ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋರಿಕೆಗೆ ಮಣ್ಣಿನ ಚೀಲಗಳ ತಡೆ!

Last Updated 1 ಆಗಸ್ಟ್ 2013, 7:05 IST
ಅಕ್ಷರ ಗಾತ್ರ

ಮುಂಡಗೋಡ: ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಸನವಳ್ಳಿ ಜಲಾಶಯದ ಗೇಟ್‌ನಲ್ಲಿ ಹರಿದುಹೋಗುತ್ತಿದ್ದ ನೀರನ್ನು ಮಣ್ಣಿನ ಚೀಲಗಳನ್ನು ಹಾಕುವುದರ ಮೂಲಕ ಬುಧವಾರ ತಡೆಗಟ್ಟಲಾಯಿತು.

ಸನವಳ್ಳಿ ಜಲಾಶಯದ ಒಡ್ಡಿನಲ್ಲಿರುವ ಬಲಭಾಗದ ಗೇಟ್ ಮೂಲಕ ಸುಮಾರು ಒಂದೂವರೆ ಅಡಿಯಷ್ಟು ನೀರು ಹರಿದುಹೋಗುತ್ತಿತ್ತು. ಈ ಬಗ್ಗೆ ಚಿಕ್ಕ ನೀರಾವರಿ ಇಲಾಖೆಯ ಎಂಜಿನಿಯರ್ ಆರ್.ಎನ್.ನಾಯ್ಕ ಜಲಾಶಯಕ್ಕೆ ಭೇಟಿ ನೀಡಿ ಜಲಾಶಯದ ದಡಭಾಗದಲ್ಲಿ ಹಾಗೂ ಗೇಟಿನ ತಳಪಾಯದಲ್ಲಿ ಮಣ್ಣಿನ ಚೀಲಗಳನ್ನು ಹಾಕಿಸಿದರು. ಸದ್ಯ ಹರಿದುಹೋಗುತ್ತಿದ್ದ ನೀರು ಬಂದ ಆಗಿದೆ. ಅಲ್ಲದೇ ಎಡಭಾಗದ ಗೇಟ್‌ನಲ್ಲಿಯೂ ಸಹ  ಸ್ವಲ್ಪ ಪ್ರಮಾಣದಲ್ಲಿ ಹರಿದುಹೋಗುತ್ತಿದ್ದ ನೀರನ್ನು ಬಂದ್‌ಮಾಡಲಾಯಿತು.

ಬೇಸಿಗೆಗೂ ಮುನ್ನವೇ ಬರಿದಾಗಿ ಹೋಗಿದ್ದ ಸನವಳ್ಳಿ ಜಲಾಶಯದಲ್ಲಿ ಒಂದೂವರೆ ಮೀಟರ್‌ನಷ್ಟು ನೀರು ಹರಿದುಬಂದಿದೆ. ಶಿಗ್ಗಾವಿ ತಾಲ್ಲೂಕಿನ ಅರಣ್ಯ ಭಾಗದಿಂದ ನೀರು ಸನವಳ್ಳಿ ಜಲಾಶಯಕ್ಕೆ ಹರಿದುಬರುತ್ತಿದ್ದು ನಿರಂತರ ಮಳೆಯಿಂದ ಬರಿದಾಗಿದ್ದ ದಡಪಾತ್ರದಲ್ಲಿ ನೀರು ತುಂಬಿಕೊಳ್ಳುತ್ತಿದೆ.

`ಜಲಾಶಯದ ಒಡ್ಡಿನಲ್ಲಿಯೇ ಗೇಟ್‌ಗಳನ್ನು ಅಳವಡಿಸಿರುವುದರಿಂದ ನೀರು ಸೋರಿಕೆಯ ನಿಖರವಾದ ಸ್ಥಳವನ್ನು ಗುರುತಿಸಲು ಕಷ್ಟವಾಗುತ್ತಿದೆ. ಗೇಟ್‌ನಲ್ಲಿಯೇ ನೀರು ಹರಿದುಹೋಗುತ್ತಿದೆಯೇ ಅಥವಾ ಬೇರೆಡೆಯಿಂದ ನೀರು ಬಂದು ಗೇಟ್ ಮೂಲಕ ಹರಿಯುತ್ತಿದೆ ಎನ್ನುವುದು ತಿಳಿಯುವುದಿಲ್ಲ. ಪ್ರತಿ ವರ್ಷ ಜಲಾಶಯದ ನಿರ್ವಹಣೆಗಾಗಿ ಅನುದಾನ ಬಂದರೂ ಸಮರ್ಪಕವಾದ ಕಾಮಗಾರಿ ಕೈಗೊಳ್ಳದಿರುವುದೇ ಇದಕ್ಕೆ ಕಾರಣ' ಎಂದು ರೈತರು ದೂರಿದರು.

`ಜಲಾಶಯದ ಒಡ್ಡಿನಲ್ಲಿರುವ ಗೇಟ್‌ಗಳನ್ನು ಬದಲಿಸಿ ದಡಭಾಗದಲ್ಲಿಯೇ ಅಳವಡಿಸುವ ಪ್ರಸ್ತಾವವನ್ನು ಈಗಾಗಲೆ ಕಳಿಸಲಾಗಿದೆ. ಗೇಟ್‌ಗಳನ್ನು ಯಾರೂ ತಿರುವುದಂತೆ ಭದ್ರತಾ ಕ್ರಮಗಳನ್ನು ಕೈಗೊಳ್ಳುವುದರ ಜೊತೆಗೆ ನೀರು ಸೋರಿಕೆಯನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು' ಎಂದು ಚಿಕ್ಕ ನೀರಾವರಿ ಇಲಾಖೆಯ ಎಂಜಿನಿಯರ್ ಆರ್.ಎನ್.ನಾಯ್ಕ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT