ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋತು ಸುಖ ಕಂಡ ನೀರಜ್ ಶ್ಯಾಮ್

Last Updated 1 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

‘ಬೆಳಕಿನ ಬೆಲೆ ತಿಳಿಯಬೇಕಾದರೆ ಕತ್ತಲು ಇರಲೇಬೇಕು, ಕಷ್ಟದ ಅರಿವಾಗಬೇಕಾದರೆ ಸುಖದ ಸವಿ ತಿಳಿದಿರಬೇಕು ಅನ್ನೋ ಹಿರಿಯರ ಮಾತುಗಳನ್ನು ನಾನು ಪ್ರಾಯೋಗಿಕವಾಗಿ ಅನುಭವಿಸಿದವನು. ಸೋಲು ಮತ್ತು ನಿರಾಸೆಗಳ ಸರಮಾಲೆಯ ನಂತರ ಇದೀಗ ಗೆಲುವಿನ ಹಾದಿ ಗೋಚರಿಸುತ್ತಿದೆ’ ಎಂದು ನಕ್ಕರು, ನಟ ನೀರಜ್ ಶ್ಯಾಮ್.

ದಂತ ವೈದ್ಯಕೀಯ ಪದವಿ ಮುಗಿಸಿ ಬೆಂಗಳೂರಿನಲ್ಲಿ ಉಪನ್ಯಾಸಕ ವೃತ್ತಿಯಲ್ಲಿ ತೊಡಗಿಸಿಕೊಂಡದ್ದು, ಸ್ಯಾಂಡಲ್‌ವುಡ್‌ನ ಗಂಧವನ್ನು ಆಸ್ವಾದಿಸುವ ತುಡಿತದಿಂದಲೇ. ನಟನಾಗಬೇಕೆಂಬ ಹಸಿವು, ಹಪಹಪಿಯಲ್ಲೇ ಒದ್ದಾಡುತ್ತಿದ್ದ ನೀರಜ್‌ ಕೈಬೀಸಿ ಕರೆದುಕೊಂಡ ಅವಕಾಶಗಳ ಬಾಗಿಲೊಳಗೆ ಇನ್ನೇನು ಪದಾರ್ಪಣೆ ಮಾಡಬೇಕೆನ್ನುವಷ್ಟರಲ್ಲಿ ಬಾಗಿಲು ಮುಚ್ಚಿಹೋಗುತ್ತಿತ್ತಂತೆ. ಕೊನೆಗೂ ಸೋಲುಗಳ ಸುಳಿಯಿಂದ ಈಗ ಹೊರಬಂದಿದ್ದಾರೆ. ಕನ್ನಡದಲ್ಲೇ ನೆಲೆನಿಲ್ಲಬೇಕೆಂಬ ಆಸೆಗೆ ತಕ್ಕಂತೆ ‘ದಂಡು’, ‘ಪ್ರೀತಿಗೂ... ಸಾವಿಗೂ  (ಕ್ಯೂ)’ ಚಿತ್ರದ ನಂತರ ‘ಮೃಗಶಿರ’ ಚಿತ್ರಕ್ಕೆ ಸಿದ್ಧತೆ ನಡೆಸಿದ್ದಾರೆ, ನೀರಜ್.
ರಂಗಸಾಂಗತ್ಯದಿಂದ...

‘ಅಪ್ಪ ಶ್ಯಾಮ್ ಜೋಶಿ ಅವರಿಂದಾಗಿ ಬೀದಿನಾಟಕ, ನಾಟಕ ಅಂತ ಪ್ರತಿದಿನ ರಂಗಸಾಂಗತ್ಯದಲ್ಲೇ ಬೆಳೆದ ಕಾರಣ ಬಾಲ್ಯದಲ್ಲೇ ಸಿನಿಮಾದಲ್ಲಿ ನಟಿಸುವ ಆಸೆ ಮೂಡಿರಬೇಕು. ಪಿಯುಸಿ ಮುಗಿದ ತಕ್ಷಣ ಮುಂದೇನು ಎಂಬ ಪ್ರಶ್ನೆ ಎದುರಾದಾಗ ವೈದ್ಯಕೀಯ ಅಥವಾ ಆರ್ಕಿಟೆಕ್ಟ್ ಪದವಿ ಓದಬೇಕು ಎಂಬ ಸಲಹೆ ಮನೆಯಲ್ಲಿ. ಆದರೆ, ಏನೇ ಓದಿದರೂ ನಟನಾಗುವುದೇ ಏಕಮೇವ ಗುರಿ ಎಂದಾಗ ಅಪ್ಪ ಅಮ್ಮ ಇಲ್ಲವೆನ್ನಲಿಲ್ಲ. ಹಾಗಾಗಿ ದಂತ ವೈದ್ಯಕೀಯ ಪದವಿ ಓದಿದೆ. ಅದಾದ ಬಳಿಕ ಬೆಂಗಳೂರಿನಲ್ಲಿ ಆಕ್ಸ್‌ಫರ್ಡ್ ದಂತ ವೈದ್ಯಕೀಯ ಕಾಲೇಜಿನಲ್ಲಿ ಉಪನ್ಯಾಸಕನಾಗಿ ಕೆಲಸ ಮಾಡತೊಡಗಿದೆ. ಇದು, ನನ್ನ ಕನಸಿನ ಚಿತ್ರರಂಗ ಪ್ರವೇಶಿಸಲು ನಾನೇ ಸಿದ್ಧಪಡಿಸಿ ಕಂಡುಕೊಂಡ ವೇದಿಕೆ' ಎಂದು ಆರಂಭದ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ ನೀರಜ್.
ಉತ್ತರ ಕರ್ನಾಟಕದಲ್ಲಿ ರಂಗಭೂಮಿ ಕಲಾವಿದರಾಗಿ ಹೆಸರು ಮಾಡಿರುವ ಶ್ಯಾಮ್ ಜೋಶಿ ನೀರಜ್ ತಂದೆ. ಭೀಮಸೇನ ಜೋಶಿ ಅವರ ಸಂಬಂಧಿ.

‘ದೋಣಿ’ ಸಾಗಲಿಲ್ಲ...
‘ಚಿತ್ರನಟಿ ಸೌಂದರ್ಯ ಅವರು ನಟಿಸಿದ್ದ ‘ದೋಣಿ ಸಾಗಲಿ’ ಚಿತ್ರಕ್ಕೆ ಆಯ್ಕೆಯಾಗಿ ಮುಹೂರ್ತದ ದಿನ ಮಹತ್ವಾಕಾಂಕ್ಷೆಯಿಂದ ಓಡಾಡಿದ್ದೆ. ಆದರೆ ಅದೇನಾಯ್ತೋ ಗೊತ್ತಿಲ್ಲ. ನನ್ನ ಪಾತ್ರಕ್ಕೆ ಬೇರೆಯವರು ಆಯ್ಕೆಯಾಗಿದ್ದಾಗಿ ಹೇಳಿದರು. ಕನ್ನಡದಲ್ಲಿ ಮೊದಲ ಅವಕಾಶ ಸಿಕ್ಕಿದ ಆಸೆ ಹೀಗೆ ನಿರಾಸೆಯಾಯಿತು.

ಈ ನೋವಿನಲ್ಲಿರುವಾಗಲೇ ನನ್ನ ಸ್ನೇಹಿತರೊಬ್ಬರು ತೆಲುಗಿನ ಈನಾಡು ಪತ್ರಿಕೆಗೆ ಕಳುಹಿಸಿದ ನನ್ನ ಫೋಟೊ ನೋಡಿದ ತೆಲುಗಿನ ಚಿತ್ರ ನಿರ್ಮಾಪಕರೊಬ್ಬರು ಅವರ ಹೊಸ ಚಿತ್ರಕ್ಕೆ ನನ್ನನ್ನು ಆಯ್ಕೆ ಮಾಡಿಕೊಂಡರು. `ಡ್ರಿಂಕ್ಸ್' ಅನ್ನುವ ಯುವಪ್ರೇಮಿಗಳ ಕತೆಯುಳ್ಳ ಚಿತ್ರವದು. ಹಾಡುಗಳು ಜನಮೆಚ್ಚುಗೆ ಗಳಿಸಿದವು. ಇನ್ನೇನು ಚಿತ್ರ ಬಿಡುಗಡೆಯಾಗಬೇಕು ಅನ್ನುವಾಗ ನಿರ್ಮಾಪಕ- ಮತ್ತು ನಿರ್ದೇಶಕರ ನಡುವೆ ಹಣಕಾಸಿಗಾಗಿ ಮನಸ್ತಾಪವುಂಟಾಯಿತು. ಬಿಡುಗಡೆಗೆ ಬೇಡಿ!

ಇದಾದ ಬಳಿಕವೂ ಅವಕಾಶಗಳು ಬಂದರೂ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾದವು. ಬೇಸತ್ತು ಮುಂಬೈಗೆ ಹೋಗಿ ಫಿಲಂ ಪ್ರೊಡಕ್ಷನ್ ಹೌಸ್‌ನಲ್ಲಿ ಕೆಲಸ ಮಾಡಿದೆ. ಜತೆಗೆ ಚಿತ್ರಕತೆ ಬರೆಯುವ ತರಬೇತಿ ಪಡೆದು ಹೈದರಾಬಾದ್‌ಗೆ ಹಿಂತಿರುಗಿ ಅವಕಾಶಗಳ ಹುಡುಕಾಟದಲ್ಲಿ ತೊಡಗಿರುವಾಗ ಹೆಸರಾಂತ ಚಿತ್ರ ನಿರ್ದೇಶಕ ಸಂಜೀವ ಮೆಗೋಟಿ ಅವರ ಪರಿಚಯವಾಯಿತು.

ಸುದಿನಗಳ ಸಾಲು...
ಮೆಗೋಟಿ ಅವರು ಕೊಟ್ಟ ಮಾತು ಉಳಿಸಿಕೊಂಡರು. ತಮ್ಮ ಹೊಸ ಚಿತ್ರ ‘ಆಪ್ತ’ಕ್ಕೆ ಪೂಜಾ ಗಾಂಧಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ನೀವು ತಕ್ಷಣ ಬನ್ನಿ ಅಂದ್ರು. ಸ್ಯಾಂಡಲ್‌ವುಡ್‌ಗೆ ಅಧಿಕೃತವಾಗಿ ಕಾಲಿಟ್ಟ ಕ್ಷಣವದು. ಮೊದಲ ಚಿತ್ರ ಅಷ್ಟೊಂದು ಸುದ್ದಿ ಮಾಡದಿದ್ದರೂ ನನ್ನ ಪಾತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು.
ಅದೇ ಖುಷಿಯಲ್ಲಿ ಮೆಗೋಟಿ ತಮ್ಮ ‘ದಂಡು’ ಚಿತ್ರದಲ್ಲಿಯೂ ಅವಕಾಶ ಕೊಟ್ಟರು. ಕನ್ನಡ ಮತ್ತು ತೆಲುಗಿನಲ್ಲಿ ಬರಲಿರುವ ‘ದಂಡು’ ಆ್ಯಕ್ಷನ್ ಚಿತ್ರ. 197 ಮಂದಿಯನ್ನು ಸಸ್ಪೆನ್ಸ್ ರೀತಿಯಲ್ಲಿ ಕೊಲೆ ಮಾಡುವ ಕ್ರಿಮಿನಲ್ ಲಾಯರ್‌ನ ಸಂಚು ಬಯಲು ಮಾಡುವ ನಾಯಕ, ಸಾಫ್ಟ್‌ವೇರ್ ಎಂಜಿನಿಯರ್‌ನ ಪಾತ್ರ ನನ್ನದು.

‘ದಂಡು’ ಚಿತ್ರ ಮುಕ್ಕಾಲುಪಾಲು ಮುಗಿದಿತ್ತು. ಆಗ ಒಂದು ಅಚ್ಚರಿ ನಡೆಯಿತು. ಲಂಡನ್‌ನಿಂದ ಬಂದ ಗಣೇಶ್ ಎಂಬವರು ನಗರಕ್ಕೆ  ಬಂದಿದ್ದರು. ಕನ್ನಡದಲ್ಲಿ ಚಿತ್ರ ನಿರ್ಮಿಸುವ ತಮ್ಮ ಆಸೆಯನ್ನು ‘ದಂಡು’ ನಿರ್ದೇಶಕರಲ್ಲಿ ಹೇಳಿಕೊಂಡರು. ಮಾತ್ರವಲ್ಲ, ಅವರು ಹಿಂತಿರುಗುವುದರೊಳಗೆ ಚಿತ್ರೀಕರಣ ಮುಗಿಸಬೇಕಿತ್ತು. ಅವರೇ ಆಯ್ದುಕೊಂಡಂತೆ ನಾನು, ‘ದಂಡು’ ನಾಯಕಿ ನೇಹಾ ಸಕ್ಸೇನಾ, ಅಖಿಲಾ ಹಾಗೂ ನಿರ್ದೇಶಕರು ‘ಕ್ಯೂ’ (‘ಪ್ರೀತಿಗೂ.. ಸಾವಿಗೂ’)ಗಾಗಿ ಅವರ ಸೆಟ್‌ಗೆ ಶಿಫ್ಟ್ ಆದೆವು. 24 ದಿನದಲ್ಲಿ ಚಿತ್ರೀಕರಣ ಮುಗಿಸಿ ಮತ್ತೆ ‘ದಂಡು’ ಸೆಟ್‌ಗೆ ಮರಳಿದೆವು.

ಹೀಗೆ, ಎರಡೂ ಚಿತ್ರಗಳು ಏಕಕಾಲಕ್ಕೆ ಬಿಡುಗಡೆಯಾಗುವ ಖುಷಿಯಲ್ಲಿ ನೀರಜ್ ಇರುವಾಗಲೇ ಮತ್ತೊಂದು ಹೊಸ ಚಿತ್ರ ‘ಮೃಗಶಿರ’ಕ್ಕೆ ಸಹಿ ಮಾಡಿದ್ದಾರೆ. ತಮಿಳಿನಿಂದ ನಾಗಭೂಷಣ್ ಮತ್ತು ಮಲಯಾಳಂನ ಮುರಳಿಕೃಷ್ಣ ಚಿತ್ರಕಥೆ ಹೇಳಿಹೋಗಿದ್ದಾರಂತೆ. ವಾರಕ್ಕೆ ಮೂರು ಸಲವಾದರೂ ಜಿಮ್‌ನಲ್ಲಿ ವರ್ಕ್‌ಔಟ್ ಮಾಡುವ ನೀರಜ್‌ಗೆ ಸಿಕ್ಸ್‌ಪ್ಯಾಕ್ ಎಂಬ ಶೋಕಿ ಬಗ್ಗೆ ನಂಬಿಕೆಯಿಲ್ಲ. ಅದರಿಂದ ಸ್ಲಿಪ್ ಡಿಸ್ಕ್, ಬೆನ್ನು ನೋವಿನಂಥ ಸಮಸ್ಯೆ ಕಾಡುವ ಅಪಾಯವಿದೆ ಎನ್ನುತ್ತಾರೆ ಅವರು. ಇಷ್ಟದ ಐಸ್‌ಕ್ರೀಂ, ಸಿಹಿತಿನಿಸುಗಳನ್ನು ತಿಂದರೂ ದೇಹದಂಡನೆಯಿಂದ ಅನಗತ್ಯ ಕೊಬ್ಬು ಕರಗಿಸಿಕೊಂಡರಾಯಿತು ಎಂಬ ರಾಜಿಸೂತ್ರ ಅವರದು.
ನೀರಜ್ ಈಗ ರಿಲ್ಯಾಕ್ಸ್ಡ್ ಮೂಡ್‌ನಲ್ಲಿದ್ದಾರೆ; ಸೋಲಿನ ಬೆನ್ನಲ್ಲಿ ಸುಖವಿರುತ್ತದೆ ಎಂಬುದಕ್ಕೆ ಸಾಕ್ಷಿಯಾಗಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT