ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋನಿಯಾ ಭಾಷಣ ಜೊಳ್ಳು: ಮೋದಿ

Last Updated 4 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ದಾಹೋಡ್ (ಪಿಟಿಐ): ರಾಜ್‌ಕೋಟ್‌ನಲ್ಲಿ ಬುಧವಾರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮಾಡಿದ ಭಾಷಣ ಅತ್ಯಂತ ನೀರಸವಾಗಿತ್ತು ಎಂದು ಲೇವಡಿ ಮಾಡಿದ ಮುಖ್ಯಮಂತ್ರಿ ನರೇಂದ್ರ ಮೋದಿ, ಗುಜರಾತ್‌ನಲ್ಲಿ ಮಾತನಾಡಲು ಕಾಂಗ್ರೆಸ್ ಹೆದರುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ.

`ಸೋನಿಯಾ ಭಾಷಣ ಎಷ್ಟೊಂದು ನೀರಸ ಮತ್ತು ಜೊಳ್ಳಾಗಿತ್ತೆಂದರೆ ಅದರಲ್ಲಿ ಏನೂ ಇರಲಿಲ್ಲ. ಮಾಧ್ಯಮದವರಿಗೆ ಸುದ್ದಿ ಮಾಡಲು ವಿಷಯ ಸಿಗದ ಕಾರಣ ಸೋನಿಯಾ ಅವರ ದೊಡ್ಡ ಚಿತ್ರಗಳನ್ನು ಪ್ರಕಟಿಸಿವೆ~ ಎಂದು ಅವರು ಗುರುವಾರ ನಡೆದ ರ‌್ಯಾಲಿಯಲ್ಲಿ ವ್ಯಂಗ್ಯವಾಡಿದರು.

`ಗುಜರಾತ್‌ನಲ್ಲಿ ಮಾತನಾಡುವಾಗ ಕಾಂಗ್ರೆಸ್‌ನವರು ತುಂಬಾ ಹೆದರುತ್ತಾರೆ ಮತ್ತು ಬಹಳ ಎಚ್ಚರಿಕೆಯಿಂದ ಮಾತನಾಡುತ್ತಾರೆ. ಒಂದು ವೇಳೆ ಏನಾದರೂ ತಪ್ಪು ಮಾತನಾಡಿದಲ್ಲಿ ಜನರು ತಮ್ಮ ವಿರುದ್ಧ ತಿರುಗಿಬಿದ್ದು ಪಕ್ಷ ನಿರ್ನಾಮವಾಗುವ ಭೀತಿ ಅವರಿಗಿದೆ~ ಎಂದು ಮೋದಿ ಹೇಳಿದರು.

ಗುಜರಾತ್‌ನಲ್ಲಿ ಕಳೆದ ಬಾರಿ ನಡೆದ ವಿಧಾನಸಭೆ ಚುನಾವಣೆಯಂತೆಯೇ ಕಾಂಗ್ರೆಸ್ ಮತ್ತೊಮ್ಮೆ ಮುಖಭಂಗ ಅನುಭವಿಸಲಿದೆ ಎಂದು ಅವರು ಹೇಳಿದರು. ಕಳೆದ ಬಾರಿ ಸೋನಿಯಾ ಚುನಾವಣಾ ಪ್ರಚಾರ ಭಾಷಣ ಆರಂಭಿಸಿದ್ದ ಚೋಟೆ ಉದಯ್‌ಪುರನಲ್ಲಿ ಕಾಂಗ್ರೆಸ್ ಸೋತಿತ್ತು. ಈ ಬಾರಿ ರಾಜ್‌ಕೋಟ್‌ನಿಂದ ಪ್ರಚಾರ ಆರಂಭಿಸಿದ್ದಾರೆ. ಅಲ್ಲಿಯೂ ಕಾಂಗ್ರೆಸ್ ನಿಸ್ಸಂಶಯವಾಗಿ ಸೋಲನ್ನು ಅನುಭವಿಸಲಿದೆ ಎಂದು ಭವಿಷ್ಯ ನುಡಿದರು.

ಕ್ಷಮೆ ಕೋರಲು ನಕಾರ
ಸೋನಿಯಾ ಗಾಂಧಿ ಅವರು ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಿದ್ದನ್ನು ತೀಕ್ಷ್ಣ ಶಬ್ದಗಳಲ್ಲಿ ಖಂಡಿಸಿದ ಮೋದಿ, `ಪಾಕಿಸ್ತಾನಿಯರಿಗೆ ಸಹ ಚಿಕಿತ್ಸೆ ನೀಡುವ ನಮಗೆ ಸೋನಿಯಾ ಅವರಿಗೆ ಚಿಕಿತ್ಸೆ ನೀಡಲು ಸಾಧ್ಯವಿರಲಿಲ್ಲವೇ~ ಎಂದು ಪ್ರಶ್ನಿಸಿದರು.

ಸೋನಿಯಾ ವೈದ್ಯಕೀಯ ವೆಚ್ಚಗಳನ್ನು ಸರ್ಕಾರದಿಂದ ಪಡೆದಿದ್ದಾರೆ ಎಂಬ ತಮ್ಮ ಆರೋಪವನ್ನು ಸಮರ್ಥಿಸಿಕೊಂಡ ಅವರು, ಸೋನಿಯಾ ಕ್ಷಮೆ ಕೇಳುವುದಿಲ್ಲ ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT