ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಮಶೇಖರ ರೆಡ್ಡಿ ವಿರುದ್ಧ ದೋಷಾರೋಪ ಪಟ್ಟಿ

Last Updated 4 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬಳ್ಳಾರಿ: ಅಕ್ರಮ ಗಣಿಗಾರಿಕೆ ಪ್ರಕರಣದ ಲೋಕಾಯುಕ್ತ ತನಿಖೆಯ ಅಂಗವಾಗಿ ಜಿಲ್ಲೆಯ ಸಂಡೂರು ತಾಲ್ಲೂಕಿನ ರಾಮಘಡ ಅರಣ್ಯ ಪ್ರದೇಶದಲ್ಲಿ ಪರಿಶೀಲನೆಗೆ ಆಗಮಿಸಿದ್ದ ಅರಣ್ಯ ಇಲಾಖೆ ಹಿರಿಯ ಅಧಿಕಾರಿ ಯು.ವಿ. ಸಿಂಗ್ ಅವರಿಗೆ ದೂರವಾಣಿ ಮೂಲಕ ಪ್ರಾಣ ಬೆದರಿಕೆ ಒಡ್ಡಿದ ಆರೋಪಕ್ಕೆ  ಸಂಬಂಧಿಸಿದಂತೆ ಶಾಸಕ ಜಿ. ಸೋಮಶೇಖರ ರೆಡ್ಡಿ, ಪಾಲಿಕೆ ಸದಸ್ಯ ಕೆ.ಎಸ್.ದಿವಾಕರ್ ಸೇರಿ 14 ಮಂದಿ  ವಿರುದ್ಧ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

ಸಂಡೂರಿನ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಬುಧವಾರ 125 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಲಾಗಿದ್ದು, ಈ ಕುರಿತು 30ಕ್ಕೂ ಅಧಿಕ ಸಾಕ್ಷ್ಯಗಳನ್ನು ಪರಿಗಣಿಸಲಾಗಿದೆ.

ಸಿಬಿಐ ಬಂಧನದಲ್ಲಿರುವ ಮಾಜಿ ಸಚಿವ ಜಿ.ಜನಾರ್ದನರೆಡ್ಡಿ ಅವರ ಜಾಮೀನಿಗಾಗಿ ಲಂಚ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ  ಬಂಧನದಲ್ಲಿರುವ ಸೋಮಶೇಖರ ರೆಡ್ಡಿ ಅವರಿಗೆ ಇದೀಗ ಈ  ಪ್ರಾಣ ಬೆದರಿಕೆ ಪ್ರಕರಣವೂ ಉರುಳಾಗುವ ಸಾಧ್ಯತೆಗಳಿವೆ.

ಸೋಮಶೇಖರ ರೆಡ್ಡಿ, ದಿವಾಕರ ಅವರೊಂದಿಗೆ ರಾಮಘಡದಲ್ಲಿ ಗಣಿಗಾರಿಕೆ ನಡೆಸುತ್ತಿದ್ದ ಬಳ್ಳಾರಿಯ ದೇವಿನಗರದ ಹೊನ್ನೂರಪ್ಪ, ತಾಳೂರಿನ ಅಣ್ಣಪ್ಪ, ಚಂದ್ರಶೇಖರ್, ಹುಕ್ಕೇರಿ ತಾಲ್ಲೂಕಿನ ಬಡಕುಂದಿಯ ಮಹಾದೇವ, ಅದೇ ಗ್ರಾಮದ ಕೆಂಪಣ್ಣ, ಚಿಕ್ಕೋಡಿ ತಾಲ್ಲೂಕಿನ ಮಹೇಶ್, ಜಾರ್ಖಂಡ್ ರಾಜ್ಯದ ಅನಿಲ್, ಹೊಸಳ್ಳಿಯ ಮೆಹಬೂಬ್, ಬಸವನ ಬಾಗೇವಾಡಿಯ ಮುತ್ತು, ಎಚ್.ಎಂ. ರುದ್ರಯ್ಯ, ಎಚ್.ಎಂ. ತಿಪ್ಪೇಸ್ವಾಮಿ ಮತ್ತು ಯಶವಂತ ಅವರ ವಿರುದ್ಧವೂ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ.

ಯು.ವಿ. ಸಿಂಗ್ ಅವರು 2009ರ ಸೆಪ್ಟೆಂಬರ್ 12ರಂದು ಪರಿಶೀಲನೆ ನಡೆಸಿ, ಒಂಬತ್ತು ವಾಹನಗಳನ್ನು ವಶಪಡಿಸಿಕೊಂಡು, ದೂರು ದಾಖಲಿಸುವಂತೆ ತಿಳಿಸಿದ ಸಂದರ್ಭ, ಹೊನ್ನೂರಪ್ಪ ಅವರ ದೂರವಾಣಿಗೆ ಕರೆ ಮಾಡಿದ ಸೋಮಶೇಖರ ರೆಡ್ಡಿ ಬೆದರಿಕೆ ಹಾಕಿದರು.

ಅಲ್ಲಿಂದ ಹೊರಡುವ ಮುನ್ನ ಯು.ವಿ.ಸಿಂಗ್ ಅವರು ಈ ಸಂಬಂಧ ಪೊಲೀಸರಿಗೆ ದೂರು ನೀಡುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ರಾಮಲಿಂಗಯ್ಯ ಅವರಿಗೆ ಸೂಚಿಸಿ ತೆರಳಿದರು. ಆದರೆ, ಆ ಸ್ಥಳದಲ್ಲಿದ್ದ ಎಂಟು ಮಂದಿ ವಿರುದ್ಧ ಮಾತ್ರ ರಾಮಲಿಂಗಯ್ಯ ದೂರು ದಾಖಲಿಸಿದ್ದರು. ಬೆದರಿಕೆ ಒಡ್ಡಿದ ಸೋಮಶೇಖರರೆಡ್ಡಿ ಹಾಗೂ ದಿವಾಕರ ಹೆಸರುಗಳು  ದೂರಿನಲ್ಲಿ ಇರಲಿಲ್ಲ.

ದೂರವಾಣಿ ಕರೆ ಘಟನೆ ವಿಡಿಯೊ ಚಿತ್ರೀಕರಣದಲ್ಲಿ ದಾಖಲಾಗಿದ್ದು ಇದನ್ನೇ ಸಾಕ್ಷ್ಯವಾಗಿ ಪರಿಗಣಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ನಂತರ 2011ರಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಚಂದ್ರಗುಪ್ತ ಮಾರ್ಗದರ್ಶನದಲ್ಲಿ ತನಿಖೆ ಕೈಗೆತ್ತಿಕೊಂಡಿದ್ದ ಹೂವಿನಹಡಗಲಿ ಡಿವೈಎಸ್‌ಪಿ ನಾಗರಾಜ್ ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT