ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಮಣ್ಣಗೆ ಚಪ್ಪಲಿಯಿಂದ ಹಲ್ಲೆ

Last Updated 1 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸೌಧದ ಮೂರನೇ ಮಹಡಿಯಲ್ಲಿ ಬಿಜೆಪಿ ಕಾರ್ಯಕರ್ತನೊಬ್ಬ ವಸತಿ ಸಚಿವ ವಿ.ಸೋಮಣ್ಣ ಅವರಿಗೆ ಚಪ್ಪಲಿಯಿಂದ ಹೊಡೆದ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ. ಈ ಹಲ್ಲೆ ನಡೆಸಿದ ಆರೋಪದ ಮೇಲೆ ಬಿ.ಎಸ್.ಪ್ರಸಾದ್ ಎಂಬಾತನನ್ನು ವಿಧಾನಸೌಧ ಪೊಲೀಸರು ಬಂಧಿಸಿದ್ದಾರೆ.

ಬೆಳಿಗ್ಗೆ 11.45ರ ಸುಮಾರಿಗೆ ವಿಧಾನಸೌಧದ ಮೂರನೇ ಮಹಡಿಯಲ್ಲಿ ವಸತಿ ಇಲಾಖೆಯ ಅಧಿಕಾರಿಗಳ ಸಭೆ ಮುಗಿಸಿ ಸೋಮಣ್ಣ ಹೊರಬಂದರು. ಬಳಿಕ ಸಮೀಪದಲ್ಲೇ ಇರುವ ತಮ್ಮ ಕಚೇರಿಯತ್ತ ತೆರಳುತ್ತಿದ್ದರು.
ಅವರನ್ನು ಮಾತನಾಡಿಸುವ ನೆಪದಲ್ಲಿ ಹತ್ತಿರಕ್ಕೆ ಹೋದ ಪ್ರಸಾದ್, `ನನಗೆ ಬಿಜೆಪಿಯಿಂದ ಅನ್ಯಾಯವಾಗಿದೆ~ ಎಂದು ಕೂಗಾಡುತ್ತಾ ಸಚಿವರಿಗೆ ಚಪ್ಪಲಿಯಿಂದ ಹೊಡೆದ. ಏನು ನಡೆಯುತ್ತಿದೆ ಎಂಬುದು ತಿಳಿಯುಷ್ಟರಲ್ಲಿ ಸಚಿವರಿಗೆ ಚಪ್ಪಲಿ ಹೊಡೆತ ಬಿದ್ದಿತ್ತು.

ತಕ್ಷಣವೇ ಸಚಿವರ ಅಂಗರಕ್ಷಕ ಸಿಬ್ಬಂದಿ ಮತ್ತು ಸ್ಥಳದಲ್ಲಿದ್ದ ಸಾರ್ವಜನಿಕರು ಆರೋಪಿಯನ್ನು ಹಿಡಿದುಕೊಂಡರು. ಈ ಸಂದರ್ಭದಲ್ಲಿ ಕೆಲ ಸಾರ್ವಜನಿಕರು ಆತನಿಗೆ ಥಳಿಸಿದರು. ನಂತರ ವಿಧಾನಸೌಧ ಭದ್ರತಾ ವಿಭಾಗದ ಪೊಲೀಸರು ಸ್ಥಳಕ್ಕೆ ಧಾವಿಸಿ ಆತನನ್ನು ವಶಕ್ಕೆ ಪಡೆದರು. 

ವಿಧಾನಸೌಧದ ತಳ ಮಹಡಿಯಲ್ಲಿರುವ ಪೊಲೀಸ್ ಠಾಣೆಗೆ ಆತನನ್ನು ಕರೆದೊಯ್ಯಲಾಯಿತು. ವಿಧಾನಸೌಧ ಭದ್ರತಾ ವಿಭಾಗದ ಡಿಸಿಪಿ ಲಕ್ಷ್ಮಣ್ ಸಿಂಗ್, ಕಬ್ಬನ್‌ಪಾರ್ಕ್ ಎಸಿಪಿ ದೇವರಾಜ್ ಮತ್ತಿತರರು ಕೆಲಕಾಲ ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದರು. ಬಳಿಕ ವಿಧಾನಸೌಧ ಪೊಲೀಸ್ ಠಾಣೆಗೆ ಕರೆದೊಯ್ದರು.

ಮೊಕದ್ದಮೆ ದಾಖಲು: ಸಚಿವರ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಪ್ರಸಾದ್ ವಿರುದ್ಧ ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಭಾರತೀಯ ದಂಡ ಸಂಹಿತೆ (ಐಪಿಸಿ) ಅಡಿಯಲ್ಲಿ ಸಾರ್ವಜನಿಕ ಸೇವಕನ ಮೇಲೆ ಹಲ್ಲೆ, ನಿಂದನೆ ಮತ್ತಿತರ ಆರೋಪಗಳ ಅಡಿಯಲ್ಲಿ ಪ್ರಥಮ ಮಾಹಿತಿ ವರದಿ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯನ್ನು ಸದ್ಯ ಬಹುಮಹಡಿ ಕಟ್ಟಡ ಪೊಲೀಸ್ ಠಾಣೆಯಲ್ಲಿ ಇರಿಸಿ, ವಿಚಾರಣೆ ನಡೆಸಲಾಗುತ್ತಿದೆ. ಪ್ರಾಥಮಿಕ ತನಿಖೆ ಪೂರ್ಣಗೊಳಿಸಿದ ಬಳಿಕ ಆತನನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಲು ಪೊಲೀಸರು ನಿರ್ಧರಿಸಿದ್ದಾರೆ.

ಬಿಜೆಪಿ ಕಾರ್ಯಕರ್ತ: ಸೋಮಣ್ಣ ಮೇಲೆ ಹಲ್ಲೆ ನಡೆಸಿರುವ ಪ್ರಸಾದ್ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತ್ಯಾಮಗೊಂಡ್ಲು ನಿವಾಸಿ. ಸಿವಿಲ್ ಎಂಜಿನಿಯರಿಂಗ್ ಪದವೀಧರನಾಗಿರುವ ಈತ ಗುತ್ತಿ ಗೆದಾರ ಕೂಡಾ ಹೌದು. ಸದ್ಯ ಹೆಬ್ಬಾಳ ಸಮೀಪದ ಸಹಕಾರ ನಗರ ವ್ಯಾಪ್ತಿಯ ಸಂಜೀವಿನಿನಗರದಲ್ಲಿದ್ದಾನೆ.

ಮಾಜಿ ಸಂಸದ ಎಸ್.ಮಲ್ಲಿಕಾರ್ಜುನಯ್ಯ ಅವರ ಸಂಬಂಧಿಯಾಗಿದ್ದು, ತಾನು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಸೋಮಣ್ಣ ಪರ ಪ್ರಚಾರ ನಡೆಸಿರುವುದಾಗಿ ಪೊಲೀಸರ ವಿಚಾರಣೆ ವೇಳೆ ತಿಳಿಸಿದ್ದಾನೆ.

ಆರೋಪಿ `ಬಿಜೆಪಿ ಮುಖಂಡ~ ಎಂಬ `ವಿಸಿಟಿಂಗ್ ಕಾರ್ಡ್~ ಹೊಂದಿದ್ದ. ಅದರಲ್ಲಿ ತನ್ನ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭಾವಚಿತ್ರವನ್ನು ಮುದ್ರಿಸಿಕೊಂಡಿದ್ದ. ತುಮಕೂರು ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆ ಮತ್ತು ಇತ್ತೀಚೆಗೆ ನಡೆದ ಕನಕಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಪಕ್ಷೇತರನಾಗಿ ಸ್ಪರ್ಧಿಸಿದ್ದ ಎಂಬುದು ತನಿಖೆಯಲ್ಲಿ ಗೊತ್ತಾಗಿದೆ.

ಸಾಮಾನ್ಯವಾಗಿ ಮಧ್ಯಾಹ್ನ 3 ಗಂಟೆಯ ಬಳಿಕವೇ ಸಾರ್ವಜನಿಕರಿಗೆ ವಿಧಾನಸೌಧದ ಒಳಕ್ಕೆ ಪ್ರವೇಶ ನೀಡಲಾಗುತ್ತದೆ. ಆದರೆ, ಬಿಜೆಪಿ ಕಾರ್ಯಕರ್ತನಾಗಿರುವ ಪ್ರಸಾದ್, ಬೆಳಿಗ್ಗೆಯೇ ವಿಧಾನಸೌಧದ ಒಳಕ್ಕೆ ಹೋಗಿದ್ದ. ಬಿಜೆಪಿ ಶಾಸಕಾಂಗ ಪಕ್ಷದ ಕಚೇರಿಯ ಶಿಫಾರಸು ಆಧರಿಸಿ ಪಾಸ್ ಪಡೆದು ಒಳಕ್ಕೆ ಹೋಗಿದ್ದ ಎಂಬ ಸಂಗತಿಯೂ ತನಿಖೆಯ ವೇಳೆ ತಿಳಿದುಬಂದಿದೆ.

`ಬಿಜೆಪಿಯಿಂದ ನನಗೆ ಅನ್ಯಾಯವಾಗಿದೆ. ನಿಗಮ ಅಥವಾ ಮಂಡಳಿಗಳಲ್ಲಿ ಸ್ಥಾನ ನೀಡುವಂತೆ ಮಾಡಿಕೊಂಡ ಮನವಿಗೆ ಪಕ್ಷದಲ್ಲಿ ಬೆಲೆ ಸಿಕ್ಕಿಲ್ಲ. ನನ್ನ ನಂತರ ಪಕ್ಷ ಸೇರಿದವರಿಗೆ ಅಧಿಕಾರ ನೀಡಲಾಗಿದೆ. ನನ್ನನ್ನು ಕಡೆಗಣಿಸಲಾಗಿದೆ. ಆದ್ದರಿಂದ ಬೇಸತ್ತು ಹೀಗೆ ಮಾಡಿದೆ~ ಎಂದು ಪೊಲೀಸರ ಎದುರು ಆತ ಹೇಳಿಕೆ ನೀಡಿದ್ದಾನೆ.

`ಒಮ್ಮೆ ಪತ್ರ ಪಡೆದಿದ್ದ~: ಘಟನೆಯ ನಂತರ ವಿಧಾನಸೌಧದ ತಮ್ಮ ಕಚೇರಿಯಲ್ಲಿ ಪ್ರತಿಕ್ರಿಯಿಸಿದ ಸೋಮಣ್ಣ, `ವಿಧಾನಸೌಧದಲ್ಲಿನ ಭದ್ರತಾ ವೈಫಲ್ಯದಿಂದ ಇಂತಹ ಘಟನೆ ನಡೆದಿದೆ. ಮುಕ್ತವಾಗಿ ಕೆಲಸ ಮಾಡಲು ಆಗದ ಸ್ಥಿತಿ ಇದೆ. ಪ್ರಸಾದ್‌ಗೂ ನನಗೂ ಯಾವುದೇ ಸಂಬಂಧ ಇಲ್ಲ.
 
ಬಿಜೆಪಿ ಕಾರ್ಯಕರ್ತನೆಂದು ಹೇಳಿಕೊಂಡು ಒಮ್ಮೆ ನನ್ನಿಂದ ಪತ್ರವೊಂದನ್ನು ಪಡೆದಿದ್ದ. ಅದರ ಹೊರತಾಗಿ ಆತನ ಜೊತೆ ಸಂಬಂಧವೇ ಇಲ್ಲ~ ಎಂದು ಹೇಳಿದರು.

`ನಿಗಮ ಮಂಡಳಿಯಲ್ಲಿ ಸ್ಥಾನ ಕಲ್ಪಿಸಿಲ್ಲ ಎಂದು ನನ್ನ ಮೇಲೆ ಹಲ್ಲೆ ನಡೆಸಿದ್ದಾನೆ. ಅವನ ಬೇಡಿಕೆಗೂ ನನಗೂ ಏನು ಸಂಬಂಧ? ಇಂತಹ ಬೇಡಿಕೆಗಳ ಬಗ್ಗೆ ಪಕ್ಷದ ಮುಖಂಡರ ಜೊತೆ ಮಾತನಾಡಬೇಕು. ಆತ ನನ್ನ ಮೇಲೆ ಏಕೆ ಹಲ್ಲೆ ನಡೆಸಿದ ಎಂಬುದೇ ಅರ್ಥವಾಗಿಲ್ಲ. ಈ ಘಟನೆಯಿಂದ ಆಘಾತವಾಗಿದೆ~ ಎಂದು ಹೇಳಿದರು.

ನವದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ದೂರವಾಣಿ ಮೂಲಕ ಸಂಪರ್ಕಿಸಿ ಘಟನೆಯ ವಿವರ ಪಡೆದಿದ್ದಾರೆ ಎಂದರು. ಗೃಹ ಸಚಿವ ಅಶೋಕ ಅವರು ವಿಚಾರಿಸಿದರೇ ಎಂಬ ಪ್ರಶ್ನೆಗೆ, `ಇನ್ನೂ ಸಂಪರ್ಕಿಸಿಲ್ಲ. ಒಂದೆರಡು ದಿನಗಳಲ್ಲಿ ಮಾತನಾಡಬಹುದು!~ ಎಂದು ಉತ್ತರಿಸಿದರು.

ಹೆಚ್ಚಿನ ತನಿಖೆಗೆ ಆದೇಶ: ಘಟನೆಗೆ ಸಂಬಂಧಿಸಿದಂತೆ ವಿಧಾನಸೌಧದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ ಗೃಹ ಸಚಿವ ಆರ್.ಅಶೋಕ, ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸುವಂತೆ ನಗರ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ ಅವರಿಗೆ ಆದೇಶಿಸಿರುವುದಾಗಿ ತಿಳಿಸಿದರು. ಸೋಮಣ್ಣ ಮೇಲಿನ ಹಲ್ಲೆಯನ್ನು ಖಂಡಿಸುವುದಾಗಿ ಹೇಳಿದರು.

ಇದೇ ವೇಳೆ ಘಟನೆಯನ್ನು ಖಂಡಿಸಿ ವೀರಶೈವ ಮಠಾಧೀಶರು ನಗರದ ಚಾಲುಕ್ಯ ವೃತ್ತದ ಬಸವೇಶ್ವರ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು. ಸೋಮಣ್ಣ ಅವರ ಬೆಳವಣಿಗೆಯನ್ನು ಸಹಿಸದೇ ಇಂತಹ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT