ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಮಣ್ಣ ವಿರುದ್ಧ ದೂರು: ದಾಖಲೆ ಸಲ್ಲಿಕೆ

Last Updated 27 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಬೆಂಗಳೂರು: ವಸತಿ ಸಚಿವ ವಿ.ಸೋಮಣ್ಣ ಅಕ್ರಮ ಆಸ್ತಿ ಹೊಂದಿದ್ದಾರೆ ಎಂದು ಆರೋಪಿಸಿ ಖಾಸಗಿ ದೂರು ಸಲ್ಲಿಸಿರುವ ಲಿಂಗದಹಳ್ಳಿ ಚೇತನ್‌ಕುಮಾರ್, ಗುರುವಾರ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಹತ್ತು ದಾಖಲೆಗಳನ್ನು ಸಲ್ಲಿಸಿದರು.`1974ರಿಂದ 1983ರ ಅವಧಿಯಲ್ಲಿ ಸೋಮಣ್ಣ ಅವರು ರಾಜ್ಯ ಸರ್ಕಾರಿ ಸ್ವಾಮ್ಯದ ಜನತಾ ಬಜಾರ್‌ನಲ್ಲಿ ನೌಕರರಾಗಿದ್ದರು. ಈ ಅವಧಿಯಲ್ಲಿ ಅಲ್ಲಿ ನಡೆದ ಹಣಕಾಸು ಅವ್ಯವಹಾರಕ್ಕೆ ಸಂಬಂಧಿಸಿದಂತೆ ಒಂಬತ್ತು ಪ್ರಕರಣಗಳು ದಾಖಲಾಗಿದ್ದವು.

ಒಂಬತ್ತು ಪ್ರಕರಣಗಳಲ್ಲೂ ಸೋಮಣ್ಣ ಆರೋಪಿ ಯಾಗಿದ್ದರು. ಆಗ ಅವರಿಂದ 12,000 ರೂಪಾಯಿಗೂ ಹೆಚ್ಚು ನಷ್ಟ ವಸೂಲಿ ಮಾಡಲಾಗಿತ್ತು' ಎಂದು ಚೇತನ್‌ಕುಮಾರ್ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.ಸಚಿವರು ಸರ್ಕಾರಿ ನೌಕರರಾಗಿದ್ದ ದಿನದಿಂದಲೂ ಅಧಿಕಾರ ದುರ್ಬಳಕೆ ಮಾಡಿಕೊಳ್ಳುವುದನ್ನು ರೂಢಿಸಿಕೊಂಡಿದ್ದರು ಎಂದು ಆರೋಪಿಸಿದ ವಕೀಲರು, ಜನತಾ ಬಜಾರ್ ಅವ್ಯವಹಾರದಲ್ಲಿ ದಾಖಲಾಗಿದ್ದ ಒಂಬತ್ತು ದೂರುಗಳ ಪ್ರತಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು.

ಸೋಮಣ್ಣ ಅವರು ಶಾಸಕರು, ಸಚಿವರಾದ ಅವಧಿಯಲ್ಲಿ ಪಡೆದಿರುವ ವೇತನ ಮತ್ತು ಭತ್ಯೆಗಳ ವಿವರಗಳನ್ನೂ ಸಲ್ಲಿಸಿದರು. ದಾಖಲೆಗಳನ್ನು ಸ್ವೀಕರಿಸಿದ ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್ ಅವರು, ದೂರಿನ ವಿಚಾರಣೆಯನ್ನು 2013ರ ಜನವರಿ 1ಕ್ಕೆ ಮುಂದೂಡಿದರು.

ಶಾಸಕ ಚಿಂಚನಸೂರ್ ವಿರುದ್ಧ ಎಫ್‌ಐಆರ್
ಬೆಂಗಳೂರು:ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇಲೆ ಗುರುಮಿಟ್ಕಲ್ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಾಬುರಾವ್ ಚಿಂಚನಸೂರ್ ವಿರುದ್ಧ ಲೋಕಾಯುಕ್ತ ಪೊಲೀಸರು ಗುರುವಾರ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿದ್ದಾರೆ.

ಚಿಂಚನಸೂರ್ ಅಕ್ರಮ ಆಸ್ತಿ ಹೊಂದಿದ್ದಾರೆ ಎಂದು ಆರೋಪಿಸಿ ಶಾಂತಪ್ಪ ಎಂಬುವವರು ಬೆಂಗಳೂರು ನಗರ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು.

ದೂರನ್ನು ವಿಚಾರಣೆಗೆ ಸ್ವೀಕರಿಸಿದ್ದ ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್ ಅವರು, ದೂರಿನಲ್ಲಿರುವ ಆರೋಪಗಳ ಕುರಿತು ತನಿಖೆ ನಡೆಸುವಂತೆ ಬೆಂಗಳೂರು ನಗರ ಲೋಕಾಯುಕ್ತ ಎಸ್‌ಪಿಯವರಿಗೆ ನವೆಂಬರ್ 28ರಂದು ಆದೇಶಿಸಿದ್ದರು.ನ್ಯಾಯಾಲಯದ ಆದೇಶದಂತೆ ತನಿಖೆ ಪ್ರಾರಂಭಿಸಿರುವ ಬೆಂಗಳೂರು ನಗರ ಲೋಕಾಯುಕ್ತ ಪೊಲೀಸರು, ಗುರುವಾರ ಚಿಂಚನಸೂರ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಲೋಕಾಯುಕ್ತದ ಉನ್ನತ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT