ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋನಿಯಾ ನಿವಾಸಕ್ಕೆ ಮುತ್ತಿಗೆ ಬೆದರಿಕೆ

Last Updated 10 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಸ್ವಯಂ ಸೇವಾ ಸಂಸ್ಥೆ ಅವ್ಯವಹಾರದಲ್ಲಿ ಸಚಿವ ಸಲ್ಮಾನ್ ಖುರ್ಷಿದ್ ಮತ್ತು ಅವರ ಪತ್ನಿ ಸಿಲುಕಿಕೊಂಡಿದ್ದಾರೆ. ಆದ್ದರಿಂದ  ಖುರ್ಷಿದ್ ಅವರ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಅಧ್ಯಕ್ಷೆ  ಸೋನಿಯಾ ಗಾಂಧಿ ನಿವಾಸಕ್ಕೆ ಶುಕ್ರವಾರ ಮುತ್ತಿಗೆ ಹಾಕುವುದಾಗಿ ಸಾಮಾಜಿಕ ಕಾರ್ಯಕರ್ತ ಅರವಿಂದ ಕೇಜ್ರಿವಾಲ್ ಬೆದರಿಕೆ ಹಾಕಿದ್ದಾರೆ.

`ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ಅವರ ಪತ್ನಿ ಸ್ವಯಂ ಸೇವಾ ಸಂಸ್ಥೆ ಹೆಸರಲ್ಲಿ ಅವ್ಯವಹಾರ ನಡೆಸಿರುವುದು ನಾಚಿಕೆ ತರುವಂತಹದ್ದು. ಖುರ್ಷಿದ್ ದೇಶದ ಕಾನೂನು ಮಂತ್ರಿಯನ್ನಾಗಿರುವುದು ದುರದೃಷ್ಟಕರ~ ಎಂದು ಕೇಜ್ರಿವಾಲ್ ಹೇಳಿದ್ದಾರೆ.

`ಸಚಿವ ಸಲ್ಮಾನ್ ಖುರ್ಷಿದ್ ಅವರು ರಾಜೀನಾಮೆ ನೀಡಬೇಕು ಮತ್ತು ಅವರ ಪತ್ನಿಯನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿ ಅಂಗವಿಕಲ ಕಾರ್ಯಕರ್ತರೊಂದಿಗೆ ಸೋನಿಯಾ ಗಾಂಧಿ ಅವರ ನಿವಾಸಕ್ಕೆ ಮುತ್ತಿಗೆ ಹಾಕಲಾಗುವುದು~ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಹಿಂದಿ ಸುದ್ದಿ ವಾಹಿನಿಯೊಂದು ಖುರ್ಷಿದ್ ಅವರ ಪತ್ನಿ ಲೂಯಿಸ್ ಅವರು ನಡೆಸುತ್ತಿರುವ `ಜಾಕಿರ್ ಹುಸೇನ್ ಸ್ಮಾರಕ ಟ್ರಸ್ಟ್~ ಸ್ವಯಂ ಸೇವಾ ಸಂಸ್ಥೆಯು ಅಂಗವಿಕಲರಿಗೆ ಸಲ್ಲಬೇಕಾಗಿರುವ ಹಣವನ್ನು ದುರುಪಯೋಗ ಮಾಡಿಕೊಂಡಿದೆ ಎಂದು ಆರೋಪಿಸಿ ಮಂಗಳವಾರ ಸುದ್ದಿ ಪ್ರಕಟಿಸಿದೆ.  ಈ ಸಂಸ್ಥೆಯು ಉತ್ತರ ಪ್ರದೇಶದ ಅನೇಕ ಜಿಲ್ಲೆಗಳಲ್ಲಿ ಹಿರಿಯ ಅಧಿಕಾರಿಗಳು ಸಹ್ನಿ ನಕಲು ಮಾಡಿ ಹಣ ದುರ್ಬಳಕೆ ಮಾಡಿಕೊಂಡಿದೆ ಎಂದು ಸುದ್ದಿ ವಾಹಿನಿ ಆಪಾದಿಸಿದೆ.

ಆರೋಪ ನಿರಾಕರಣೆ:  ಅವ್ಯವಹಾರದ ಆಪಾದನೆಯನ್ನು ತಳ್ಳಿಹಾಕಿರುವ ಲೂಯಿಸ್ ಖುರ್ಷಿದ್, ಈ ವಿಚಾರವಾಗಿ `ಸೆಪ್ಟೆಂಬರ್ 17ರಂದೇ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರಿಗೆ ಪತ್ರ ಬರೆದು ಅವ್ಯವಹಾರದ ಬಗ್ಗೆ ತನಿಖೆ ನಡೆಸುವಂತೆ ಕೋರಿದ್ದೇನೆ~ ಎಂದು ತಿಳಿಸಿದ್ದಾರೆ.

ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಅಂಗವಿಕಲರಿಗೆ ನೆರವು ನೀಡಲೆಂದು `ಜಾಕಿರ್ ಹುಸೇನ್ ಸ್ಮಾರಕ ಟ್ರಸ್ಟ್~ಗೆ ಬಿಡುಗಡೆ ಮಾಡಿರುವ ಅಪಾರ ಪ್ರಮಾಣದ ಹಣ ದುರುಪಯೋಗವಾಗಿದೆ ಎಂದು `ಭ್ರಷ್ಟಾಚಾರದ ವಿರುದ್ಧ ಭಾರತ ಆಂದೋಲನ~ ಆಪಾದಿಸಿದೆ.

`ತಪ್ಪು ನಿರ್ಧಾರ~

ನವದೆಹಲಿ (ಐಎಎನ್‌ಎಸ್): ಆಸ್ಪತ್ರೆಗೆ ಮೀಸಲಾಗಿಟ್ಟ 30 ಎಕರೆ ಜಮೀನನ್ನು ಆತಿಥ್ಯ ಸಂಸ್ಥೆಯು ಡಿಎಲ್‌ಎಫ್ ಸಂಸ್ಥೆಗೆ ಮಾರಾಟ ಮಾಡಿದ್ದು ನಿಜ ಎಂದು ಹರಿಯಾಣ ಸರ್ಕಾರ ನೀಡಿರುವ ವಿವರಣೆಗೆ ಅರವಿಂದ್ ಕೇಜ್ರಿವಾಲ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಆಸ್ಪತ್ರೆಗೆ ಮೀಸಲಿಟ್ಟ ಜಾಗವನ್ನು ಡಿಎಲ್‌ಎಫ್ ಸಂಸ್ಥೆಗೆ ಮಾರಾಟ ಮಾಡಲು ಅನುಮತಿ ನೀಡಿದ್ದು ಸರ್ಕಾರದ ತಪ್ಪು ನಿರ್ಧಾರ ಅವರು ಎಂದು  ಟೀಕಿಸಿದ್ದಾರೆ.  ಸರ್ಕಾರಕ್ಕೆ ಸ್ವಲ್ಪವಾದರೂ ಪ್ರಾಮಾಣಿಕತೆ ಇದ್ದಿದ್ದರೆ ಜಮೀನನ್ನು ಮಾರಾಟ ಮಾಡಲು ಅವಕಾಶ ನೀಡದೆ ಸ್ವಾಧೀನ ಪಡಿಸಿಕೊಳ್ಳುತ್ತಿತ್ತು ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT