ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಯಾಗೆ ಬೆಂಕಿ: ಬೀದಿಗೆ ರೈತ

Last Updated 15 ಅಕ್ಟೋಬರ್ 2012, 8:05 IST
ಅಕ್ಷರ ಗಾತ್ರ

ಔರಾದ್: ತಾಲ್ಲೂಕಿನ ಮುಂಗನಾಳ ಗ್ರಾಮದ ರೈತರೊಬ್ಬರ ಸೋಯಾ ಬಣವೆಗೆ ಬೆಂಕಿ ಬಿದ್ದು ಮೂರು ದಿನಗಳಿಂದ ಹೊತ್ತು ಉರಿದು ಸುತ್ತಲಿನ ರೈತರಲ್ಲಿಯೂ ಆತಂಕ ಶುರುವಾಗಿದೆ.

12 ಎಕರೆ ಪ್ರದೇಶದಲ್ಲಿ ಬೆಳೆದ ಸೋಯಾ ರಾಶಿ ಮಾಡಲೆಂದು ಒಂದೇ ಕಡೆ ಬಣವೆ ಹಾಕಲಾಗಿತ್ತು. ರಾಶಿ ಮಾಡಲು ಶನಿವಾರ ಬೆಳಿಗ್ಗೆ ಹೊಲಕ್ಕೆ ಹೋದ ರೈತ ಮಕ್ಬುಲ್ ತನ್ನ ಸೋಯಾ ಬಣವೆಗೆ ಬೆಂಕಿ ಬಿದ್ದಿರುವುದನ್ನು ನೋಡಿ ಮೂರ್ಛೆ ಹೋದ. ಸುದ್ದಿ ತಿಳಿದ ಇತರೆ ರೈತರು ಅಲ್ಲಿಗೆ ಬರುವಷ್ಟರಲ್ಲಿ ಇಡೀ ಬಣವೆ ಹೊತ್ತು ಉರಿದಿತ್ತು ಎಂದು ಅಲ್ಲಿಯ ಜನ ತಿಳಿಸಿದ್ದಾರೆ.

ಸ್ವಂತ ಎರಡು ಎಕರೆ ಜಮೀನು ಹೊಂದಿರುವ ಮಕ್ಬುಲ್ ಅದೇ ಗ್ರಾಮದ ಉಮೇಶ ಪಾಟೀಲ ಎಂಬುವರ 12 ಎಕರೆ ಜಮೀನು ಬಾಡಿಗೆ ಮೇಲೆ ಪಡೆದು ಒಕ್ಕಲುತನ ಮಾಡುತ್ತಿದ್ದರು. ವರ್ಷಕ್ಕೆ ರೂ. 60 ಸಾವಿರ ಮಾಲೀಕರಿಗೆ ಕೊಡಬೇಕು. ಆದರೆ ಕಳೆದ ವರ್ಷ ಮಳೆ ಕೈಕೊಟ್ಟು ಒಂದು ನಯಾ ಪೈಸೆ ಕೈಗೆ ಬಂದಿಲ್ಲ. ಸಾಲ ಮಾಡಿ ರೂ. 60 ಸಾವಿರ ಕೊಟ್ಟಿದ್ದಾರೆ. ಈ ವರ್ಷ 100 ಕ್ವಿಂಟಲ್ ಸೋಯಾ ಉತ್ಪಾದನೆ ಮಾಡುವ ಋಷಿಯಲ್ಲಿದ್ದ ಮಕ್ಬುಲ್‌ಗೆ ಮತ್ತು ಅವರ ಕುಟುಂಬಕ್ಕೆ ದೊಡ್ಡ ಅಘಾತವಾಗಿದೆ ಎಂದು ಎಪಿಎಂಸಿ ಸದಸ್ಯ ಗೋವಿಂದ ಇಂಗಳೆ ತಿಳಿಸಿದ್ದಾರೆ.

ಕಳೆದವಾರ ನಿರಂತರವಾಗಿ ಮಳೆ ಸುರಿದ ಕಾರಣ ಸಾಕಷ್ಟು ರೈತರು ಸೋಯಾ ರಾಶಿ ಬಣವೆ ಹಾಕಿದ್ದಾರೆ. ಈ ರಾಶಿಗೆ ಕೆಲವೆಡೆ ಕಳ್ಳರ ಕಾಟ ಶುರುವಾಗಿದೆ. ಮತ್ತೆ ಕೆಲವೆಡೆ ಬೆಂಕಿ ಹತ್ತಿ ರೈತರಿಗೆ `ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ~ ಎಂದು ರೈತ ಸಂಘದ ತಾಲ್ಲೂಕು ಅಧ್ಯಕ್ಷ ಶ್ರೀಮಂತ ಬಿರಾದಾರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದೂರು: ರೈತ ಮಕ್ಬುಲ್ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿ, ನನ್ನ ಸೋಯಾ ಬಣವೆಗೆ ಬೇಕಂತಲೇ ಬೆಂಕಿ ಹಚ್ಚಲಾಗಿದೆ ಎಂದು ತಿಳಿಸಿದ್ದಾರೆ. ಪೊಲೀಸರು ಈ ವಿಷಯ ಗಂಭೀರವಾಗಿ ಪರಿಗಣಿಸಿ ಕಿಡಿಗೆಡಿಗಳನ್ನು ಬಂಧಿಸಿ ಪುನಃ ಇಂಥ ಘಟನೆ ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ರೈತ ಮುಖಂಡರು ಆಗ್ರಹಿಸಿದ್ದಾರೆ.

ಪರಿಹಾರಕ್ಕೆ ಅಗ್ರಹ: ಬಣವೆಗೆ ಬೆಂಕಿ ಬಿದ್ದು ಸುಮಾರು ರೂ. 3 ಲಕ್ಷ ಹಾನಿಯಾಗಿ ರೈತ ಮಕ್ಬುಲ್ ಕುಟುಂಬ ಬೀದಿಗೆ ಬಂದಿದೆ. ಸರ್ಕಾರ ರೈತನಿಗೆ ಸೂಕ್ತ ಪರಿಹಾರ ಕೊಡಬೇಕು ಎಂದು ಮುಂಗನಾಳ ಗ್ರಾಮದ ಇತರೆ ರೈತರು ಬೇಡಿಕೆ ಮಂಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT