ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋತೂ ಗೆಲ್ಲುವ ಸುಖ

Last Updated 10 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ರಿಯಾಲಿಟಿ ಶೋ ಒಂದಕ್ಕೆ ಹೃತಿಕ್ ರೋಷನ್ ಅತಿಥಿಯಾಗಿ ಹೋಗಿದ್ದರು. ಚೆನ್ನಾಗಿ ಹಾಡುವ, ಕುಣಿಯುವ, ಪ್ರತಿಭೆಯ ಗಣಿಯಂಥ ಮಕ್ಕಳ ದಂಡನ್ನು ಕಂಡು ಅವರು ದಂಗುಬಡಿದುಹೋದರು. ಪ್ರತಿ ಕಂತಿನಲ್ಲಿ ಯಾರಾದರೂ ಸ್ಪರ್ಧಿ ನಿರ್ಗಮಿಸುವುದು ರಿಯಾಲಿಟಿ ಶೋಗಳಲ್ಲಿ ಈಗ ಮಾಮೂಲು. ಅದೇ ರೀತಿ ಆ ರಿಯಾಲಿಟಿ ಶೋನಲ್ಲೂ ಆಯಿತು. ಹೃತಿಕ್ ಆರು ಮಕ್ಕಳ ನಿರ್ಗಮನಕ್ಕೆ ಸಾಕ್ಷಿಯಾದರು. ಪ್ರತಿ ಮಗು ವೇದಿಕೆ ಇಳಿಯುವ ಸಂದರ್ಭ ಬಂದಾಗ ಅವರ ಹೃದಯ ಭಾರವಾಗುತ್ತಿತ್ತು. ಕಣ್ಣಲ್ಲಿ ನೀರು ತುಂಬಿಕೊಂಡು ಆ ಸ್ಪರ್ಧಿಯಂತೆಯೇ ಅವರೂ ನಿಂತುಬಿಡುತ್ತಿದ್ದರು. ಆಮೇಲೆ ನಿರ್ಗಮಿಸಿದ ಮಕ್ಕಳೆಲ್ಲಾ ಹೃತಿಕ್ ಜೊತೆ ಒಂದು ಗ್ರೂಪ್ ಫೋಟೋ ತೆಗೆಸಿಕೊಂಡರು. ಆ ಎಲ್ಲಾ ಮಕ್ಕಳ ಮುಖದಲ್ಲಿ ಅಪರೂಪದ ಕಾಂತಿ ಇತ್ತು. ಹೃತಿಕ್ ತಾವು ಒಪ್ಪಿಕೊಂಡ ರಿಯಾಲಿಟಿ ಶೋ ಅತಿಥಿಯ ಕೆಲಸ ಮುಗಿಸಿದ ಮೇಲೆ ಗೊತ್ತಾಯಿತು; ನಿರ್ಗಮಿಸಿದ ಆರೂ ಮಕ್ಕಳಿಗೆ ತಲಾ ಮೂರು ಲಕ್ಷ ರೂಪಾಯಿ ಬಹುಮಾನವನ್ನು ಅವರು ಕೊಟ್ಟಿದ್ದರು.

ತಮ್ಮದೇ ಖಾತೆಯಿಂದ ಆ ಮಕ್ಕಳಿಗೆ ಹಣ ಜಮೆ ಮಾಡಿಸಿದ ಹೃತಿಕ್ ಅದನ್ನು ಯಾರಿಗೂ ಹೇಳದೆ ತಮ್ಮ ಪಾಡಿಗೆ ತಾವು ಹೊರಟುಹೋಗಿದ್ದರು. ಆಮೇಲೆ ಆ ಮಕ್ಕಳೇ ಈ ಸಂಗತಿಯನ್ನು ಬಹಿರಂಗಪಡಿಸಿದ್ದು.

`ನನಗೆ ಮಕ್ಕಳೆಂದರೆ ಪ್ರಾಣ. ಅವರು ಅಳುವುದನ್ನು ನೋಡಲಾರೆ. ಈ ರಿಯಾಲಿಟಿ ಶೋಗಳನ್ನು ಯಾಕಾದರೂ ಮಾಡುತ್ತಾರೋ ಅನ್ನುವಷ್ಟು ನನಗೆ ಬೇಜಾರಾಯಿತು. ಯಾಕೆಂದರೆ, ಸ್ಪರ್ಧೆಯಿಂದ ನಿರ್ಗಮಿಸುವ ಪ್ರತಿ ಮಗು ತನ್ನ ಬದುಕೇ ಮುಗಿಯಿತೇನೋ ಎಂಬಷ್ಟು ತೀವ್ರವಾದ ಯಾತನೆ ಅನುಭವಿಸುತ್ತದೆ. ತಮ್ಮ ಮಗು ಗೆಲ್ಲಲಿ ಎಂದು ಇದ್ದಬದ್ದ ಕೆಲಸಗಳನ್ನೆಲ್ಲಾ ಬದಿಗೊತ್ತಿ ಒದ್ದಾಡುವ ತಂದೆ-ತಾಯಿ ದೊಡ್ಡದೇನನ್ನೋ ಕಳೆದುಕೊಂಡವರಂತೆ ದುಃಖಿಸುತ್ತಾರೆ. ಅದಕ್ಕೇ ಆ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲಿ ಎಂದು ನಾನು ಸಣ್ಣ ಸಹಾಯ ಮಾಡಿದೆ. ಅದು ಯಾರಿಗೂ ಗೊತ್ತಾಗದೇ ಇರಲಿ ಎಂಬುದು ನನ್ನ ಬಯಕೆಯಾಗಿತ್ತು. ಆದರೆ, ಮಕ್ಕಳು ಮುಗ್ಧರು. ನನ್ನ ಮೇಲಿನ ಪ್ರೀತಿಯಿಂದ ಎಲ್ಲರ ಬಳಿ ಆ ವಿಷಯ ಹೇಳಿಬಿಟ್ಟಿದ್ದಾರೆ~ ಎಂದು ಹೃತಿಕ್ ಆನಂತರ ಪ್ರತಿಕ್ರಿಯಿಸಿದರು.

ಹೃತಿಕ್ ಅಪರೂಪದ ನಟರಷ್ಟೇ ಅಲ್ಲ, ವ್ಯಕ್ತಿಯಾಗಿಯೂ ಗಮನಾರ್ಹ ಎಂದು ಅವರನ್ನು ಹತ್ತಿರದಿಂದ ಬಲ್ಲವರು ಹೇಳುತ್ತಾರೆ. `ನಾನು ಮದುವೆಯಾದಾಗ ಅನೇಕರು ಕುಹಕವಾಡಿದರು. ಸಂಸಾರಸ್ಥನಾದಮೇಲೆ ನಟನೆಯ ಕಥೆ ಅಷ್ಟೆ ಎಂದರು. ಆದರೆ, ಅವೆಲ್ಲವೂ ಸುಳ್ಳೆಂಬುದಕ್ಕೆ ಅನೇಕ ಮಾದರಿಗಳು ಕಣ್ಣಮುಂದೆ ಇದ್ದವು. ಈಗ ಬಾಲಿವುಡ್‌ನಲ್ಲಿ ಚಾಲ್ತಿಯಲ್ಲಿರುವ ಬಹುತೇಕ ನಟರಿಗೆ ಮದುವೆಯಾಗಿದೆ. ನಾವು ಮಾಡುವ ಕೆಲಸವನ್ನು ಶ್ರದ್ಧೆಯಿಂದ ಮಾಡಬೇಕಷ್ಟೆ~ ಎನ್ನುವ ಹೃತಿಕ್ ನುಡಿದಂತೆಯೇ ನಡೆಯುವವರ ಪೈಕಿ.

`ಕ್ರಿಶ್ 2~ ಚಿತ್ರಕ್ಕೆ ಹೃತಿಕ್ ನಡೆಸಿರುವ ತಯಾರಿಯನ್ನು ಕೇಳಿ ಅನೇಕರು ಹುಬ್ಬೇರಿಸಿದ್ದಾರೆ. ವಿದೇಶದಿಂದ ಈಗಾಗಲೇ ಸ್ಟಂಟ್ ಮಾಸ್ಟರ್ ಒಬ್ಬರು ಬಂದಿದ್ದು, ಅವರು ತೀವ್ರವಾದ ತರಬೇತಿ ನೀಡುತ್ತಿದ್ದಾರೆ. `ಏನೇ ಮಾಡಿದರೂ ಸಿದ್ಧತೆ ತುಂಬಾ ಮುಖ್ಯ. ನಾವು ಮೈಯನ್ನು ಹುರಿ ಮಾಡಿಕೊಂಡರಷ್ಟೇ ಸಾಲದು. ಪ್ರತಿ ಚಿತ್ರದ ಸ್ಟಂಟ್ ಹೊಸ ಸವಾಲಾಗಬೇಕು ಎಂದೇ ಭಾವಿಸುವವನು ನಾನು. ಕ್ರಿಶ್ 2 ಚಿತ್ರ ನಮ್ಮದೇ ಬ್ಯಾನರ್‌ನಲ್ಲಿ ಮೂಡಿಬರಲಿದೆ. ಹಾಗಾಗಿ, ಆಯ್ಕೆಯ ವಿಷಯದಲ್ಲಿ ಇನ್ನೂ ಹೆಚ್ಚು ಸ್ವಾತಂತ್ರ್ಯ ನನ್ನದು. ಕೆಲವೇ ಕ್ಷಣಗಳ ಕಾಲ ಪ್ರೇಕ್ಷಕರ ಮೈನವಿರೇಳಿಸಲು ನಾವು ಪಡುವ ಕಷ್ಟಗಳನ್ನು ನೆನಪಿಸಿಕೊಂಡರೆ ನನಗೆ ಹೆಮ್ಮೆ ಎನ್ನಿಸುತ್ತದೆ. ನೂರು ಮೀಟರ್ ರೇಸ್ ಓಡುವ ಅಥ್ಲೀಟ್ ಕೆಲವೇ ಸೆಕೆಂಡುಗಳಲ್ಲಿ ಅದೆಷ್ಟೋ ಹೃದಯಗಳ ಬಡಿತಗಳನ್ನು ಹೆಚ್ಚಿಸುತ್ತಾನೆ. ಅಂಥದ್ದೇ ತೀವ್ರತೆ ನಾನು ಮಾಡುವ ಕೆಲಸದಲ್ಲೂ ಇರಬೇಕು ಎಂದು ಬಯಸುವವ ನಾನು. ಅದಕ್ಕೇ ಇಷ್ಟೆಲ್ಲಾ ಹೋರಾಟ ಮಾಡುತ್ತೇವೆ~ ಎನ್ನುವ ಹೃತಿಕ್‌ಗೆ ಪತ್ನಿ ಯಾವ ವಿಷಯಕ್ಕೂ ಅಡ್ಡಿಪಡಿಸುವುದಿಲ್ಲವಂತೆ.

`ಮತ್ತೆ ಮತ್ತೆ ನನ್ನ ಹಳೆಯ ಚಿತ್ರಗಳನ್ನು ನೋಡಿದಾಗ ಸಣ್ಣ ತಪ್ಪು ಕಂಡರೂ ಛೆ ಎನ್ನಿಸುತ್ತದೆ. ನಿತ್ಯವೂ ಕಲಿಯುವುದು ಇದ್ದೇ ಇರುತ್ತದೆ ಎಂಬುದಕ್ಕೆ ಇದೇ ಸಾಕ್ಷಿ. ತುಂಬಾ ಇಷ್ಟಪಟ್ಟು ನಟಿಸಿದ ಗುಜಾರಿಷ್ ಚಿತ್ರವನ್ನು ನೋಡಿದ ಮೇಲೂ ಹಾಗನ್ನಿಸಿದೆ. ಕೆಲವು ದೃಶ್ಯಗಳನ್ನು ನೋಡಿ, ನಾನು ಇಷ್ಟು ಚೆನ್ನಾಗಿ ಅಭಿನಯಿಸಬಲ್ಲೆನೆ ಎಂದೂ ಅನ್ನಿಸಿದೆ. ಸಾರ್ಥಕ, ಹೆಮ್ಮೆ, ಪ್ರಶ್ನೆ, ಆತ್ಮವಿಮರ್ಶೆ ಎಲ್ಲವನ್ನೂ ನಿರಂತವಾಗಿ ಮಾಡಿಕೊಳ್ಳುತ್ತಿರುತ್ತೇನೆ. ನಾನು ಬಾಕ್ಸ್‌ಆಫೀಸ್‌ನಲ್ಲಿ ಹೆಚ್ಚು ಗೆಲುವನ್ನು ಕಂಡವನಲ್ಲ.

ಆದರೂ ನಟನಾಗಿ ಬೆಳೆಯಬೇಕು ಎಂಬ ಪ್ರಜ್ಞೆ ಉಳಿದಿದೆ; ಅಷ್ಟು ಸಾಕು~ ಎನ್ನುವ ಹೃತಿಕ್ ಕಣ್ಣಲ್ಲಿ ಮೊದಲ ಚಿತ್ರದಲ್ಲಿ ಕಂಡಿದ್ದ ಅದೇ ಮಿಂಚು ಉಳಿದಿದೆ. ಅವರು ನಟಿಸಿರುವ `ಜಿಂದಗಿ ನಾ ಮಿಲೇ ದುಬಾರಾ~ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗಿದೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT