ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋನಿಯಾ ಟ್ರಸ್ಟ್ ಆಸ್ತಿ ಬಹಿರಂಗ ಪಡಿಸಲಿ: ಬಿಜೆಪಿ

Last Updated 13 ಜೂನ್ 2011, 11:15 IST
ಅಕ್ಷರ ಗಾತ್ರ

ಡೆಹ್ರಾಡೂನ್ (ಪಿಟಿಐ): ಯೋಗ ಗುರು ರಾಮ ದೇವ್ ಅವರು ತಮ್ಮ ನೇತೃತ್ವದ ಟ್ರಸ್ಟ್‌ಗಳ ಆಸ್ತಿಪಾಸ್ತಿ ವಿವರ ಬಹಿರಂಗ ಪಡಿಸಿದಂತೆಯೇ ಈಗ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೂ ತಮ್ಮ ನೇತೃತ್ವದ ಎಲ್ಲ ಟ್ರಸ್ಟ್‌ಗಳ ಆಸ್ತಿಪಾಸ್ತಿ ವಿವರಗಳನ್ನು ಬಹಿರಂಗ ಪಡಿಸಬೇಕು ಎಂದು ಬಿಜೆಪಿ ಸೋಮವಾರ ಆಗ್ರಹಿಸಿತು.

‘ಯೋಗ ಗುರು ಅವರು ನಡೆಸುವ ಟ್ರಸ್ಟ್‌ಗಳಿಗೆ ಬರುವ ನಿಧಿ ಬಗ್ಗೆ ಕಾಂಗ್ರೆಸ್ ನಾಯಕರು ಗುಮಾನಿ ವ್ಯಕ್ತ ಪಡಿಸಿದಾಗ ಯೋಗ ಗುರು ತಮ್ಮ ನೇತೃತ್ವದ ಎಲ್ಲ ಟ್ರಸ್ಟ್‌ಗಳಿಗೆ ಬರುವ ಹಣ, ಅದರ ಆಸ್ತಿಪಾಸ್ತಿ ವಿವರಗಳನ್ನು ಬಹಿರಂಗ ಪಡಿಸಿದ್ದಾರೆ. ಈಗ ತಮ್ಮ ನೇತೃತ್ವದ ಎಲ್ಲ ಟ್ರಸ್ಟ್‌ಗಳ ಆಸ್ತಿಪಾಸ್ತಿ ಮಾಹಿತಿ ಬಹಿರಂಗ ಪಡಿಸಬೇಕಾದ ಸರದಿ ಸೋನಿಯಾ ಗಾಂಧಿ ಅವರದ್ದು ಎಂದು ಬಿಜೆಪಿ ಪ್ರಧಾನ ಕಾರ‌್ಯದರ್ಶಿ ಮತ್ತು ಉತ್ತರಾಖಂಡದಲ್ಲಿನ ಬಿಜೆಪಿ ವ್ಯವಹಾರಗಳ ಉಸ್ತುವಾರಿ ನೋಡಿಕೊಳ್ಳುತ್ತಿರುವ ಥಾವರ್ ಚಂದ್ರ ಗೆಹ್ಲೋಟ್ ಹೇಳಿದರು.

ರಾಜೀವ ಗಾಂಧಿ ಚಾರಿಟೇಬಲ್ ಟ್ರಸ್ಟ್ ಸೇರಿದಂತೆ ಸೋನಿಯಾ ಗಾಂಧಿಯವರು ಡಜನ್‌ನಷ್ಟು ಟ್ರಸ್ಟ್‌ಗಳ ನೇತೃತ್ವ ವಹಿಸಿದ್ದಾರೆ. ಈ ಎಲ್ಲ ಟ್ರಸ್ಟ್‌ಗಳಿಗೆ ಬರುವ ಹಣ ಎಷ್ಟು ಅದು ಎಲ್ಲಿಗೆ ಹೋಗುತ್ತಿದೆ ಎಂದು ಸೋನಿಯಾಗಾಂಧಿ ಅವರು ಜನತೆಗೆ ತಿಳಿಸಬೇಕು ಎಂದು ಗೆಹ್ಲೋಟ್ ಆಗ್ರಹಿಸಿದರು.

ಜೂನ್ 4ರ ನಡುರಾತ್ರಿ ರಾಮಲೀಲಾ ಮೈದಾನದಲ್ಲಿ ರಾಮ ದೇವ್ ಮತ್ತು ಅವರ ಬೆಂಬಲಿಗರ ಮೇಲೆ ಕೈಗೊಳ್ಳಲಾದ ಪೊಲೀಸ್ ದಾಳಿಯ ಕ್ರಮವನ್ನು ‘ದುರದೃಷ್ಟಕರ ಮತ್ತು ಪ್ರಜಾತಂತ್ರ ವಿರೋಧಿ’ ಎಂದು ಬಣ್ಣಿಸಿದ ಅವರು ‘ಇದು ಆಡಳಿತಾತ್ಮಕ ಕ್ರಮವಾಗಿರಲಿಲ್ಲ, ಬದಲಿಗೆ ರಾಜಕೀಯ ನಿರ್ಧಾರವಾಗಿತ್ತು’ ಎಂದು ಹೇಳಿದರು.

ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ, ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ಅವರು ಈ ನಡುರಾತ್ರಿಯ ಕಾರ‌್ಯಾಚರಣೆಗಾಗಿ ರಾಮದೇವ್ ಮತ್ತು ರಾಷ್ಟ್ರದ ಜನತೆಯ ಕ್ಷಮೆ ಯಾಚಿಸಬೇಕು ಎಂದು ಗೆಹ್ಲೋಟ್ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT