯರಲ್ಲಿ ಎಂಟು ಜನ, ಒಬ್ಬರು ಪಕ್ಷೇತರ ಹಾಗೂ ಜೆಡಿಎಸ್‌ನ ಒಬ್ಬರು ಹೀಗೆ 10 ಮತಗಳು ಮಾತ್ರ ಪಕ್ಷದ ಅಧಿಕೃತ ಅಭ್ಯರ್ಥಿ ಅನುಸೂಯಾ ಜಾಧವ ಅವರಿಗೆ ಲಭ್ಯವಾದವು.

ಬಿಜೆಪಿಯ ಏಳು ಜನ ಸದಸ್ಯರು, ಜೆಡಿಎಸ್‌ನ ಒಬ್ಬರು ಹಾಗೂ ಕಾಂಗ್ರೆಸ್‌ನ ಎಲ್ಲ 19 ಜನ ಸದಸ್ಯರು ಸಾವಿತ್ರಿ ಅಂಗಡಿ ಅವರನ್ನು ಬೆಂಬಲಿಸಿದರು. `ಕಾಂಗ್ರೆಸ್‌ನವರ ಕುತಂತ್ರದಿಂದ ಬಿಜೆಪಿಯ ಅಧಿಕೃತ ಅಭ್ಯರ್ಥಿಗೆ ಸೋಲುಂಟಾಯಿತು~ ಎಂದು ನಾಗಠಾಣ ಕ್ಷೇತ್ರದ ಶಾಸಕ ವಿಠ್ಠಲ ಕಟಕಧೋಂಡ ದೂರಿದರು.

`ಕುತಂತ್ರ ಮಾಡಿದ್ದು ನಾವಲ್ಲ. ಬಿಜೆಪಿಯವರು. ನಮಗೆ ಬಹುಮತ ಇದ್ದರೂ ಅಧಿಕಾರದ ಬಲದಿಂದ ಮೀಸಲಾತಿಯ ಅಸ್ತ್ರ ಬಳಸಿ ನಮ್ಮನ್ನು ಅಧಿಕಾರ ವಂಚಿತರನ್ನಾಗಿ ಮಾಡಿದ್ದರು. ಅಲ್ಪಮತ ಹೊಂದಿದ್ದರೂ ಬಿಜೆಪಿಯವರು ಅಧಿಕಾರ ನಡೆಸಿದರು. ಬಿಜೆಪಿಯ ಈ ಕುತಂತ್ರಕ್ಕೆ ಎದುರೇಟು ನೀಡಲಿಕ್ಕಾಗಿಯೇ ಬಿಜೆಪಿಯ ಬಂಡಾಯ ಅಭ್ಯರ್ಥಿಯನ್ನು ಬೆಂಬಲಿಸಿ ಆಯ್ಕೆ ಮಾಡಿದ್ದೇವೆ~ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶರಣಪ್ಪ ಸುಣಗಾರ ಪ್ರತಿಕ್ರಿಯಿಸಿದರು.

ಪಕ್ಷದೊಳಗೆ ಬಿಟ್ಟುಕೊಳ್ಳಲಿಲ್ಲ: `ಅಧ್ಯಕ್ಷೆಯಾಗಿ ಆಯ್ಕೆಯಾದ ನಂತರ ಸಾವಿತ್ರಿ ಅಂಗಡಿ ಹಾಗೂ ಅವರ ಪತಿ ನೇರವಾಗಿ ಬಿಜೆಪಿ ಜಿಲ್ಲಾ ಕಚೇರಿಗೆ ತೆರಳಿದರು. ಕಚೇರಿಯಲ್ಲಿದ್ದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ಕವಟಗಿ ಅವರಿಗೆ ಹೂಮಾಲೆ ಹಾಕಲು ಹೋದರು. ಈಗ ಹಾಕಿರುವ ಮಾಲೆಯೇ ಸಾಕು. ಇದಕ್ಕಿಂತ ದೊಡ್ಡ ಮಾಲೆ ಬೇಡ ಎಂದು ಅಧ್ಯಕ್ಷ ಕವಟಗಿ ಅಲ್ಲಿಂದ ಹೊರಟು ಹೋದರು. ಅವರನ್ನು ಪಕ್ಷದ ಕಚೇರಿಯೊಳಗೂ ಬಿಟ್ಟುಕೊಳ್ಳಲಿಲ್ಲ~ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದರು.

ಸಾವಿತ್ರಿಗೆ ಮತ ಚಲಾಯಿಸಿದ ಬಿಜೆಪಿ ಸದಸ್ಯರು

ಸೌಮ್ಯ ಮಲ್ಲಿಕಾರ್ಜುನ ಕಲ್ಲೂರ (ಸಾಲೋಟಗಿ)

ಮಂಜುಳಾ ಸಂಗಮೇಶ ಕರಬಂಟನಾಳ (ಯರಝರಿ)

ಮಲ್ಲಪ್ಪ ಬಾಬುರಾಯ ತೋಡಕರ (ಆಲಮೇಲ),

ಸಾವಿತ್ರಿ ಲಕ್ಷ್ಮಣ ಅಂಗಡಿ (ಚಾಂದಕವಠೆ),

ಕಾಶೀನಾಥ ಬಸವಂತ್ರಾಯ ಗಂಗನಳ್ಳಿ (ದೇವಣಗಾಂವ),

ಯಲ್ಲಪ್ಪ ಮುರಗೆಪ್ಪ ಹಾದಿಮನಿ (ಕನ್ನೊಳ್ಳಿ).

ಶಾಂತಮ್ಮ ಸಂಗನಗೌಡ ನಾಡಗೌಡ (ಇಂಗಳೇಶ್ವರ).
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT