ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಮಾರಿ ಕಣ್ಣು

Last Updated 17 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ರಾಜೇಶ್, 24 ವರ್ಷದ ಎಂಜಿನಿಯರ್. ತನ್ನ ಉದ್ಯೋಗದ ಸಂದರ್ಶನದಲ್ಲಿ ಉತ್ತೀರ್ಣನಾಗಿದ್ದಕ್ಕೆ ಬಹಳ ಸಂತೋಷದಲ್ಲಿದ್ದ. ಆದರೆ ಕಡ್ಡಾಯ ವೈದ್ಯಕೀಯ ಪರೀಕ್ಷೆಯಲ್ಲಿ ಆತ ವಿಫಲನಾದ.

ಏಕೆಂದರೆ ಅವನಿಗೆ ಎಡಗಣ್ಣಿನಲ್ಲಿ ದೃಷ್ಟಿ ಬಹಳ ಮಂದವಾಗಿತ್ತು. ಅದನ್ನು ಆತ ಅಂದಿನವರೆಗೂ ಗಮನಿಸಿರಲೇ ಇಲ್ಲ. ಆತನ ಸಮಸ್ಯೆಯನ್ನು `ಸೋಮಾರಿ ಕಣ್ಣು~ (ಆಂಬ್ಲಿಯೋಪಿಯಾ) ಎಂದು ಗುರುತಿಸಲಾಯಿತು. ಅಂದರೆ ಕಣ್ಣಿನ ದೂರದೃಷ್ಟಿ. ಇದನ್ನು ಚಿಕ್ಕವಯಸ್ಸಿನಲ್ಲೇ ಪತ್ತೆ ಮಾಡಿದ್ದರೆ ಗುಣಪಡಿಸಬಹುದಾಗಿತ್ತು ಎಂದು ಆತನಿಗೆ ತಿಳಿಸಲಾಯಿತು.

ಸೋಮಾರಿ ಕಣ್ಣು ಎಂದರೇನು?
ಶೈಶವಾವಸ್ಥೆಯಲ್ಲಿ ಸಹಜ ದೃಷ್ಟಿಯನ್ನು ಬೆಳೆಸಿಕೊಳ್ಳಲಾಗದೇ ಮಂದ ದೃಷ್ಟಿ ಏರ್ಪಡುವ ಒಂದು ಸ್ಥಿತಿ. ಅದನ್ನು `ಸೋಮಾರಿ ಕಣ್ಣು~  ಎಂದು ಕರೆಯಲಾಗುತ್ತದೆ. ಒಂದು ಕಣ್ಣು ಉತ್ತಮ ದೃಷ್ಟಿ ಬೆಳೆಸಿಕೊಂಡು ಮತ್ತೊಂದು ಕಣ್ಣು ಉತ್ತಮ ದೃಷ್ಟಿ ಇಲ್ಲದೆ ಮಂದವಾಗಿದ್ದರೆ ಅದನ್ನು ಆಂಬ್ಲಿಯೋಪಿಕ್ ಎಂದು ಕರೆಯಲಾಗುತ್ತದೆ.
 
ಸಾಮಾನ್ಯವಾಗಿ ಆಂಬ್ಲಿಯೋಪಿಯಾದಿಂದ ಒಂದು ಕಣ್ಣು ಮಾತ್ರ ಬಾಧಿತವಾಗುತ್ತದೆ. ಈ ಸಮಸ್ಯೆ ಪ್ರತಿ 100 ಜನರಲ್ಲಿ ಇಬ್ಬರಿಂದ ಮೂವರಿಗೆ ಕಾಡಬಹುದು. ಈ ಸಮಸ್ಯೆಗೆ ಶಿಶುವಾಗಿದ್ದಾಗ ಅಥವಾ ಮಕ್ಕಳಾಗಿದ್ದಾಗಲೇ ಚಿಕಿತ್ಸೆ ನೀಡುವುದು ಸೂಕ್ತ. ಮಕ್ಕಳ ದೃಷ್ಟಿಯನ್ನು ಕಾಪಾಡುವ ಹಂಬಲವಿರುವವರು ಈ ಸಂಭವನೀಯ ಸಮಸ್ಯೆಯ ಬಗ್ಗೆ ತಿಳಿದಿರಬೇಕಾಗುತ್ತದೆ.

ಕಾರಣಗಳೇನು?

ಆಂಬ್ಲಿಯೋಪಿ ಕಣ್ಣಿನ ಸಹಜ ಬಳಕೆ ಮತ್ತು ದೃಷ್ಟಿಯ ಅಭಿವೃದ್ಧಿಯಲ್ಲಿ ಯಾವ ಕಾರಣದಿಂದಲಾದರೂ ಉಂಟಾಗಬಹುದು. ಹಲವಾರು ಪ್ರಕರಣಗಳಲ್ಲಿ ಆಂಬ್ಲಿಯೋಪಿಯ ಜನ್ಮಜಾತವಾಗಿರುತ್ತದೆ. ನೇತ್ರತಜ್ಞರು ಆಂಬ್ಲಿಯೋಪಿಯದ ಇತಿಹಾಸವಿರುವ ಕುಟುಂಬದ ಮಕ್ಕಳನ್ನು ಎಚ್ಚರದಿಂದ ಪರೀಕ್ಷಿಸಬೇಕು.

ಮುಖ್ಯ ಕಾರಣಗಳು
ಮೆಳ್ಳಗಣ್ಣು: ಆಂಬ್ಲಿಯೋಪಿಯ ಸಾಮಾನ್ಯವಾಗಿ ತಪ್ಪು ಜೋಡಣೆ ಅಥವಾ ಸೊಟ್ಟ ಕಣ್ಣುಗಳಿಂದ ಉಂಟಾಗುತ್ತದೆ. ಸೊಟ್ಟ ಕಣ್ಣಿನಿಂದ ಎರಡು ದೃಷ್ಟಿ ದೊರೆಯುತ್ತದೆ.  ಅದನ್ನು ತಪ್ಪಿಸಲು ಮಗು ಒಂದು ಉತ್ತಮ ಕಣ್ಣನ್ನು ಮಾತ್ರ ಬಳಸುತ್ತದೆ.

ವಕ್ರೀಕರಣದ ತೊಂದರೆಗಳು: ವಕ್ರೀಕರಣದಲ್ಲಿ ಉಂಟಾಗುವ ತಪ್ಪುಗಳಲ್ಲಿ ಬೆಳಕಿನ ಕಿರಣ ಅಕ್ಷಿಪಟಲದ ಮೇಲೆ ಸ್ಪಷ್ಟವಾಗಿ ಕೇಂದ್ರೀಕರಣಗೊಂಡಿರುವುದಿಲ್ಲ (ಮೆದುಳಿಗೆ ಚಿತ್ರವನ್ನು ಪಡೆಯುವ ಮತ್ತು ಸಂದೇಶ ರವಾನಿಸುವ ಪದರ). ಅವುಗಳನ್ನು ಕನ್ನಡಕ ಧರಿಸುವ ಮೂಲಕ ಸರಿಪಡಿಸಬಹುದು. ಆಂಬ್ಲಿಯೋಪಿಯಾ ಉಂಟಾಗುವುದು ಒಂದು ಕಣ್ಣು ಹತ್ತಿರ ದೃಷ್ಟಿ, ದೂರದೃಷ್ಟಿ ಅಥವಾ ಮತ್ತೊಂದಕ್ಕಿಂತ ಮಂದವಾಗಬಹುದು. ಮಂದದೃಷ್ಟಿಯ ಕಣ್ಣು ಆಂಬ್ಲಿಯೋಪಿಕ್ ಆಗುತ್ತದೆ. ಈ ಕಣ್ಣುಗಳು ಸಹಜವಾಗಿ ಕಂಡರೂ ಒಂದು ಕಣ್ಣಿಗೆ ಬಹಳ ಅಲ್ಪ ದೃಷ್ಟಿ ಇರುತ್ತದೆ.

ಇದು ಪತ್ತೆ ಮಾಡಲು ಅತ್ಯಂತ ಕಷ್ಟಕರವಾದ ಬಗೆಯ ಆಂಬ್ಲಿಯೋಪಿಯಾ ಆಗಿದ್ದು ಪತ್ತೆ ಮಾಡಲು ದೃಷ್ಟಿಯನ್ನು ಎಚ್ಚರದಿಂದ ಅಳೆಯಬೇಕಾಗುತ್ತದೆ.

ಸಹಜವಾದ ಸ್ಪಷ್ಟ ಕಣ್ಣಿನ ಜೀವಕೋಶಗಳಲ್ಲಿ ಮೋಡ ಮುಸುಕಿದಂತೆ (ಕೆಟರಾಕ್ಟ್, ಅಕ್ಷಿಪಟಲದಲ್ಲಿ ಕಲೆ ಇತ್ಯಾದಿ) -ಈ ಎಲ್ಲ ಅಸಹಜತೆಗಳು ಕಣ್ಣಿನಲ್ಲಿ ಬೆಳಕಿನ ದೃಷ್ಟಿಗೆ ಭಂಗ ತರುತ್ತವೆ. ಆದ್ದರಿಂದ ಮಗು ಆ ಕಣ್ಣನ್ನು ಬಳಸುವುದಿಲ್ಲ. ಶೈಶವಾವಸ್ಥೆಯಲ್ಲಿ ನಿಮ್ಮ ಒಂದು ಕಣ್ಣನ್ನು ಬಳಸದಿದ್ದರೆ ಅದು ದುರ್ಬಲವಾಗಿ ದೃಷ್ಟಿ ಕಳೆದುಕೊಳ್ಳುತ್ತದೆ. ಅದನ್ನೇ ಆಂಬ್ಲಿಯೋಪಿಯಾ ಎಂದು ಕರೆಯುತ್ತಾರೆ.

ಪತ್ತೆ ಹಚ್ಚುವುದು ಹೇಗೆ?
ಆಂಬ್ಲಿಯೋಪಿಯಾವನ್ನು ಗುರುತಿಸುವುದು ಸುಲಭವಲ್ಲ. ಮಗುವಿನಲ್ಲಿ ಕಣ್ಣು ತಪ್ಪು ಜೋಡಣೆಯಾದಾಗ ಅಥವಾ ಯಾವುದೇ ಅಸಹಜತೆ ಕಂಡು ಬಂದಲ್ಲಿ ಪೋಷಕರಿಗೆ ತಮ್ಮ ಮಗುವಿನ ಕಣ್ಣುಗಳಲ್ಲಿ ಏನೋ ಸರಿಯಿಲ್ಲ ಎಂದು ಗೊತ್ತಾಗುತ್ತದೆ. ಎರಡೂ ಕಣ್ಣುಗಳ ದೃಷ್ಟಿಯಲ್ಲಿ ವ್ಯತ್ಯಾಸ ಕಂಡುಬಂದಾಗ ಆಂಬ್ಲಿಯೋಪಿಯ ಪತ್ತೆಯಾಗುತ್ತದೆ.

ಚಿಕ್ಕ ಮಕ್ಕಳಲ್ಲಿ ದೃಷ್ಟಿ ಅಳೆಯುವುದು ಕಷ್ಟವಾದ್ದರಿಂದ ನೇತ್ರತಜ್ಞರು ಒಂದು ಕಣ್ಣು ಮುಚ್ಚಿ ಮತ್ತೊಂದು ಕಣ್ಣಿನಲ್ಲಿ ಮಗು ವಸ್ತುಗಳನ್ನು ಹೇಗೆ ಅನುಸರಿಸುತ್ತದೆ ಎಂದು ಗಮನಿಸುತ್ತಾರೆ. ಒಂದು ಕಣ್ಣು ಆಂಬ್ಲಿಯೋಪಿಕ್ ಆಗಿದ್ದರೆ ಮತ್ತೊಂದು ಕಣ್ಣನ್ನು ಮುಚ್ಚಿದ್ದರೆ ಮಗು ಮತ್ತೊಂದು ಕಣ್ಣನ್ನು ಕಿತ್ತುಕೊಳ್ಳಲು ಯತ್ನಿಸುತ್ತಾ ಅಳುತ್ತದೆ.


ಹೇಗೆ ಚಿಕಿತ್ಸೆ ನೀಡಬಹುದು?

ಆಂಬ್ಲಿಯೋಪಿಯಾದ ಹಲವಾರು ಪ್ರಕರಣಗಳು ಇರುವುದರಿಂದ ಚಿಕಿತ್ಸೆ ಸಮಸ್ಯೆಯನ್ನು ಅವಲಂಬಿಸಿರುತ್ತದೆ. ಕೆಲವರಲ್ಲಿ ಕನ್ನಡಕಗಳಿಂದ ಸಮಸ್ಯೆ ಸರಿಯಾಗುತ್ತದೆ. ಕೆಟರಾಕ್ಟ್, ಸೊಟ್ಟ ಕಣ್ಣುಗಳಿದ್ದರೆ ಶಸ್ತ್ರಚಿಕಿತ್ಸೆ ಅಗತ್ಯವಾಗಬಹುದು. ಆಂಬ್ಲಿಯೋಪಿಯಾದ ಕಾರಣ ಪತ್ತೆ ಮಾಡಿದ ನಂತರ ಮಗು ದುರ್ಬಲ ಕಣ್ಣನ್ನೇ ಹೆಚ್ಚು ಬಳಸಬೇಕಾಗುತ್ತದೆ.
 
ಉತ್ತಮ ದೃಷ್ಟಿಯುಳ್ಳ ಕಣ್ಣಿಗೆ ಪ್ಯಾಚ್ ಹಾಕಲಾಗುತ್ತದೆ. ಅಪರೂಪಕ್ಕೊಮ್ಮೆ ಒಳ್ಳೆಯ ಕಣ್ಣಿನ ದೃಷ್ಟಿ ಕಡಿಮೆ ಮಾಡಲು ವಿಶೇಷ ಕನ್ನಡಕ ಅಥವಾ ಐಡ್ರಾಪ್ಸ್ ಬಳಸಬಹುದು. ಇದರಿಂದ ದುರ್ಬಲ ಕಣ್ಣು ಉತ್ತಮ ದೃಷ್ಟಿ ಪಡೆಯುತ್ತದೆ. ಪ್ಯಾಚ್‌ಗಳನ್ನು ಇಡೀ ದಿನ ಅಥವಾ ದಿನದ ಒಂದು ಅವಧಿಯಲ್ಲಿ ಮಗುವಿನ ವಯಸ್ಸು ಮತ್ತು ದೃಷ್ಟಿಯ ತೀವ್ರತೆ ಅನುಸರಿಸಿ ಬಳಸಬಹುದು.

ದೃಷ್ಟಿ ಸಹಜವಾಗುವವರೆಗೂ ಅಥವಾ ದೃಷ್ಟಿ ಮತ್ತಷ್ಟು ಸುಧಾರಿಸುವುದನ್ನು ನಿಲ್ಲಿಸಿದ ನಂತರ ಈ ಚಿಕಿತ್ಸೆ ನಿಲ್ಲಿಸಲಾಗುತ್ತದೆ. ಬಹಳಷ್ಟು ಮಕ್ಕಳಲ್ಲಿ ಐಪ್ಯಾಚ್ ಕೆಲವು ವಾರಗಳು ಧರಿಸಿದರೆ ಸಾಕು. ಕೆಲವರಲ್ಲಿ ಅವರು 8ರಿಂದ 10 ವರ್ಷ ಮುಟ್ಟುವವರೆಗೂ ಅಗತ್ಯವಾಗುತ್ತದೆ.

ಪ್ರಾರಂಭಿಕ ಹಂತದ ಚಿಕಿತ್ಸೆ

ಮೆದುಳಿನಲ್ಲಿ ದೃಷ್ಟಿಯ ನರಗಳು ಮಕ್ಕಳು ಚಿಕ್ಕವರಿದ್ದಾಗಲೇ ಸದೃಢವಾಗಬೇಕು. ಕಣ್ಣಿನ ದೃಷ್ಟಿಗೆ ಮೊದಲ ಕೆಲ ವರ್ಷಗಳು ಬಹಳ ಮುಖ್ಯ. 8ರಿಂದ 10 ವರ್ಷಗಳ ನಂತರ ಮಗುವಿನ ದೃಷ್ಟಿ ಪೂರ್ಣಗೊಳ್ಳುತ್ತದೆ. ಮೆದುಳಿನಲ್ಲಿ ಕೂಡಾ ದೃಷ್ಟಿವ್ಯವಸ್ಥೆ ಸಂಪೂರ್ಣವಾಗುತ್ತದೆ. ಈ ವಯಸ್ಸಿನಲ್ಲಿ ಆಂಬ್ಲಿಯೋಪಿಯಾಗೆ ಚಿಕಿತ್ಸೆ ನೀಡದಿದ್ದಲ್ಲಿ ಜೀವನಪೂರ್ತಿ ದೃಷ್ಟಿಮಾಂದ್ಯತೆ ಉಳಿಯುತ್ತದೆ.

ಅದನ್ನು ಕನ್ನಡಕಗಳಿಂದ, ಪ್ಯಾಚಿಂಗ್ ಅಥವಾ ಯಾವುದೇ ವಿಧಾನಗಳಿಂದ ಚಿಕಿತ್ಸೆ ನೀಡಲು ಸಾಧ್ಯವಿಲ್ಲ.

ಐಪ್ಯಾಚ್ ಬಹಳ ಕಾಲ ಬಳಸುವುದು ಕೂಡಾ ಚೆನ್ನಾಗಿರುವ ಕಣ್ಣನ್ನು ಹಾಳು ಮಾಡುವ ಒಂದು ಸಣ್ಣ ಸಾಧ್ಯತೆ ಇದೆ. ಅದಕ್ಕಾಗಿಯೇ ಐಪ್ಯಾಚ್ ಹಾಕಿಕೊಂಡಿರುವ ಮಕ್ಕಳು ನಿಯಮಿತವಾಗಿ ತಮ್ಮ ವೈದ್ಯರ ಸಂಪರ್ಕದಲ್ಲಿರಬೇಕು.

ಮುನ್ನೆಚ್ಚರಿಕೆ

ಆಂಬ್ಲಿಯೋಪಿಯಾವನ್ನು ಗುರುತಿಸುವುದು ಸುಲಭವಲ್ಲ. ಮಗುವಿಗೆ ಒಂದು ಸಹಜ ಕಣ್ಣು ಮತ್ತು ದುರ್ಬಲ ಕಣ್ಣು ಎಂದು ಗುರುತಿಸಲು ಸಾಧ್ಯವಿಲ್ಲದಿರಬಹುದು. ಮಗುವಿಗೆ ಕಣ್ಣಿನಲ್ಲಿ ಅಸಹಜತೆ ಕಾಣಿಸಿಕೊಳ್ಳದ ಹೊರತು ಪೋಷಕರು ಕೂಡಾ ಕಣ್ಣಿನಲ್ಲಿ ಸಮಸ್ಯೆಯಿದೆ ಎಂದು ಗುರುತಿಸಲಾರರು.
 
ಆದ್ದರಿಂದ ಮಕ್ಕಳು ಜನಿಸಿದಾಗ ಮತ್ತು ಶಾಲೆಗೆ ಸೇರಿಸುವ ಮೊದಲು ನೇತ್ರಪರೀಕ್ಷೆ ಮಾಡಿಸುವುದು ಉತ್ತಮ. ಮಕ್ಕಳಿಗೆ ಅಕ್ಷರಗಳ ಪರಿಚಯವಿಲ್ಲದಿರುವುದರಿಂದ ಅವರ ಕಣ್ಣುಗಳನ್ನು ಪರೀಕ್ಷಿಸಲಾಗದು ಎನ್ನುವುದು ತಪ್ಪು ಕಲ್ಪನೆ. ನೇತ್ರತಜ್ಞರು ಆಂಬ್ಲಿಯೋಪಿಯಾವನ್ನು ಗುರುತಿಸಿ ಮಗುವಿನ ವಕ್ರೀಕರಣದಲ್ಲಿ ಎಷ್ಟರ ಮಟ್ಟಿಗೆ ತೊಂದರೆ ಇದೆ ಎಂದು ಅರಿಯಬಲ್ಲರು(ಒಂದು ವರ್ಷಕ್ಕಿಂತ ಕಿರಿಯ ಮಗುವಿನಲ್ಲೂ).
( ಮಕ್ಕಳ ಮೆಳ್ಳಗಣ್ಣು ಮತ್ತು ನೇತ್ರ ತಜ್ಞರು 9845423955)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT